Maha Shivaratri 2024: ಮಹಾ ಶಿವರಾತ್ರಿಯಂದು ರುದ್ರಾಭಿಷೇಕ ಮಾಡಬೇಕೆಂದುಕೊಂಡಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
Maha Shivaratri 2024: ಶಿವರಾತ್ರಿ ಸಮೀಪಿಸುತ್ತಿದೆ. ಶಿವನ ವಿಶೇಷ ಪೂಜೆಗೆ ಎಲ್ಲಾ ಆಲಯಗಳು ಸಿದ್ಧತೆ ನಡೆಸುತ್ತಿವೆ. ಹಬ್ಬದ ದಿನ ಭಕ್ತರು ಶಿವನಿಗೆ ರುದ್ರಾಭಿಷೇಕ ಮಾಡಲು ತಯಾರಿ ನಡೆಸುತ್ತಿದ್ದಾರೆ. ಆದರೆ ನೀವು ಮನೆಯಲ್ಲೇ ಶಿವನಿಗೆ ರುದ್ರಾಭಿಷೇಕ ಮಾಡಬೇಕೆಂದರೆ ಈ ಅಂಶಗಳು ಗಮನದಲ್ಲಿರಲಿ.
ಮಹಾ ಶಿವರಾತ್ರಿ 2024: ದೇಶಾದ್ಯಂತ ಮಹಾ ಶಿವರಾತ್ರಿ ಆಚರಣೆ ಆರಂಭಗೊಂಡಿವೆ. ಈಗಿನಿಂದಲೇ ಎಲ್ಲಾ ದೇವಾಲಯಗಳಲ್ಲಿ ಶಿವನಾಮಸ್ಮರಣೆಯಿಂದ ಮೊಳಗುತ್ತಿವೆ. ಒಂದು ವರ್ಷದಲ್ಲಿ 12 ಶಿವರಾತ್ರಿಗಳಿದ್ದರೂ ಮಹಾ ಶಿವರಾತ್ರಿಗೆ ಹೆಚ್ಚಿನ ಆದ್ಯತೆಯಿದೆ. ಈ ವರ್ಷ ಮಾರ್ಚ್ 8 ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿ ಈ ದಿನ ವಿವಾಹವಾದರು. ಈ ವಿಶೇಷ ದಿನದಂದು ಪರಮೇಶ್ವರನನ್ನು ಆರಾಧಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ನಂಬಲಾಗಿದೆ. ಶಿವರಾತ್ರಿ ದಿನ ಶಂಕರನನ್ನು ಆರಾಧಿಸಲು ಭಕ್ತರು ಕಾಯುತ್ತಿದ್ದಾರೆ. ಅದೇ ರೀತಿ ಶಿವರಾತ್ರಿ ದಿನ ರುದ್ರಾಭಿಷೇಕ ಮಾಡಬೇಕೆಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ಶಿವನಿಗೆ ಅಭಿಷೇಕ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು.
ರುದ್ರಾಭಿಷೇಕ ಎಂದರೇನು?
ಶಿವನಿಗೆ ರುದ್ರ ಅವತಾರದಲ್ಲಿ ಅಭಿಷೇಕ ಮಾಡುತ್ತಾರೆ. ಶುದ್ಧ ನೀರು, ಹೂವುಗಳು, ಬಿಲ್ವಪತ್ರೆಯನ್ನು ಅರ್ಪಿಸಿ 108 ಬಾರಿ ಶಿವನ ಮಂತ್ರವನ್ನು ಪಠಿಸುತ್ತಾ ಅಭಿಷೇಕ ಮಾಡುತ್ತಾರೆ. ಮನೆಯಲ್ಲಿನ ದುಷ್ಟಶಕ್ತಿಗಳು ತೊಲಗಿ ಮನೆಗೆ ಶ್ರೇಯಸ್ಸು ಬರಲಿ ಎಂದು ಪ್ರಾರ್ಥಿಸಿ ಅಭಿಷೇಕ ನೆರವೇರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಹಾ ಶಿವರಾತ್ರಿಯ ದಿನ ಮಾಡುವ ರುದ್ರಾಭಿಷೇಕ ಬಹಳ ಮಹತ್ವದ್ದು.
ರುದ್ರಾಭಿಷೇಕ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ರುದ್ರಾಭಿಷೇಕ ಅಥವಾ ಜಲಾಭಿಷೇಕ ಮಾಡುವಾಗ ಶಿವಲಿಂಗವು ಯಾವ ದಿಕ್ಕಿಗೆ ಮುಖ ಮಾಡಿದೆ ಎಂಬುದನ್ನು ಅರಿತುಕೊಳ್ಳಬೇಕು. ಪೂಜೆಯನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮಾತ್ರ ಮಾಡಬೇಕು.
ರುದ್ರಾಭಿಷೇಕ ಮಾಡುವಾಗ ನೆನಪಿಡಬೇಕಾದ ಅಂಶಗಳು
ರುದ್ರಾಭಿಷೇಕ ಮಾಡುವಾಗ ಅಪ್ಪಿತಪ್ಪಿಯೂ ಎಡಗೈಯಿಂದ ಶಿವಲಿಂಗವನ್ನು ಮುಟ್ಟಬೇಡಿ. ಲಿಂಗವನ್ನು ಬಲಗೈಯಿಂದ ಮಾತ್ರ ಪೂಜಿಸಬೇಕು. ನೀವು ಮಹಾ ಶಿವರಾತ್ರಿಯಂದು ರುದ್ರಾಭಿಷೇಕ ಮಾಡಲು ಬಯಸಿದರೆ ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸಿ ಶಿವಲಿಂಗವನ್ನು ಗಂಗಾಜಲದೊಂದಿಗೆ ಅಭಿಷೇಕ ಮಾಡಬೇಕು. ರುದ್ರಾಭಿಷೇಕ ಮಾಡುವಾಗ ಶಿವಲಿಂಗದ ಸುತ್ತ ಪ್ರದಕ್ಷಿಣೆ ಮಾಡಬಾರದು. ಏಕೆಂದರೆ ಶಿವಲಿಂಗಕ್ಕೆ ಅರ್ಪಿಸುವ ನೀರು ಅತ್ಯಂತ ಪವಿತ್ರವಾದುದು. ಆದ್ದರಿಂದ ಅದನ್ನು ದಾಟಬೇಡಿ. ರುದ್ರಾಭಿಷೇಕ ಮಾಡುವಾಗ ಓಂ ನಮೋ ಭಗವತೇ ರುದ್ರಾಯ ಎಂಬ ಮಂತ್ರವನ್ನು ಪಠಿಸಬೇಕು. ಆಗ ನೀವು ಮಾಡಿ ಅಭಿಷೇಕವು ಸಂಪೂರ್ಣವಾಗುತ್ತದೆ. ಲಿಂಗದ ತುದಿಯು ಉತ್ತರಕ್ಕೆ ಮುಖವಾಗಿರಬೇಕು ಮತ್ತು ನೀವು ಪಶ್ಚಿಮಕ್ಕೆ ಮುಖ ಮಾಡಬೇಕು.
ರುದ್ರಾಭಿಷೇಕದಲ್ಲಿ ಎಷ್ಟು ವಿಧ?
ಭಕ್ತರು ನಂಬಿಕೆಗೆ ಅನುಗುಣವಾಗಿ 6 ವಿಧಗಳಲ್ಲಿ ರುದ್ರಾಭಿಷೇಕ ಮಾಡಬಹುದು. ಪ್ರತಿಯೊಂದು ರುದ್ರಾಭಿಷೇಕಕ್ಕೂ ಅದ್ದರದ್ದೇ ಆದ ಮಹತ್ವವಿದೆ. ಪ್ರತಿ ಅಭಿಷೇಕಕ್ಕೂ ಆಶೀರ್ವಾದ ಲಭಿಸುತ್ತದೆ. ನೀವು ಮನೆಯಲ್ಲಿ ರುದ್ರಾಭಿಷೇಕ ಮಾಡಬೇಕೆಂದರೆ ತಪ್ಪದೆ ಈ ನಿಯಮಗಳನ್ನು ಪಾಲಿಸಿ.
ಅಭಿಷೇಕ
ಶಿವಲಿಂಗಕ್ಕೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.
ಹಾಲಿನ ಅಭಿಷೇಕ
ಶಿವಲಿಂಗಕ್ಕೆ ಹಸುವಿನ ಹಾಲನ್ನು ಬಳಸಿ ರುದ್ರಾಭಿಷೇಕ ಮಾಡಬೇಕು. ಹೀಗೆ ಮಾಡುವುದರಿಂದ ದೀರ್ಘಾಯುಷ್ಯ ದೊರೆಯುತ್ತದೆ. ಇದು ಅನೇಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಜೇನುತುಪ್ಪದ ಅಭಿಷೇಕ
ಜೇನುತುಪ್ಪದ ಅಭಿಷೇಕ ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ನಿಮ್ಮ ಜೀವನವನ್ನು ಸುಂದರಗೊಳಿಸುತ್ತದೆ. ಭಕ್ತರು ಸುಖವಾಗಿರುವಂತೆ ಪರಮೇಶ್ವರನು ಅನುಗ್ರಹಿಸುತ್ತಾನೆ.
ಪಂಚಾಮೃತ ಸಹಿತ ಅಭಿಷೇಕ
ಹಸುವಿನ ಹಾಲು, ಜೇನುತುಪ್ಪ, ಶುದ್ಧ ತುಪ್ಪ, ಹಸುವಿನ ಮೊಸರು ಮತ್ತು ಸಕ್ಕರೆಯ ಮಿಶ್ರಣವನ್ನು ಪಂಚಾಮೃತ ಎಂದು ಕರೆಯಲಾಗುತ್ತದೆ. ಇವುಗಳಿಂದ ಅಭಿಷೇಕ ಮಾಡುವುದರಿಂದ ಸುಖ, ಸಂತೋಷ, ನೆಮ್ಮದಿ ನೆಲೆಸುತ್ತದೆ.
ತುಪ್ಪದಿಂದ ಅಭಿಷೇಕ
ತುಪ್ಪದ ಅಭಿಷೇಕ ಮಾಡಿದರೆ ರೋಗ ರುಜಿನಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆ.
ಮೊಸರಿನಿಂದ ಅಭಿಷೇಕ
ವೈವಾಹಿಕ ಸಮಸ್ಯೆಗಳು ಮತ್ತು ಮಕ್ಕಳಿಲ್ಲದ ದಂಪತಿಗಳು ಮೊಸರಿನಿಂದ ಅಭಿಷೇಕ ಮಾಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತದೆ.