Makar Sankranti: ಮಕರ ಸಂಕ್ರಾಂತಿಗೆ ವಿಶೇಷ ಸಿಹಿ ತಿಂಡಿ ಮಾಡಬೇಕು ಅಂತಿದ್ದೀರಾ; ಸಂಕ್ರಾಂತಿ ಸಂಭ್ರಮ ಹೆಚ್ಚಲು ಈ ರೆಸಿಪಿಗಳನ್ನ ಟ್ರೈ ಮಾಡಿ
ಮಕರ ಸಂಕ್ರಾಂತಿ ಹಿಂದೂಗಳು ಆಚರಿಸುವ ಬಹು ದೊಡ್ಡ ಹಬ್ಬ. ಭಾರತದಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪೊಂಗಲ್, ಎಳ್ಳು–ಬೆಲ್ಲ ತಯಾರಿಸುವುದು ಸಹಜ. ಇದರ ಜೊತೆಗೆ ಕೆಲವು ವಿಶೇಷ ತಿನಿಸುಗಳನ್ನು ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು. ಸಂಕ್ರಾಂತಿಗೆ ತಯಾರಿಸಬಹುದಾದ ವಿಶೇಷ ಸಿಹಿ ತಿಂಡಿಗಳ ರೆಸಿಪಿ ಇಲ್ಲಿದೆ.

ಮಕರ ಸಂಕ್ರಾಂತಿ ಹೊಸ ವರ್ಷದಲ್ಲಿ ಬರುವ ಮೊದಲ ಹಾಗೂ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ದೇಶದಾದ್ಯಂತ ವಿವಿಧ ಹೆಸರುಗಳಿಂದ, ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಪೊಂಗಲ್ ಎಂದು ಕೂಡ ಕರೆಯಲಾಗುವ ಮಕರ ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ಬಹಳ ವಿಶೇಷ. ಎಳ್ಳು ಬೆಲ್ಲ ಹಂಚುವ ಜೊತೆಗೆ ಪೊಂಗಲ್, ಚಿತ್ರಾನ್ನ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ.
ಸಾಮಾನ್ಯವಾಗಿ ಮಕರ ಸಂಕ್ರಾಂತಿಗೆ ಸಿಹಿ ಪೊಂಗಲ್, ಪಾಯಸ, ಒಬ್ಬಟ್ಟು, ಚಿತ್ರಾನ್ನ ಮಾಡುವುದು ವಾಡಿಕೆ. ಈ ಬಾರಿ ಮಕರ ಸಂಕ್ರಾಂತಿಗೆ ಈ ವಿಶೇಷ ಸಿಹಿತಿನಿಸುಗಳನ್ನು ಮಾಡುವ ಮೂಲಕ ಹಬ್ಬವನ್ನು ವಿಶೇಷವನ್ನಾಗಿಸಿ. ಇವೆಲ್ಲವೂ ಕಡಿಮೆ ಸಮಯದಲ್ಲಿ ಮಾಡಬಹುದಾದ ಅತ್ಯಂತ ರುಚಿಕರ ತಿನಿಸುಗಳು.
ಕೇಸರಿ ಖೀರ್
ಖೀರ್ ಎಂದರೆ ಪಾಯಸ ಎಂದೂ ಕೂಡ ಕರೆಯಬಹುದು. ಸಾಮಾನ್ಯವಾಗಿ ನೀವು ಹಬ್ಬಕ್ಕೆ ಪಾಯಸ ಮಾಡಿಯೇ ಮಾಡುತ್ತೀರಿ. ಈ ಬಾರಿ ಮಕರ ಸಂಕ್ರಾಂತಿ ಕೇಸರಿ ಖೀರ್ ಮಾಡಿ. ಇದನ್ನು ತಯಾರಿಸುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.
ಕೇಸರಿ ಖೀರ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಬಾಸ್ಮತಿ ಅಕ್ಕಿ – 200ಗ್ರಾಂ (ರಾತ್ರಿ ತೊಳೆದು, ನೆನೆಸಿಡಬೇಕು), ಕೆನೆ ಇರುವ ಹಾಲು – 800 ಮಿಲಿ ಲೀಟರ್, ಸಕ್ಕರೆ – 200 ಗ್ರಾಂ, ಏಲಕ್ಕಿ ಪುಡಿ – 50 ಗ್ರಾಂ, ಬಾದಾಮಿ – 100 ಗ್ರಾಂ ಕತ್ತರಿಸಿದ್ದು, ಪಿಸ್ತಾ – 100 ಗ್ರಾಂ, ಗೋಡಂಬಿ – 100ಗ್ರಾಂ, ಒಣದ್ರಾಕ್ಷಿ – 50 ಗ್ರಾಂ, ಅಲಂಕರಿಸಲು ಕೇಸರಿ – 5 ಗ್ರಾಂ
ಕೇಸರಿ ಖೀರ್ ಮಾಡುವ ವಿಧಾನ
ಮೊದಲೇ ತಿಳಿಸಿದಂತೆ ಬಾಸ್ಮತಿ ಅಕ್ಕಿಯನ್ನು ರಾತ್ರಿಯೇ ಚೆನ್ನಾಗಿ ತೊಳೆದು ನೆನೆಸಿಡಿ. ದಪ್ಪ ತಳದ ಪಾತ್ರೆಯಲ್ಲಿ ಕೆನೆ ಹಾಲು ಹಾಕಿ ಕುದಿಯಲು ಬಿಡಿ. ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ. ತಳ ಹಿಡಿಯದಂತೆ ಆಗಾಗ ಮಗಚುತ್ತಿರಿ. ಅಕ್ಕಿ ಬೆಂದ ನಂತರ ಹಾಲಿಗೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ. ನಂತರ ಕತ್ತರಿಸಿಟ್ಟುಕೊಂಡ ಒಣಹಣ್ಣುಗಳನ್ನು ಹಾಕಿ ಬೆರೆಸಿ. ಅಕ್ಕಿ ಚೆನ್ನಾಗಿ ಬೆಂದು ಎಲ್ಲವೂ ಮಿಶ್ರಣ ಆಗುವವರೆಗೂ ಚೆನ್ನಾಗಿ ಕಲೆಸುತ್ತಿರಿ. ತಳ ಹಿಡಿಯದಂತೆ 10 ರಿಂದ 15 ನಿಮಿಷ ಕೈಯಾಡಿಸಿ. ಈಗ ನಿಮ್ಮ ಮುಂದೆ ಪಾಯಸ ರೆಡಿ. ತಣ್ಣಗಾದ ಮೇಲೆ ತುಪ್ಪದಲ್ಲಿ ಹುರಿದುಕೊಂಡ ಒಣಹಣ್ಣುಗಳು ಹಾಗೂ ನೀರಿನಲ್ಲಿ ನೆನೆಸಿಟ್ಟ ಕೇಸರಿ ದಳಗಳಿಂದ ಅಲಂಕರಿಸಿ. ಈ ಪಾಯಸ ಐಸ್‌ಕ್ರೀಮ್ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಇದು ತುಂಬಾನೇ ಸಿಂಪಲ್ ಆಗಿದ್ರೂ ಸಖತ್ ಟೇಸ್ಟಿ ಆಗಿರುವ ಪಾಯಸ. ಈ ಹಬ್ಬಕ್ಕೆ ನೀವು ಟ್ರೈ ಮಾಡಿ.
ರವೆ ಹಲ್ವಾ
ಗುರ್ ಹಲ್ವಾ ಎಂದೂ ಇದನ್ನು ಕರೆಯಲಾಗುತ್ತದೆ. ಉತ್ತರ ಭಾರತದ ಕಡೆ ಈ ಹಲ್ವಾ ಸಂಕ್ರಾಂತಿಗೆ ವಿಶೇಷ. ಇದನ್ನು ಗೋಧಿಹಿಟ್ಟಿನಿಂದ ಕೂಡ ತಯಾರಿಸಬಹುದು.
ಗುರ್ ಹಲ್ವಾ ರೆಸಿಪಿ
ಬೇಕಾಗುವ ಸಾಮಗ್ರಿಗಳು: ರವೆ, ಬೆಲ್ಲ, ತುಪ್ಪು, ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿ, ಜಾಕಾಯಿ ಪುಡಿ, ನೀರು
ರವೆ ಅಥವಾ ಗುರ್ ಹಲ್ವಾ ತಯಾರಿಸುವ ವಿಧಾನ
ಬಾದಾಮಿ ಹಾಗೂ ಪಿಸ್ತಾವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಏಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ರವೆ ಸೇರಿಸಿ ಉರಿ ಕಡಿಮೆ ಮಾಡಿ, ರವೆ ಬಣ್ಣ ಬದಲಾಗುವವರೆಗೂ ತುಪ್ಪುದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ರವೆಗೆ ಕೈಯಾಡಿಸುತ್ತಲೇ ಇರಿ, ತಳ ಹಿಡಿಯದಂತೆ ನೋಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ನೀರು ಹಾಗೂ ಬೆಲ್ಲ ಸೇರಿಸಿ ಬಿಸಿ ಕುದಿಸಿ. ಬೆಲ್ಲ ಸಂಪೂರ್ಣ ಕರಗುವವರೆಗೂ ಕೈಯಾಡಿಸಿ. ಬೆಲ್ಲ ಕರಗಿಸಿ ನಂತರ ಇದನ್ನು ಒಂದು ಪಾತ್ರೆಗೆ ಸೋಸಿ. ಈಗ ಕತ್ತರಿಸಿದ ಬಾದಾಮಿ ಹಾಗೂ ಪಿಸ್ತಾವನ್ನು ರವೆ ಜೊತೆ ಸೇರಿಸಿ ಮಿಶ್ರಣ ಮಾಡಿ. ಇದನ್ನು ಸ್ವಲ್ಪ ಹೊತ್ತು ಹುರಿದುಕೊಳ್ಳಿ. ಈ ಜಾಕಾಯಿ ಪುಡಿ ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಬೆಲ್ಲದ ಕರಗಿದ ನೀರನ್ನು ರವೆಗೆ ನಿಧಾನಕ್ಕೆ ಸುರಿಯಿರಿ. ಇದನ್ನು ಗಂಟಿಲ್ಲದಂತೆ ಮಿಶ್ರಣ ಮಾಡಿ. ಬೆಲ್ಲದ ನೀರು ಇಂಗಿ ರವೆಯ ಜೊತೆ ಮಿಶ್ರಣ ಆಗುವವರೆಗೂ ಇದನ್ನು ಚೆನ್ನಾಗಿ ಕಲೆಸುತ್ತಿರಿ. ತಳ ಹಿಡಿಯದಂತೆ ಕಲೆಸಿದ ನಂತರ ಇದನ್ನು ತಿನ್ನಲು ಕೊಡಿ. ಈ ಹಲ್ವಾ ಕೂಡ ತುಂಬಾ ಸಿಂಪಲ್ ಆಗಿದ್ದು ಬಹಳ ಬೇಗ ತಯಾರಾಗುವ ರೆಸಿಪಿ.
ಕ್ಯಾರೆಮಲ್ ಹಲ್ವಾ ರೆಸಿಪಿ
ಬೇಕಾಗುವ ಸಾಮಗ್ರಿಗಳು: ರವೆ – 1 ಕಪ್, ತುಪ್ಪ – ಅರ್ಧ ಕಪ್, ಕಾಯಿಸಿ ಆರಿಸಿದ ಹಾಲು – 2 ಕಪ್, ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಸಕ್ಕರೆ – 1 ಕಪ್, ಏಲಕ್ಕಿ ಪುಡಿ
ಕ್ಯಾರೆಮಲ್ ಹಲ್ವಾ ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ರವೆ ಹಾಗೂ ಹಾಲನ್ನು ಹಾಕಿ 10 ನಿಮಿಷಗಳ ಕಾಲ ನೆನೆಸಿಡಿ. ಈಗ ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಒಣಹಣ್ಣುಗಳನ್ನು ಸೇರಿಸಿ ಹುರಿದುಕೊಳ್ಳಿ. ಅದೇ ತುಪ್ಪಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಕರಗಿಸಿ, ಕ್ಯಾರೆಮಲ್ ಮಾಡಿಕೊಳ್ಳಿ. ಜೇನುತುಪ್ಪದ ಬಣ್ಣಕ್ಕೆ ಬಂದಾಗ ಕ್ಯಾರೆಮೆಲ್ ಆಗಿದೆ ಎಂದರ್ಥ. ಅದಕ್ಕೆ ನೆನೆಸಿಟ್ಟು ಹಾಲು, ರವೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತವ ಬಿಡುವವರೆಗೂ ಇದನ್ನು ಮಿಶ್ರಣ ಮಾಡುತ್ತಿರಿ. ಚೆನ್ನಾಗಿ ತಳ ಬಿಟ್ಟಾಗ ಏಲಕ್ಕಿ ಪುಡಿ ಸೇರಿಸಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ಒಣಹಣ್ಣುಗಳನ್ನು ಸೇರಿಸಿ ಮಿಶ್ರಣ ಮಾಡಿದರೆ ಕ್ಯಾರೆಮೆಲ್ ಹಲ್ವಾ ರೆಡಿ.
ಈ ರೆಸಿಪಿಯನ್ನು ಸುಜಾತ ಕೆಎಸ್ ಎನ್ನುವವರು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೂಡ ಅತ್ಯಂತ ಕಡಿಮೆ ಸಾಮಗ್ರಿ ಬಳಸಿ ಬಹಳ ಬೇಗ ತಯಾರಿಸಬಹುದಾದ ಸಿಹಿ ತಿನಿಸು.
