ಮಕರ ಸಂಕ್ರಾಂತಿಗೆ ನಿಮ್ಮನೆ ಮಕ್ಕಳಿಗೆ ಈ ರೀತಿ ಅಲಂಕಾರ ಮಾಡಿ, ಸಾಂಪ್ರದಾಯಿಕ ನೋಟಕ್ಕೆ ನೀಡಿ ಸ್ಟೈಲಿಶ್ ಟಚ್; ಇಲ್ಲಿದೆ ಐಡಿಯಾಗಳು
ಮಕರ ಸಂಕ್ರಾಂತಿ ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದು. ಈ ವರ್ಷ ಮಕರ ಸಂಕ್ರಾಂತಿಗೆ ನಿಮ್ಮ ಮನೆ ಮಗುವಿಗೆ ವಿಶೇಷ ಅಲಂಕಾರ ಮಾಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು. ಮಕರ ಸಂಕ್ರಾಂತಿಯಂದು ನಿಮ್ಮ ಮಗುವನ್ನು ಹೀಗೆಲ್ಲಾ ಅಲಂಕಾರ ಮಾಡಿ, ಹಬ್ಬದ ಸಂಭ್ರಮ ಹೆಚ್ಚಿಸಿ.
ದೇಶದಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ ಶುರುವಾಗಿದೆ. ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಹೌದು. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿ ಬಲು ಜೋರು. ಹೊಸ ವರ್ಷದಲ್ಲಿ ಬರುವ ಮೊದಲ ಹಬ್ಬವಿದು. ಎಳ್ಳು–ಬೆಲ್ಲ ಹಂಚಿ, ಪೊಂಗಲ್ ತಯಾರಿಸಿ, ರಂಗೋಲಿ ಬಿಡಿಸಿ ಈ ಹಬ್ಬವನ್ನು ಸಂಭ್ರಮಿಸಲಾಗುತ್ತದೆ.
ಹಬ್ಬಗಳು ಎಂದರೆ ಹೊಸ ಬಟ್ಟೆ ಧರಿಸದಿದ್ದರೆ ಹೇಗೆ ಅಲ್ವಾ, ಮಕರ ಸಂಕ್ರಾಂತಿಗೆ ಮನೆ ಮಂದಿಯೆಲ್ಲಾ ಹೊಸ ಉಡುಪುಗಳನ್ನು ಧರಿಸಿ ಸಂಭ್ರಮಿಸುವುದು ವಾಡಿಕೆ. ಅದರಲ್ಲೂ ಪುಟ್ಟ ಮಕ್ಕಳಿಗೆ ಮಕರ ಸಂಕ್ರಾಂತಿ ವಿಶೇಷ. ಈ ಮಕರ ಸಂಕ್ರಾಂತಿಗೆ ನಿಮ್ಮ ಪುಟಾಣಿ ಮಕ್ಕಳಿಗೆ ಹೇಗೆಲ್ಲಾ ಡ್ರೆಸ್ ಹಾಕಬಹುದು, ಅವರನ್ನು ಹೇಗೆಲ್ಲಾ ಅಲಂಕರಿಸಬಹುದು ಅಂತ ಯೋಚಿಸ್ತಾ ಇದ್ರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.
ಹೆಣ್ಣುಮಕ್ಕಳಿಗೆ ಡ್ರೆಸ್ ಐಡಿಯಾಗಳು
ಲಂಗ– ಬ್ಲೌಸ್
ಹಬ್ಬಗಳ ದಿನಗಳಲ್ಲಿ ಸಾಂಪ್ರದಾಯಿಕ ಉಡುಪು ತೊಡುವುದು ಸಹಜ. ಇದರೊಂದಿಗೆ ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ಸ್ಟೈಲಿಶ್ ಆಗಿಯೂ ಕಾಣಿಸಬೇಕು. ನಿಮಗೆ ಹೆಣ್ಣುಮಗು ಇದ್ದರೆ ರೇಷ್ಮೆಯ ಲಂಗ–ಬ್ಲೌಸ್ ತೊಡಿಸಬಹುದು. ಇದು ಎವರ್‌ಗ್ರೀನ್ ಉಡುಪು ಎನ್ನಿಸಿದರೂ ಇದರ ಜೊತೆ ಮೊಗ್ಗಿನ ಜಡೆ ಹಾಕಿ, ಕೈ ತುಂಬಾ ಮ್ಯಾಚಿಂಗ್ ಬಳೆ, ಕಿವಿಯೋಲೆ ಹಾಕಿಸಿ ಮಗುವನ್ನು ಈಗಿನ ಟ್ರೆಂಡ್‌ಗೆ ತಕ್ಕಂತೆ ರೆಡಿ ಮಾಡಬಹುದು. ಝರಿ ಚಿತ್ತಾರವಿರುವ ಲಂಗ ಹಾಗೂ ಬ್ಲೌಸ್ ಹೆಣ್ಣುಮಕ್ಕಳ ಅಂದವನ್ನು ಇಮ್ಮಡಿಗೊಳಿಸುತ್ತೆ.
ಹಳೆ ಸೀರೆಯಿಂದ ಲಂಗ–ಬ್ಲೌಸ್, ಹಾಫ್ ಸೀರೆ
ಹಳೆಯ ರೇಷ್ಮೆ, ಬನಾರಸಿ, ಬಾಂಧನಿ, ಇಳಕಲ್ ಮುಂತಾದ ಸೀರೆಗಳಿಂದ ಮಕ್ಕಳಿಗೆ ಚೆಂದದ ಉಡುಪುಗಳನ್ನ ಹೊಲಿಸಬಹುದು. ಹಬ್ಬಕ್ಕಿನ್ನೂ ಮೂರು ದಿನಗಳಿವೆ. ನಿಮ್ಮ ಬಳಿ ಯಾವುದಾದರೂ ಹಳೆ ಸೀರೆ ಇದ್ದರೆ ಇದರಿಂದ ಮಗುವಿಗೆ ಲಂಗ ಬ್ಲೌಸ್, ಹಾಫ್ ಸೀರೆ ಹೊಲಿಸಬಹುದು. ಇದರಿಂದ ಮಗುವಿಗೆ ಖಂಡಿತ ಖುಷಿಯಾಗುತ್ತದೆ. ಈಗೀನ ಟ್ರೆಂಡ್ ತಕ್ಕಂತೆ ಡಿಸೈನ್ ಮಾಡಿಸಿ. ಆ ಉಡುಪಿನ ಜೊತೆ ಮ್ಯಾಚಿಂಗ್ ಆಭರಣಗಳನ್ನೂ ತೊಡಿಸಿ. ಎಳ್ಳು ಬೀರುವ ಸಂಭ್ರಮದ ನಡುವೆ ಮಗುವಿಗೆ ಹೊಸ ಬಟ್ಟೆಯೂ ಖುಷಿ ನೀಡುತ್ತೆ.
ಸಾಂಪ್ರದಾಯಿಕ ರೆಡಿಮೇಡ್ ಸೀರೆ
ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸೀರೆಯ ಮೇಲೆ ಒಲವು ಜಾಸ್ತಿ. ಮನೆಯಲ್ಲಿ ಚೂಡಿದಾರದ ಶಾಲ್ ಇದ್ದರೂ ಅದನ್ನು ಸೀರೆ ರೀತಿ ಸುತ್ತಿಕೊಳ್ಳುತ್ತಾರೆ. ಈಗೀಗ ಪುಟ್ಟ ಹೆಣ್ಣುಮಕ್ಕಳಿಗೆ ಅಂದರೆ 13,14 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಉಡಲು ರೆಡಿಮೇಡ್ ಸೀರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಅದರ ಜೊತೆ ಬ್ಲೌಸ್ ಕೂಡ ಸಿದ್ಧವಾಗಿ ಬಂದಿರುತ್ತದೆ. ಈ ಮಕರ ಸಂಕ್ರಾಂತಿ ಹಬ್ಬಕ್ಕೆ ನೀವು ಮಗುವಿಗೆ ಈ ಸೀರೆ ತೊಡಿಸುವ ಮೂಲಕ ಮುದ್ದಾಗಿ ಅಲಂಕಾರ ಮಾಡಬಹುದು.
ಘಾಗ್ರಾ, ಚೋಲಿ
ಘಾಗ್ರಾ, ಚೋಲಿ ಹೆಣ್ಣುಮಕ್ಕಳ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಹಬ್ಬದಂತಹ ವಿಶೇಷ ಸಂದರ್ಭಗಳಲ್ಲಿ ಮಕ್ಕಳಿಗೆ ತೊಡಿಸಲು ಇದು ಹೇಳಿ ಮಾಡಿಸಿದ ಡ್ರೆಸ್. ಈ ಭಾರಿ ಮಕರ ಸಂಕ್ರಾಂತಿಗೆ ಸಂಪ್ರದಾಯಿಕ ಟಚ್ ನೀಡುವ ಘಾಗ್ರಾ ಚೋಲಿ ತೊಡಿಸಿ, ಅದಕ್ಕೆ ತಕ್ಕಂತೆ ಅಲಂಕಾರ ಮಾಡಿ. ನಿಮ್ಮ ಮಗಳು ರಾಣಿಯಂತೆ ಮಿಂಚುತ್ತಾಳೆ.
ಚೂಡಿದಾರ್
ಸೀರೆಯಂತೆ ಹೆಣ್ಣುಮಕ್ಕಳಿಗೆ ಚೂಡಿದಾರ್ ಕೂಡ ಎವರ್‌ಗ್ರೀನ್ ಉಡುಪು ಅಂತಲೇ ಹೇಳಬಹುದು. ಈ ಸಂಕ್ರಾಂತಿ ಹಬ್ಬಕ್ಕೆ ನಿಮ್ಮ ಮಗುವಿಗೆ ಈಗೀನ ಟ್ರೆಂಡ್ ಆಗಿರುವ ಶರಾರದಂತಹ ಚೂಡಿದಾರ್ ತೊಡಿಸಿ, ಅಲಂಕಾರ ಮಾಡಬಹುದು.
ಗಂಡುಮಕ್ಕಳಿಗೆ ಮಕರ ಸಂಕ್ರಾಂತಿ ಉಡುಪು
ಪಂಚೆ ಶರ್ಟ್
ಈ ಪುಟ್ಟ ಮಕ್ಕಳಿಗೂ ತೊಡಿಸಲು ಹೊಂದಿಕೆಯಾಗುವ ಪಂಚೆ, ಶರ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ರೆಡಿಮೇಡ್ ಡ್ರೆಸ್ ತೊಡಿಸುವುದು ಸುಲಭ. ಮನೆಯಲ್ಲಿ ಗಂಡುಮಗು ಇದ್ದರೆ ಆ ಮಗುವಿಗೆ ಈ ರೀತಿ ಪಂಚೆ ಶರ್ಟ್ ಮೇಲೊಂದು ಶಲ್ಯ ತೊಡಿಸಿ ಸಖತ್ ಆಗಿಯೇ ಕಾಣುವಂತೆ ಮಾಡಬಹುದು.
ಕಚ್ಚೆ ಪಂಚೆ, ಶೇರ್ವಾನಿ
ನಿಮ್ಮ ಗಂಡು ಮಗು ಹಬ್ಬದ ದಿನ ಮುದ್ದಾಗಿ ಕಾಣಬೇಕು ಅಂತಿದ್ದರೆ ಕಚ್ಚೆ ಪಂಚೆ ಹಾಕಿಸಿ, ಅದರ ಮೇಲೆ ಶಾರ್ಟ್ ಆಗಿರುವ ಶೇರ್ವಾನಿ ತೊಡಿಸಿ. ಇದರಿಂದ ಮಗುವಿಗೆ ಹಬ್ಬದ ಕಳೆ ಎದ್ದು ಕಾಣುತ್ತದೆ.
ಶೇರ್ವಾನಿ ಡ್ರೆಸ್
ಶೇರ್ವಾನಿ ಉಡುಪು ದೊಡ್ಡವರಿಗಷ್ಟೇ ಅಲ್ಲ ಪುಟ್ಟ ಮಗುವಿಗೂ ಮುದ್ದಾಗಿ ಕಾಣುತ್ತದೆ. ಮಕರ ಸಂಕ್ರಾಂತಿಗೆ ನಿಮ್ಮ ಗಂಡುಮಗುವಿಗೆ ಶೇರ್ವಾನಿ ಡ್ರೆಸ್ ತೊಡಿಸುವ ಜೊತೆಗೆ ಅದರೊಂದಿಗೆ ಸಂಪ್ರದಾಯಿಕ ಶೈಲಿಯ ಚಪ್ಪಲಿಯನ್ನೂ ತೊಡಿಸಿ. ಇದರಿಂದ ಮಗುವಿನ ಲುಕ್ ಹೆಚ್ಚಾಗುತ್ತದೆ.
ಜುಬ್ಬಾ, ಪ್ಯಾಂಟ್, ಕೋಟ್
ಸೀದಾ ಸಾದ ಬಿಳಿ ಬಣ್ಣದ ಪ್ಯಾಂಟ್, ಜುಬ್ಬಾ ಮೇಲೆ ಸಂಪ್ರದಾಯಿಕ ನೋಟ ಬೀರುವ ಜರಿಯ ಕೋಟ್ ತೊಡಿಸಬಹುದು. ಇದರಿಂದ ಕೂಡ ನಿಮ್ಮ ಗಂಡುಮಗುವಿನ ಅಂದ ಹೆಚ್ಚಿಸಲು ಸಾಧ್ಯವಿದೆ.