ನನ್ನದು ಆವರೇಜ್ ಬದುಕು ಎಂದು ಕೊರಗುವ ಅತೃಪ್ತ ಮನಸ್ಸಿಗೆ ಸಂತೃಪ್ತಿಯ ಭರವಸೆ ಮೂಡಿಸುವ ಮಾತುಗಳು ಇಲ್ಲಿವೆ - ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  ನನ್ನದು ಆವರೇಜ್ ಬದುಕು ಎಂದು ಕೊರಗುವ ಅತೃಪ್ತ ಮನಸ್ಸಿಗೆ ಸಂತೃಪ್ತಿಯ ಭರವಸೆ ಮೂಡಿಸುವ ಮಾತುಗಳು ಇಲ್ಲಿವೆ - ಮನದ ಮಾತು

ನನ್ನದು ಆವರೇಜ್ ಬದುಕು ಎಂದು ಕೊರಗುವ ಅತೃಪ್ತ ಮನಸ್ಸಿಗೆ ಸಂತೃಪ್ತಿಯ ಭರವಸೆ ಮೂಡಿಸುವ ಮಾತುಗಳು ಇಲ್ಲಿವೆ - ಮನದ ಮಾತು

Life skills in Kannada: ಒಂದಲ್ಲ ಮತ್ತೊಂದು ಅತೃಪ್ತಿ ಸದಾ ಕಾಡುತ್ತಲೇ ಇರುತ್ತೆ ಎನ್ನುವವರಿಗೆ, ನೆಮ್ಮದಿ ಎಲ್ಲಿದೆ ಎಂದು ಹುಡುಕಾಟ ಶುರು ಮಾಡಿರುವವರಿಗಾಗಿ ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್ ಈ ಅಂಕಣ ಬರೆದಿದ್ದಾರೆ. ನೆಮ್ಮದಿ ಬಯಸುವವರು ಇದನ್ನು ಓದಬೇಕು, ನಿಮ್ಮ ಆಪ್ತರಿಗೂ ನೆಮ್ಮದಿ ಸಿಗಬೇಕು ಎಂದುಕೊಳ್ಳುವವರು ಶೇರ್ ಮಾಡಬೇಕು.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್

ಪ್ರಶ್ನೆ: ಮೇಡಂ ನನ್ನದು ಅತೃಪ್ತಿ ತುಂಬಿದ ಆವರೇಜ್ ಬದುಕು. ಬದುಕಿನಲ್ಲಿ ತಕ್ಕಮಟ್ಟಿಗೆ ಸಾಧಿಸಿದ್ದೇನೆ, ಆದರೆ ನೆಮ್ಮದಿ ಮಾತ್ರ ಇಲ್ಲ. ಮನಸ್ಸಿಗೆ ಸದಾ ಏನೋ ಒಂದು ಕೊರಗು ಬಾಧಿಸುತ್ತಿರುತ್ತದೆ. ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ನಾನು ಸಂತೋಷವಾಗಿರಬೇಕು, ನೆಮ್ಮದಿಯಿಂದ ಇರಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನಿಸಿ ವಿಫಲನಾಗಿದ್ದೇನೆ. ನನಗೊಂದು ದಾರಿ ತೋರಿಸಿ ಪ್ಲೀಸ್...

ಉತ್ತರ: ನೀವು ಬಹಳ ನೋವು ಮತ್ತು ಗೊಂದಲದ ಮನಸ್ಥಿತಿಯಲ್ಲಿದ್ದೀರಿ. ಆತಂಕ ಮತ್ತು ಅಸಹಾಯಕತೆಯೂ ನಿಮ್ಮಲ್ಲಿ ಮನೆ ಮಾಡಿದೆ. ಆದರೆ, ಸಂತೋಷದಿಂದ ಇರಬೇಕೆನ್ನುವ ಬಯಕೆ ನಿಮಗಿರುವುದು ಒಳ್ಳೆಯ ಬೆಳವಣಿಗೆ. ಒಳಿತಿನ ಹಾದಿಯಲ್ಲಿ ಮುನ್ನಡೆಯಲು ಇದು ನೆರವಾಗುತ್ತದೆ. ಇದನ್ನು ನೀವು ನಿಮ್ಮ ಬಲ, ಸಾಮರ್ಥ್ಯವನ್ನಾಗಿ ಬದಲಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಈ ಸಮಸ್ಯೆ ಇತ್ತೀಚಿನದ್ದಲ್ಲ. ಬಹಳ ದಿನಗಳಿಂದ ನೀವು ಈ ಸಮಸ್ಯೆಯಿಂದ ನರಳುತ್ತಿದ್ದೀರ ಎನಿಸುತ್ತಿದೆ. ನಿಮ್ಮ ಮಾನಸಿಕ ಒತ್ತಡವೂ ಸಹ ಬಹಳ ಕಾಲ ಸಂಗ್ರಹವಾಗಿ ಈಗ ಬಹಿರಂಗವಾಗಿ ನಿಮ್ಮ ನಡುವಳಿಕೆಯ ಮೂಲಕ ಹೊರಬೀಳುತ್ತಿದೆ.

ನಿಮ್ಮ ವೈಯಕ್ತಿಕ, ಆರ್ಥಿಕ, ಸ್ಥಿತಿಗತಿಗಳು ತಕ್ಕಮಟ್ಟಿಗೆ ಇದೆಯೆನ್ನುವ ಅರಿವು ನಿಮಗಿದೆ. ಆದರೂ ನಿಮಗೆ ಸಮಧಾನವಿಲ್ಲ, ಯಾವುದೋ ಪ್ರಬಲವಾದ ಕೊರತೆ ಕಾಡುತ್ತಿರಬಹುದು. ನಿಮ್ಮ ಆದ್ಯತೆಯ ಪ್ರಕಾರ ಬಯಕೆ ಮತ್ತು ಕನಸುಗಳ ಪಟ್ಟಿ ಮಾಡಿ. ಇದರಲ್ಲಿ ಮೊದಲ ಎರಡು ಆಧ್ಯತೆಯು ಪೂರೈಸಿಕೆೊಂಡಿದ್ದೀರೋ ಇಲ್ಲವೋ ಎಂದು ಪರಿಶೀಲಿಸಿ. ಒಂದು ಪಕ್ಷ ಆಗದೇ ಇದ್ದಲ್ಲಿ ನಿಮಗೆ ಅದರ ಕೊರತೆ ಹೆಚ್ಚು ಕಾಡುತ್ತಿರಬಹುದು. ಯಾವ ಕಾರಣದಿಂದ ಪೂರೈಸಿಕೊಳ್ಳಲು ಆಗುತ್ತಿಲ್ಲ ಮತ್ತು ಯಾವ ರೀತಿಯಲ್ಲಿ ಪೂರೈಸಿಕೊಳ್ಳಬಹುದೆಂದು ಯೋಚಿಸಿ ಯೋಜನೆ ಹಾಕಿಕೊಳ್ಳಿ.

ನನ್ನ ಉಳಿದ ಎಲ್ಲಾ ಬಯಕೆಗಳನ್ನು ಪೂರೈಸಿಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ. ಖಂಡಿತವಾಗಿಯೂ ಪೂರೈಸಿಕೊಳ್ಳುತ್ತೇನೆಂದು ದೃಢ ಸಂಕಲ್ಪ ಮಾಡಿಕೊಂಡು ಪ್ರಯತ್ನ ಆರಂಭಿಸಿ. ಸಂತೋಷ ಎನ್ನುವುದು ನಿರ್ದಿಷ್ಟವಾಗಿ ತಲುಪುವ ಸ್ಥಳವಲ್ಲ. ಅದು ನಾವು ಪ್ರಯತ್ನಪೂವ೯ಕವಾಗಿ ಅಭ್ಯಾಸ ಮಾಡಿಕೊಳ್ಳಬೇಕಾದ ಮನಸ್ಥಿತಿ. ಸಂತೋಷಕ್ಕೆ ನಿರ್ದಿಷ್ಟವಾದ ಮೂಲ ಇರುವುದಿಲ್ಲ. ಅದು ನಮ್ಮ ಸುತ್ತಮುತ್ತ ಇರುತ್ತದೆ.

ಆ ಮೂಲವನ್ನು ನೋಡುವ, ಗುರುತಿಸುವ, ಅನುಭವಿಸುವ, ಮನಸ್ಥಿತಿ ನಮಗೆ ಇರಬೇಕಷ್ಟೇ. ನಮ್ಮ ಬದುಕಿನ ಸ್ಥಿತಿಗತಿಯ ಮೇಲೆ ನಮ್ಮ ಮನಸ್ಥಿತಿ ಅವಲಂಬಿಸಿದಾಗ ನಮ್ಮ ಸಂತೋಷವೂ ಕೂಡ ಇವುಗಳ ಮೇಲೆ ಅವಲಂಬಿಸುತ್ತದೆ. ತೃಪ್ತಿ, ಖುಷಿ, ಸಮಾಧಾನ, ಹೆಮ್ಮೆ, ಉತ್ಸಾಹ, ಆಶಾವಾದ ಮನೋಭಾವ, ಕೃತಜ್ಞತೆ, ಭರವಸೆ, ಯಶಸ್ಸು.. ಹೀಗೆ ನಾನಾ ವಿಧದಲ್ಲಿ ಪ್ರತಿಯೊಬ್ಬ ಜೀವಿಯು ಸಂತೋಷ ಅನುಭವಿಸಬಹುದು.

ತನ್ನ ಅನುಕೂಲ ಹಾಗೂ ಪ್ರತಿಕೂಲ ಸಂದರ್ಭಗಳನ್ನು ಪರಿಗಣಿಸದೆ ಮನಸ್ಥಿತಿಯನ್ನು ಸಬಲವಾಗಿ ಇಟ್ಟುಕೊಂಡವರು ಸಂತೋಷವನ್ನು ಬದುಕಿನ ಪ್ರತಿಯೊಂದು ಹಂತದಲ್ಲೂ ಅನುಭವಿಸುತ್ತಾರೆ. ಒತ್ತಡ ಮತ್ತು ಆತಂಕದ ಮನಸ್ಥಿತಿಯಲ್ಲಿದ್ದಾಗ ಸಂತೋಷವನ್ನು ಗುರುತಿಸಿ ಅನುಭವಿಸುವುದು ಸವಾಲಾಗಿ ಬಿಡುತ್ತದೆ. ಇಂತಹ ಸಂದರ್ಭದಲ್ಲಿ, ನಾವು ಸಾಕಷ್ಟು ಪ್ರಯತ್ನ ಮಾಡಿ ಸಂತೋಷ ಹುಡುಕಿಕೊಳ್ಳಬೇಕಿಲ್ಲ, ಮನಸ್ಸಿನ ಸಮತೋಲನ ಇದ್ದರೆ ಸಾಕು ಸಂತೋಷ ನಿಮ್ಮ ಮನದ ಬಾಗಿಲನ್ನು ಒಡೆದು ಒಳಗೆ ಬರುತ್ತದೆ.

ನಿಮಗೇನು ಸಿಕ್ಕಿದೆಯೋ ಅದಕ್ಕೆ ಕೃತಜ್ಞತೆ ಸಲ್ಲಿಸಿ

ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಬಳಿಯಿರುವ ಪ್ರತಿಯೊಂದು ಸೌಲಭ್ಯ, ಸಂಬಂಧ, ಆರೋಗ್ಯ, ಆರ್ಥಿಕ ಪರಿಸ್ಥಿತಿ... ಹೀಗೆ ಎಲ್ಲ ಮೌಲ್ಯಗಳಿಗೂ ಕೃತಜ್ಞತೆ ಸಲ್ಲಿಸಿ. ಕೃತಜ್ಞತೆಯು ನೀವು ಸ್ಮರಿಸುವ ಎಲ್ಲವನ್ನೂ ಅನಂತವಾಗಿ ಪರಿವರ್ತಿಸುತ್ತದೆ. ಕೃತಜ್ಞತೆಯು ನಿಮ್ಮ ಬದುಕಿನ ದೃಷ್ಟಿಕೋನವನ್ನು ಬದಲಿಸುತ್ತದೆ. ಇದರಿಂದ, ಮನಸ್ಸು ನಿಮ್ಮ ಬಳಿಯಿರುವ ಎಲ್ಲಾವನ್ನು ಗುರುತಿಸಿ, ಗ್ರಹಿಸಿ, ಸ್ಮರಿಸಿ ಕೃತಜ್ಞತೆ ಸಲ್ಲಿಸುತ್ತದೆ. ದಿನನಿತ್ಯ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದಾಗ, ಮನಸ್ಸು ತೃಪ್ತಿಯಾಗಿ , ಕೊರತೆಗಳನ್ನು ಹೆಚ್ಚು ಪರಿಗಣಿಸದೆ ನಿಮ್ಮ ಮನಸ್ಥಿತಿಯನ್ನು ಸಬಲ ಮಾಡಿ ಸಂತೋಷವನ್ನು ಅನುಭವಿಸುದ್ದಕ್ಕೆ ಎಡೆಮಾಡಿಕೊಡುತ್ತದೆ.

ಅನುಕೂಲ ಮತ್ತು ಪ್ರತಿಕೂಲ ಪರಿಸ್ಥಿತಿ ಎದುರಿಸುವುದನ್ನು ಕಲಿಯಿರಿ. ಅತಿಯಾಗಿ ಪ್ರತಿಕ್ರಿಯೆ ನೀಡದೆ, ಅತೀರೇಕದ ಭಾವನೆಗಳನ್ನು (ಭಾವೋದ್ವೇಗ) ನಿಭಾಯಿಸುವುದನ್ನು ಕಲಿಯಬೇಕು. ಕಹಿ ಅನುಭವಗಳನ್ನು ನಿರಾಕರಿಸದೆ ಅನುಭವಿಸಿ, ಜೀರ್ಣಿಸಿಕೊಳ್ಳಬೇಕು. ಬಹಳಷ್ಟು ಕಾಲ ಇಂತಹ ಅನುಭವಗಳು ನಮ್ಮೊಳಗೆ ಹಾಗೆಯೇ ಉಳಿದುಹೋದರೆ ಇದ್ದರೆ ಮಾನಸಿಕ ಒತ್ತಡಕ್ಕೆ, ಮಾನಸಿಕ ಆರೋಗ್ಯದ ತೊಂದರೆಗೆ ಕಾರಣವಾಗುತ್ತದೆ. ಇದರಿಂದ ಮುಕ್ತರಾಗುವುದಕ್ಕೆ ವ್ಯಸನಗಳ ಮೊರೆ ಹೋಗಿ ಖಿನ್ನತೆಗಳಿಗೆ ಬಲಿಯಾಗುತ್ತೇವೆ. ಇಂಥದ್ದಕ್ಕೆ ಅವಕಾಶ ಮಾಡಿಕೊಡಬೇಡಿ. ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ. ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿ.

---

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

Whats_app_banner