2024ರ ಮಕರ ಸಂಕ್ರಾಂತಿ ಸ್ಮರಣೀಯವಾಗಿಸಲು ಭಾರತದ ಈ ತಾಣಗಳಿಗೆ ಭೇಟಿ ನೀಡಿ
ಕನ್ನಡ ಸುದ್ದಿ  /  ಜೀವನಶೈಲಿ  /  2024ರ ಮಕರ ಸಂಕ್ರಾಂತಿ ಸ್ಮರಣೀಯವಾಗಿಸಲು ಭಾರತದ ಈ ತಾಣಗಳಿಗೆ ಭೇಟಿ ನೀಡಿ

2024ರ ಮಕರ ಸಂಕ್ರಾಂತಿ ಸ್ಮರಣೀಯವಾಗಿಸಲು ಭಾರತದ ಈ ತಾಣಗಳಿಗೆ ಭೇಟಿ ನೀಡಿ

ಸಂಕ್ರಾಂತಿ ಹಬ್ಬ ಈ ಬಾರಿ ಭಾನುವಾರ (ಜನವರಿ 14) ಬಂದಿದೆ. ಈ ಸರ್ಕಾರಿ ರಜೆಗೆ ಒಂದೆರಡು ಹೆಚ್ಚುವರಿ ರಜೆಗಳನ್ನು ತೆಗೆದುಕೊಂಡರೆ ಕುಟುಂಬದೊಂದಿಗೆ ಒಂದು ಸಣ್ಣ ಪ್ರವಾಸ ಮಾಡಬಹುದು.

ಮಕರ ಸಂಕ್ರಾಂತಿಗೆ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ
ಮಕರ ಸಂಕ್ರಾಂತಿಗೆ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ

ಬೆಂಗಳೂರು: ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಕರ ಸಂಕ್ರಾಂತಿಗೆ (Makar Sankranti 2024) ಕೆಲವೇ ದಿನಗಳು ಬಾಕಿ ಇವೆ. ವರ್ಷದ (2024) ಮೊದಲ ಹಬ್ಬಕ್ಕೆ ಇಡೀ ದೇಶ ಕಾತುರದಿಂದ ಕಾಯುತ್ತಿದೆ.

ಸಂಕ್ರಾಂತಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಆಚರಿಸುವುದನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಸಂಕ್ರಾಂತಿ, ತೆಲುಗು ರಾಜ್ಯಗಳಲ್ಲಿ ಭೋಗಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂನಲ್ಲಿ ಬಿಹು, ಪಂಜಾಬ್‌ನಲ್ಲಿ ಲೋಹ್ರಿ, ಗುಜರಾತ್‌ನಲ್ಲಿ ಉತ್ತರಾಯಣವನ್ನಾಗಿ ಆಚರಿಸುವುದು ವಿಶೇಷ. ದಕ್ಷಿಣ ಭಾರತದಲ್ಲಿ ಸುಗ್ಗಿಯ ಹಬ್ಬದಂದು ಬಂಧು ಮಿತ್ರರಿಗೆ ಎಳ್ಳು-ಬೆಲ್ಲವನ್ನು ಹಂಚಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಭಾನುವಾರ (ಜನವರಿ 14) ಬಂದಿದೆ. ನೀವೇನಾದರೂ ಸಂಕ್ರಾಂತಿಗೆ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರೆ, ನಿಮಗಾಗಿ ಭಾರತದ ಒಂದಿಷ್ಟು ತಾಣಗಳ ಕುರಿತ ಮಾಹಿತಿಯನ್ನ ಇಲ್ಲಿ ನೀಡಲಾಗಿದೆ.

ನೀವೇನಾದರೂ ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸಾಮಾನ್ಯವಾಗಿ ನಿಮಗೆ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಇತರೆ ವಲಯಗಳಲ್ಲಿ ಕೆಲಸ ಮಾಡುವವರು ನೀವಾಗಿದ್ದರೆ ಜನವರಿ 14ರ ರಜೆಯ ಜೊತೆಗೆ ಒಂದಷ್ಟು ಹೆಚ್ಚುವರಿ ರಜೆಗಳನ್ನು ತೆಗೆದುಕೊಂಡರೆ ಈ ಸಂಕ್ರಾಂತಿಗೆ ನಿಮ್ಮ ಕುಟುಂಬದೊಂದಿಗೆ ಒಂದು ಪುಟ್ಟ ಪ್ರವಾಸವನ್ನು ಕೈಗೊಳ್ಳಬಹುದು. ಈ ಕೆಳಗೆ ನೀಡಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ ನಿಮ್ಮ ಸಂಕ್ರಾಂತಿಯ ಖುಷಿ ಮತ್ತಷ್ಟು ಹೆಚ್ಚಾಗಲಿದೆ.

ಅಹಮದಾಬಾದ್ (ಗುಜರಾತ್)

ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ. ಅದರಲ್ಲೂ ಅಹಮದಾಬಾದ್‌ನಲ್ಲಿ ಉತ್ತರಾಯಣವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡಿದರೆ ನೀವು ಸಂಕ್ರಾಂತಿಯ ವಿಶೇಷ ಆಚರಣೆಯನ್ನು ಕಣ್ತುಂಬಿಕೊಳ್ಳಬಹುದು. ಇನ್ನ ಉಳಿದುಕೊಳ್ಳೋಕೆ ಇಲ್ಲಿ ಅತ್ಯಂತ ಪ್ರೀಮಿಯಂ ರೆಸಾರ್ಟ್‌ಗಳು ಸಿಗುತ್ತವೆ. ಉತ್ತರಾಯಣ ಆಚರಣೆ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳಲ್ಲೂ ಹಬ್ಬದ ವಾತಾವರಣ ಇರುತ್ತದೆ. ಹಲವಾರು ಚಟುವಟಿಕೆಗಳ ನಡೆಯುತ್ತವೆ. ಜೊತೆಗೆ ಸುಂದರ ಅಲಂಕಾರ, ಬಾಣಸಿಗರಿಂದ ವಿಶೇಷ ಖಾದ್ಯಗಳು, ಊಟಕ್ಕೆ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸಿದ್ದ ಮಾಡಿರುತ್ತಾರೆ. ಇವೆಲ್ಲಾವನ್ನು ಟೆಸ್ಟ್ ಮಾಡುವ ಮೂಲ ಹೊಸ ಅನುಭವವನ್ನು ಪಡೆಯಬಹುದು.

ಅಮೃತಸರ, ಪಂಜಾಬ್

ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಲೋಹ್ರಿಯಾಗಿ ಆಚರಿಸುತ್ತಾರೆ. ಲೋರ್ಹಿ ಹೊಸ ಸುಗ್ಗಿಯ ಆರಂಭದ ಸಂಕೇತ. ಹೀಗಾಗಿ ಈ ಹಬ್ಬದ ಹಿಂದಿನ ರಾತ್ರಿ ಜನರು ಬೃಹತ್ ಫೈಯರ್ ಕ್ಯಾಂಪ್‌ಗಳನ್ನು ಹಾಕುತ್ತಾರೆ. ಭಾಂಗ್ರಾ ನೃತ್ಯವನ್ನು ಮಾಡುತ್ತಾರೆ. ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ಎಲ್ಲಾ ಆಚರಣೆಗಳನ್ನು ಕಣ್ತುಂಬಿಕೊಳ್ಳುವ ಜೊತೆಗೆ ಅಮೃತಸರದಲ್ಲಿರುವ ಐತಿಹಾಸಿಕ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಬಹುದು.

ಜೈಪುರ, ರಾಜಸ್ಥಾನ

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಾಜಸ್ಥಾನದ ಜೈಪುರದಲ್ಲಿ ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಜನರು ಬಣ್ಣದ ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸುತ್ತಾರೆ. ಇಡೀ ಆಕಾಶ ಬಣ್ಣ ಬಣ್ಣಗಳಿಂದ ಕೂಡಿದ ಬೃಹತ್ ಗಾಳಿಪಟಗಳಿಂದ ತುಂಬಿ ಹೋಗಿರುತ್ತದೆ. ಇದು ಕೂಡ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡುತ್ತದೆ. ಹಬ್ಬದ ಸಂದರ್ಭದಲ್ಲಿ ಇಲ್ಲು ಕೂಡ ರೆಸಾರ್ಟ್‌ಗಳನ್ನು ಅಲಂಕಾರಗೊಳಿಸಲಾಗುತ್ತದೆ. ಅತಿಥಿಗಳಿಗೆ ವಿಶೇಷ ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ನಿಮ್ಮ ಪ್ರವಾಸದ ಲಿಸ್ಟ್‌ನಲ್ಲಿ ಜೈಪುರಕ್ಕೂ ಸ್ಥಾನ ನೀಡಬಹುದು.

ಮಧುರೈ, ತಮಿಳುನಾಡು

ತಮಿಳುನಾಡನ್ನು ದೇವಾಲಯಗಳ ನಾಡು ಅಂತಲೇ ಕರೆಯಲಾಗುತ್ತದೆ. ಇಲ್ಲಿನ ಜನಪ್ರಿಯ ದೇವಾಲಯಗಳಲ್ಲಿ ಮಧುರೈ ಅಗ್ರಸ್ಥಾನದಲ್ಲಿದೆ. ಈ ನಗರದಲ್ಲಿ ಪುರಾತನ ಕಾಲದ ಮಧುರೈ ಮೀನಾಕ್ಷಿ ದೇವಾಲಯನ್ನು ನೋಡುವುದೇ ಚೆಂದ. ಮಕರ ಸಂಕ್ರಾಂತಿ ಹಬ್ಬಕ್ಕೆ ಮಧುರೈ ಪ್ರಸಿದ್ಧವಾಗಿದ್ದು, ಅಕ್ಕಿ, ಬೆಲ್ಲ ಮತ್ತು ತುಪ್ಪದಿಂದ ಮಾಡಿದ ಪೊಂಗಲ್, ಜಲ್ಲಿಕಟ್ಟು ಪ್ರಮುಖ ಆಕರ್ಷಣೆಗಳಾಗಿವೆ. ಪೊಂಗಲ್ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರು ಕೂಡ ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ನಿಮಗೆನಾದರೂ ಇಲ್ಲಿನ ಆಚರಣೆಗಳನ್ನು ಕಣ್ತುಂಬಿಕೊಳ್ಳುವ ಮನಸ್ಸಿದ್ದರೆ ಪ್ರವಾಸದ ಭಾಗಿವಾಗಿ ಇಲ್ಲಿಗೆ ಭೇಟಿ ನೀಡಬಹುದು

Whats_app_banner