ಮೈಸೂರಿನ ಶ್ರೀಕಂಠೇಶ್ವರ ದೇವಸ್ಥಾನ, ಬೆಂಗಳೂರಿನ ಗವಿ ಗಂಗಾಧರೇಶ್ವರ ಸೇರಿದಂತೆ ರಾಜ್ಯದಲ್ಲಿ ಮಹಾ ಶಿವರಾತ್ರಿ ಆಚರಿಸುವ ಪ್ರಮುಖ ದೇವಾಲಯಗಳಿವು-maha shivaratri 2024 famous temples in karnataka celebrates shivaratri including gavi gangadhareshwara bengaluru rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮೈಸೂರಿನ ಶ್ರೀಕಂಠೇಶ್ವರ ದೇವಸ್ಥಾನ, ಬೆಂಗಳೂರಿನ ಗವಿ ಗಂಗಾಧರೇಶ್ವರ ಸೇರಿದಂತೆ ರಾಜ್ಯದಲ್ಲಿ ಮಹಾ ಶಿವರಾತ್ರಿ ಆಚರಿಸುವ ಪ್ರಮುಖ ದೇವಾಲಯಗಳಿವು

ಮೈಸೂರಿನ ಶ್ರೀಕಂಠೇಶ್ವರ ದೇವಸ್ಥಾನ, ಬೆಂಗಳೂರಿನ ಗವಿ ಗಂಗಾಧರೇಶ್ವರ ಸೇರಿದಂತೆ ರಾಜ್ಯದಲ್ಲಿ ಮಹಾ ಶಿವರಾತ್ರಿ ಆಚರಿಸುವ ಪ್ರಮುಖ ದೇವಾಲಯಗಳಿವು

Maha Shivaratri 2024: ಶಿವರಾತ್ರಿ ಆಚರಣೆಗೆ ದೇಶವೇ ಕಾಯುತ್ತಿದೆ. ರಾಜ್ಯದಲ್ಲಿ ಕೂಡಾ ಶಿವನ ವಿಶೇಷ ಪೂಜೆಗೆ ತಯಾರಿ ನಡೆಯುತ್ತಿದೆ. ಕೋಲಾರದ ಕೋಟಿ ಲಿಂಗ, ಗೋಕರ್ಣದ ಮಹಾಬಲೇಶ್ವರ ಸೇರಿದಂತೆ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುವ ರಾಜ್ಯದ ಪ್ರಮುಖ ದೇವಾಲಯಗಳ ಪರಿಚಯ ಇಲ್ಲಿದೆ.

ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುವ ರಾಜ್ಯದ ಪ್ರಮುಖ ದೇವಾಲಯಗಳು
ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುವ ರಾಜ್ಯದ ಪ್ರಮುಖ ದೇವಾಲಯಗಳು (PC: Sendil Dev, Nirmal Sachan Faceook)

ಮಹಾ ಶಿವರಾತ್ರಿ 2024: ಶಿವರಾತ್ರಿ ಆಚರಣೆಗೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಶಿವನ ಆರಾಧನೆಗೆ ರಾಜ್ಯದ ಎಲ್ಲಾ ದೇವಾಲಯಗಳು ಅದರಲ್ಲೂ ಶಿವನ ದೇವಸ್ಥಾನಗಳು ಸನ್ನದ್ಧವಾಗಿದೆ. ಪಾರ್ವತಿ ಪರಮೇಶ್ವರರು ಸತಿ ಪತಿಗಳಾದ ಈ ದಿನವನ್ನು ದೇಶಾದ್ಯಂತ ಶಿವರಾತ್ರಿಯನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಶಿವರಾತ್ರಿ ಆಚರಿಸಲಾಗುತ್ತದೆ. ವಿದೇಶದಲ್ಲಿ ಕೂಡಾ ಭಾರತೀಯರು ಪರಮೇಶ್ವರನ ಪೂಜೆ ಮಾಡಲು ಕಾಯುತ್ತಿದ್ದಾರೆ.

ರಾಜ್ಯದಲ್ಲಿ ಪ್ರತಿ ವರ್ಷವೂ ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯ, ಕೋಲಾರದ ಕೋಟಿ ಲಿಂಗೇಶ್ವರ, ಬೆಂಗಳೂರಿನ ಗವಿ ಗಂಗಾಧರೇಶ್ವರ, ಮಹದೇಶ್ವರ ಬೆಟ್ಟ ಸೇರಿದಂತೆ ಕೆಲವೊಂದು ದೇವಾಲಯಗಳಲ್ಲಿ ಅದ್ಧೂರಿಯಾಗಿ ಶಿವರಾತ್ರಿ ಆಚರಿಸಲಾಗುತ್ತದೆ. ಆ ದೇವಾಲಯಗಳ ಬಗ್ಗೆ ಕಿರು ಪರಿಚಯ ಇಲ್ಲಿದೆ.

ಮಲೈ ಮಹದೇಶ್ವರ ದೇವಸ್ಥಾನ-ಚಾಮರಾಜನಗರ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಯಾತ್ರಾಸ್ಥಳ ಮಲೈ ಮಹದೇಶ್ವರ ಬೆಟ್ಟ ಹೆಸರೇ ಸೂಚಿಸುವಂತೆ ಏಳು ಮಲೆಗಳ ಮಧ್ಯದಲ್ಲಿದೆ. ಕರ್ನಾಟಕ ಹಾಗೂ ತಮಿಳುನಾಡಿನಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಮಹದೇಶ್ವರ, ಸುಮಾರು 15ನೇ ಶತಮಾನದ ಸಂತ ಶರಣರಾಗಿದ್ದು ಅವರನ್ನು ಶಿವ ಸ್ವರೂಪಿ ಹಾಗೂ ಶಿವನ ಅವತಾರವೆಂದು ನಂಬಲಾಗಿದೆ. ಆದ್ದರಿಂದ ಇದು ರಾಜ್ಯದ ಪ್ರಮುಖ ಶಿವನನ್ನು ಆರಾಧಿಸುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿದಿನ ಇಲ್ಲಿ ಪೂಜೆ ನಡೆಯುತ್ತದೆ. ಅದರಲ್ಲೂ ಹುಣ್ಣಿಮೆ, ಹಬ್ಬ ಹರಿದಿನಗಳಂದು ವಿಶೇಷ ಪೂಜೆ ನಡೆಯುತ್ತದೆ. ಮಾರ್ಚ್‌ 8ರ ಶಿವರಾತ್ರಿ ಆಚರಣೆಗೆ ಕೂಡಾ ಎಲ್ಲಾ ಸಿದ್ದತೆ ನಡೆಯುತ್ತಿದೆ.

ಶ್ರೀಕಂಠೇಶ್ವರ ದೇವಸ್ಥಾನ-ಮೈಸೂರು

ದಕ್ಷಿಣ ಭಾರತದ ಅತಿ ದೊಡ್ಡ ದೇವಾಲಯಗಳಲ್ಲಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಕೂಡಾ ಒಂದು. ಇದನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಮೈಸೂರಿನಿಂದ ಸುಮಾರು 23 ಕಿಮೀ ದೂರದಲ್ಲಿರುವ ಈ ದೇವಾಲಯ ಕಪಿಲಾ ನದಿ ದಂಡೆಯಲ್ಲಿದೆ. ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿದಿನವೂ ಪೂಜೆ ಇರುತ್ತದೆ. ಸಾವಿರಾರು ಭಕ್ತರು ಪ್ರತಿದಿನ ಆಗಮಿಸಿ ಶ್ರೀಕಂಠನ ದರ್ಶನ ಪಡೆಯುತ್ತಾರೆ. ಮಾರ್ಚ್‌ 8 ಶಿವರಾತ್ರಿ ಆಚರಣೆಗೆ ನಂಜನಗೂಡು ದೇವಸ್ಥಾನ ಕೂಡಾ ಸನ್ನದ್ಧವಾಗಿದೆ.

ಗವಿ ಗಂಗಾಧರೇಶ್ವರ - ಬೆಂಗಳೂರು

ಗವಿ ಗಂಗಾಧರೇಶ್ವರ, ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಶಿವನಿಗೆ ಸಮರ್ಪಿತವಾಗಿರುವ ಈ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಸಮಯದಲ್ಲಿ ಲೆಕ್ಕವಿಲ್ಲದಷ್ಟು ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಅ ದಿನ ಒಂದು ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಬೆಳಕು ನಂದಿಯ ಕೊಂಬುಗಳ ಮೂಲಕ ಹಾಯ್ದು ಹೋದು ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಬೀಳುತ್ತದೆ. ಇದನ್ನು ನೋಡಲು ಎರಡೂ ಕಣ್ಣುಗಳು ಸಾಲದು. ಮಹಾ ಶಿವರಾತ್ರಿಯಂದು ಕೂಡಾ ಇಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರುತ್ತದೆ.

ಇಶಾ ಫೌಂಡೇಶನ್‌- ಬೆಂಗಳೂರು

ಬೆಂಗಳೂರು ಚಿಕ್ಕಬಳ್ಳಾಪುರದಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ಕೂಡಾ ಮಹಾಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದರ ಕೇಂದ್ರ ಕಛೇರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿದೆ. ಸದ್ಗುರು ಜಗ್ಗಿ ವಾಸುದೇವ ಅವರು 1992ರಲ್ಲಿ ಇದನ್ನು ಸ್ಥಾಪಿಸಿದರು. ಭಾರತ ಮಾತ್ರವಲ್ಲದೆ ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಪೂರ್‌ಗಳಲ್ಲಿ ಕೂಡಾ ಇಶಾ ಫೌಂಡೇಷನ್‌ ಬ್ರಾಂಚ್‌ಗಳಿವೆ. ಪ್ರತಿ ಶಿವರಾತ್ರಿಯಂದು ಇಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಸಾವಿರಾರು ಭಕ್ತರು ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬುಕ್ಕಿಂಗ್‌ ಮಾಡುತ್ತಿದ್ದಾರೆ.

ಮುರುಡೇಶ್ವರ - ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಮುರುಡೇಶ್ವರದಲ್ಲಿ ಕೂಡಾ ಮಹಾಶಿವರಾತ್ರಿಯಂದು ವಿಶೇಷ ಪೂಜೆ ನೆರವೇರಲಿದೆ. ಇಲ್ಲಿನ ಶಿವನ ಪ್ರತಿಮೆಯು ಏಷ್ಯಾದಲ್ಲಿ 2ನೇ ಎತ್ತರದ ಶಿವನ ಪ್ರತಿಮೆಯಾಗಿದ್ದು ಜಗತ್ತಿನಲ್ಲೇ ಅತಿ ಎತ್ತರವಾದ ರಾಜ ಗೋಪುರವಿದ್ದು ಜಗತ್ತಿನಲ್ಲೇ ಅತಿ ಎತ್ತರವಾದ ರಾಜ ಗೋಪುರವಿದೆ.

ಕೋಟಿ ಲಿಂಗೇಶ್ವರ - ಕೋಲಾರ

ಕೋಲಾರ ಜಿಲ್ಲೆಯಲ್ಲಿರುವ ಕೋಟಿ ಲಿಂಗೇಶ್ವರ ದೇವಸ್ಥಾನ ಕೂಡಾ ರಾಜ್ಯದ ಪ್ರಮುಖ ಶಿವನ ದೇವಾಲಯಗಳಲ್ಲಿ ಒಂದು. ಇಲ್ಲಿ ಕೂಡಾ ಮಹಾ ಶಿವರಾತ್ರಿಯಂದು ವಿಶೇಷ ಪೂಜೆ ನೆರವೇರುತ್ತದೆ. ಇಲ್ಲಿ 108 ಅಡಿಯ ಬೃಹತ್‌ ಶಿವಲಿಂಗ ಹಾಗೂ 32 ಅಡಿ ಎತ್ತರದ ಬಸವಣ್ಣನ ಪ್ರತಿಮೆ ಇದೆ. ತ್ರೇತಾಯುಗದಿಂದಲೂ ಈ ದೇವಸ್ಥಾನಕ್ಕೆ ವಿಶೇಷ ಮಹತ್ವ ಇದೆ. ಭಕ್ತರು ತಮ್ಮ ಇಷ್ಟಾರ್ಥ ಕೋರಿಕೆಗೆ ಇಲ್ಲಿ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಕೂಡಾ ಇಲ್ಲಿ ವಿಶೇಷ ಶಿವರಾತ್ರಿ ಆಚರಿಸಲಾಗುತ್ತದೆ.

ಮಹಾ ಬಲೇಶ್ವರ ದೇವಸ್ಥಾನ - ಉತ್ತರ ಕನ್ನಡ

ಕರ್ನಾಟಕದ 7 ಮುಕ್ತಿಸ್ಥಳಗಳಲ್ಲಿ ಮಹಾ ಬಲೇಶ್ವರ ದೇವಸ್ಥಾನ ಕೂಡಾ ಒಂದು. ಈ ದೇವಾಲಯದಲ್ಲಿ ರಾವಣನ ಸ್ಥಾಪಿಸಿದ ಆತ್ಮಲಿಂಗ ಇದೆ. ರಾವಣನು ಹಿಮಾಲಯದ ಕೈಲಾಸ ಪರ್ವತದಿಂದ ಆತ್ಮಲಿಂಗವನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದ ಎಂದು ನಂಬಲಾಗಿದೆ. ಮಹಾ ಶಿವರಾತ್ರಿಯಂದು ಇಲ್ಲಿ ತೇರಿ ಹಬ್ಬ ನಡೆಯಲಿದೆ. ಸಾವಿರಾರು ಭಕ್ತರು ಶಿವನ ದರ್ಶನಕ್ಕೆ ಆಗಮಿಸುತ್ತಾರೆ.

ಇದನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಶಿವಾಲಯಗಳಲ್ಲೂ ಮಹಾ ಶಿವರಾತ್ರಿಯಂದು ವಿಶೇಷ ಪೂಜೆ ನೆರವೇರಲಿದೆ.

mysore-dasara_Entry_Point