ಮಹಾಕುಂಭಮೇಳದಲ್ಲಿ ನೈರ್ಮಲ್ಯಕ್ಕಾಗಿ 24 ಗಂಟೆ ಶ್ರಮಿಸುತ್ತಿರುವ ಸ್ವಚ್ಛತಾ ಸೇನಾನಿಗಳಿಗೆ ದಕ್ಕಬೇಕು ಪುಣ್ಯ ಸಂಚಯದ ಫಲ; ಹರ್ಷವರ್ಧನ ಶೀಲವಂತ ಬರಹ
ಹರ್ಷವರ್ದನ ಶೀಲವಂತ ಬರಹ: ಮಹಾ ಕುಂಭ ಮೇಳದಲ್ಲಿ ಪ್ರವಾಸಿಗರು ಬಳಸಿದ ಬಳಿಕ, ಅರ್ಧ ಗಂಟೆಗೆ ಒಮ್ಮೆ ಸಿಬ್ಬಂದಿ, ಸ್ವಚ್ಛತಾ ಪೌರ ಕಾರ್ಮಿಕರು ನೀರಿನ ಪೈಪ್ ಬಳಸಿ ಶುಚಿಗೊಳಿಸಿ, ಬೇಜಾರು ಪಟ್ಟುಕೊಳ್ಳದೆ ನಗು ಮೊಗದಲ್ಲಿ ನಿಲ್ಲುವ ಪರಿ, ಗೌರವ ಮೂಡಿಸುತ್ತದೆ. ಆದರೂ ನಮ್ಮ ಜನ ಸುಧಾರಿಸುವ ಹಾದಿ ಬಲು ದೂರ ಎನಿಸುತ್ತದೆ. ‘ಲ್ಯಾಟ್ರಿನ್ ಎಟಿಕ್ವೆಟ್‘ ಶೂನ್ಯ ಎನ್ನುವಷ್ಟು!

ಯಾವುದೇ ಒಂದು ದೊಡ್ಡ ಕಾರ್ಯಕ್ರಮ ಮಾಡಿದಾಗ ಅಲ್ಲಿ ಸ್ವಚ್ಛತೆಯೇ ಸವಾಲು ಎನ್ನಿಸುವುದು ಸುಳ್ಳಲ್ಲ. ಯಾಕೆಂದರೆ ನೈಮರ್ಲ್ಯ ಕಾಪಾಡುವ ವಿಚಾರದಲ್ಲಿ ನಮ್ಮ ಜನರದ್ದು ಅಂದು, ಇಂದು ಎಂದೆಂದಿಗೂ ಬದಲಾಗದ ಮನೋಭಾವ. ಕೆಲವು ಕಡೆ ಸ್ವಚ್ಛತಾ ವ್ಯವಸ್ಥೆಯೂ ಅತ್ಯಂತ ಕೆಟ್ಟದಾಗಿರುತ್ತೆ. ಆದರೆ ಪ್ರಯಾಗ್‌ರಾಜ್‌ನ ತ್ರೀವೇಣಿ ಸಂಗಮದಲ್ಲಿ ಸ್ವಚ್ಛತಾ ಸಿಬ್ಬಂದಿ ಕಾರ್ಯ ಹಾಗೂ ಸ್ವಚ್ಛತಾ ಕ್ರಮವನ್ನು ನೋಡಿದ ಹರ್ಷವರ್ದನ್ ಶೀಲವಂತ ಅವರು ಬೆರಗಾಗಿದ್ದಾರೆ. ಕೋಟ್ಯಂತರ ಜನ ಭಾಗವಹಿಸಿದ್ದ ಕುಂಭಮೇಳದಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕಾಗಿ 24 ಗಂಟೆ ದುಡಿಯುತ್ತಿರುವ ಸ್ವಚ್ಛತಾ ಶರ್ಮಿಕರ ಬಗ್ಗೆ ಅವರು ಬರೆದ ಮೆಚ್ಚುಗೆ ಮಾತುಗಳ ಅಕ್ಷರ ರೂಪ ಇಲ್ಲಿದೆ ನೀವೂ ಓದಿ.
ಹರ್ಷವರ್ದನ ಶೀಲವಂತ ಬರಹ
ಯೋಚಿಸಿ.. ಲಕ್ಷಾಂತರ ಭಕ್ತಾದಿಗಳಿಂದ ಆರಂಭವಾಗಿ ಕೋಟ್ಯಂತರಕ್ಕೆ ಖೋ ಕೊಟ್ಟಿರುವ, ಪ್ರಯಾಗ್ ರಾಜ್ ಮಹಾ ಕುಂಭ ಮೇಳಕ್ಕೆ 45 ದಿನಗಳು (ಫೆಬ್ರವರಿ 26, 2025) ಆಗಮಿಸುವ ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ಶೌಚ ವ್ಯವಸ್ಥೆ, ಸ್ನಾನ ಹಾಗೂ ಬಟ್ಟೆ ಬದಲಿಸಲು ಕೈಗೊಂಡ ವ್ಯವಸ್ಥೆ ಕ್ರಮಗಳು ಶಬ್ದಕ್ಕೆ ನಿಲುಕದವು.
ಸ್ವಚ್ಛತೆ, ನೈರ್ಮಲ್ಯ, ನಿರ್ವಹಣೆ... ಸ್ವಚ್ಛತಾ ಸಿಬ್ಬಂದಿ ಹಾಗೂ ತ್ಯಾಜ್ಯ ನಿರ್ವಹಣೆ ತ್ರಿವೇಣಿ ಸಂಗಮದ ದಂಡೆಯ ಮೇಲೆ ಯೋಜಿಸಿದ ರೀತಿ ವಿಶೇಷ.
ಒಟ್ಟು 25 ವಿಭಾಗ ಹಾಗೂ 36 ಉಪ ವಿಭಾಗಗಳನ್ನು ಪುಟ್ಟ ನಗರಗಳಂತೆ ರೂಪಿಸಿದ್ದು, ಪ್ರತಿ ವಸತಿಯಲ್ಲಿ ಪುರುಷ, ಮಹಿಳೆ ಹೀಗೆ ಪ್ರತ್ಯೇಕವಾಗಿ, ನೂರು ಶೌಚಾಲಯ ಅಳವಡಿಸಲಾಗಿದೆ. ಮಲದ ಗುಂಡಿಗಳನ್ನು ರೂಪಿಸಿ, ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ ಜೋಡಿಸಲಾಗಿದೆ. ಅವುಗಳಿಗೆ ಬಯೋ ಕಂಪೋಸ್ಟ್ ಏಜೆಂಟ್ ಸೇರಿಸಿ, ಗೊಬ್ಬರವಾಗಿ ಪರಿವರ್ತಿಸುವ ಯೋಜನೆ ಜಾರಿಗೊಳಿಸಲಾಗಿದೆ.
ಮೂತ್ರ ಪ್ರತ್ಯೇಕವಾಗಿ ಸಂಗ್ರಹಿಸಿ, ನದಿ ಆಚೆ ಸಾಗಿಸಿ, ಕೃತಕ ಕೆರೆಯಲ್ಲಿ ಇಂಗಿಸಲು ವ್ಯವಸ್ಥೆ ಮಾಡಲಾಗಿದೆ. ಹೀಗೆ ಕುಡಿಯುವ ನೀರು, ವಿದ್ಯುತ್ ಜೋಡಣೆಯ ಯೋಜನೆ ಮತ್ತು ಅನುಷ್ಠಾನ ದಂಗುಬಡಿಸುತ್ತದೆ. ದುಡಿದ ಕೈಗಳು ಮನುಷ್ಯರದ್ದಲ್ಲ, ದೇವ ಮಾನವರದ್ದು!
ಪ್ರವಾಸಿಗರು ಬಳಸಿದ ಬಳಿಕ, ಅರ್ಧ ಗಂಟೆಗೆ ಒಮ್ಮೆ ಸಿಬ್ಬಂದಿ, ಸ್ವಚ್ಛತಾ ಪೌರ ಕಾರ್ಮಿಕರು ನೀರಿನ ಪೈಪ್ ಬಳಸಿ ಶುಚಿಗೊಳಿಸಿ, ಬೇಜಾರು ಪಟ್ಟುಕೊಳ್ಳದೆ ನಗು ಮೊಗದಲ್ಲಿ ನಿಲ್ಲುವ ಪರಿ, ಗೌರವ ಮೂಡಿಸುತ್ತದೆ. ಆದರೂ ನಮ್ಮ ಜನ ಸುಧಾರಿಸುವ ಹಾದಿ ಬಲು ದೂರ ಎನಿಸುತ್ತದೆ. ‘ಲ್ಯಾಟ್ರಿನ್ ಎಟಿಕ್ವೆಟ್‘ ಶೂನ್ಯ ಎನ್ನುವಷ್ಟು!
ದುಡಿಯುವ ಕೈಗಳ ಶ್ರಮ, ನಮ್ಮ ಅಣ್ಣ–ಅಕ್ಕ ಅಂತ ಲೆಕ್ಕಿಸಿ ನಮ್ಮ ಜನ ನಡೆದರೂ, ಹೀಗೆ ಯೋಚಿಸಿ, ಯೋಜಿಸಿದವರ ಶ್ರಮ ಗೌರವಿಸಿದಂತೆ! ವ್ಯವಸ್ಥೆಯ ಸದುಪಯೋಗ ಸಹ ಸಂಸ್ಕಾರದ ಭಾಗ. ಬೇಕಾಬಿಟ್ಟಿ ನಮ್ಮ ನಡವಳಿಕೆ ಇನ್ನಿಬ್ಬರು ಸರಿಪಡಿಸುವಂತೆ ಇದ್ದರೆ, ಪುಣ್ಯ ಸ್ನಾನದ ಫಲ ಏನು? ಎಷ್ಟು!
ಪುಟ್ಟ ಮಕ್ಕಳೊಂದಿಗೆ ತಾಯಿ, ತಂಗಿಯರು ಈ ಶೌಚಾಲಯಗಳನ್ನು ಶುಚಿಗೊಳಿಸಿ, ಮತ್ತೆ ಬಳಸಲು ಅಣಿಗೊಳಿಸುತ್ತಿದ್ದರು.
ಹಾಗೆಯೇ ಪುಣ್ಯ ಸ್ನಾನದ ಬಳಿಕ, ಉಟ್ಟ ಬಟ್ಟೆ ಕಳಚಿದ ತ್ಯಾಜ್ಯ ಸಂಗ್ರಹಣೆ, ಸಾಗಣೆ ಮತ್ತು ನಿರ್ವಹಣೆ! ಸತತ... ಸತತ.. 24 ತಾಸೂ. ಒಂದು ಹಾಳೆ, ಪಾಕೀಟ್, ಚೀಟು ರಸ್ತೆಯ ಮೇಲೆ ಕಾಣ ಸಿಗದಷ್ಟು ಶ್ರಮ ವಹಿಸಿ ಕೆಲಸ.
ಹೀಗೆ ನಮಗಾಗಿ ದುಡಿದು, ಸವೆದ ಸ್ಪರ್ಶಮಣಿಗಳಿಗೆ ನಮ್ಮ ಪುಣ್ಯ ಸಂಚಯದ ಎಲ್ಲ ಫಲ ನಿಜವಾಗಿ ದೊರೆಯಬೇಕು.
ಸ್ವಚ್ಛತಾ ಸೇನಾನಿಗಳ ಕಷ್ಟ ಕಳೆಯಲಿ. ಭಗವಂತ ಕೃಪೆ ಮಾಡಲಿ. ಅವರ ಬದುಕು ಬಂಗಾರವಾಗಲಿ. ಅಕ್ಷಯ ಸಂಪದವೀಯಲಿ. ಮಕ್ಕಳು ಅಕ್ಷರ ಕಲಿತು ಬಡತನ ನೀಗಲಿ. ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ದುಡಿದ ಕೈಗಳು ಅರಸಲಿ.. ಕ್ಷೇತ್ರಪಾಲ ಶ್ರೀ ವೇಣಿ ಮಾಧವನಲ್ಲಿ ಪ್ರಾರ್ಥನೆ. ಅವರಿಗೆ ಆಯುರಾರೋಗ್ಯ ಭಾಗ್ಯಗಳು ಸಿಗಲಿ.
ಜನವರಿ 20 ರಂದು ಹರ್ಷವರ್ದನ ಅವರು ಈ ಪೋಸ್ಟ್ ಹಾಕಿದ್ದಾರೆ. ಈಗಾಗಲೇ ಹಲವರು ವೀಕ್ಷಿಸಿದ್ದು, 80ಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ. 8 ಮಂದಿ ಇವರ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
