ಹೂಕೋಸು ತಿನ್ನೋಕೆ ಇಷ್ಟ, ಆದ್ರೆ ಕ್ಲೀನ್ ಮಾಡೋದೇ ಕಷ್ಟ ಅಂದ್ಕೋಬೇಡಿ; ಈ ರೀತಿ ಸ್ವಚ್ಛ ಮಾಡಿದ್ರೆ ಚಿಕ್ಕ ಹುಳ ಕೂಡ ಉಳಿಯೊಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ಹೂಕೋಸು ತಿನ್ನೋಕೆ ಇಷ್ಟ, ಆದ್ರೆ ಕ್ಲೀನ್ ಮಾಡೋದೇ ಕಷ್ಟ ಅಂದ್ಕೋಬೇಡಿ; ಈ ರೀತಿ ಸ್ವಚ್ಛ ಮಾಡಿದ್ರೆ ಚಿಕ್ಕ ಹುಳ ಕೂಡ ಉಳಿಯೊಲ್ಲ

ಹೂಕೋಸು ತಿನ್ನೋಕೆ ಇಷ್ಟ, ಆದ್ರೆ ಕ್ಲೀನ್ ಮಾಡೋದೇ ಕಷ್ಟ ಅಂದ್ಕೋಬೇಡಿ; ಈ ರೀತಿ ಸ್ವಚ್ಛ ಮಾಡಿದ್ರೆ ಚಿಕ್ಕ ಹುಳ ಕೂಡ ಉಳಿಯೊಲ್ಲ

ಹೂಕೋಸು ತಿನ್ನಲು ಸಖತ್ ರುಚಿಯಾಗಿರುತ್ತೆ. ಇದರಿಂದ ಗೋಬಿ ಮಾತ್ರವಲ್ಲ, ವಿವಿಧ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಆದರೆ ಹೂಕೋಸಿನಲ್ಲಿ ಹುಳಗಳಿರುತ್ತವೆ ಎಂದು ಹೇಳುವ ಕಾರಣ ಇದನ್ನು ಸ್ವಚ್ಛ ಮಾಡೋದೆ ಸವಾಲಾಗುತ್ತದೆ. ಆದ್ರೆ ಚಿಂತೆ ಮಾಡ್ಬೇಡಿ. ಇಲ್ಲಿ ನಾವು ಹೇಳಿರುವ ರೀತಿ ಕ್ಲೀನ್ ಮಾಡಿದ್ರೆ ಒಂದೇ ಒಂದು ಹುಳ ಕೂಡ ಉಳಿಯೊಲ್ಲ.

ಹೂಕೋಸು ಸ್ವಚ್ಛ ಮಾಡುವ ವಿಧಾನ
ಹೂಕೋಸು ಸ್ವಚ್ಛ ಮಾಡುವ ವಿಧಾನ

ಹೂಕೋಸು ಆರೋಗ್ಯಕ್ಕೆ ಒಳ್ಳೆಯದಾದ್ರೂ ಇದನ್ನು ಅಡುಗೆಗೆ ಬಳಸಲು ಹಲವರು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಹುಳಗಳು. ಹೂಕೋಸಿನ ಅಡುಗೆ ಮಾಡುವುದು ಸುಲಭ, ಇದು ತಿನ್ನಲು ರುಚಿಯಾಗಿರುತ್ತೆ. ಆದರೆ ಸ್ವಚ್ಛ ಮಾಡಲು ಕಷ್ಟ ಎನ್ನುವ ಕಾರಣಕ್ಕೆ ಬಳಸುವವರ ಸಂಖ್ಯೆ ಕಡಿಮೆ.

ಹೂಕೋಸಿನ ಒಳಗೆ ಚಿಕ್ಕ ಚಿಕ್ಕ ಹುಳಗಳಿರುತ್ತವೆ. ಇದನ್ನು ಸ್ವಚ್ಛ ಮಾಡಲು ಸುಲಭವಾಗಿ ಸಾಧ್ಯವಾಗುವುದಿಲ್ಲ. ಕ್ಲೀನ್ ಮಾಡಲು ಸಾಕಷ್ಟು ಸಮಯ ಹಿಡಿಯುವ ಕಾರಣ ಇದನ್ನು ಮನೆಗೆ ತರುವ ಸಾಹಸಕ್ಕೆ ಹೋಗುವುದಿಲ್ಲ. ಆದರೆ ಒಮ್ಮೆ ಹೂಕೋಸಿನ ರುಚಿ ನೋಡಿದ್ರೆ ಮತ್ತೆ ಅದನ್ನ ತಿನ್ನದೇ ಇರಲು ಸಾಧ್ಯವಾಗುವುದಿಲ್ಲ. ಹಾಗಾದರೆ ಈ ಹೂಕೋಸು ಕ್ಲೀನ್ ಮಾಡಲು ಈ ಟ್ರಿಕ್ಸ್ ಟ್ರೈ ಮಾಡಿ. ಈ ರೀತಿ ತೊಳೆದು ಸ್ವಚ್ಛ ಮಾಡಿದ್ರೆ ಒಂದೇ ಒಂದು ಹುಳ ಕೂಡ ಉಳಿದಿರುವುದಿಲ್ಲ.

ಹೂಕೋಸು ಸ್ವಚ್ಛ ಮಾಡುವ ವಿಧಾನ

  • ಹೂಕೋಸಿನಿಂದ ಹುಳಗಳನ್ನು ಸುಲಭವಾಗಿ ತೆಗೆಯಲು ಮೊದಲು, ಒಂದು ಬಟ್ಟಲಿನಲ್ಲಿ ನೀರು ತುಂಬಿಸಿ, ಆ ನೀರಿಗೆ ಉಪ್ಪು ಹಾಕಿ. ಪಾತ್ರೆಯಲ್ಲಿ ಹೂಕೋಸು ಮುಳುಗುವಷ್ಟು ನೀರಿರಬೇಕು. ಈಗ ಆ ನೀರಿನಲ್ಲಿ ಹುಳುಗಳು ಮೇಲಕ್ಕೆ ತೇಲುತ್ತವೆ. ಆಗ ಸುಲಭವಾಗಿ ಹುಳುಗಳನ್ನು ತೆಗೆದು ಹಾಕಬಹುದು.
  • ಉಗುರು ಬೆಚ್ಚಗಿನ ನೀರಿಗೆ ಅರಿಸಿನಿ ಹಾಗೂ ಉಪ್ಪು ಬೆರೆಸಿ. ಆ ನೀರಿನಲ್ಲಿ ಹೂಕೋಸು ಹಾಕಿ. ಸ್ವಲ್ಪ ಸಮಯದ ಹೂಕೋಸನ್ನು ನೀರಿನಲ್ಲಿ ನೆನೆಸಿಡಿ. ಈಗ ಹುಳಗಳು ತಾನಾಗಿಯೇ ಮೇಲೆ ತೇಲಿ ಬರುತ್ತವೆ. ನಂತರ ಅದನ್ನು ಸುಲಭವಾಗಿ ತೆಗೆದು ಹಾಕಬಹುದು.
  • ಹೂಕೋಸುಗಳನ್ನು ಗೊಂಚಲು ಗೊಂಚಲಾಗಿ ಕತ್ತರಿಸಿ. ಈಗ ಇದನ್ನು ಕೈಯಲ್ಲಿ ಹಿಡಿದು ನಳ್ಳಿಯಿಂದ ರಭಸದಲ್ಲಿ ನೀರು ಬಿಡಿ. ಈಗ ನೀರಿನ ರಭಸಕ್ಕೆ ಎಲ್ಲಾ ಕೀಟಗಳು ತೇಲಿಕೊಂಡು ಹೋಗುತ್ತವೆ.
  • ತರಕಾರಿಗಳನ್ನು ತೊಳೆಯಲು ಮಾರುಕಟ್ಟೆಯಲ್ಲಿ ವಿಶೇಷ ಉತ್ಪನ್ನಗಳು ಲಭ್ಯವಿದೆ. ವೆಜಿಟೇಬಲ್ ವಾಶ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ರಾಸಾಯನಿಕ ಮುಕ್ತ ವೆಜಿಟೇಬಲ್‌ ವಾಶ್‌ ಅನ್ನು ಹೂಕೋಸಿನ ಮೇಲೆ ಸ್ಪ್ರೇ ಮಾಡಿ. ಇದರಿಂದ ಕಣ್ಣಿಗೆ ಕಾಣದ ಕ್ರಿಮಿಗಳು ನಾಶವಾಗುತ್ತವೆ. ನಂತರ ನಳ್ಳಿಯಿಂದ ನೀರು ಬಿಟ್ಟು ಚೆನ್ನಾಗಿ ತೊಳೆಯಿರಿ. ‌
  • ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಉಪ್ಪು ಹಾಕಿ. ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಚೆನ್ನಾಗಿ ಕುದಿಸಿ. ನಂತರ ಹೂಕೋಸನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದರಲ್ಲಿ ಹಾಕಿ. ಕಣ್ಣಿಗೆ ಕಾಣಿಸದ ಎಲ್ಲಾ ಕ್ರಿಮಿಕೀಟಗಳು ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ನಂತರ ಇದನ್ನು ಶುದ್ಧ ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆದು ನಂತರ ಅಡುಗೆಗೆ ಬಳಸಿ. ಹೀಗೆ ಮಾಡುವುದರಿಂದ ಆಹಾರದಲ್ಲಿ ಯಾವುದೇ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳು ಇರುವುದಿಲ್ಲ.
  • ಒಂದು ಬೌಲ್‌ಗೆ ನೀರು ಹಾಕಿ ಮತ್ತು ಹತ್ತು ಐಸ್ ಕ್ಯೂಬ್‌ಗಳನ್ನು ಸೇರಿಸಿ. ಹೂಕೋಸನ್ನು ನಾಲ್ಕು ಅಥವಾ ಐದು ತುಂಡುಗಳಾಗಿ ಕತ್ತರಿಸಿ. ಆ ನೀರಿನಲ್ಲಿ ಹೂಕೋಸುಗಳನ್ನು ಹಾಕಿ. ಇದರಿಂದ ಕೀಟಗಳು ಬೇಗನೆ ಸಾಯುತ್ತವೆ ಮತ್ತು ಮೇಲಕ್ಕೆ ತೇಲುತ್ತವೆ. ಅದರ ನಂತರ ಅವುಗಳನ್ನು ಹೊರತೆಗೆದು ಮೇಲೋಗರಕ್ಕೆ ಸೂಕ್ತವಾದ ಸಣ್ಣ ತುಂಡುಗಳಾಗಿ ಕತ್ತರಿಸಿ ಬೇಯಿಸುವುದು ಉತ್ತಮ.

ಈ ಮೇಲಿನ ಎಲ್ಲಾ ವಿಧಾನಗಳ ಮೂಲಕ ಹೂಕೋಸಿನಲ್ಲಿರುವ ಹುಳಗಳು, ಬ್ಯಾಕ್ಟೀರಿಯಾಗಳು ಹಾಗೂ ಕ್ರಿಮಿಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು, ಅಲ್ಲದೇ ಇದನ್ನು ನೀವು ಸುಲಭವಾಗಿ ಯಾವುದೇ ಹಿಂಜರಿಕೆ ಇಲ್ಲದೇ ಖಾದ್ಯಗಳನ್ನು ತಯಾರಿಸಲು ಬಳಸಬಹುದು.

ಹೂಕೋಸಿನಲ್ಲಿರುವ ಪೋಷಕಾಂಶಗಳು

ಹೂಕೋಸು ಉರಿಯೂತದ ಮತ್ತು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಇದಲ್ಲದೆ, ಇದು ಋತುಮಾನದ ತರಕಾರಿಯಾಗಿದೆ ಅಂದರೆ ಇದು ಹೆಚ್ಚಾಗಿ ಚಳಿಗಾಲದಲ್ಲಿ ಲಭ್ಯವಿರುತ್ತದೆ. ಕ್ರೂಸಿಫೆರಸ್ ತರಕಾರಿಗಳ ಕುಟುಂಬಕ್ಕೆ ಸೇರಿದ ಹೂಕೋಸು ವಿಟಮಿನ್‌ಗಳು ಮತ್ತು ನಾರಿನಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿರುವ ಕಾರಣ ತೂಕ ಇಳಿಕೆಗೂ ಸಹಕಾರಿ. ಮೂಳೆಗಳ ಆರೋಗ್ಯಕ್ಕೂ ಇದು ಉತ್ತಮ. ಹೂಕೋಸು ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಅತ್ಯಗತ್ಯ. ಆ ಕಾರಣಕ್ಕೆ ಆಗಾಗ ಹೂಕೋಸು ತಿನ್ನಬೇಕು ಎಂದು ಹೇಳಲಾಗುತ್ತದೆ. ಆದರೆ ಥೈರಾಯಿಡ್‌ನಂತಹ ಸಮಸ್ಯೆ ಇರುವವರು ತಜ್ಞರ ಸಲಹೆ ಪಡೆಯದೇ ಹೂಕೋಸು ತಿನ್ನಬೇಡಿ.

Whats_app_banner