ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಬೆಳಗಿನ ಅಡುಗೆಮನೆ ಗಡಿಬಿಡಿಗೆ ಹಾಕಿ ಬ್ರೇಕ್‌; ಈ ಟಿಪ್ಸ್‌ ಪಾಲಿಸಿ, ಒತ್ತಡವಿಲ್ಲದೆ ನಿಮ್ಮಿಷ್ಟದ ಅಡುಗೆ ತಯಾರಿಸಿ

Kitchen Tips: ಬೆಳಗಿನ ಅಡುಗೆಮನೆ ಗಡಿಬಿಡಿಗೆ ಹಾಕಿ ಬ್ರೇಕ್‌; ಈ ಟಿಪ್ಸ್‌ ಪಾಲಿಸಿ, ಒತ್ತಡವಿಲ್ಲದೆ ನಿಮ್ಮಿಷ್ಟದ ಅಡುಗೆ ತಯಾರಿಸಿ

Cooking Hacks: ಬೆಳಗಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಉದ್ಯೋಗಸ್ಥ ಮಹಿಳೆಯರು ತಮ್ಮ ಅಡುಗೆ ಕೆಲಸದ ಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ಎಲ್ಲವನ್ನೂ ನಿಭಾಯಿಸಬಹುದು. ಇದಕ್ಕಾಗಿ ಇಲ್ಲಿ ಕೆಲವೊಂದು ಸರಳ ಟಿಪ್ಸ್‌ಗಳನ್ನು ನೀಡಲಾಗಿದೆ. ಇದನ್ನು ಪಾಲಿಸಿದರೆ ನೀವು ತಡವಾಗಿ ಎದ್ದರೂ ಅಡುಗೆ ಕೆಲಸಗಳೆಲ್ಲವೂ ಸರಾಗವಾಗಿ ನಡೆಯುತ್ತವೆ.

ಬೆಳಗ್ಗಿನ ಅಡುಗೆಮನೆ ಗಡಿಬಿಡಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್‌.
ಬೆಳಗ್ಗಿನ ಅಡುಗೆಮನೆ ಗಡಿಬಿಡಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್‌. (HT File Photo)

ಬೆಳಗಾದರೆ ಸಾಕು ಅಡುಗೆಮನೆಯಲ್ಲಿ ಎಲ್ಲಿಲ್ಲದ ಗಡಿಬಿಡಿ. ಅದರಲ್ಲೂ ಸ್ವಲ್ಪ ತಡವಾಗಿ ಎದ್ದರಂತೂ ಇನ್ನಷ್ಟು ಕೆಲಸದ ಒತ್ತಡ. ಈಗಿನ ಕಾಲದ ಮಹಿಳೆಯರು ಮನೆಯ ಒಳಗೂ ಮತ್ತು ಹೊರಗೂ ಎರಡೂ ಕಡೆ ಕೆಲಸ ಮಾಡುತ್ತಾರೆ. ಯಶಸ್ವಿಯಾಗಿ ನಿಭಾಯಿಸುತ್ತಾರೆ ಕೂಡ. ಆದರೂ ಬೆಳಗಿನ ಸಮಯ ಸ್ವಲ್ಪ ಕಷ್ಟಕರವಾಗಿರುತ್ತದೆ. ಆಫೀಸ್‌ಗೆ, ಶಾಲೆಗೆ ಹೋಗುವ ಮಕ್ಕಳಿಗೆ ಊಟದ ಡಬ್ಬಿ ತಯಾರಿಸುವುದು, ಮಕ್ಕಳನ್ನು ಶಾಲೆಗೆ ಕಳುಹಿಸಲು ರೆಡಿ ಮಾಡುವುದು, ಜೊತೆಗೆ ತಾವೂ ಕೆಲಸಕ್ಕೆ ಹೋಗಲು ತಯಾರಾಗುವುದು ಒಂದೇ ಎರಡೇ. ಹಾಗಾಗಿ ಬೆಳಿಗ್ಗೆ ಕೆಲಸಗಳು ಸಾಕಷ್ಟು ಇರುತ್ತವೆ. ಮುಂಜಾನೆ ಬೇಗ ಎದ್ದು ಅಡುಗೆ ಕೆಲಸ ಪ್ರಾರಂಭಿಸಿದರೂ ಎಲ್ಲೋ ಒಂದಿಷ್ಟು ಸಮಯ ಗೊತ್ತಿಲ್ಲದಂತೆ ಕಳೆದು ಹೋಗುತ್ತದೆ. ಕಾರಣ ಇರುವುದು ಕೆಲಸ ಮಾಡುವ ರೀತಿಯಲ್ಲಿ. ಅದಕ್ಕಾಗಿ ಕೆಲವು ಸಿಂಪಲ್‌ ಟಿಪ್ಸ್‌ಗಳನ್ನು ಪಾಲಿಸಿದರೆ ತಡವಾಗಿ ಎದ್ದರೂ ಸರಾಗವಾಗಿ ಕೆಲಸ ಮುಗಿಸಬಹುದು. ಜೊತೆಗೆ ಮನೆಮಂದಿಗೆಲ್ಲ ಇಷ್ಟವಾಗುವ ಅಡುಗೆಗಳನ್ನು ತಯಾರಿಸಬಹುದು.

ಟ್ರೆಂಡಿಂಗ್​ ಸುದ್ದಿ

ಬೆಳಗ್ಗಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಉದ್ಯೋಗಸ್ಥ ಮಹಿಳೆಯರು ತಮ್ಮ ಅಡುಗೆ ಕೆಲಸ ಮಾಡುವು ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಸುಲಭವಾಗಿ ಎಲ್ಲವನ್ನೂ ನಿಭಾಯಿಸಬಹುದು. ಅದಕ್ಕಾಗಿ ಇಲ್ಲಿ ಕೆಲವೊಂದು ಸರಳ ಟಿಪ್ಸ್‌ಗಳನ್ನು ನೀಡಲಾಗಿದೆ. ಈ ಟಿಪ್ಸ್‌ ಪಾಲಿಸಿದರೆ ನೀವು ತಡವಾಗಿ ಎದ್ದರೂ ಅಡುಗೆ ಕೆಲಸಗಳೆಲ್ಲವೂ ಬಹಳ ಸುಲಭವಾಗಿ ನಡೆಯುತ್ತದೆ.

‌ಇದನ್ನೂ ಓದಿ: Ragi mudde GI Tag: ರಾಗಿ ಮುದ್ದೆಗೆ ಜಿಐ ಮಾನ್ಯತೆ: ಅರ್ಜಿ ಸಲ್ಲಿಸಲು ಮುಂದಾದ ಬೆಂಗಳೂರು ಸಂಘಟನೆ

* ನಾಳೆಗಾಗಿ ಇಂದೇ ಯೋಚಿಸಿ

ನಾಳೆ ಬೆಳಿಗ್ಗೆ ಏನು ಅಡುಗೆ ಮಾಡುವುದು ಎಂದು ಹಿಂದಿನ ದಿನದ ರಾತ್ರಿಯೇ ನೀವು ನಿರ್ಧರಿಸಿದರೆ, ನಿಮ್ಮ ಸಾಕಷ್ಟು ಸಮಯ ಉಳಿತಾಯವಾಗುತ್ತ. ಮುಂಜಾನೆ ಆತುರದಿಂದ ನಿರ್ಧಾರ ಮಾಡುವುದು ತಪ್ಪುತ್ತದೆ. ಏನು ಅಡುಗೆ ಮಾಡಬೇಕು ಎಂಬ ಗೊಂದಲವಿದ್ದರೆ ಉಳಿದ ಕೆಲಸಗಳು ತಡವಾಗುತ್ತದೆ. ಆದ್ದರಿಂದ ನಾಳೆಯ ಮೆನುವನ್ನು ಇಂದೇ ನಿರ್ಧರಿಸಿ.

* ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ

ಬೆಳಗ್ಗಿನ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಮೊದಲೇ ಕತ್ತರಿಸಿಟ್ಟುಕೊಳ್ಳಿ. ಅದು ನಿಮ್ಮ ಬೆಳಗ್ಗಿನ ಸಮಯ ಉಳಿಸುತ್ತದೆ. ಉದಾಹರಣೆಗೆ ಬೀನ್ಸ್‌, ಕ್ಯಾರೆಟ್‌ ಮುಂತಾದ ತರಕಾರಿಗಳನ್ನು ತೊಳೆದು ಕತ್ತರಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಜ್‌ನಲ್ಲಿಟ್ಟುಕೊಂಡರೆ ಬೆಳಿಗ್ಗೆ ಅವುಗಳನ್ನು ಕತ್ತರಿಸಲು ಬೇಕಾಗುವ ಸಮಯ ಉಳಿತಾಯವಾಗುತ್ತದೆ. ಹಸಿರು ಸೊಪ್ಪುಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಅದಕ್ಕಾಗಿಯೇ ವಾರಕ್ಕೆ ಎರಡು ಬಾರಿಯಾದರೂ ಸೊಪ್ಪುಗಳನ್ನು ಅಡುಗೆಯಲ್ಲಿ ಬಳಸುವುದು ಒಳ್ಳೆಯದು. ಅವುಗಳನ್ನು ಸಹ ಹಿಂದಿನ ದಿನವೇ ಕತ್ತರಿಸಿ ಪ್ರಿಜ್‌ನಲ್ಲಿ ಶೇಖರಿಸಿಟ್ಟುಕೊಂಡರೆ, ಚಿಂತೆಯಿಲ್ಲದೇ ಸೊಪ್ಪುಗಳನ್ನು ಅಡುಗೆಯಲ್ಲಿ ಬಳಸಬಹುದು.

* ಪೇಸ್ಟ್‌ಗಳಿಗಾಗಿ ಹೀಗೆ ಮಾಡಿ

ಕೆಲವು ಅಡುಗೆಗಳಲ್ಲಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅವುಗಳನ್ನು ಬೆಳಿಗ್ಗೆ ತಯಾರಿಸುವುದಕ್ಕಿಂತ. ಮೊದಲೇ ಪೇಸ್ಟ್‌ ತಯಾರಿಸಿಟ್ಟುಕೊಳ್ಳಬಹುದು. ಹಾಗೆಯೇ ಹುಣಸೆಹಣ್ಣಿನ ಪೇಸ್ಟ್ ಸಹ ಮಾಡಿಟ್ಟುಕೊಳ್ಳಬಹುದು.

* ಮೊಟ್ಟೆಗಳನ್ನು ಹೀಗೆ ಬೇಯಿಸಿ

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬೆಳಿಗ್ಗೆ ಬೇಯಿಸಿದ ಮೊಟ್ಟೆಯನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅದು ಆರೋಗ್ಯದ ದೃಷ್ಟಿಯಿಂದ ಉತ್ತಮವೂ ಹೌದು. ಕೆಲವೊಮ್ಮೆ ಮೊಟ್ಟೆಯ ಚಿಪ್ಪು (ಸಿಪ್ಪೆ)ಗಳನ್ನು ಸರಿಯಾಗಿ ಬಿಡಿಸಲು ಬರುವುದಿಲ್ಲ. ಇದು ನಿಮ್ಮ ಸಮಯವನ್ನು ಹಾಳುಮಾಡುತ್ತದೆ. ಅದಕ್ಕಾಗಿ ಮೊಟ್ಟೆಯನ್ನು ಬೇಯಿಸುವಾಗ ನೀರಿಗೆ ಸ್ವಲ್ಪ ಬೇಕಿಂಗ್ ಸೋಡಾ ಅಥವಾ ವಿನೆಗರ್ ಹಾಕಿದರೆ ಮೊಟ್ಟೆಯ ಸಿಪ್ಪೆಗಳನ್ನು ಸುಲಭವಾಗಿ ಸುಲಿಯಬಹುದು. ಆಗ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.

* ಬೆಳ್ಳುಳ್ಳಿ ಮತ್ತು ಈರುಳ್ಳಿ

ಬೆಳ್ಳುಳ್ಳಿ ಮತ್ತು ಈರುಳ್ಳಿ ಸಿಪ್ಪೆ ತೆಗೆಯುವುದು ಸ್ವಲ್ಪ ಕಷ್ಟ. ಅದಕ್ಕಾಗಿ ಅವುಗಳನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿ, ನಂತರ ಸಿಪ್ಪೆ ತೆಗೆಯಿರಿ. ಹೀಗೆ ಮಾಡಿದರೆ ಸುಲಭವಾಗಿ ಸಿಪ್ಪೆ ತೆಗೆಯಬಹುದು.

* ಮಸಾಲೆ ಪುಡಿಗಳನ್ನು ಮೊದಲೇ ತಯಾರಿಸಿಟ್ಟುಕೊಳ್ಳಿ

ಕರಿ, ಫಲಾವ್‌ಗಳಲ್ಲಿ ಗರಂ ಮಸಾಲ, ಧನಿಯಾ ಪುಡಿ, ಜೀರಿಗೆ ಪುಡಿ ಮುಂತಾದವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಳ್ಳುವುದು ನಿಮ್ಮ ಸಾಕಷ್ಟು ಸಮಯವನ್ನು ಉಳಿಸುತ್ತದೆ.

* ಬೀಟ್‌ರೂಟ್‌ ಹೀಗೆ ಬೇಯಿಸಿ

ಬೇಯಿಸಿದ ಬೀಟ್‌ರೂಟ್‌ನ ಸಿಪ್ಪೆ ತೆಗೆಯವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಅದಕ್ಕಾಗಿ ಬೀಟ್‌ರೂಟ್ ಬೇಯಿಸುವ ಮೊದಲು ಫೋರ್ಕ್‌ನಿಂದ ಮೇಲಿನ ಸಿಪ್ಪೆಯನ್ನು ನಾಲ್ಕೈದು ಕಡೆಗಳಲ್ಲಿ ಚುಚ್ಚಿ. ಇದರಿಂದ ಸುಲಭವಾಗಿ ಸಿಪ್ಪೆ ಸುಲಿಯಬಹುದು.

ಹಾಲು ಕಾಯಿಸಲು ಈ ಟ್ರಿಕ್‌ ಬಳಸಿ

ಹಾಲು ಕಾಯಿಸುವಾಗ ಅದು ಉಕ್ಕಿ ಬರುತ್ತದೆ ಎಂಬ ಭಯದಿಂದ ನಾವು ಅದರ ಮುಂದೆ ನಿಲ್ಲುತ್ತೇವೆ. ಇದರಿಂದ ನಮ್ಮ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿ ಹಾಲಿನ ಪಾತ್ರೆಯ ಮೇಲೆ ಮರದ ಉದ್ದವಾದ ಚಮಚವನ್ನು ಅಡ್ಡಲಾಗಿ ಇಡಿ. ಹೀಗೆ ಮಾಡಿದರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.

ವಿಭಾಗ