ಆಟಿ ಅಮಾವಾಸ್ಯೆಗೆ ಕಷಾಯ ಕುಡಿದ್ರಾ? ಈ ದಿನ ಮತ್ತು ತಿಂಗಳ ವಿಶೇಷ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆಟಿ ಅಮಾವಾಸ್ಯೆಗೆ ಕಷಾಯ ಕುಡಿದ್ರಾ? ಈ ದಿನ ಮತ್ತು ತಿಂಗಳ ವಿಶೇಷ ತಿಳಿಯಿರಿ

ಆಟಿ ಅಮಾವಾಸ್ಯೆಗೆ ಕಷಾಯ ಕುಡಿದ್ರಾ? ಈ ದಿನ ಮತ್ತು ತಿಂಗಳ ವಿಶೇಷ ತಿಳಿಯಿರಿ

ಜುಲೈ ಮತ್ತು ಆಗಸ್ಟ್‌ ತಿಂಗಳ ನಡುವೆ ಬರುವ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆ ಅಥವಾ ಆಷಾಡ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸಂಪ್ರದಾಯಬದ್ಧ ಆಚರಣೆಗಳು ನಡೆಯುತ್ತವೆ. ಇದರ ಹಿಂದೆ ವೈಜ್ಞಾನಿಕ ಮತ್ತು ಅರ್ಥಪೂರ್ಣ ಹಿನ್ನೆಲೆಯೂ ಇದೆ.

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ

ಇಂದು ಕರ್ನಾಟಕದ ಹಲವು ಭಾಗಗಳಲ್ಲಿ ಭೀಮನ ಅಮಾವಾಸ್ಯೆ ಆಚರಿಸಲಾಗುತ್ತದೆ. ಇದೇ ದಿನ ಕರಾವಳಿ ಅಥವಾ ತುಳುನಾಡು ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಭೀಮನ ಅಮಾವಾಸ್ಯೆಗೂ ಆಟಿ ಅಮಾವಾಸ್ಯೆಗೂ ವ್ಯತ್ಯಾಸವಿದೆ. ಆಚರಣೆ ಒಂದೇ ದಿನ ಆದರೂ, ಅದರ ಹೆಸರು, ಆಚರಿಸುವ ಕ್ರಮ, ಉದ್ದೇಶ ಮತ್ತು ಈ ದಿನದ ಆಹಾರ ಕೂಡಾ ಭಿನ್ನ. ಹಾಗಿದ್ರೆ ಆಟಿ ಮತ್ತು ಆಟಿ ಅಮಾವಾಸ್ಯೆಯ ಬಗ್ಗೆ ಸವಿವರ ಇಲ್ಲಿದೆ.

ಕನ್ನಡದ ಆಷಾಡ ಮಾಸವೇ ತುಳುವರ ಆಟಿ. ನಮ್ಮ ಹಿರಿಯರ ಕಾಲದಿಂದಲೂ ತುಳುನಾಡಿನಲ್ಲಿ ಆಟಿ ತಿಂಗಳನ್ನು 'ಅನಿಷ್ಟದ ತಿಂಗಳು' ಎಂದೇ ಹೇಳುವುದುಂಟು. ಇದಕ್ಕೆ ಕಾರಣ ಹಲವು. ಆಟಿಯಲ್ಲಿ ಭಾರಿ ಮಳೆಯಾಗುವುದರಿಂದ ಕೃಷಿ ಚಟುವಟಿಕೆಗಳು ಸ್ತಬ್ಧವಾಗುವ ಕಾಲವಿದು. ಹಿಂದಿನ ಕಾಲದಲ್ಲಿ ಕೃಷಿ ಕಾರ್ಯ ಬಿಟ್ಟರೆ ಬೇರೆ ಕೆಲಸ ಕಾರ್ಯಗಳು ನಮ್ಮ ಹಿರಿಯರಿಗೆ ತಿಳಿದಿರಲಿಲ್ಲ. ಅಲ್ಲದೆ ಅತಿಯಾದ ಮಳೆಯಿಂದಾಗಿ ಯಾವುದೇ ಕೃಷಿ ಕಾರ್ಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹಿರಿಯರಿಗೆ ಸಂಪಾದನೆ ಇಲ್ಲದೆ, ಮೂರು ಹೊತ್ತು ತಿನ್ನಲು ಕೂಡಾ ಭಾರಿ ಬರಗಾಲ ಎದುರಾಗುತ್ತಿತ್ತು. ಪ್ರಕೃತಿಯ ಸವಾಲನ್ನು ಎದುರು ಹಾಕಿಕೊಳ್ಳದ ಜನ, ಪ್ರಕೃತಿಯನ್ನು ಗೌರವಿಸಿ, ಅದು ಕೊಟ್ಟ ಆಹಾರವನ್ನೇ ಮೃಷ್ಟಾನ್ನ ಭೋಜನವೆಂದು ಸೆರಗೊಡ್ಡಿ ಸ್ವೀಕರಿಸುತ್ತಿದ್ದರು. ಹೀಗಾಗಿ ತಿನ್ನಲು ಕೂಡಾ ಭಾರಿ ಕಷ್ಟಪಡುವ ಆಟಿ ತಿಂಗಳನ್ನು ಅನಿಷ್ಟ ಅಥವಾ ಕಷ್ಟಕಾಲ ಎಂದು ಈಗಲೂ ಹೇಳಲಾಗುತ್ತದೆ.

ಈ ತಿಂಗಳಲ್ಲಿ ಶುಭಕಾರ್ಯಗಳು ನಿಷಿದ್ಧ. ದೈವ ದೇವರ ಪೂಜಾ ಕಾರ್ಯಗಳಿಗೂ ತಾತ್ಕಾಲಿ ತಡೆ ಹಾಕುವ ಕಾಲ. ಇದಕ್ಕೆ ಕಾರಣ, ಒಂದು ಆಟಿ ತಿಂಗಳ ಜಡಿಮಳೆ ಮತ್ತೊಂದು ತಿನ್ನಲು ಕೂಡಾ ಏನೂ ಸಿಗದ ಕಷ್ಟಕಾಲ. ಇದೇ ಕಾರಣಕ್ಕೆ ಎಲ್ಲಾ ಕೆಲಸ ಕಾರ್ಯ ಮತ್ತು ಶುಭಕಾರ್ಯಗಳಿಗೆ ನಮ್ಮ ಹಿರಿಯರು ವಿಶ್ರಾಂತಿ ಕೊಡುತ್ತಿದ್ದರು. ಈಗಲೂ ಕೂಡಾ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಶುಭಕಾರ್ಯಗಳು ನಡೆಯುವುದಿಲ್ಲ. ಆಟಿ ಕಳೆದು ಶ್ರಾವಣ ಬಂದಂತೆ ಹಬ್ಬ ಹರಿದಿನಗಳು ಸಾಲು ಸಾಲಾಗಿ ಬರುತ್ತವೆ.

ಆಟಿ ಅಮಾವಾಸ್ಯೆ

ಜುಲೈ ಮತ್ತು ಆಗಸ್ಟ್‌ ತಿಂಗಳ ನಡುವೆ ಬರುವ ಅಮಾವಾಸ್ಯೆಯನ್ನು ಆಟಿ ಅಮಾವಾಸ್ಯೆ ಅಥವಾ ಆಷಾಡ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸಂಪ್ರದಾಯಬದ್ಧ ಆಚರಣೆಗಳು ನಡೆಯುತ್ತವೆ. ಇದರ ಹಿಂದೆ ವೈಜ್ಞಾನಿಕ ಮತ್ತು ಅರ್ಥಪೂರ್ಣ ಹಿನ್ನೆಲೆಯೂ ಇದೆ. ಪ್ರಕೃತಿದತ್ತವಾಗಿ ಸಿಗುವ ಆಹಾರ, ಪ್ರಕೃತಿ ಮಾತೆ ಮನುಷ್ಯನಿಗೆ ಆರೋಗ್ಯ ಭಾಗ್ಯ ಕರುಣಿಸಲು ಕೊಡುವ ಪ್ರಾಕೃತಿಕ ಔಷಧವೇ ಈದಿನದ ವಿಶೇಷ. ಹಾಳೆ ಕಷಾಯ, ಮೆಂತ್ಯೆ ಗಂಜಿ ಮತ್ತು ಪತ್ರೊಡೆ ಈ ದಿನದ ಪ್ರಮುಖ ಆಹಾರ. ನದಿಯಲ್ಲಿ ದಾನ ಬಿಡುವುದು ಇನ್ನೊಂದು ಪ್ರಮುಖ ಆಚರಣೆ.

ಹಾಳೆ ಕಷಾಯ

ಹಾಳೆ ಮರ ಅಂದರೆ, ಹಾಲಿನಂತಹ ರಸ ಬಿಡುವ ಒಂದು ಮರ. ಇದನ್ನು ಸಂಸ್ಕೃತದಲ್ಲಿ ಸಪ್ತಪರ್ಣಿ ಮರ ಎಂದು ಕರೆಯಲಾಗುತ್ತದೆ. ಈ ಮರದ ತೊಗಟೆಯಿಂದ ಮಾಡುವ ಕಷಾಯ ಸರ್ವರೋಗಗಳಿಗೆ ರಾಮಭಾಣ ಎಂಬುದು ಹಿರಿಯರು ಹೇಳಿಕೊಟ್ಟ ಮನೆಮದ್ದು. ಆಟಿ ತಿಂಗಳಿಗೆ ಈ ಮರದಲ್ಲಿ ಎಲ್ಲಾ ಬಗೆಯ ದಿವ್ಯ ಔಷಧಗಳು ಸೇರಿಕೊಂಡಿರುತ್ತದೆ ಎಂಬುದು ನಮ್ಮ ಪೂರ್ವಿಕರು ಹೇಳಿಕೊಟ್ಟ ಪಾಠ. ಹೀಗಾಗಿ ಆಟಿ ಅಮಾವಾಸ್ಯೆ ದಿನ ಹಾಳೆ ಕಷಾಯವನ್ನು ತುಳುನಾಡಿನಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಕುಡಿಯುತ್ತಾರೆ. ಇದು ನಮ್ಮ ದೇಹದಲ್ಲಿರುವ ಕಷ್ಮಲ, ನಂಜು ಅಂಶ ಹಾಗೂ ಕೂದಲಿನಂತಹ ವಸ್ತುಗಳಿದ್ದರೂ ಅದನ್ನು ಹೊರಹಾಕಿ ಆರೋಗ್ಯ ಭಾಗ್ಯ ಕರುಣಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದು ಕಹಿಯಾಗಿರುವುದರಿಂದ ಹಲವು ರೋಗನಿರೋಧಕ ಶಕ್ತಿ ಇದರಲ್ಲಡಗಿದೆ.

ಹಾಳೆ ಕಷಾಯ ಮಾಡುವುದು ಹೇಗೆ?

ಇಚ್ಛೆಬಂದಂತೆ ಹಾಳೆ ಕಷಾಯ ಮಾಡುವಂತಿಲ್ಲ. ಇದಕ್ಕೆ ಇದರದ್ದೇ ಆದ ಶಿಸ್ತುಬದ್ಧ ಕ್ರಮಗಳಿವೆ. ಹಾಳೆ ಮರ ಎಂದು ಹಲವರು ಬೇರೆ ಮರಗಳ ಕಷಾಯ ಸೇವಿಸಿದ ನಿದರ್ಶನಗಳೂ ಇವೆ. ಹೀಗಾಗಿ ಹಿರಿಯರ ಮಾರ್ಗದರ್ಶನದೊಂದಿಗೆ ಸರಿಯಾದ ಮರ ಗುರುತಿಸುವುದು ತುಂಬಾ ಮುಖ್ಯ. ಹಿಂದಿನ ದಿನವೇ ಈ ಮರವನನ್ನು ಗುರುತಿಸಿ ಇಡುವುದು ಸೂಕ್ತ. ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಮರದ ಬಳಿ ಬಂದು ಯಾವುದೇ ಆಯುಧಗಳ ಸಹಾಯವಿಲ್ಲದೆ, ಕೇವಲ ಕಲ್ಲಿನ ಸಹಾಯದಿಂದ ಮರದ ತೊಗಟೆಯನ್ನು ಕೆತ್ತಿ ಮನೆಗೆ ತರಬೇಕು. ಅದರ ಮೇಲ್ಭಾಗದ ಕಪ್ಪು ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಕಲ್ಲಿನಿಂದಲೇ ಜಜ್ಜಬೇಕು. ಯಾವುದೇ ಕಾರಣಕ್ಕೂ ಕತ್ತಿಯಂತಹ ಲೋಹದ ಆಯುಧಗಳನ್ನು ಬಳಸಬಾರದು. ಇದು ಹೆಚ್ಚೇನು ಗಟ್ಟಿ ಇಲ್ಲದ ಕಾರಣ ಬೇಗನೆ ಪುಡಿಯಾಗುತ್ತದೆ. ಇದಕ್ಕೆ ಮೆಣಸುಕಾಳು, ಓಮ ಕಾಳು ಮತ್ತು ಬೆಳ್ಳುಳ್ಳಿಯನ್ನು ಕೂಡಾ ಜಜ್ಜಿ ಹಾಕಿ ಎಲ್ಲವನ್ನೂ ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಬೇಕು. ಇದಕ್ಕೆ ಬಿಳಿ ಕಲ್ಲು(ತುಳುವಿನಲ್ಲಿ ಬೊಲ್ಲು ಕಲ್ಲ್)ನ್ನು ಕೆಂಡದಲ್ಲಿ ಕಾಯಿಸಿ ಹಾಕಬೇಕು. ಬಳಿಕ ಬೆಳಗ್ಗೆ ಬೇಗನೆ ಕುಡಿಯಬೇಕು.

ಕಷಾಯ ತುಂಬಾ ಕಹಿ ಇರುವುದರಿಂದ, ಕೆಲವು ಕಡೆ ಇದನ್ನು ಕುಡಿದ ಬಳಿಕ ಸ್ವಲ್ಪ ಬೆಲ್ಲ ಸೇವಿಸುತ್ತಾರೆ. ಈ ಕಷಾಯ ದೇಹಕ್ಕೆ ಉಷ್ಣವಾದ್ದರಿಂದ, ತಂಪಿಗೆ ಮೆಂತ್ಯೆ ಗಂಜಿ ಸೇವಿಸುವುದು ವಾಡಿಕೆ. ಕೆಲವೊಂದು ಮನೆಗಳಲ್ಲಿ ಕೆಸುವಿನ ಎಲೆಯಿಂದ ಮಾಡುವ ಪತ್ರೊಡೆಯನ್ನು ತಿನ್ನುತ್ತಾರೆ. ಈ ತಿಂಗಳು ಪತ್ರೊಡೆ ಮಾಡಲು ಸೂಕ್ತ ಸಮಯ.

ಆಟಿ ತಿಂಗಳಲ್ಲಿ ಭಾರಿ ಮಳೆ ಬರುವ ಕಾರಣ, ಈ ತಿಂಗಳು ತಂಪು ಅಥವಾ ಶೀತಮಯ ತಿಂಗಳು. ಹೀಗಾಗಿ ಈ ತಿಂಗಳಿಗೆ ಆದಷ್ಟು ಉಷ್ಣಾಂಶವಿರುವ ಆಹಾರವನ್ನು ಸೇವಿಸಲಾಗುತ್ತದೆ. ಹಾಳೆ ಕಷಾಯ, ಕೆಸುವಿನ ಎಲೆಯ ಪತ್ರೊಡೆ, ಚೇಟ್ಲ, ಹಲಸಿನ ಬೀಜ, ತಗತೆ ಸೊಪ್ಪಿನ ಪಲ್ಯ ಹೀಗೆ ಬಗೆ ಬಗೆಯ ಪ್ರಕೃತಿ ಸಿದ್ಧ ಆಹಾರವನ್ನು ಆಟಿ ತಿಂಗಳಲ್ಲಿ ಸೇವಿಸುತ್ತಾರೆ. ಆಟಿ ತಿಂಗಳಲ್ಲೇನಾದರೂ ಬಿಸಿಲು ಏನಾದರೂ ಬಂದರೆ, ಆ ಬಿಸಿಲು ಕೂಡಾ ಭಾರಿ ಪ್ರಖರವಾಗಿರುತ್ತದೆ. ಆಟಿಯ ಬಿಸಿಲಿಗೆ ಆನೆ ಬೆನ್ನು ಕೂಡಾ ಒಡೆಯುತ್ತದೆ ಎಂಬುದಾಗಿ ಹಿರಿಯರು ಬಿಸಿಲಿ ಪ್ರಖರತೆಯನ್ನು ಹೇಳುವುದಿದೆ.

ಆಟಿ ಅಮಾವಾಸ್ಯೆಯ ಪ್ರತಿ ಆಹಾರ ಮತ್ತು ಆಚರಣೆಯಲ್ಲಿ ಅರ್ಥ ಮತ್ತು ಆರೋಗ್ಯವಿದೆ. ಹೀಗಾಗಿ ಹಿರಿಯರಿಂದ ಬಂದ ಅರ್ಥಪೂರ್ಣ ಆಚರಣೆಯನ್ನು ಮುಂದಿನ ಪೀಳಿಗೆಗೆ ಮುಂದುವರಿಸುವುದು ತುಂಬಾ ಮುಖ್ಯ.

Whats_app_banner