Kitchen Tips: ಮಳೆಗಾಲದಲ್ಲಿ ಫಂಗಸ್‌, ಹುಳ ಬಾರದಂತೆ ಧಾನ್ಯಗಳು, ಕಾಳುಗಳನ್ನು ಸಂಗ್ರಹಿಸಿ ಇಡಲು ಇಲ್ಲಿದೆ ಕೆಲವು ಸರಳ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಮಳೆಗಾಲದಲ್ಲಿ ಫಂಗಸ್‌, ಹುಳ ಬಾರದಂತೆ ಧಾನ್ಯಗಳು, ಕಾಳುಗಳನ್ನು ಸಂಗ್ರಹಿಸಿ ಇಡಲು ಇಲ್ಲಿದೆ ಕೆಲವು ಸರಳ ವಿಧಾನ

Kitchen Tips: ಮಳೆಗಾಲದಲ್ಲಿ ಫಂಗಸ್‌, ಹುಳ ಬಾರದಂತೆ ಧಾನ್ಯಗಳು, ಕಾಳುಗಳನ್ನು ಸಂಗ್ರಹಿಸಿ ಇಡಲು ಇಲ್ಲಿದೆ ಕೆಲವು ಸರಳ ವಿಧಾನ

ಮಳೆಗಾಲದಲ್ಲಿ ಎಷ್ಟೇ ಸುರಕ್ಷಿತವಾಗಿ ಇರಿಸಿದ್ರೂ ಮನೆಯಲ್ಲಿರುವ ಧಾನ್ಯಗಳು ಮತ್ತು ಬೇಳೆಕಾಳುಗಳಿಗೆ ಫಂಗಸ್‌ ಹಿಡಿಯುವುದು, ಹುಳ ಬರುವುದು ಹಾಗೂ ಚಿಕ್ಕ ಚಿಟ್ಟೆ ರೂಪದ ಹುಳ ತುಂಬಿರುವುದು ಸಾಮಾನ್ಯ. ಇದರಿಂದ ಸಂಪೂರ್ಣ ಧಾನ್ಯವನ್ನು ಹಾಳು ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಸಲಹೆ. (ಬರಹ: ಪ್ರಿಯಾಂಕ ಗೌಡ)

ಮಳೆಗಾಲದಲ್ಲಿ ಫಂಗಸ್‌ ಬಾರದಂತೆ ಧಾನ್ಯಗಳನ್ನು ಸಂಗ್ರಹಿಸಿ ಇಡಲು ಇಲ್ಲಿದೆ ಕೆಲವು ಸರಳ ವಿಧಾನ
ಮಳೆಗಾಲದಲ್ಲಿ ಫಂಗಸ್‌ ಬಾರದಂತೆ ಧಾನ್ಯಗಳನ್ನು ಸಂಗ್ರಹಿಸಿ ಇಡಲು ಇಲ್ಲಿದೆ ಕೆಲವು ಸರಳ ವಿಧಾನ

ಮಳೆಗಾಲ ಬಂತೆಂದರೆ ಹಲವರಿಗೆ ಅದೇನೋ ಖುಷಿ. ಹವಾಮಾನವು ಬದಲಾವಣೆಯಾಗಿ, ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಗಿಡ-ಮರಗಳು ಕಾಣಸಿಗುತ್ತವೆ. ಆದರೆ ಮಳೆಗಾಲದಲ್ಲಿ ಆರ್ದ್ರತೆಯ ಮಟ್ಟ ಹೆಚ್ಚಿರುತ್ತದೆ. ಹೀಗಾಗಿ ತೇವಾಂಶ ತಾಕದಂತೆ ಆಹಾರ ಉತ್ಪನ್ನಗಳನ್ನು ಇರಿಸಬೇಕು. ಸ್ವಲ್ಪ ತೇವಾಂಶವುಂಟಾದರೂ ನೀವು ಸಂಗ್ರಹಿಸಿರುವ ಆಹಾರ ಪದಾರ್ಥಗಳು ಸಂಪೂರ್ಣ ಹಾಳಾಗಬಹುದು. ಮಳೆಗಾಲದ ಸಮಯದಲ್ಲಿ ಧಾನ್ಯಗಳು, ಬೇಳೆಕಾಳುಗಳು ಇತ್ಯಾದಿಗಳನ್ನು ಒಣಗಿಸುವುದು ಬಹಳ ಮುಖ್ಯ.

ಧಾನ್ಯಗಳು ಮತ್ತು ಬೇಳೆಕಾಳುಗಳು ಪ್ರಮುಖ ಭಾರತೀಯ ಆಹಾರವಾಗಿವೆ. ನಯವಾದ, ಕೆನೆಭರಿತ, ರುಚಿ ಮತ್ತು ವಿನ್ಯಾಸವನ್ನು ಮೀರಿ, ಅವು ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಈ ಬಹುಮುಖ ಪದಾರ್ಥಗಳನ್ನು ಕೇವಲ ನಮಿಗಷ್ಟೇ ಅಲ್ಲ, ಸಾಕು ಪ್ರಾಣಿಗಳು ಹಾಗೂ ಕೈಗಾರಿಕೆಗಳಲ್ಲಿಯೂ ಸಹ ಬಳಸಲಾಗುತ್ತದೆ. ಆದರೆ, ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಸಂಗ್ರಹಿಸಲು ಮುಂಗಾರು ಋತುವಿನಲ್ಲಿ ಎಲ್ಲರೂ ಸಮಸ್ಯೆಯನ್ನು ಎದುರಿಸುತ್ತಾರೆ.

ಮಾನ್ಸೂನ್‌ ಋತುವಿನಲ್ಲಿ, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಸಂಗ್ರಹಣೆಗೆ ಕಷ್ಟಕರ. ಕೀಟಗಳು ಮುತ್ತಿಕೊಳ್ಳುವುದು, ಹಾಳಾಗುವುದರಿಂದ ನಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ ಧಾನ್ಯಗಳು ಮತ್ತು ಕಾಳುಗಳನ್ನು ಒಣಗಿಸಲು ಪರಿಣಾಮಕಾರಿ ಶೇಖರಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಅವುಗಳ ದೀರ್ಘಾಯುಷ್ಯ ಮತ್ತು ಬಳಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ಣಾಯಕವಾಗಿದೆ. ಹಾಗಾದರೆ ಹುಳ, ಯೀಸ್ಟ್‌, ಫಂಗಸ್‌ ಬಾರದಂತೆ ಧಾನ್ಯಗಳನ್ನು ಸಂಗ್ರಹಿಸುವುದು ಹೇಗೆ?

ಧಾನ್ಯಗಳನ್ನು ಸಂಗ್ರಹಿಸಿಡುವ ಬಾಕ್ಸ್‌ಗೆ ಅರಶಿನ ಸೇರಿಸಿ

ಧಾನ್ಯಗಳು ಮತ್ತು ಬೇಳೆಕಾಳುಗಳ ಪಾತ್ರೆಯಲ್ಲಿ ಅರಿಶಿನವನ್ನು ಸೇರಿಸುವುದರಿಂದ ಮಳೆಗಾಲದ ಈ ಋತುವಿನಲ್ಲಿ ಅದನ್ನು ಸುರಕ್ಷಿತವಾಗಿ ಇರಿಸಬಹುದು. ಅರಿಶಿನವು ನೈಸರ್ಗಿಕ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಅರಶಿನವನ್ನು ಹಾಕಿಡುವುದರಿಂದ ಫಂಗಸ್ ಬೆಳೆಯದಂತೆ ತಡೆಯುತ್ತದೆ. ಭಾರತೀಯರ ಪ್ರತಿ ಮನೆಯಲ್ಲೂ ಅರಶಿನ ಇದ್ದೇ ಇರುತ್ತದೆ. ಹೀಗಾಗಿ ಈ ವಿಧಾನವನ್ನು ನಿರ್ವಹಿಸಲು ತುಂಬಾ ಸುಲಭ.

ಬಾಣಲೆಯಲ್ಲಿ ಹುರಿಯಿರಿ

ಮಳೆಗಾಲದ ಸಮಯದಲ್ಲಿ ನಿಮ್ಮ ಅಜ್ಜಿಯಂದಿರು ಧಾನ್ಯಗಳು ಮತ್ತು ಕಾಳುಗಳನ್ನು ಬಾಣಲೆಯಲ್ಲಿ ಹುರಿಯುವುದನ್ನು ಬಹುಶಃ ನೀವು ಚಿಕ್ಕವರಿದ್ದಾಗ ನೋಡಿರಬಹುದು. ಅವು ಪರಿಮಳವನ್ನು ಬಿಡುಗಡೆ ಮಾಡುವವರೆಗೆ ಎಣ್ಣೆಯಿಲ್ಲದೆ ಸಣ್ಣ ಉರಿಯಲ್ಲಿ ಇವನ್ನು ಹುರಿಯಬೇಕು. ಈ ಪ್ರಕ್ರಿಯೆಯು ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಫಂಗಸ್ ಬೆಳೆಯುವುದಿಲ್ಲ, ಅಲ್ಲದೆ ಕೀಟಗಳಿಂದ ಅಷ್ಟಾಗಿ ಹಾನಿಗೊಳಗಾಗುವುದಿಲ್ಲ. ಎಣ್ಣೆಯಿಲ್ಲದೆ ಹುರಿದ ನಂತರ, ಅವುಗಳ ಶುಷ್ಕತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೀವು ಅವುಗಳನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸಬೇಕು.

ಬಿಗಿಯಾದ ಮುಚ್ಚಳವಿರುವ ಕಂಟೈನರ್ ಬಳಸಿ

ಬಿಗಿಯಾದ ಮುಚ್ಚಳವಿರುವ ಕಂಟೈನರ್‌ಗಳನ್ನು ಬಳಸುವುದರಿಂದ ಗಾಳಿಯನ್ನು ಒಳಕ್ಕೆ ಹೋಗಲು ಬಿಡುವುದಿಲ್ಲ. ಇದು ತೇವಾಂಶವನ್ನು ಒಳಹೋಗದಂತೆ ತಡೆಯುತ್ತದೆ. ನಿಮ್ಮ ಆಹಾರ ಪದಾರ್ಥವನ್ನು ತೇವಾಂಶ ಮತ್ತು ಫಂಗಸ್ ನಿಂದ ರಕ್ಷಿಸುತ್ತದೆ. ಗಾಳಿಯಾಡದ ಶೇಖರಣೆಯ ಡಬ್ಬವು ಕೀಟಗಳನ್ನು ದೂರವಿಡುತ್ತವೆ. ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು ತಾಜಾ ಮತ್ತು ಕಲುಷಿತಗೊಳ್ಳದಂತೆ ನೋಡಿಕೊಳ್ಳುತ್ತದೆ. ತೇವಾಂಶವನ್ನು ತಡೆಯುವ ಮೂಲಕ, ಈ ಕಂಟೈನರ್‌ಗಳು ನಿಮ್ಮ ಆಹಾರದ ವಿನ್ಯಾಸ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಸಂರಕ್ಷಿಸುತ್ತದೆ. ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಅದರ ಜೀವಿತಾವಧಿಯನ್ನು ವಿಸ್ತರಿಸಲು ಇದು ಅತ್ಯಗತ್ಯವಾಗಿದೆ.

ಲವಂಗ ಸೇರಿಸಿ

ಅರಿಶಿನದಂತೆ, ಲವಂಗವು ನೈಸರ್ಗಿಕ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಇದು ತೇವಾಂಶ ಮತ್ತು ಕೀಟಗಳ ಆಕ್ರಮಣವನ್ನು ತಡೆಯುತ್ತದೆ. ಅವುಗಳ ಗಾಢ ಸುವಾಸನೆಯು ಕೀಟಗಳಿಗೆ ನೈಸರ್ಗಿಕ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಧಾನ್ಯಗಳು ಮತ್ತು ಕಾಳುಗಳು ಉತ್ತಮ ಸ್ಥಿತಿಯಲ್ಲಿರುತ್ತವೆ. ಧಾನ್ಯ ಅಥವಾ ಬೇಳೆಕಾಳುಗಳ ಪ್ರಮಾಣಕ್ಕೆ ಅನುಗುಣವಾಗಿ ಸ್ವಲ್ಪ ಲವಂಗಗಳನ್ನು ಜಾಡಿಗಳಿಗೆ ಸೇರಿಸಿ.

ಬಿಸಿಲಿನಲ್ಲಿ ಒಣಗಿಸಿಡಿ

ಮಳೆಗಾಲದಲ್ಲಿ ಹಾಳಾಗದಂತೆ ತಡೆಯಲು ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿ. ಮಳೆಗಾಲದಲ್ಲೂ ಕೆಲಮೊಮ್ಮೆ ಬಿಸಿಲು ಬರುತ್ತದೆ. ಈ ಸಮಯ ನೋಡಿಕೊಂಡು ಅವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಶೇಖರಿಸಿ. ಬಿಸಿಲಿನಲ್ಲಿ ಒಣಗಿಸುವುದರಿಂದ ಅವು ತೇವಾಂಶ-ಮುಕ್ತವಾಗಿರುತ್ತವೆ ಹಾಗೂ ಫಂಗಸ್ ಮತ್ತು ಕೀಟಗಳ ಮುತ್ತಿಕೊಳ್ಳುವಿಕೆಯನ್ನು ತಡೆಯುತ್ತದೆ. ಧಾನ್ಯಗಳಲ್ಲಿ ಒಂಚೂರು ತೇವಾಂಶವಿದ್ದರೂ ಬಿಸಿಲಿನ ಪ್ರಖರಕ್ಕೆ ಆವಿಯಾಗುತ್ತದೆ. ಇದರಿಂದ ನೀವು ಸಂಗ್ರಹಿಸಿದ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು ಗುಣಮಟ್ಟ ಮತ್ತು ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳುತ್ತದೆ. ಬಿಸಿಲಿನಲ್ಲಿ ಅವುಗಳನ್ನು ಸಮವಾಗಿ ಹರಡಲು ಕ್ಲೀನ್ ಮ್ಯಾಟ್ಸ್ ಅಥವಾ ಹತ್ತಿಯ ಬಟ್ಟೆಗಳನ್ನು ಬಳಸಿ.

ಒದ್ದೆಯಾಗಿರದ ಚಮಚ ಅಥವಾ ಲೋಟವನ್ನು ಬಳಸಿ

ಬಹಳಷ್ಟು ಜನರು ಭಕ್ಷ್ಯಗಳನ್ನು ಬೇಯಿಸುವಾಗ ತರಾತುರಿಯಲ್ಲಿ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಜಾಡಿಗೆ ಒದ್ದೆಯಾದ ಚಮಚ ಅಥವಾ ಲೋಟವನ್ನು ಹಾಕುತ್ತಾರೆ. ಇದರಿಂದ ಇವು ಹಾಳಾಗುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಮುಂಚಿತವಾಗಿಯೇ ಒಣಗಿರುವ ಚಮಚಗಳನ್ನು ಜಾಡಿಗಳಲ್ಲಿ ಇರಿಸಿ. ಇದರಿಂದ ಒದ್ದೆ ಚಮಚ ಬಳಕೆ ಮಾಡುವುದನ್ನು ತಪ್ಪಿಸಬಹುದು.

Whats_app_banner