ಆಂಧ್ರದ ಲೇಡಿಸ್ ಹಾಸ್ಟೆಲ್ ವಾಶ್ರೂಂಗಳಲ್ಲಿ ಗುಪ್ತ ಕ್ಯಾಮೆರಾ ಪತ್ತೆ; ಮೊಬೈಲ್ನಲ್ಲೇ ಕಳ್ಳ ಕ್ಯಾಮೆರಾ ಕಂಡುಹಿಡಿಯೋದೇಗೆ?
Protect your Privacy: ಆಂಧ್ರ ಪ್ರದೇಶದ ಲೇಡಿಸ್ ಹಾಸ್ಟೆಲ್ನ ವಾಶ್ರೂಂಗಳಲ್ಲಿ ಹಿಡೆನ್ ಕ್ಯಾಮೆರಾ ಪತ್ತೆಯಾಗಿದ್ದು, ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ಮೊಬೈಲ್ನಲ್ಲೇ ಗುಪ್ತ ಕ್ಯಾಮೆರಾ ಪತ್ತೆ ಹಚ್ಚುವುದೇಗೆಂದು ಈ ಮುಂದೆ ತಿಳಿಯೋಣ.
Hidden Camera: ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಆತಂಕಕಾರಿ ಘಟನೆಯೊಂದು ಜರುಗಿದೆ. ಕೃಷ್ಣಾ ಜಿಲ್ಲೆಯ ಗುಡ್ಲವಲ್ಲೇರು ಇಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಸ್ನಾನಗೃಹಗಳಲ್ಲಿ ಹಿಡನ್ (ರಹಸ್ಯ) ಕ್ಯಾಮೆರಾ ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ಕಾಲೇಜಿನ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬರು ಸ್ನಾನದ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ಆಕೆಗೆ ವಿದ್ಯಾರ್ಥಿಯೊಬ್ಬ ಸಹಾಯ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ
ಇದಕ್ಕೆ ಸಂಬಂಧಿಸಿದ ಹಲವು ಸ್ಕ್ರೀನ್ ಶಾಟ್ಗಳು ಎಕ್ಸ್ನಲ್ಲಿ ವೈರಲ್ ಆಗಿವೆ. 300ಕ್ಕೂ ಹೆಚ್ಚು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಬಾಲಕರ ಹಾಸ್ಟೆಲ್ನ ಕೆಲ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳು ಬಾಲಕಿಯರ ಹಾಸ್ಟೆಲ್ನ ವಿದ್ಯಾರ್ಥಿನಿಯೊಬ್ಬಳ ನೆರವಿನಿಂದ ಈ ದುಷ್ಕೃತ್ಯ ಎಸಗಿದ್ದಾರೆ. ಈ ಪೈಕಿ ರಾಜಕೀಯ ಮುಖಂಡರ ಮಗನೂ ಒಬ್ಬ. ಆತನನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಆಡಳಿತ ಮಂಡಳಿ ಗೊತ್ತಿಲ್ಲದಂತೆ ಮೌನವಹಿಸಿದೆ ಎಂದಿದ್ದಾರೆ.
ಈ ಘಟನೆಯಿಂದ ನಾವು ಎಚ್ಚೆತ್ತುಕೊಳ್ಳಲೇಬೇಕು. ಇದು ಲೇಡಿಸ್ ಹಾಸ್ಟೆಲ್ಗೆ ಸೀಮಿತವಾಗಿಲ್ಲ, ಲಾಡ್ಜ್, ಹೋಟೆಲ್ಸ್, ಪಬ್ಲಿಕ್ ಟಾಯ್ಲೆಟ್ಸ್, ರೆಸಾರ್ಟ್.. ಹೀಗೆ ಪ್ರತಿಯೊಂದು ಕಡೆಯೂ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿರುವ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿವೆ. ಟಿವಿ, ಸ್ವಿಚ್ ಬೋರ್ಡ್, ಹೇರ್ ಡ್ರೈಯರ್ ಹೀಗೆ ಮುಂತಾದ ಕಡೆ ಹಿಡನ್ ಕ್ಯಾಮೆರಾ ಇರಲಿವೆ. ಪ್ರಕರಣಗಳ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿವೆ. ಟೆಕ್ನಾಲಜಿ ಮುಂದುವರೆದಂತೆ ಕಣ್ಣಿಗೆ ಕಾಣದ ಸ್ಪೈಕ್ಯಾಮ್ ಅಳವಡಿಸಲಾಗ್ತಿದೆ.
ಸ್ಪೈ ಕ್ಯಾಮೆರಾಗಳನ್ನು ಭೇದಿಸುವುದೇ ದೊಡ್ಡ ಸವಾಲು. ಸಿಸಿಟಿವಿಗಳು ನಮ್ಮ ಕಣ್ಣಿಗೆ ಕಾಣುತ್ತವೆ. ಏಕೆಂದರೆ ಅವುಗಳ ಗಾತ್ರ ದೊಡ್ಡದು. ಆದರೆ ಸ್ಪೈ ಕ್ಯಾಮೆರಾಗಳು ಕಣ್ಣಿಗೆ ಗೋಚರಿಸಷ್ಟು ಚಿಕ್ಕದಾಗಿರುತ್ತವೆ. ಚಿಕ್ಕದೇ ಆದರೂ ಅವುಗಳ ಸಾಮರ್ಥ್ಯ ಮತ್ತು ಮೆಮೊರಿ ಅಗಾಧ. ಈ ಗುಪ್ತ ಕ್ಯಾಮೆರಾಗಳನ್ನು ಪೆನ್ನಿನ ಕ್ಯಾಪ್ನಲ್ಲೂ ಇಡಬಹುದು. ಅಂಗಿಯ ಬಟನ್, ಗೊಂಬೆಗಳ ಕಣ್ಣು, ಗಡಿಯಾದ ಮುಳ್ಳು, ವಾಹನದ ಕಿಚೈನ್, ಪರ್ಸ್, ಟಿವಿ.. ಎಲ್ಲಿ ಬೇಕೋ ಎಲ್ಲಿ ಸ್ಪೈ ಕ್ಯಾಮೆರಾಗಳನ್ನು ಇಟ್ಟಿರುತ್ತಾರೆ ನೀಚರು. ಹಾಗಾಗಿ ಗುಪ್ತ ಕ್ಯಾಮೆರಾಗಳನ್ನು ಸುಲಭವಾಗಿ ಪತ್ತೆ ಹಚ್ಚಿ ನಿಮ್ಮ ಗೌಪ್ಯತೆ ರಕ್ಷಿಸಿಕೊಳ್ಳಿ.
ನಿಮ್ಮ ಕೋಣೆಯನ್ನು ಸಂಪೂರ್ಣ ಕತ್ತಲಾಗಿಸಿ..
ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ನಿಮ್ಮ ಸುತ್ತಲಿರುವ ಹಿಡನ್ ಕ್ಯಾಮೆರಾಗಳನ್ನು ಹೇಗೆ ಪತ್ತೆ ಹಚ್ಚಬೇಕು ಎಂಬುದನ್ನು ತಿಳಿಯಿರಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕ್ಯಾಮೆರಾಗಳು ಕತ್ತಲೆಯಲ್ಲಿ ಅಥವಾ ಕಡಿಮೆ-ಬೆಳಕಿನ ಪರಿಸರದಲ್ಲಿ ನೋಡಲು ಅತಿಗೆಂಪು (IR) ಬೆಳಕನ್ನು ಹೊಂದಿರುತ್ತವೆ. ಮಾನವನ ಕಣ್ಣುಗಳು ಈ ಬೆಳಕನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಆದರೆ ಈ ಬೆಳಕನ್ನು ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ ಪತ್ತೆ ಹಚ್ಚಬಹುದು.
ನಿಮ್ಮ ಮನೆಯಲ್ಲಿ ಅಥವಾ ರೂಮ್ನಲ್ಲಿ ಗುಪ್ತ ಕ್ಯಾಮೆರಾ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಮೊದಲು ಎಲ್ಲಾ ಕೋಣೆಗಳನ್ನು ಮುಚ್ಚಿ. ಪರದೆಗಳನ್ನು ಹಾಕಿ ಬಿಡಿ. ಬಳಿಕ ಎಲ್ಲಾ ಲೈಟ್ಗಳನ್ನು ಆಫ್ ಮಾಡಿ. ಎಲ್ಲೂ ಬೆಳಕು ಕಾಣಿಸಬಾರದು. ಆಗ ಸಣ್ಣ ಬೆಳಕು ಕಾಣಿಸುತ್ತದೆ. ಇದು ಬಹುಶಃ ಪಿಂಕ್ ಅಥವಾ ನೇರಳೆ ಬಣ್ಣದ್ದಾಗಿರುತ್ತದೆ. ಆಗ ಸ್ಥಿರವಾಗಿ ಅಥವಾ ಮಿನುಗುವಿಕೆ (ಫ್ಲಾಷ್) ಕಾಣುತ್ತದೆ. ಉದಾ: ಯಾವುದೇ ರಿಮೋಟ್ನ ಮುಂಭಾಗ ಇರುವ ಬೆಳಕಿನಂತೆ ಪ್ರಚೋದಿಸುತ್ತದೆ.
ರೇಡಿಯೋ ಫ್ರೀಕ್ವೆನ್ಸಿ ಡಿಟೆಕ್ಟರ್
ನೀವು ರೇಡಿಯೋ ಫ್ರೀಕ್ವೆನ್ಸಿಯ ಮೂಲಕವೂ ಗುಪ್ತ ಕ್ಯಾಮೆರಾವನ್ನು ಪತ್ತೆ ಹಚ್ಚಬಹುದು. ಕೆಲವು ಹಿಡನ್ ಕ್ಯಾಮೆರಾಗಳು ರೇಡಿಯೋ ಫ್ರೀಕ್ವೆನ್ಸಿ (RF) ಸಿಗ್ನಲ್‌ಗಳನ್ನು ಹೊರ ಸೂಸುತ್ತವೆ. ಅವುಗಳ ಪತ್ತೆಗೆ ಆರ್ಎಫ್ ಡಿಟೆಕ್ಟರ್ ಅಪ್ಲಿಕೇಷನ್ ಬಳಸಬಹುದು. ಎಲೆಕ್ಟ್ರಾನಿಕ್ ಡಿವೈಸ್ ಯಾವುದೇ ಆಗಿರಲಿ ಅದರ ತರಂಗಗಳನ್ನು ಈ ಆ್ಯಪ್ ಸ್ಕ್ಯಾನ್ ಮಾಡಲಿದೆ. ಈ ವೇಳೆ ಸಿಗ್ನಲ್‌ಗಳನ್ನು ಸೂಸುವ ಟಿವಿ ಸೇರಿದಂತೆ ಬೇರೆ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಆಫ್ ಮಾಡಿದರೆ ಉತ್ತಮ. ಕ್ಯಾಮೆರಾ ಹೊರಸೂಸುವ ಆರ್ಎಫ್ ಸಿಗ್ನಲ್‌ಗಳನ್ನು ಈ ಆ್ಯಪ್ ಗುರುತಿಸುತ್ತದೆ.
ವೈರ್‌ಲೆಸ್ ಕ್ಯಾಮೆರಾ ಡಿಟೆಕ್ಟರ್
ಗುಪ್ತ ಕ್ಯಾಮೆರಾ ಪತ್ತೆಗೆ ವೈರ್‌ಲೆಸ್ ಕ್ಯಾಮೆರಾ ಡಿಟೆಕ್ಟರ್ ಎಂಬ ಸಾಧನ ಕೂಡ ಇದೆ. ಹಾಗೆಯೇ ವೈಫೈ ಅನಲೈಸರ್ ಎಂಬ ಅಪ್ಲಿಕೇಷನ್ನಿಂದಲೂ ಕಳ್ಳ ಕ್ಯಾಮೆರಾಗಳನ್ನು ಕಂಡುಹಿಡಿಯಬಹುದು. ಒಂದು ವೇಳೆ ನಿಮಗೆ ಅನುಮಾನ ಬಂದ ಜಾಗದಲ್ಲಿ ವೈಫೈ ಅನಲೈಸರ್ ಮೂಲಕ ಮೊಬೈಲ್ ಫೋನ್ ಆಡಿಸಿದರೆ ಮೊಬೈಲ್ ಫೋನ್ನ ಸ್ಪೀಕರ್ ಶಬ್ದವು ವಿಚಿತ್ರವಾಗಿ ಕೇಳುತ್ತದೆ. ಹಾಗಾದಾಗ ಅಲ್ಲೊಂದು ಕಳ್ಳ ಕ್ಯಾಮೆರಾ ಇರುವ ಸಾಧ್ಯತೆ ಹೆಚ್ಚು.