ಕನ್ನಡ ಸುದ್ದಿ  /  Lifestyle  /  Life Happiness: How To Find Happiness Inside The Soul; Here Are Some Tips - Rst

Life Happiness: ಅಂತರಾತ್ಮದಲ್ಲಿನ ಸಂತೋಷಕ್ಕೆ ಭಾವನೆಗಳೇ ಬೇಲಿ; ದಿನನಿತ್ಯದ ಬದುಕಿನಲ್ಲಿ ಸಂತಸ ಕಂಡುಕೊಳ್ಳಲು ಈ ಸೂತ್ರಗಳನ್ನು ಅನುಸರಿಸಿ

Life Happiness: ಸಂತೋಷ ಎಂಬ ಪದಕ್ಕೆ ಅರ್ಥವನ್ನು ಹುಡುಕುತ್ತಾ ಹೊರಟರೆ ಆಯುಷ್ಯವೇ ಮುಗಿದು ಬಿಡುತ್ತದೆ. ಸಂತೋಷ ಎಂದರೆ ನಮ್ಮ ಅಂತರಾತ್ಮದ ಪ್ರತಿರೂಪವೇ ಹೊರತು ಬೇರಲ್ಲ. ನಮ್ಮ ದೈನಂದಿನ ಬದುಕಿನಲ್ಲಿ ಈ ಕೆಲವು ಸೂತ್ರಗಳನ್ನು ಅನುಸರಿಸುವ ಮೂಲಕ ಇಡೀ ಬದುಕನ್ನು ಸಂತಸದಲ್ಲಿ ಕಳೆದು ಬಿಡಬಹುದು.

ಸಂತಸ ಮತ್ತು ಅಂತರಾತ್ಮ
ಸಂತಸ ಮತ್ತು ಅಂತರಾತ್ಮ

ಹಲವರು ಸಂತೋಷವನ್ನು ಹುಡುಕುತ್ತಲೇ ತಮ್ಮ ಆಯಸ್ಸನ್ನು ಕಳೆದು ಬಿಡುತ್ತಾರೆ. ಆದರೆ ಸಂತೋಷ ಎಂಬುದು ನಮ್ಮೊಳಗೇ ಇರುತ್ತದೆ ಎನ್ನುವ ಅರಿವು ಬಹುಶಃ ಅವರಲ್ಲಿ ಇರಲಿಕ್ಕಿಲ್ಲ. ನಿಜವಾದ ಸಂತೋಷ ಅಥವಾ ನೆಮ್ಮದಿ ಎನ್ನುವುದು ನಮ್ಮ ಮನಸ್ಸಿನ ಸ್ಥಿತಿಯಾಗಿದೆ. ಅದು ನಮ್ಮೊಳಗಿನಿಂದಲೇ ಹುಟ್ಟುತ್ತದೆ. ಹೊರಗಿನ ಶಕ್ತಿಗಳನ್ನು ಲೆಕ್ಕಿಸದೇ ಪ್ರಜ್ಞಾಪೂರ್ವಕವಾಗಿ ಮತ್ತು ಪೂರ್ವಭಾವಿಯಾಗಿ ನಮ್ಮ ಅಂತರಾಳದಲ್ಲಿ ಅರಳಿರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ಮನಸ್ಸು ನಮ್ಮದಾಗಬೇಕು.

ಮನಶ್ಶಾಸ್ತ್ರಜ್ಞರ ಪ್ರಕಾರ, ನಮ್ಮ ದೈನಂದಿನ ಜೀವನದಲ್ಲಿ ಶಾಶ್ವತವಾದ ಸಂತೋಷವನ್ನು ಸೃಷ್ಟಿಸಲು ಕೆಲವು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.

ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿ

ಭಾವನೆಗಳು ಹುಟ್ಟುವುದು, ಸಾಯುವುದು ಸಹಜ. ಆದರೆ ಭಾವನೆಗಳಲ್ಲಿನ ಧನಾತ್ಮಕ ಅಂಶ ಯಾವುದು, ಋಣಾತ್ಮಕ ಅಂಶ ಯಾವುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬದುಕಿನ ವಾಸ್ತವಗಳನ್ನು ಅರಿಯಬೇಕು. ವಾಸ್ತವ ಅಥವಾ ಸಾಧ್ಯ ಎಂಬುದರ ಮೇಲಷ್ಟೇ ನಿರೀಕ್ಷೆ ಇರಿಸಿಕೊಂಡಾಗ ಬದುಕು ನೋವು ನೀಡುವುದಿಲ್ಲ. ಇದರಿಂದ ಅಸಮಾಧಾನ, ಹತಾಶೆ ಹಾಗೂ ನಿರಾಸೆಗಳಿಂದ ದೂರ ಉಳಿಯಬಹುದು.

ನಕಾರಾತ್ಮಕ ಭಾವನೆಗಳನ್ನು ಒಪ್ಪಿಕೊಳ್ಳಿ

ನಕಾರಾತ್ಮಕ ಭಾವನೆಗಳನ್ನು ನಿಗ್ರಹಿಸುವುದು ಅಥವಾ ನಿರಾಕರಿಸುವುದರಿಂದ ಸಂತೃಪ್ತಿಯ ಪ್ರಜ್ಞೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಇದು ತಲೆನೋವು, ಅಧಿಕ ರಕ್ತದೊತ್ತಡ, ಹೃದಯ ಬಡಿತದ ಏರಿಳಿತ, ಜೀರ್ಣಕಾರಿ ಸಮಸ್ಯೆಗಳು ಇತ್ಯಾದಿಗಳಂತಹ ದೈಹಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಅದಕ್ಕಾಗಿ ನಕಾರಾತ್ಮಕ ಭಾವನೆಗಳನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ʼನಕಾರಾತ್ಮಕ ಭಾವನೆಗಳು ಮತ್ತು ಒತ್ತಡದ ಸಂದರ್ಭಗಳಿಂದ ನಾವು ಕಲಿಯಲು ಬಹಳಷ್ಟು ಇದೆʼ ಎನ್ನುವುದು ಮನೋಶಾಸ್ತ್ರಜ್ಞರ ಮಾತು.

ಸಹಾನುಭೂತಿಯಿಂದ ನಿಮ್ಮನ್ನು ಅಪ್ಪಿಕೊಳ್ಳಿ

ಯಾವುದೇ ಕೆಟ್ಟ ಅನುಭವ, ದುಃಖದ ಸಂಗತಿಗಳು ನಡೆದಾಗ ನಮ್ಮನ್ನು ನಾವು ಹಳಿದುಕೊಳ್ಳುತ್ತೇವೆ. ನಮ್ಮಿಂದ ಆಗಿದಲ್ಲ ಘಟನೆಗಳಿಗೂ ನಮ್ಮನ್ನು ನಾವು ಹೊಣೆ ಮಾಡಿಕೊಳ್ಳುತ್ತೇವೆ. ಪ್ರತಿಯೊಂದಕ್ಕೂ ಹಣೆಬರಹವನ್ನೂ ದೂಷಿಸುತ್ತಾ ಶಪಿಸುತ್ತೇವೆ. ಕೊನೆ ಕೊನೆಗೆ ನಮ್ಮನ್ನೇ ನಾವು ದ್ವೇಷ ಮಾಡಲು ಆರಂಭಿಸುತ್ತೇವೆ. ಆದರೆ ಇದು ಸರಿಯಲ್ಲ. ಮೊದಲು ನಮಗೆ ನಮ್ಮ ಮೇಲೆ ಸಹಾನುಭೂತಿ ಇರಬೇಕು. ನಮ್ಮ ಮೇಲೆ ನಾವು ಕರುಣೆ, ದಯೆ ಇರಿಸಿಕೊಂಡು ಸಂತೋಷವನ್ನು ಹುಡುಕಿಕೊಳ್ಳಬೇಕು. ಇದರಿಂದ ನಮ್ಮೊಳಗಿನ ಸಂತೋಷವನ್ನು ನಾವು ಕಂಡುಕೊಳ್ಳಲು ಸಾಧ್ಯ.

ಅರ್ಥಪೂರ್ಣ ಸಂಪರ್ಕಗಳನ್ನು ಹೊಂದಿ

ಸಂಪರ್ಕ ಮತ್ತು ಸಂವಹನವು ಸಂತೋಷ ಮತ್ತು ಯೋಗಕ್ಷೇಮದ ಅತ್ಯಂತ ವಿಶ್ವಾಸಾರ್ಹ ಮೂಲಗಳಾಗಿವೆ. ಅಧ್ಯಯನವೊಂದರ ಪ್ರಕಾರ ಸಾಮಾಜಿಕ ಸಂಬಂಧಗಳು ಸಂತೋಷವನ್ನು ವೃದ್ಧಿಸುವ ಅತ್ಯಂತ ಯಶಸ್ವಿ ಮಾರ್ಗವಾಗಿದೆ. ಸಾಮಾಜಿಕ ಬದುಕಿಗೆ ತೆರೆದುಕೊಂಡಷ್ಟು ನೋವನ್ನು ಮರೆಯಬಹುದು. ನಮ್ಮ ನೋವು, ದುಃಖ, ಆತಂಕ, ಭಯ ಎಲ್ಲವನ್ನು ಹಂಚಿಕೊಳ್ಳಲು ನಮ್ಮ ಸುತ್ತಲೂ ಒಂದಿಷ್ಟು ಜನರಿರುವುದು ಬಹಳ ಮುಖ್ಯ. ಇದು ದುಃಖ ಮರೆಸುವ ಜೊತೆಗೆ ಸಂತಸದ ದಾರಿಯನ್ನು ತೋರುತ್ತದೆ.

ನಿಮ್ಮೊಳಗೆ ನೀವಿರಿ

ನಿಮ್ಮೊಳಗೆ ನೀವಿರುವುದು ಅಥವಾ ಅಂತರಾತ್ಮವನ್ನು ಪ್ರೀತಿಸುವುದು ಬಹಳ ಮುಖ್ಯ. ನಮ್ಮ ಅಂತರಾತ್ಮವನ್ನು ನಾವು ಪ್ರೀತಿಸಲು ಆರಂಭಿಸಿದಾಗ ದುಃಖವನ್ನು ಮರೆಯುವ ಹಾದಿಯನ್ನು ಕಂಡುಕೊಳ್ಳಬಹುದು. ನಮ್ಮನ್ನು ನಾವು ಪ್ರೀತಿಸಬಹುದು. ಬದುಕಿನ ಹಾದಿಯನ್ನು ಇಷ್ಟಪಡಬಹುದು. ನಾವು ಕಂಡುಕೊಂಡ ಮಾರ್ಗಗಳಲ್ಲಿ ಯಶಸ್ಸನ್ನು ಸಾಧಿಸಬಹುದು.

ಭಾವನೆಗಳನ್ನು ನಿಗ್ರಹಿಸುವುದನ್ನು ಕಲಿಯಿರಿ

ನಮ್ಮ ಭಾವನೆಗಳು ಹಾಗೂ ಯೋಚನೆಗಳು ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಇದು ದೈಹಿಕ ಆರೋಗ್ಯಕ್ಕೂ ಸಮಸ್ಯೆ ಉಂಟು ಮಾಡಬಹುದು. ಆ ಕಾರಣಕ್ಕೆ ಮೊದಲು ಭಾವನೆಗಳನ್ನು ನಿಗ್ರಹಿಸುವುದನ್ನು ಕಲಿಯಬೇಕು. ಆ ಮೂಲಕ ಸಂತಸವನ್ನು ಕಂಡುಕೊಳ್ಳಬೇಕು. ಭಾವನೆಗಳ ನಿಗ್ರಹವೇ ನಿಜವಾದ ಸಂತೋಷ ಎಂದರೂ ತಪ್ಪಾಗಲಿಕ್ಕಿಲ್ಲ.

ವಿಭಾಗ