ಈ 5 ತರಕಾರಿಗಳನ್ನು ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ, ಇದರಿಂದ ರುಚಿಯ ಜತೆ ಆರೋಗ್ಯವೂ ಕೆಡುತ್ತೆ ನೆನಪಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈ 5 ತರಕಾರಿಗಳನ್ನು ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ, ಇದರಿಂದ ರುಚಿಯ ಜತೆ ಆರೋಗ್ಯವೂ ಕೆಡುತ್ತೆ ನೆನಪಿರಲಿ

ಈ 5 ತರಕಾರಿಗಳನ್ನು ತಪ್ಪಿಯೂ ಫ್ರಿಜ್‌ನಲ್ಲಿ ಇಡಬೇಡಿ, ಇದರಿಂದ ರುಚಿಯ ಜತೆ ಆರೋಗ್ಯವೂ ಕೆಡುತ್ತೆ ನೆನಪಿರಲಿ

ತರಕಾರಿಗಳು ಬಹಳ ದಿನಗಳವರೆಗೆ ಕೆಡದಂತೆ ಇರಬೇಕು ಎನ್ನುವ ಕಾರಣಕ್ಕೆ ಫ್ರಿಜ್‌ನಲ್ಲಿಡುತ್ತೇವೆ. ಆದರೆ ಈ ಕೆಲವು ತರಕಾರಿಗಳನ್ನು ತಪ್ಪಿಯೂ ಫ್ರಿಜ್‌ನಲ್ಲಿ ಇಡಬಾರದು, ಇದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಹಾಗಾದರೆ ಯಾವೆಲ್ಲಾ ತರಕಾರಿಗಳನ್ನ ಫ್ರಿಜ್‌ನಲ್ಲಿ ಇಡಬಾರದು, ಅವುಗಳನ್ನು ಹೇಗೆ ಸಂಗ್ರಹಿಸಿ ಇಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಫ್ರಿಜ್‌ನಲ್ಲಿ ಇಡಬಾರದಂತಹ ತರಕಾರಿಗಳು
ಫ್ರಿಜ್‌ನಲ್ಲಿ ಇಡಬಾರದಂತಹ ತರಕಾರಿಗಳು (PC: Canva)

ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಯಾವುದೇ ಇರಲಿ ಫ್ರಿಜ್‌ ಕೆಲಸ ಮಾಡಿಲ್ಲ ಅಂದ್ರೆ ಕೈಕಾಲು ಆಡೋದು ಕಷ್ಟ ಆಗುತ್ತೆ. ಅಷ್ಟರ ಮಟ್ಟಿಗೆ ನಾವು ಫ್ರಿಜ್‌ಗೆ ಅಡಿಕ್ಟ್ ಆಗಿದ್ದೇವೆ. ಹಣ್ಣು, ತರಕಾರಿ, ಹಾಲು, ಮೊಸರು ಸೇರಿದಂತೆ ಆಹಾರ ಪದಾರ್ಥಗಳು ತಾಜಾವಾಗಿರಲು ಫ್ರಿಜ್‌ ಬೇಕೇಬೇಕು. ಅದರಲ್ಲೂ ಮಾರುಕಟ್ಟೆಯಿಂದ ತಂದ ಹಣ್ಣು, ತರಕಾರಿಗಳನ್ನು ಬಹಳ ದಿನಗಳವರೆಗೆ ಕೆಡದಂತೆ ನೋಡಿಕೊಳ್ಳಲು ಫ್ರಿಜ್‌ನಲ್ಲಿ ಇಡುತ್ತೇವೆ.

ಆದರೆ ಈ ಕೆಲವು ತರಕಾರಿಗಳನ್ನೂ ತಪ್ಪಿಯೂ ಫ್ರಿಜ್‌ನಲ್ಲಿ ಇಡಬಾರದು. ಈ ತರಕಾರಿಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ಆರೋಗ್ಯ ಕೆಡೋದು ಖಂಡಿತ. ಇದರಿಂದ ತೊಂದರೆಯೇ ಹೆಚ್ಚು. ಹಾಗಾದರೆ ಯಾವೆಲ್ಲಾ ತರಕಾರಿಗಳನ್ನು ಫ್ರಿಜ್‌ನಲ್ಲಿ ಇಡಬಾರದು, ಯಾವ ಕಾರಣಕ್ಕೆ ಇಡಬಾರದು ಎಂದು ಮಾಹಿತಿ ಇಲ್ಲಿದೆ ನೋಡಿ.

ಹಸಿರು ಸೊಪ್ಪುಗಳು

ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಸೊಪ್ಪುಗಳನ್ನು ತಿನ್ನಬೇಕು ಎಂದು ಸಲಹೆ ನೀಡಲಾಗುತ್ತದೆ. ಚಳಿಗಾಲದಲ್ಲಿ ಸೊಪ್ಪುಗಳು ಹೇರಳವಾಗಿ ಬೆಳೆಯುತ್ತವೆ. ಆದರೆ ಇವು ಬೇಗ ಹಾಳಾಗುತ್ತವೆ ಕೂಡ. ಸೊಪ್ಪನ್ನು ತೊಳೆದ ನಂತರ 12 ಗಂಟೆಗಳ ಕಾಲ ಮಾತ್ರ ಫ್ರಿಜ್‌ನಲ್ಲಿ ಇಡಬಹುದು. ಬಹಳ ದಿನ ಸೊಪ್ಪನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅವುಗಳ ನೈಸರ್ಗಿಕ ರುಚಿ ಮತ್ತು ವಿನ್ಯಾಸವನ್ನು ಬದಲಾಗುತ್ತದೆ. ಇದು ಸೊಪ್ಪಿನಲ್ಲಿರುವ ನೈಸರ್ಗಿಕ ಅಂಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಳ್ಳುಳ್ಳಿ, ಈರುಳ್ಳಿ

ಅಡುಗೆಮನೆ ಎಂದ ಮೇಲೆ ಬೆಳ್ಳುಳ್ಳಿ–ಈರುಳ್ಳಿ ಇರಲೇಬೇಕು, ಅದಿಲ್ಲ ಅಂದ್ರೆ ಅಡುಗೆ ಸಾಧ್ಯವೇ ಇಲ್ಲ. ಯಾವುದೇ ಸಾರು, ಸಾಂಬಾರ್‌ಗೂ ಬೆಳ್ಳುಳ್ಳಿ, ಈರುಳ್ಳಿ ಬೇಕೇಬೇಕು. ಇವುಗಳನ್ನು ಜಾಸ್ತಿ ತಂದು ಮನೆಯಲ್ಲಿ ಸಂಗ್ರಹಿಸಿ ಇಡುವುದು ವಾಡಿಕೆ. ಕೆಲವರು ಇದನ್ನು ಕೂಡ ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರಿಜ್‌ನಲ್ಲಿ ಇಡಬಾರದು. ವಾಸ್ತವವಾಗಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಫ್ರಿಜ್‌ನಲ್ಲಿ ಇರಿಸುವುದರಿಂದ ಅವು ಮೊಳಕೆಯೊಡೆಯುತ್ತವೆ. ಇದರಿಂದ ಇದರ ರುಚಿ ಕೆಡುತ್ತದೆ. ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಯಾವಾಗಲೂ ತಂಪಾದ ಶುಷ್ಕ ಸ್ಥಳದಲ್ಲಿ ಇರಿಸಬೇಕು.

ಶುಂಠಿ

ಚಳಿಗಾಲದಲ್ಲಿ ಶುಂಠಿಯ ಬಳಕೆ ಹೆಚ್ಚು. ಇದು ಆಹಾರ ರುಚಿ ಹೆಚ್ಚಿಸುವುದು ಮಾತ್ರವಲ್ಲ, ನೈಸರ್ಗಿಕ ಔಷಧಿಯ ರೂಪದಲ್ಲೂ ಕೆಲಸ ಮಾಡುತ್ತದೆ. ಶುಂಠಿ ಚಿಕ್ಕ ಚಿಕ್ಕ ಚೂರು ಬಳಸುವ ಕಾರಣ ಬಳಸಿದ ನಂತರ ಇದನ್ನು ಫ್ರಿಜ್‌ನಲ್ಲಿ ಎತ್ತಿಡುವ ಅಭ್ಯಾಸ ಹಲವರಿಗಿದೆ. ಶುಂಠಿಯನ್ನು ಫ್ರಿಜ್‌ನಲ್ಲಿಟ್ಟರೆ ಅದು ಕೂಡ ಬೇಗ ಹಾಳಾಗುತ್ತದೆ. ಇದನ್ನು ತಿಂದರೆ ಕಿಡ್ನಿ ಮತ್ತು ಲಿವರ್‌ಗೆ ಹಾನಿಯಾಗುವ ಸಾಧ್ಯತೆ ಇದೆ.

ಆಲೂಗೆಡ್ಡೆ

ಆಲೂಗೆಡ್ಡೆಯನ್ನು ಸಾಮಾನ್ಯವಾಗಿ ಶೇ 90ರಷ್ಟು ಮಂದಿ ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ಆಲೂಗೆಡ್ಡೆಯನ್ನು ಫ್ರಿಜ್‌ನಲ್ಲಿ ಇಡುವುದು ಸರಿಯಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡುವುದರಿಂದ ಅವು ಮೊಳಕೆಯೊಡೆಯುವುದು ಮಾತ್ರವಲ್ಲ, ಇದಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ . ಈ ಕಾರಣಕ್ಕೆ ಇದು ಮಧುಮೇಹಿಗಳಲ್ಲಿ ಮತ್ತು ಮಧುಮೇಹಿಗಳಲ್ಲದವರಲ್ಲೂ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.

ಟೊಮೆಟೊ

ಟೊಮೆಟೊ ಕೂಡ ಈರುಳ್ಳಿ, ಬೆಳ್ಳುಳ್ಳಿಯಂತೆ ಅಡುಗೆಗೆ ಅವಶ್ಯವಾಗಿ ಬೇಕಿರುವ ತರಕಾರಿ. ಯಾವುದೇ ಸಾಂಬಾರ್‌ಗೂ ರುಚಿ ಬೇಕು ಅಂದ್ರೆ ಟೊಮೆಟೊ ಸೇರಿಸಬೇಕು. ಅಲ್ಲದೇ ಇದು ಬೇಗ ಹಾಳಾಗುವ ತರಕಾರಿಯಾಗಿರುವ ಕಾರಣ ತಂದ ತಕ್ಷಣ ಫ್ರಿಜ್‌ನಲ್ಲಿ ಇಡುತ್ತೇವೆ. ಫ್ರಿಡ್ಜ್‌ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸುವುದರಿಂದ, ಅವುಗಳ ರುಚಿ ಮತ್ತು ವಿನ್ಯಾಸ ಎರಡೂ ಬದಲಾಗುತ್ತದೆ. ಅಲ್ಲದೆ ಟೊಮೇಟೊದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಕೂಡ ನಾಶವಾಗುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

–––

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner