Krishna Janmashtami: ದೇವಕಿಯ ಮಕ್ಕಳನ್ನು ಕಂಸ ಏಕೆ ಕೊಂದ? ಕೃಷ್ಣ ಹೇಗೆ ಪಾರಾದ? ಸೆರೆಮನೆಯಲ್ಲಿ ಶ್ರೀ ಕೃಷ್ಣ ಹುಟ್ಟಿದ ರೋಚಕ ಕಥೆ ಇಲ್ಲಿದೆ
Birth Story of Krishna: ತಂಗಿಯ 8ನೇ ಮಗುವಿಗಾಗಿ ಕಂಸ ಎದುರು ನೋಡುತ್ತಿದ್ದ. ದೇವಕಿ ಗರ್ಭವತಿಯಾಗುತ್ತಿದ್ದಂತೆಯೇ ಕಾರಾಗೃಹದ ಸುತ್ತಾ ಸೈನಿಕರನ್ನು ನಿಯೋಜಿಸಿದ. ಮಗು ಜನಿಸಿದಾಗ ಮಗುವಿನ ಅಳು ಕೇಳಿಸದ ಕೂಡಲೇ ತನಗೆ ತಿಳಿಸಬೇಕೆಂದು ಸೂಚಿಸಿದ. 8ನೇ ಮಗುವನ್ನು ದೇವಕಿ-ವಸುದೇವ ದಂಪತಿ ಹೇಗೆ ಉಳಿಸಿಕೊಂಡರು? ಇಲ್ಲಿದೆ ಕಹಾನಿ..
ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲಾಗುತ್ತದೆ. ಮಥುರಾ ಶ್ರೀ ಕೃಷ್ಣನ ಜನ್ಮ ಸ್ಥಳ. ಶ್ರಾವಣ ಮಾಸದಲ್ಲಿ ಬರುವ ಕೃಷ್ಟ ಪಕ್ಷದ ಅಷ್ಟಮಿಯು ಕೃಷ್ಣ ಹುಟ್ಟಿದ ದಿನ. ಈ ದಿನ ಕಾರಾಗೃಹದಲ್ಲಿ ಕೃಷ್ಣನ ಜನನವಾಗಿತ್ತು. ಮೈನವಿರೇಳಿಸುವ ಕೃಷ್ಣ ಹುಟ್ಟಿದ ಕಥೆ ಇಲ್ಲಿದೆ ಓದಿ.
ಮಥುರೆ ಎಂಬ ರಾಜ್ಯದ ರಾಜ ಕಂಸನಾಗಿದ್ದ. ಆತ ಕರುಣೆಯೇ ಇಲ್ಲ ಕ್ರೂರ ರಾಜ. ಆದರೆ ಆತ ತನ್ನ ತಂಗಿ ದೇವಕಿಯನ್ನು ಪ್ರೀತಿಸುತ್ತಿದ್ದ, ಆಕೆಯನ್ನ ವಸುದೇವ ಎಂಬವನಿಗೆ ಕೊಟ್ಟು ಅತಿ ವೈಭವವಾಗಿ ಮದುವೆ ಮಾಡುತ್ತಾನೆ. ಕಂಸನ ಸಹೋದರಿ ದೇವಕಿಗೆ ಜನಿಸಿದ 8ನೇ ಮಗುವಿನಿಂದ ಅವನ ಮರಣವಾಗುತ್ತದೆ ಎಂದು ಒಂದು ಅಶರೀರ ವಾಣಿ ಅವನಿಗೆ ಕೇಳುತ್ತದೆ. ಹಾಗಾಗಿ ಕಂಸನು ತನ್ನ ಪ್ರೀತಿಯ ಸಹೋದರಿ ದೇವಕಿಯನ್ನೇ ಕೊಲ್ಲಲು ಪ್ರಯತ್ನಿಸುತ್ತಾನೆ. ಆಗ ದೇವಕಿಯ ಪತಿ ವಸುದೇವ, ಇದು ನ್ಯಾಯಸಮ್ಮತವಲ್ಲ, 8ನೇ ಮಗು ಹುಟ್ಟಿದ ಮೇಲೆ ಅದನ್ನು ನಿನಗೇ ತಂದು ನೀಡುತ್ತೇವೆ ಎಂದು ಭರವಸೆ ನೀಡುತ್ತಾನೆ.
ಹೀಗಾಗಿ ದೇವಕಿ ಮತ್ತು ವಸುದೇವನನ್ನ ಅರಮನೆಯ ಸೆರೆಮನೆಯಲ್ಲಿ ಇರಿಸುತ್ತಾನೆ. ಕೆಲ ಸಮಯದ ಬಳಿಕ ದೇವಕಿ 6 ಮಕ್ಕಳಿಗೆ ಜನ್ಮ ನೀಡುತ್ತಾಳೆ. ಈ ಮಕ್ಕಳನ್ನು ಕಂಸ ಪ್ರೀತಿಸುತ್ತಾ ಬೆಳೆಸುತ್ತಿರುತ್ತಾನೆ. ಆಗ ನಾರದ ಮುನಿ ಬಂದು ಮುಂದೆ ನಿನ್ನ ತಂಗಿಗೆ 8ನೇ ಮಗು ಜನಿಸಿದಾದ ಈ ಮಕ್ಕಳು ತಮ್ಮ ಸಹೋದರನನ್ನು ಬೆಂಬಲಿಸಿದರೆ ಏನು ಮಾಡುತ್ತೀಯ ಎಂದು ಕೇಳುತ್ತಾನೆ. ಇದನ್ನು ಯೋಚಿಸಿದ ಕಂಸನಿಗೆ ಮಕ್ಕಳ ಮೇಲಿನ ಮಮಕಾರ ಮಾಯವಾಗುತ್ತದೆ. ಎಲ್ಲಾ 6 ಮಕ್ಕಳನ್ನು ಕಂಸ ಕೊಲ್ಲುತ್ತಾನೆ.
ನೊಂದ ದೇವಕಿ ನಂತರ 7ನೇ ಮಗುವಿಗೆ ಗರ್ಭ ಧರಿಸುತ್ತಾಳೆ. ಈ ಬಾರಿ ದೇವಕಿ ಮತ್ತು ವಸುದೇವ ದಂಪತಿ ವಿಷ್ಣು ದೇವನ ಮೊರೆ ಹೋಗುತ್ತಾರೆ. ವಿಷ್ಣು ದೇವನಿಗೆ ಯೋಗಮಾಯೆ ಎಂಬ ಶಕ್ತಿಯೊಂದಿದೆ. ಆ ಶಕ್ತಿಯನ್ನು ಬಳಸಿ ದೇವಕಿ ಗರ್ಭದಲ್ಲಿರುವ ಪಿಂಡವನ್ನು ತೆಗದು ರೋಹಿಣಿ ಎಂಬ ಸ್ತ್ರೀ ಗರ್ಭದಲ್ಲಿ ಇರಿಸುತ್ತಾನೆ. ಆ ಮಗುವೇ ಬಲರಾಮ. ಬಲರಾಮ ಆದಿಶೇಷನ ಅವತಾರ. ದೇವಕಿಗೆ ಗರ್ಭಪಾತವಾಯಿತೆಂದು ಅಂದುಕೊಳ್ಳುತ್ತಾನೆ.
ಇದೀಗ ತಂಗಿಯ 8ನೇ ಮಗುವಿಗಾಗಿ ಕಂಸ ಎದುರು ನೋಡುತ್ತಿದ್ದ. ಬಹಳ ಎಚ್ಚರವಾಗಿರಬೇಕೆಂದು ನಿರ್ಧರಿಸಿದ ಕಂಸ ದೇವಕಿ 8ನೇ ಮಗುವಿಗೆ ಗರ್ಭವತಿಯಾಗುತ್ತಿದ್ದಂತೆಯೇ ಕಾರಾಗೃಹದ ಸುತ್ತಾ ಸೈನಿಕರನ್ನು ನಿಯೋಜಿಸಿದ. ಮಗು ಜನಿಸಿದಾಗ ಮಗುವಿನ ಅಳು ಕೇಳಿಸದ ಕೂಡಲೇ ತನಗೆ ತಿಳಿಸಬೇಕೆಂದು ಸೂಚಿಸಿದ.
ತನ್ನ 8ನೇ ಮಗುವನ್ನು ಉಳಿಸಲು ಅಸಾಧ್ಯ, ಕಂಸನಿಂದ ಇದು ಮರಣ ಹೊಂದುವ ಬದಲು ತಾನೇ ಇದನ್ನು ಸಾಯಿಸಿ ಬಿಡುತ್ತೇನೆ ಎಂದು ದೇವಕಿ ತನ್ನ ಹೊಟ್ಟೆಯನ್ನು ಹಿಚುಕಲು ಪ್ರಾರಂಭಿಸುತ್ತಾಳೆ. ಆಗ ವಿಷ್ಣುದೇವ ಪ್ರತ್ಯಕ್ಷಗೊಂಡು, ನಾನು ನಿನ್ನ 8ನೇ ಸಂತಾನವಾಗಿ ಜನಿಸಬೇಕೆಂದು ತೀರ್ಮಾನಿಸಿರುವೆ ಎನ್ನುತ್ತಾನೆ. ಅಂದು ದೇವಕಿ ನೆಮ್ಮದಿಯಿಂದ ನಿದ್ರೆಗೆ ಜಾರುತ್ತಾಳೆ. ದೇವಕಿಯು 8ನೇ ಮಗುವಿಗೆ ಜನ್ಮ ನೀಡುವ ದಿನ ಬಂದೇ ಬಿಡುತ್ತದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದ ರಾತ್ರಿ ದೇವಕಿಗೆ ಹೆರಿಗೆ ನೋವು ಪ್ರಾರಂಭವಾಯಿತು. ನೋವಿನಿಂದ ಕೂಗಾಡಿದರೆ ಸೈನಿಕರಿಗೆ ತಿಳಿಯುತ್ತದೆ ಎಂದು ನೋವನ್ನ ನುಂಗಿಕೊಂಡಳು. ಮುಗುಳ್ನಗೆಯೊಂದಿಗೆ 8ನೇ ಮಗು ಜನಿಸುತ್ತದೆ. ಅವನೇ ಶ್ರೀಕೃಷ್ಣ. ಇದ್ದಕ್ಕಿದ್ದಂತೆ ಸೈನಿಕರು ಮೂರ್ಛೆ ಹೋಗುತ್ತಾರೆ. ಸೆರೆಮನೆಯ ಬಾಗಿಲು ತಾನಾಗಿಯೇ ತೆರೆಯಿತು. ಇದು ವಿಷ್ಣುಮಾಯೆಯಂದು ವಸುದೇವನಿಗೆ ತಿಳಿಯುತ್ತದೆ.
ವಸುದೇವನ ಕನಸಿನಲ್ಲಿ ವಿಷ್ಣು ಬಂದು ನಿನಗೆ ಹುಟ್ಟಿದ 8ನೇ ಮಗುವನ್ನು ಗೋಕುಲದಲ್ಲಿರುವ ನಂದ ಮತ್ತು ಯಶೋಧೆ ದಂಪತಿಗೆ ನೀಡಿ, ಅವರಿಗೆ ಹುಟ್ಟಿದ ಹೆಣ್ಣು ಮಗುವನ್ನು ನೀನು ಪಡೆಯಬೇಕು ಎಂದು ಹೇಳಿರುತ್ತಾನೆ. ದೇವಕಿ ಮಗುವನ್ನು ಕೊನೆಯ ಬಾರಿ ಮುದ್ದಾಡಿ ವಸುದೇವನಿಗೆ ನೀಡಿದಳು. ವಿಷ್ಣುವಿನ ಸೂಚನೆಯಂತೆ ವಸುದೇವನು ತಲೆಮೇಲೆ ಬುಟ್ಟಿಯಲ್ಲಿ ಮಗುವನ್ನು ಹೊತ್ತು ಕಗ್ಗತ್ತಲ ರಾತ್ರಿಯಲ್ಲಿ ಹೊರಡುತ್ತಾನೆ. ಅಂದು ಜೋರು ಮಳೆ. ಯಮುನಾ ನದಿ ತುಂಬಿ ಹರಿಯುತ್ತಿರುತ್ತದೆ. ದೇವರ ಮೇಲೆ ಭಾರ ಹಾಕಿ ವಸುದೇವ ನದಿಯಲ್ಲಿ ನಡೆಯಲು ಆರಂಭಿಸಿದನು. ತನ್ನ ತಲೆಯ ವರೆಗೂ ನೀರು ಬಂದರೂ ವಸುದೇವ ಮಗುವನ್ನು ಮೇಲೆತ್ತಿ ನಡೆಯುತ್ತಲೇ ಇದ್ದನು. ಯಮುನಾ ನದಿಗೆ ಶ್ರೀಕೃಷ್ಣನ ಪಾದ ಸ್ಪರ್ಶವಾಗುತ್ತಿದ್ದಂತೆಯೇ ಯಮುನಾ ನದಿ ಎರಡು ಭಾಗವಾಗಿ ಮಧ್ಯಬಾಗದಲ್ಲಿ ಅವರಿಗೆ ದಾರಿ ಮಾಡಿಕೊಟ್ಟಿತು.
ಮಳೆ ನೀರು ಮಗುವಿನ ಮೇಲೆ ಬೀಳದಂತೆ ವಿಷ್ಣುದೇವನು ತನ್ನ ಹೆಡೆಯನ್ನು ಕೊಡೆಯಂತೆ ಹಿಡಿಯುತ್ತಾನೆ. ಗೋಕುಲವನ್ನು ತಲುಪಿದ ವಸುದೇವನು ಈಗ ತಾನೆ ಹೆಣ್ಣು ಮಗುವನ್ನು ಹೆತ್ತ, ಇನ್ನೂ ಪ್ರಜ್ಞೆ ಬರದ ಯಶೋಧೆಯ ಮಡಿಲಲ್ಲಿ ತನ್ನ ಮಗುವನ್ನು ಮಲಗಿಸಿ ಅಲ್ಲಿ ಯಶೋಧೆಗೆ ಜನಿಸಿದ ಹೆಣ್ಣು ಮಗುವಿನೊಂದಿಗೆ ಮಥುರೆಗೆ ಹಿಂದಿರುಗುತ್ತಾನೆ.
ದೇವಕಿ 8ನೇ ಮಗುವಿಗೆ ಜನ್ಮ ನೀಡಿರುವುದನ್ನು ತಿಳಿದ ಕಂಸನು ಅದನ್ನು ಕೊಲ್ಲಲು ಯತ್ನಿಸುತ್ತಾನೆ. ಆಗ ಆ ಹೆಣ್ಣು ಮಗು ಆಕಾಶಕ್ಕೆ ಹಾರಿ ತನ್ನ ದಿವ್ಯ ರೂಪ ತೋರಿಸಿ, ನಿನ್ನನ್ನು ಕೊಲ್ಲಲು ಹುಟ್ಟಿದ ಮಗು ಬೇರೆಡೆ ಬೆಳೆಯುತ್ತಿದೆ ಎಂದು ಹೇಳಿ ಮಾಯವಾಗುತ್ತದೆ. ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಾನೆ. ಕಂಸ ಕಳುಹಿಸಿದ ನಾನಾ ರಾಕ್ಷಸರನ್ನು ಕೊಂದು ದೈವ ಸಂಭೂತನಾದ ಕೃಷ್ಣನು ಕಂಸನನ್ನು ತನ್ನ ಬಾಲ್ಯದಲ್ಲಿಯೇ ಸಾಯಿಸುತ್ತಾನೆ.