ಈ 5 ಬಗೆಯ ಖಾದ್ಯಗಳನ್ನು ತಯಾರಿಸುವಾಗ ಅರಿಸಿನ ಹಾಕದೇ ಇರುವುದು ಉತ್ತಮ, ಬಳಸಿದ್ರೆ ಆಹಾರದ ರುಚಿ ಕೆಡುತ್ತೆ
ಅರಿಸಿನ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ. ಸಾಮಾನ್ಯವಾಗಿ ಭಾರತದಲ್ಲಿ ಹಲವು ಖಾದ್ಯಗಳಿಗೆ ಅರಿಸಿನ ಬಳಸುತ್ತಾರೆ. ಕರಿ ಅಥವಾ ಸಾಂಬಾರು ತಯಾರಿಸಲು ಅರಿಸಿನ ಬೇಕೇಬೇಕು. ಆದರೆ ಈ 5 ಬಗೆಯ ಆಹಾರಗಳಿಗೆ ಅರಿಸಿನ ಬಳಸದೇ ಇರುವುದು ಉತ್ತಮ, ಬಳಸಿದ್ರೆ ಆಹಾರದ ರುಚಿ ಕೆಡಬಹುದು. ಹಾಗಾದರೆ ಯಾವೆಲ್ಲಾ ಖಾದ್ಯಗಳಿಗೆ ಅರಿಸಿನ ಬಳಸಬಾರದು ನೋಡಿ.
ಭಾರತೀಯ ಮಸಾಲೆ ಪದಾರ್ಥಗಳ ಪೈಕಿ ಅಗ್ರಸ್ಥಾನದಲ್ಲಿರುವುದು ಅರಿಸಿನ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಅರಿಸಿನವನ್ನು ಆಹಾರ ಖಾದ್ಯಗಳಿಗೆ ಬಳಸುವುದರಿಂದ ಬಣ್ಣ ಹಾಗೂ ರುಚಿ ಹೆಚ್ಚಿಸಲು ಸಾಧ್ಯವಿದೆ. ಭಾರತದ ಅಡುಗೆಮನೆಯ ಜನಪ್ರಿಯ ಮಸಾಲೆ ಎಂದು ಅರಿಸಿನವನ್ನು ಕರೆಯಬಹುದು. ಸಾಮಾನ್ಯವಾಗಿ ಹಲವು ವಿಧದ ಸಾಂಬಾರ್‌ಗಳಿಗೆ ಅರಿಸಿನ ಬಳಸಲಾಗುತ್ತದೆ. ಇದರಿಂದ ರುಚಿ ಹೆಚ್ಚುತ್ತದೆ ಎಂಬ ಮಾತಿದೆ.
ಆದರೆ ಎಲ್ಲಾ ಆಹಾರ ಪದಾರ್ಥಗಳಿಗೂ ಅರಿಸಿನ ಬಳಸುವುದು ಒಳ್ಳೆಯದಲ್ಲ. ಅರಿಸಿನ ಪುಡಿ ಹಾಕುವುದರಿಂದ ಈ ಖಾದ್ಯಗಳ ರುಚಿ ಕೆಡಬಹುದು. ಯಾವ 5 ಖಾದ್ಯಗಳಿಗೆ ಅರಿಸಿನ ಬಳಸುವಂತಿಲ್ಲ ನೋಡಿ.
ಬದನೆಕಾಯಿ ಕರಿ
ಅರಿಸಿನ ಇಲ್ಲದೇ ಬದನೆ ಗೊಜ್ಜು ಅಥವಾ ಸಾಂಬಾರ್ ಅನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಇದು ಅರಿಸಿನ ಬಳಸದೇ ಉತ್ತಮ ರುಚಿಯನ್ನು ಹೊಂದಿರುತ್ತದೆ. ನಿಮಗೆ ಬೇಕು ಎಂದರೆ ಚಿಟಿಕೆ ಅರಿಸಿನ ಸೇರಿಸಿ. ಖಾರದಪುಡಿ, ಗರಂ ಮಸಾಲೆ ಹಾಗೂ ಕೊತ್ತಂಬರಿ ಪುಡಿಯನ್ನು ಹಾಕುವುದರಿಂದ ಅರಿಸಿನ ಹಾಕಿಲ್ಲ ಎಂಬ ಭಾವನೆ ಬರುವುದಿಲ್ಲ. ಬದನೆಕಾಯಿಗೆ ಅರಿಶಿನವನ್ನು ಸೇರಿಸುವುದರಿಂದ ಸ್ವಲ್ಪ ಕಹಿ ರುಚಿ ಬರಬಹುದು.
ಮೆಂತ್ಯ ಸೊಪ್ಪಿನ ಖಾದ್ಯಗಳು
ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಉತ್ತಮ. ಹಾಗಾಗಿ ಇದನ್ನು ಆಗಾಗ ತಿನ್ನುತ್ತಿರಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಮೆಂತ್ಯೆ ಸೊಪ್ಪಿನ ಖಾದ್ಯಗಳು ರುಚಿಯಲ್ಲೂ ಅದ್ಭುತವಾಗಿರುತ್ತವೆ. ಇವು ಕಹಿ ರುಚಿಯನ್ನು ಹೊಂದಿರುತ್ತವೆ. ಹಾಗಾಗಿ ಮೆಂತ್ಯೆಸೊಪ್ಪಿನ ಖಾದ್ಯಗಳಿಗೆ ಅರಿಸಿನ ಬಳಸದೇ ಇರುವುದು ಉತ್ತಮ. ಏಕೆಂದರೆ ಅರಿಶಿನದ ರುಚಿಯೂ ಸ್ವಲ್ಪ ಕಹಿಯಾಗಿರುತ್ತದೆ. ಮೆಂತ್ಯ ಕೂಡ ಕಹಿಯಾಗಿದ್ದು, ಅರಿಸಿನ ಹಾಕುವುದರಿಂದ ಇನ್ನಷ್ಟು ಕಹಿಯಾಗಬಹುದು.
ಪಾಲಾಕ್ ಸೊಪ್ಪಿನ ಪದಾರ್ಥಗಳು
ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನಲಾಗುತ್ತದೆ. ಇದರಲ್ಲಿ ಆರೋಗ್ಯದ ನಿಧಿ ಅಡಗಿದೆ. ಪಾಲಕ್ ಸಾಂಬಾರ್ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವಾಗ ಅರಿಸಿನ ಸೇರಿಸಿದರೆ ರುಚಿ ಕೆಡಬಹುದು. ರುಚಿ ಬದಲಾಗುವ ಕಾರಣ ಪಾಲಕ್ ಕರಿ ಅಥವಾ ಸಾಂಬಾರ್ ಮಾಡುವಾಗ ಅರಿಸಿನ ಸೇರಿಸಬಾರದು. ಪಾಲಕ್‌ಗೆ ಅರಿಸಿನ ಸೇರಿಸುವುದರಿಂದ ಪಾಲಕ್ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಸಾಸಿವೆ ಎಲೆ
ಕೆಲವು ಭಾಗಗಳಲ್ಲಿ ಸಾಸಿವೆ ಎಲೆಯನ್ನು ಆಹಾರದೊಂದಿಗೆ ಬಳಸುವ ಪದ್ಧತಿ ಇದೆ. ಇದು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಸಾಸಿವೆ ಸೊಪ್ಪಿನ ಖಾದ್ಯಗಳನ್ನು ಮಾಡುವಾಗ ಅರಿಸಿನ ಬಳಸಬಾರದು. ಸಾಸಿವೆ ಎಲೆಗಳು ಸ್ವಲ್ಪ ಸಂಕೋಚಕ. ಇದಕ್ಕೆ ಅರಿಶಿನವನ್ನು ಸೇರಿಸುವುದರಿಂದ ಅದರ ಸಂಕೋಚನವು ಮತ್ತಷ್ಟು ಹೆಚ್ಚಾಗುತ್ತದೆ. ಇದು ರುಚಿಯನ್ನು ಬದಲಾಯಿಸುತ್ತದೆ.
ಸ್ಪ್ರಿಂಗ್ ಆನಿಯನ್ ಖಾದ್ಯಗಳು
ಸ್ಪ್ರಿಂಗ್ ಆನಿಯನ್ ಅಥವಾ ಈರುಳ್ಳಿ ದಂಟಿನ ಖಾದ್ಯಗಳನ್ನು ವಿವಿಧ ಆಹಾರ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಇದರ ಜೊತೆ ಅರಿಸಿನ ಬಳಸಬೇಡಿ. ಇದು ಈರುಳ್ಳಿ ದಂಟು ಬಳಸಿರುವ ಆಹಾರ ಖಾದ್ಯಗಳ ರುಚಿಯನ್ನು ಕೆಡಿಸಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
–––
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope