ಕನ್ನಡ ಸುದ್ದಿ  /  Lifestyle  /  Long Age Gap Love: Ready To Accept All The Challenges Which You Will Face At Future

Long age gap love: ವಯಸ್ಸಿನ ಅಂತರದ ಪ್ರೀತಿ; ಈ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ

ಪ್ರೀತಿಸುವ ಇಬ್ಬರು ವ್ಯಕ್ತಿಗಳ ನಡುವೆ ದೀರ್ಘವಾದ ವಯಸ್ಸಿನ ಅಂತರವಿದ್ದರೆ ಅವರು ಸಮಾಜ, ಕುಟುಂಬವನ್ನು ಎದುರಿಸುವ ಜೊತೆಗೆ ಹಲವು ವೈಯಕ್ತಿಕ ಸಮಸ್ಯೆಗಳನ್ನೂ ಎದುರಿಸಬೇಕಾಗಬಹುದು. ನೀವು ನಿಮಗಿಂತ ಅತಿ ಕಡಿಮೆ ಅಥವಾ ಅತಿ ಹೆಚ್ಚು ವಯಸ್ಸಿನ ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಮುಂದುವರಿಯಲು ಬಯಸುತ್ತಿದ್ದೀರಾ? ಹಾಗಾದರೆ ಇದನ್ನು ಓದಿ.

ಪ್ರೀತಿ-ಪ್ರೇಮ
ಪ್ರೀತಿ-ಪ್ರೇಮ

ಪ್ರೀತಿ ಹೇಳಿ, ಕೇಳಿ ಹುಟ್ಟುವುದಿಲ್ಲ. ಪ್ರೀತಿ ಹುಟ್ಟಿದ ಮೇಲಷ್ಟೇ ಅದರ ಗಾಢತೆ ಅರ್ಥ ಆಗುವುದು. ವಯಸ್ಸು, ಅಂದ-ಚೆಂದ, ಜಾತಿ-ಧರ್ಮ ಈ ಎಲ್ಲವನ್ನೂ ಮೀರಿದ್ದು ಈ ಬಂಧನ. ಕೆಲವೊಮ್ಮೆ ಪ್ರೀತಿ ಹುಟ್ಟುವಾಗ ಮುಂದಿನ ಪರಿಣಾಮಗಳ ಬಗ್ಗೆ ಅರಿವಾಗುವುದಿಲ್ಲ. ಆದರೆ ಮುಂದುವರಿದಾಗ ಎದುರಾಗುವ ಸವಾಲುಗಳು ಅನುಭವಿಸಿದವರಿಗಷ್ಟೇ ಗೊತ್ತು. ಅಂತಹ ಸಂಬಂಧಗಳಲ್ಲಿ ಒಂದು ದೀರ್ಘ ವಯಸ್ಸಿನ ಅಂತರದ ಸಂಬಂಧ.

ಪ್ರೀತಿಸುವ ಇಬ್ಬರ ನಡುವೆ ಹತ್ತು ವರ್ಷ, ಇಪ್ಪತ್ತು ವರ್ಷ ಹೀಗೆ ದೀರ್ಘ ಅಂತರವಿದ್ದರೆ ಸಮಾಜ ಅವರ ಪ್ರೀತಿಯನ್ನು ಒಪ್ಪುವುದಿಲ್ಲ, ಮನೆಯವರು ಅವರ ಸಂಬಂಧಕ್ಕೆ ಅರ್ಥವಿಲ್ಲ ಎನ್ನುತ್ತಾರೆ. ಆದರೆ ಪ್ರೀತಿ ಕೇಳಬೇಕಲ್ಲ.

ವಯಸ್ಸಿನ ಅಂತರವಿದ್ದರೆ ಸಮಾಜ, ಕುಟುಂಬವನ್ನು ಎದುರಿಸುವ ಜೊತೆಗೆ ಹಲವು ವೈಯಕ್ತಿಕ ಸಮಸ್ಯೆಗಳನ್ನೂ ಎದುರಿಸಬೇಕಾಗಬಹುದು. ಭಿನ್ನ ಯೋಚನೆಗಳು, ಭಿನ್ನ ಅಭಿಪ್ರಾಯ, ಭಿನ್ನವಾದ ಅಭಿರುಚಿಗಳು ಈ ಎಲ್ಲವೂ ಇಬ್ಬರ ನಡುವಿನ ಬಿರುಕಿಗೂ ಕಾರಣವಾಗಬಹುದು. ಹಾಗಾದರೆ ಅತಿ ಕಡಿಮೆ ಅಥವಾ ಅತಿ ಹೆಚ್ಚು ವಯಸ್ಸಿನ ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಮುಂದುವರಿಯಲು ಬಯಸುವ ಮೊದಲು ಕೆಲವು ಅಂಶಗಳು ನಿಮ್ಮ ಗಮನದಲ್ಲಿರಲಿ.

ಹೊಂದಾಣಿಕೆ ಸಾಧ್ಯವೇ ಗಮನಿಸಿ

ʼದಿ ಬೆಸ್ಟ್‌ ಜೋಡಿʼ ಎನ್ನಿಸಿಕೊಂಡವರ ಮಧ್ಯದಲ್ಲೂ ಕೆಲವೊಮ್ಮೆ ಅಪಸ್ವರಗಳು ಮೂಡಬಹುದು. ಇಂತಹ ಸಂಬಂಧಗಳಲ್ಲೂ ಕೂಡ ಸವಾಲುಗಳು ಎದುರಾಗಬಹುದು. ಅದರಲ್ಲೂ ನೀವು ಆರಿಸಿಕೊಳ್ಳಲು ಬಯಸುತ್ತಿರುವುದು ವಯಸ್ಸಿನ ನಡುವೆ ಸಾಕಷ್ಟು ಅಂತರ ಇರುವವರನ್ನು. ಹಾಗಾಗಿ ನಿಮ್ಮಿಬ್ಬರ ಮೌಲ್ಯಗಳು, ಗುರಿ ಹಾಗೂ ನೈತಿಕ ಮನೋಭಾವ ಒಂದೇ ರೀತಿ ಇದೆಯೇ ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಇದರಿಂದ ಬಹಳ ಸಮಯದವರೆಗೆ ಆರೋಗ್ಯಯುತವಾಗಿ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಬಹುದು. ಭವಿಷ್ಯದ ಗುರಿಗಳ ಬಗ್ಗೆ ಯೋಚಿಸಿ, ಅವರ ಗುರಿಗಳು ನಿಮಗೆ ಹೊಂದಿಕೆ ಆಗುತ್ತದೋ ಇಲ್ಲವೋ ಗಮನಿಸಿ. ನಿಮ್ಮ ಒಲವಿನ ಸಂಗಾತಿ ಕೇವಲ ನಿಮಗೆ ಮಾತ್ರ ಹೊಂದಿಕೊಂಡಿದ್ದರೆ ಸಾಲದು ನಿಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಕೂಡ ಹೊಂದಿಕೊಳ್ಳುವುದು ಮುಖ್ಯವಾಗುತ್ತದೆ.

ಜನರ ಪ್ರತಿಕ್ರಿಯೆಗೆ ಉತ್ತರಿಸಲು ಸಿದ್ಧರಿದ್ದೀರಾ ಯೋಚಿಸಿ

ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದರೂ ಕೂಡ ನಮ್ಮಲ್ಲಿನ ಮನೋಭಾವದಲ್ಲಿ ಇನ್ನೂ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಅದರಲ್ಲೂ ಇಬ್ಬರು ವ್ಯಕ್ತಿಗಳ ನಡುವೆ ಬಹಳಷ್ಟು ವಯಸ್ಸಿನ ಅಂತರವಿದ್ದು ಅವರು ಪ್ರೀತಿ ಮಾಡಿದರೆ ಅವರನ್ನು ಸಮಾಜ ನೋಡುವ ರೀತಿಯೇ ಬೇರೆ ಇರುತ್ತದೆ. ನಮ್ಮ ಸಂಬಂಧದ ಬಗ್ಗೆ ಸಮಾಜ ಏನು ಹೇಳಬಹುದು, ನಾಳೆ ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತನಾಡಬಹುದು, ನನಗೆ ಅವಮಾನಿಸಬಹುದು ಈ ಎಲ್ಲಾ ಅಂಶಗಳು ನೀವು ಪ್ರೀತಿಸಿದ ವ್ಯಕ್ತಿ ಅಥವಾ ನಿಮ್ಮ ತಲೆಯಲ್ಲಿ ಸುಳಿಯಬಹುದು. ಮನಸ್ಸಿಗೆ ಬೇಸರ ನೀಡುವ ಪ್ರಶ್ನೆಗಳು ಅಥವಾ ಜನರ ಪ್ರತಿಕ್ರಿಯೆಗಳು ನಿಮ್ಮನ್ನು ತಬ್ಬಿಬ್ಬು ಮಾಡಬಹುದು. ಅಂತಹ ಸಂದರ್ಭಗಳಲ್ಲಿ ಇಬ್ಬರು ಜೊತೆಯಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ. ಜನ ಹೇಗಿದ್ದರೂ ಮಾತನಾಡುತ್ತಾರೆ, ಆದರೆ ನನಗೆ ನನ್ನ ಪ್ರೀತಿ ಹಾಗೂ ಸಂಬಂಧದ ಮೇಲೆ ನಂಬಿಕೆ ಹಾಗೂ ವಿಶ್ವಾಸವಿದೆ ಎಂಬ ದೃಢ ನಿರ್ಧಾರ ಮನಸ್ಸಿನಲ್ಲಿದ್ದರೆ ನೀವು ಸಂಬಂಧದಲ್ಲಿ ಆರಾಮವಾಗಿ ಮುಂದುವರಿಯಬಹುದು.

ಅಭಿಪ್ರಾಯ ಭೇದ ಬರದಂತೆ ನೋಡಿಕೊಳ್ಳಿ

ಒಬ್ಬರು ವ್ಯಕ್ತಿಗಳ ನಡುವೆ ಪ್ರೀತಿ ಅಥವಾ ಸಂಬಂಧ ಏರ್ಪಡಲು 7ವರ್ಷ ಅಥವಾ ಅದಕ್ಕಿಂತ ಕಡಿಮೆ ಅಂತರ ಇರಬೇಕು ಎನ್ನುತ್ತಾರೆ. ಅದಕ್ಕಿಂತಲೂ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಹಲವು ವಿಷಯಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ನಡುವಿನ ಅಭಿಪ್ರಾಯಗಳು, ಇಷ್ಟ-ಕಷ್ಟಗಳು, ಯೋಚನಾರೀತಿ ಎಲ್ಲದರಲ್ಲೂ ವ್ಯತ್ಯಾಸಗಳಾಗಬಹುದು. ಎಲ್ಲವೂ ಒಬ್ಬರು ಹೇಳಿದಂತೆ ನಡೆಯುವುದು ಸರಿಯಲ್ಲ. ನಿಮ್ಮ ಸಂಗಾತಿಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ, ಸರಿಯಾದ ಕಾರಣ ನೀಡಿ ಅರ್ಥ ಮಾಡಿಸಿ. ಇಲ್ಲವಾದಲ್ಲಿ ಸಂಬಂಧ ದಿನ ಕಳದಂತೆ ಹಳಸಬಹುದು.

ತಾಳ್ಮೆ ಇರಲಿ

ಯಾವುದೇ ಸಂಬಂಧವಾಗಲಿ ಅನುಬಂಧ ಗಟ್ಟಿಯಾಗಿರಲು ತಾಳ್ಮೆ ಬಹಳ ಮುಖ್ಯ. ಅದರಲ್ಲೂ ವಯಸ್ಸಿನ ಅಂತರದ ನಡುವೆ ಪ್ರೀತಿ ಮಾಡಿದವರಿಗೆ ತಾಳ್ಮೆಯಿಲ್ಲ ಎಂದರೆ ಆ ಸಂಬಂಧದಲ್ಲಿ ಆರೋಗ್ಯಕರವಾಗಿ ಮುಂದುವರಿಯಲು ಸಾಧ್ಯವೇ ಇಲ್ಲ. ಇಬ್ಬರು ಒಬ್ಬರಿಗೊಬ್ಬರ ಜೀವನಶೈಲಿಯನ್ನು ಅನುಸರಿಸುವುದು, ಇಬ್ಬರ ನಡುವಿನ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳುವುದು ಇದಕ್ಕೆ ಬಹಳ ಸಮಯ ಬೇಕು. ಆ ಕಾರಣಕ್ಕೆ ತಾಳ್ಮೆ ಬಹಳ ಅವಶ್ಯ.

ವಯಸ್ಸಿನ ಅಂತರವನ್ನು ಮನಸಾರೆ ಒಪ್ಪಿಕೊಳ್ಳಿ

ವಯಸ್ಸಿನ ನಡುವೆ ಅಂತರ ಇದ್ದಾಗ ನಿರೀಕ್ಷೆಗಳು ಹಾಗೂ ಪ್ರೀತಿಯ ಮಾಡುವ ವಿಷಯದಲ್ಲಿ ಅಭಿಪ್ರಾಯ ಭೇದ ಬರುವುದು ಸಹಜ. ಆ ಕಾರಣಕ್ಕೆ ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ಈ ಕುರಿತು ಮನಸ್ಸು ಬಿಚ್ಚಿ ಮಾತನಾಡಿ. ಎಲ್ಲಾ ವಿಷಯದಲ್ಲೂ ಪ್ರಾಮಾಣಿಕರಾಗಿದ್ದಾಗ ಮಾತ್ರ ನಿಮ್ಮ ಸಂಬಂಧ ಮುಂದುವರಿಯಲು ಸಾಧ್ಯ. ಹಾಗಾಗಿ ವಯಸ್ಸಿನ ಅಂತರವನ್ನು ಮನಸಾರೆ ಒಪ್ಪಿಕೊಂಡು ಮುಂದೆ ಸಾಗಿ.

ಪ್ರಾಮಾಣಿಕರಾಗಿರಿ

ನಿಮ್ಮ ನಂಬಿಕೆಗಳು, ನಿಮ್ಮಲ್ಲಿನ ನೈತಿಕ ಅಂಶಗಳು ಹಾಗೂ ಆಸಕ್ತಿಗಳ ವಿಷಯದಲ್ಲಿ ಪ್ರಮಾಣಿಕರಾಗಿರುವುದು ಅಗತ್ಯ. ಯಾಕೆಂದರೆ ನಮ್ಮ ನಮ್ಮ ನಂಬಿಕೆ ಹಾಗೂ ಜೀವನಶೈಲಿಯನ್ನು ಇನ್ನೊಬ್ಬರು ಬಲವಂತವಾಗಿ ಬದಲಿಸಲು ಸಾಧ್ಯವಿಲ್ಲ. ನೀವು ವಯಸ್ಸಿನಲ್ಲಿ ಅಂತರ ಇರುವ ಪ್ರೀತಿಯನ್ನು ಒಪ್ಪಿಕೊಂಡಿದ್ದೀರಿ ಎಂದ ಮಾತ್ರಕ್ಕೆ ನೀವು ನಿಮ್ಮಿಷ್ಟದಂತೆ ಬಲವಂತವಾಗಿ ಅವರನ್ನು ಬದಲಿಸುವ ಪ್ರಯತ್ನ ಮಾಡಬಾರದು.

ವಿಭಾಗ