ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದೇಕೆ, ಇದನ್ನು ತಡೆಯಲು ಇಲ್ಲಿದೆ ಸರಳ ಪರಿಹಾರ; ಗೃಹಿಣಿಯರಿಗಿದು ಉಪಯುಕ್ತ ಸಲಹೆ
ಅಡುಗೆಮನೆಯಲ್ಲಿ ಅಸಾಧಾರಣ ಕೆಲಸ ಅಂದ್ರೆ ಈರುಳ್ಳಿ ಹೆಚ್ಚೋದು ಅಂತ ಕೆಲವರು ಮಾತನಾಡುವುದನ್ನ ನೀವೂ ಕೇಳಿರಬಹುದು, ಅದು ನಿಜ ಕೂಡ. ಈರುಳ್ಳಿ ಕತ್ತರಿಸುವಾಗ ಒಂದೇ ಸಮ ಕಣ್ಣೀರು ಸುರಿಯುತ್ತದೆ, ಕಣ್ಣು ಉರಿಯುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು, ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರಬಾರದು ಅಂದ್ರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿಗೆ ಅಗ್ರಸ್ಥಾನ. ಈರುಳ್ಳಿ ಇಲ್ಲ ಅಂದ್ರೆ ಯಾವುದೇ ಅಡುಗೆ ಪರಿಪೂರ್ಣ ಎನ್ನಿಸೊಲ್ಲ. ಆದರೆ ಈರುಳ್ಳಿ ಹೆಚ್ಚೋದು ಮಾತ್ರ ಯಾರಿಗೂ ಬೇಡದ ಕೆಲಸ. ಯಾಕೆಂದರೆ ಇದರಿಂದ ಸಿಕ್ಕಾಪಟ್ಟೆ ಕಣ್ಣುರಿಯಾಗುತ್ತೆ, ಕಣ್ಣೀರು ಬರುತ್ತೆ. ಆ ಕಾರಣಕ್ಕೆ ಹಲವರು ಈರುಳ್ಳಿ ಹೆಚ್ಚಲು ಹಿಂದೇಟು ಹಾಕ್ತಾರೆ. ಈರುಳ್ಳಿ ಕತ್ತರಿಸುವಾಗ ಕತ್ತರಿಸಿದವರು ಮಾತ್ರವಲ್ಲ, ಕೆಲವೊಮ್ಮೆ ಅಕ್ಕಪಕ್ಕ ಇರುವವರೂ ಕಣ್ಣೀರು ಹಾಕ್ತಾರೆ. ಹಾಗಾದರೆ ಇದಕ್ಕೆ ಕಾರಣವೇನು, ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದಂತೆ ತಡೆಯುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದೇಕೆ?
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಲು ಮುಖ್ಯ ಕಾರಣ ಅದರಲ್ಲಿರುವ ಕಿಣ್ವಗಳು. ಈರುಳ್ಳಿ ಹೆಚ್ಚುವಾಗ ಅದರೊಳಗಿನ ಕಿಣ್ವದಿಂದ ಅನಿಲ ಬಿಡುಗಡೆಯಾಗುತ್ತದೆ. ಇದು ಮೂಗು ಮತ್ತು ಕಣ್ಣುಗಳನ್ನು ಕೆರಳಿಸುತ್ತದೆ. ಇದರಿಂದಾಗಿ ಕಣ್ಣಿಂದ ನೀರು ಸುರಿಯುತ್ತದೆ, ಕಣ್ಣುರಿಯಾಗುತ್ತದೆ.
ಹಾಗಾದರೆ ಕಣ್ಣೀರು ಬಾರದೇ ಈರುಳ್ಳಿ ಕತ್ತರಿಸಲು ಸಾಧ್ಯವಿಲ್ಲವೇ ಅಂದರೆ ಖಂಡಿತ ಸಾಧ್ಯವಿದೆ. ಅದಕ್ಕೆ ಕೆಲವು ಸಲಹೆಗಳನ್ನು ನೀವು ಪಾಲಿಸಬೇಕು. ಈ ಸಲಹೆಗಳನ್ನು ಅನುಸರಿಸುವ ಮೂಲಕ ಕಣ್ಣೀರು ಸುರಿಸದೆ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಲು ಸಾಧ್ಯವಿದೆ, ಹೀಗೆ ಮಾಡುವುದರಿಂದ ನೀವು ಎಷ್ಟು ಈರುಳ್ಳಿ ಬೇಕಾದ್ರೂ ಹೆಚ್ಚಿ ಕೊಡ್ತೀರಿ. ಹಾಗಿದ್ರೆ ಆ ಟ್ರಿಕ್ಸ್‌ಗಳು ಯಾವುದು ಅಂತ ನೋಡೋಣ.
ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚು ಈರುಳ್ಳಿ ತಿನ್ನುವುದರ ಪ್ರಯೋಜನಗಳು
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಟ್ರಿಕ್ಸ್
ವಿಶೇಷ ಕನ್ನಡಕ
ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದಂತೆ ತಡೆಯುವ ವಿಶೇಷ ಕನ್ನಡಕವೊಂದನ್ನು ತಯಾರಿಸಲಾಗಿದೆ. ಇದನ್ನು ಧರಿಸಿದರೆ ಈರುಳ್ಳಿಯಿಂದ ಬಿಡುಗಡೆಯಾಗುವ ಅನಿಲ ಕಣ್ಣಿಗೆ ತಾಕಿ ಕಣ್ಣೀರು ಬರುವುದನ್ನು ತಡೆಯಬಹುದು. ಈ ಅನಿಲವು ಮೂಗಿನ ಮೂಲಕ ನಿಮ್ಮ ಕಣ್ಣುಗಳನ್ನು ತಲುಪಲು ಸಹ ಸಾಧ್ಯವಿದೆ. ಈ ಕನ್ನಡಕ ಧರಿಸುವುದರಿಂದ ಯಾವುದೇ ಕಾರಣಕ್ಕೂ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಿಲ್ಲ. ಇದನ್ನು ನೀವೂ ಖರೀದಿಸಬಹುದು.
ಹರಿತವಾದ ಚಾಕು ಬಳಕೆ
ಈರುಳ್ಳಿ ಕತ್ತರಿಸುವ ಚಾಕು ಹರಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಚಾಕುವಿನ ಅಂಚು ಚೂಪಾಗಿದ್ದರೆ ಈರುಳ್ಳಿಯನ್ನು ಬೇಗನೆ ಕತ್ತರಿಸಬಹುದು. ಇದರಿಂದ ಈರುಳ್ಳಿ ಪದರಗಳು ಕಡಿಮೆ ಕಿಣ್ವಗಳನ್ನು ಬಿಡುಗಡೆ ಮಾಡುತ್ತವೆ. ಹರಿತವಿಲ್ಲದ ಚಾಕುವಿನಿಂದ ಕತ್ತರಿಸುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಈರುಳ್ಳಿಯ ಪದರಗಳು ಹಾನಿಗೊಳಗಾಗಿ ಅನಿಲ ಬಿಡುಗಡೆಯಾಗುತ್ತದೆ. ಅದೇ ಹರಿತವಾದ ಚಾಕು ಇದ್ದರೆ ಬೇಗನೆ ಈರುಳ್ಳಿ ಕತ್ತರಿಸಬಹುದು, ಕಣ್ಣೀರು ಬರುವುದನ್ನೂ ತಡೆಯಲು ಸಾಧ್ಯವಿದೆ.
ನೀರಿನಲ್ಲಿ ಹಾಕಿ
ಈರುಳ್ಳಿಯನ್ನು ಕತ್ತರಿಸುವ ಅರ್ಧ ಗಂಟೆ ಮೊದಲು, ಸಿಪ್ಪೆ ಸುಲಿದು ನಾಲ್ಕು ತುಂಡುಗಳಾಗಿ ಕತ್ತರಿಸಿ ನೀರಿಗೆ ಹಾಕಿ, ಕಾಲು ಗಂಟೆ ಹಾಗೆ ಬಿಡಿ. ಆ ನೀರಿಗೆ ಎರಡು ಹನಿ ಬಿಳಿ ವಿನೆಗರ್ ಕೂಡ ಸೇರಿಸಿ. ಅರ್ಧ ಗಂಟೆಯ ನಂತರ ಈ ಈರುಳ್ಳಿಯನ್ನು ಕತ್ತರಿಸಿ ಕಣ್ಣುಗಳಲ್ಲಿ ನೀರು ಬರುವುದಿಲ್ಲ. ಏಕೆಂದರೆ ಈರುಳ್ಳಿಯಿಂದ ಕಿಣ್ವಗಳು ಬೇಗನೆ ಬಿಡುಗಡೆಯಾಗುತ್ತವೆ ಮತ್ತು ನೀರಿನೊಂದಿಗೆ ಮಿಶ್ರಣವಾಗುತ್ತವೆ. ಹಾಗಾಗಿ ಕಣ್ಣು ಉರಿಯುವ ಸಮಸ್ಯೆ ಇರುವುದಿಲ್ಲ.
ಫ್ರಿಜ್‌ನಲ್ಲಿಡಿ
ಈರುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿ ಫ್ರಿಜ್‌ನಲ್ಲಿಡಿ. ಫ್ರಿಜ್‌ನಲ್ಲಿಟ್ಟು 20 ನಿಮಿಷಗಳ ನಂತರ ಅದನ್ನು ತೆಗೆದರೆ, ಈರುಳ್ಳಿಯಿಂದ ಯಾವುದೇ ಕಿಣ್ವಗಳು ಬಿಡುಗಡೆಯಾಗುವುದಿಲ್ಲ. ಇದರಿಂದ ನೆಮ್ಮದಿಯಾಗಿ ಈರುಳ್ಳಿ ಕತ್ತರಿಸಬಹುದು.
ಫ್ಯಾನ್ ಆಫ್ ಇಡಿ
ಈರುಳ್ಳಿ ಕತ್ತರಿಸುವಾಗ ಫ್ಯಾನ್ ಆಫ್ ಮಾಡಿ. ಹೆಚ್ಚು ಗಾಳಿ ಇರುವ ಕೋಣೆಯಲ್ಲಿ ಕಿಣ್ವಗಳು ಹೆಚ್ಚು ಹರಡಿರುತ್ತವೆ. ಅವರು ಕೋಣೆಯಲ್ಲಿ ಕತ್ತರಿಸುವವರು ಬಿಟ್ಟು, ಬೇರೆಯವರ ಕಣ್ಣಿನಲ್ಲೂ ನೀರು ಬರಲು ಶುರುವಾಗುತ್ತದೆ.
ಈರುಳ್ಳಿಯನ್ನು ಹೆಚ್ಚುವಾಗ ನಿಮ್ಮ ನಾಲಿಗೆಯನ್ನು ಹೊರ ಚಾಚಿ. ನಾಲಿಗೆಯ ಮೇಲಿನ ತೇವಾಂಶವು ಈ ಕಿಣ್ವಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ಕಣ್ಣೀರನ್ನು ತಡೆಯಬಹುದು ಅಥವಾ ನಿಮ್ಮ ಬಾಯಿಯಲ್ಲಿ ಬ್ರೆಡ್ ಸ್ಲೈಸ್ ಇಟ್ಟುಕೊಳ್ಳಿ. ಬ್ರೆಡ್ ಸ್ಲೈಸ್ ಈರುಳ್ಳಿಯಿಂದ ಬಿಡುಗಡೆಯಾಗುವ ಕಿಣ್ವಗಳನ್ನು ಹೀರಿಕೊಳ್ಳುತ್ತದೆ ಮತ್ತು ಕಣ್ಣುಗಳನ್ನು ತಲುಪದಂತೆ ತಡೆಯುತ್ತದೆ. ಇವೆಲ್ಲವೂ ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುವ ಸಲಹೆಗಳಾಗಿವೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ