ಕನ್ನಡ ಸುದ್ದಿ  /  ಜೀವನಶೈಲಿ  /  Laddu Recipes: ತಡರಾತ್ರಿ ಹಸಿವಿನ ಚಿಂತೆಯೇ? ವಿವಿಧ ಲಾಡುಗಳನ್ನು ತಯಾರಿಸಿಟ್ಟುಕೊಳ್ಳಿ: ನಿಮ್ಮ ಹಸಿವು ಮಾಯ, ಆರೋಗ್ಯಕ್ಕೂ ಉತ್ತಮ

Laddu Recipes: ತಡರಾತ್ರಿ ಹಸಿವಿನ ಚಿಂತೆಯೇ? ವಿವಿಧ ಲಾಡುಗಳನ್ನು ತಯಾರಿಸಿಟ್ಟುಕೊಳ್ಳಿ: ನಿಮ್ಮ ಹಸಿವು ಮಾಯ, ಆರೋಗ್ಯಕ್ಕೂ ಉತ್ತಮ

Laddu Recipes: ಬಾಯಲ್ಲಿ ನೀರೂರಿಸುವ ಲಾಡು ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಅದರಲ್ಲೂ ಆರೋಗ್ಯಕರ ಲಾಡುಗಳನ್ನು ತಿಂದರೆ ಈ ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ಹೇರಳ ಪೋಷಕಾಂಶಗಳು ಸಿಗುತ್ತವೆ. ಮನೆಯಲ್ಲಿ ಸುಲಭವಾಗಿ ಲಾಡು ತಯಾರಿಸುವ ವಿಧಾನ ಇಲ್ಲಿದೆ.

ವಿವಿಧ ರೀತಿಯ ಲಾಡುಗಳ ರೆಸಿಪಿ
ವಿವಿಧ ರೀತಿಯ ಲಾಡುಗಳ ರೆಸಿಪಿ (PC: Pixabay)

Laddu Recipes: ಲಾಡು ಹೆಸರು ಕೇಳಿದ್ರೆ ಸಾಕು ಬಹುತೇಕರ ಬಾಯಲ್ಲಿ ನೀರೂರುತ್ತೆ. ಸುಮಧುರವಾದ ಪರಿಮಳವನ್ನು ಹೊಂದಿರುವ, ತಿನ್ನಲೂ ರುಚಿಕರವಾದ ಈ ಸಿಹಿ-ತಿಂಡಿಯನ್ನು ಎಂಜಾಯ್ ಮಾಡುತ್ತಾ ಸವಿದರೆ ಸಿಗುವ ಆನಂದವೇ ಬೇರೆ. ಹಬ್ಬಗಳು ಮುಂತಾದ ಸಂದರ್ಭದಲ್ಲಿ ಮಾತ್ರವಲ್ಲದೆ, ಇನ್ನಿತರ ದಿನಗಳಲ್ಲೂ ಇದನ್ನು ಸವಿಯಲು ಇಷ್ಟಪಡುತ್ತಾರೆ. ಅಲ್ಲದೆ ಪೌಷ್ಠಿಕಾಂಶಯುಕ್ತ ಲಾಡು ತಯಾರಿಸಿ ಸೇವಿಸಿದರೆ, ದೇಹಕ್ಕೆ ಹೇರಳ ವಿಟಮಿನ್ ಗಳು ಒದಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಪ್ರತಿಯೊಂದು ಋತುವಿಗೆ ಅನ್ವಯಿಸುವಂತೆ ಲಾಡು ತಯಾರಿಸಲಾಗುತ್ತದೆ. ರಾತ್ರಿ ವೇಳೆ ಹಸಿದಿರುವಾಗಲೂ ಕೆಲವರು ಲಾಡು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಮಕ್ಕಳು ಕೂಡ ಇಷ್ಟಪಟ್ಟು ಸವಿಯುತ್ತಾರೆ. ಹಾಗಿದ್ದರೆ, ಮನೆಯಲ್ಲಿಯೇ ಸುಲಭವಾಗಿ ಬೇಸಿಗೆ ಋತುವಿನಲ್ಲಿ ಮಾಡಲಾಗುವ ಲಾಡುವನ್ನು ನೀವು ಪ್ರಯತ್ನಿಸಿ.

7 ಬಗೆಯ ಲಾಡು ರೆಸಿಪಿಗಳು ಇಲ್ಲಿದೆ

1. ತೆಂಗಿನಕಾಯಿ ಡ್ರೈಫ್ರೂಟ್ ಲಾಡು

ತೆಂಗಿನಕಾಯಿ ಡ್ರೈಫ್ರೂಟ್ ಲಾಡುವನ್ನು ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳು ಮುಂತಾದ ಕತ್ತರಿಸಿದ ಒಣ ಹಣ್ಣುಗಳೊಂದಿಗೆ ತುರಿದ ತೆಂಗಿನಕಾಯಿಯೊಂದಿಗೆ ತಯಾರಿಸಲಾಗುತ್ತದೆ. ತುರಿದ ತೆಂಗಿನಕಾಯಿಯನ್ನು ದಪ್ಪ ಹಾಲಿಗೆ ಬೆರೆಸಬೇಕು. ಸಿಹಿ ಬೇಕೆಂದಿದ್ದಲ್ಲಿ ಜೇನುತುಪ್ಪವನ್ನು ಸೇರಿಸಿ ಮಿಶ್ರಣವನ್ನು ಉಂಡೆ ಮಾಡಿದರೆ ಸಾಕು ರುಚಿಯಾದ ತೆಂಗಿನಕಾಯಿ ಡ್ರೈಫ್ರೂಟ್ಸ್ ಲಾಡು ಸವಿಯಲು ಸಿದ್ಧ.

2. ಖರ್ಜೂರದ ಲಾಡು

ಮೈದಾ ಮಿಶ್ರಿತ ಸಿಹಿ-ಖಾದ್ಯಗಳಿಂತ ನೈಸರ್ಗಿಕವಾಗಿ ಸಿಗುವ ಖರ್ಜೂರ ತಿನ್ನಲೂ ರುಚಿಕರವಾಗಿರುತ್ತದೆ, ಆರೋಗ್ಯಕ್ಕೂ ಉತ್ತಮ. ಇದರ ಲಾಡು ತಯಾರಿಸಿ ತಿಂದರೆ ಸಖತ್ ಟೇಸ್ಟಿಯಾಗಿರುತ್ತದೆ. ಈ ಲಾಡುಗಳನ್ನು ಖರ್ಜೂರಕ್ಕೆ ಬಾದಾಮಿ ಮತ್ತು ಗೋಡಂಬಿಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಬಳಿಕ ಅದನ್ನು ಸಣ್ಣ-ಸಣ್ಣ ಉಂಡೆಯಂತೆ ತಯಾರಿಸಿ, ಒಣ ಕೊಬ್ಬರಿ ಅಥವಾ ಹಸಿ ತೆಂಗಿನಕಾಯಿ ತುರಿ ಜೊತೆ ಅದ್ದಿದರೆ ಖರ್ಜೂರದ ಲಾಡು ಸವಿಯಲು ರೆಡಿ. ಇದು ಫೈಬರ್, ವಿಟಮಿನ್‌ಗಳಿಂದ ಹೇರಳವಾಗಿದ್ದು, ಅಗಾಧ ಪೋಷಕಾಂಶಗಳನ್ನು ಹೊಂದಿದೆ. ಖರ್ಜೂರ ಬಹಳ ಸಿಹಿಯಾಗಿರುವುದರಿಂದ ಸಿಹಿ ಸೇರಿಸುವ ಅಗತ್ಯವಿಲ್ಲ. ಬೇಕೆಂದಿದ್ದಲ್ಲಿ ಸಕ್ಕರೆ ಬದಲಿಗೆ ನೈಸರ್ಗಿಕ ಸಿಹಿಕಾರಕಗಳನ್ನು ಸೇರಿಸಬಹುದು.

3. ರಾಗಿ ಲಾಡು

ಈ ಲಾಡು ತಯಾರಿಸಲು ಮೊದಲಿಗೆ ರಾಗಿಯನ್ನು ತುಪ್ಪದೊಂದಿಗೆ ಸರಿಯಾಗಿ ಹುರಿಯಬೇಕು. ಬಳಿಕ ಇದಕ್ಕೆ ಬೆಲ್ಲ, ಏಲಕ್ಕಿ ಮತ್ತು ದಾಲ್ಚಿನ್ನಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅಂಟು ಬಂದ ನಂತರ ಇದನ್ನು ಉಂಡೆ ಮಾಡಿದರೆ ಸಾಕು ರಾಗಿ ಲಾಡು ಸವಿಯಲು ರೆಡಿ. ರಾಗಿ ಲಾಡಿನಲ್ಲಿ ಫೈಬರ್ ಜೊತೆಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಈ ಬೇಸಿಗೆಯಲ್ಲಿ ರಾಗಿ ಲಾಡು ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ.

4. ಬೇಸನ್ ಲಾಡು

ಇದನ್ನು ಕಡ್ಲೆಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ರುಚಿಕರವಾದ ಲಾಡು ತಯಾರಿಸಲು ಮೊದಲಿಗೆ ಕಡ್ಲೆಹಿಟ್ಟನ್ನು ಚೆನ್ನಾಗಿ ಹುರಿಯಬೇಕು. ಬಳಿಕ ತುಪ್ಪ, ಸಕ್ಕರೆ ಮತ್ತು ಏಲಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಉಂಡೆ ಕಟ್ಟಬೇಕು. ಈ ರುಚಿಕರವಾದ ಲಾಡುವನ್ನು ಬಾಯಿಗೆ ಇಟ್ಟ ಕೂಡಲೇ ಕರಗಿ ನೀರಾಗುತ್ತದೆ. ಬೇಕಿದ್ದಲ್ಲಿ ಡ್ರೈ ಫ್ರೂಟ್‌ಗಳನ್ನು ಕೂಡಾ ನೀವು ಸೇರಿಸಬಹುದು.

5. ಕಡ್ಲೆಪುರಿ ಉಂಡೆ

ಕಡ್ಲೆಪುರಿ ಲಾಡು ಒಂದು ರುಚಿಕರವಾದ ಸಿಹಿ-ತಿಂಡಿಯಾಗಿದೆ. ಇದಕ್ಕಾಗಿ ಮೊದಲಿಗೆ ಕಡ್ಲೆಪುರಿಯನ್ನು ಚೆನ್ನಾಗಿ ಹುರಿಯಬೇಕು. ಬಳಿಕ ಇದಕ್ಕೆ ಬೆಲ್ಲವನ್ನು ಕರಗಿಸಿ, ತುಪ್ಪವನ್ನು ಸೇರಿಸಿ ಮಿಕ್ಸ್ ಮಾಡಬೇಕು. ಪೂರ್ತಿ ತಣ್ಣಗಾಗುವ ಮುಂಚೆ ಅದನ್ನು ಉಂಡೆ ಮಾಡಿದರೆ ಸಾಕು ರುಚಿಕರವಾದ ಕಡ್ಲೆಪುರಿ ಉಂಡೆ ಸವಿಯಲು ಸಿದ್ಧ.

6. ಗೋಧಿ ಲಾಡು

ಈ ಸಿಹಿ-ತಿಂಡಿಯನ್ನು ಮಾಡುವುದು ಬಹಳ ಸಿಂಪಲ್. ಗೋಧಿ ಹಿಟ್ಟನ್ನು ಸ್ವಲ್ಪ ತುಪ್ಪದೊಂದಿಗೆ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಹುರಿಯಬೇಕು. ನಂತರ, ಮಿಶ್ರಣಕ್ಕೆ ಬೆಲ್ಲ ಮತ್ತು ಏಲಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಹುರಿದ ಗೋಧಿಗೆ ಬೆಲ್ಲ ಸರಿಯಾಗಿ ಅಂಟು ಬರಬೇಕು. ಬಳಿಕ ಇದನ್ನು ಸಣ್ಣ-ಸಣ್ಣ ಉಂಡೆಗಳನ್ನಾಗಿ ಮಾಡಿದರೆ, ಗೋಧಿ ಲಾಡು ಸಿದ್ಧ.

7. ರಾಜಗಿರಿ ಉಂಡೆ

ಉತ್ತರ ಕರ್ನಾಟಕದ ಸಾಂಪ್ರದಾಯಿಕ ತಿನಿಸಾದ ರಾಜಗಿರಿ ಉಂಡೆಯು, ತಿನ್ನಲೂ ಎಷ್ಟು ರುಚಿಕರವಾಗಿದೆಯೋ ಆರೋಗ್ಯಕ್ಕೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ವಿಶೇಷ ಲಾಡು ತಯಾರಿಸಲು ಮೊದಲಿಗೆ ರಾಜಗಿರಿ ಬೀಜಗಳನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿಯಬೇಕು. ನಂತರ ಬೆಲ್ಲದ ಪಾಕ ಅಥವಾ ಜೇನುತುಪ್ಪವನ್ನು ಬೆರೆಸಬೇಕು. ನಂತರ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು. ನಂತರ ರುಚಿಕರವಾದ ಈ ಲಾಡು ತಿಂದು ನಿಮ್ಮ ಸಮಯವನ್ನು ಆನಂದಿಸಿ.

ನಿಮಗೆ ಆಚಾನಕ್ಕಾಗಿ ಏನಾದರೂ ಸಿಹಿ-ತಿಂಡಿ ತಿನ್ನಬೇಕು ಎಂದು ಬಯಕೆಯುಂಟಾದಲ್ಲಿ ಈ ಲಾಡುಗಳನ್ನು ತಯಾರಿಸಬಹುದು. ತುಂಬಾನೇ ಸಿಂಪಲ್ ಹಾಗೂ ಬಹಳ ಬೇಗ ತಯಾರಾಗುವ ಈ ಲಾಡು ಆರೋಗ್ಯಕ್ಕೂ ಪ್ರಯೋಜನಕಾರಿ. ಹಾಗಿದ್ದರೆ, ಇನ್ನೇಕೆ ತಡ ಈ ಸುಲಭವಾದ ಲಾಡು ಪಾಕವಿಧಾನಗಳನ್ನು ಪ್ರಯತ್ನಿಸಿ.

ವಿಭಾಗ