Makar Sankranti Recipes: ಮಕರ ಸಂಕ್ರಾಂತಿಗೆ ಸಿಹಿ ಗೆಣಸಿನಿಂದ ತಯಾರಿಸಬಹುದಾದ ವಿಶೇಷ ರೆಸಿಪಿಗಳು; ಹಲ್ವಾದಿಂದ ಜಾಮೂನ್‌ವರೆಗೆ
ಮಕರ ಸಂಕ್ರಾಂತಿ ಹಬ್ಬ ಬಂದ ಕೂಡಲೇ ಮಾರುಕಟ್ಟೆಯಲ್ಲಿ ಸಿಹಿ ಗೆಣಸಿನ ರಾಶಿಯನ್ನು ಕಾಣಬಹುದು. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು–ಬೆಲ್ಲ, ಕಬ್ಬಿನ ಜಲ್ಲೆಯೊಂದಿಗೆ ಸಿಹಿ ಗೆಣಸನ್ನು ಕೂಡ ಬೇಯಿಸಿ ತಿನ್ನುವುದು ಸಂಪ್ರದಾಯ. ಈ ಸಂಕ್ರಾಂತಿಗೆ ನೀವು ಸಿಹಿ ಗೆಣಸಿನಿಂದ ವಿಶೇಷ ಖಾದ್ಯಗಳನ್ನು ಮಾಡಬೇಕು ಅಂತಿದ್ರೆ ಈ ರೆಸಿಪಿಗಳನ್ನು ಟ್ರೈ ಮಾಡಿ.

ಪ್ರತಿವರ್ಷ ಜನವರಿ 14 ಅನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಇದು ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಸೂರ್ಯನ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಹಾಗೂ ತನ್ನ ಪಥವನ್ನು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನೆಡೆಗೆ ಬದಲಿಸುವ ಸಮಯವಿದು. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿ ಬಹಳ ವಿಶೇಷ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.
ಮಕರ ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲ, ಕಬ್ಬು, ಪೊಂಗಲ್ ಇದೆಲ್ಲವೂ ವಿಶೇಷ. ಇದರೊಂದಿಗೆ ಗೆಣಸು ಅಥವಾ ಗೆಣಸಿನ ಖಾದ್ಯಗಳನ್ನೂ ಕೂಡ ತಯಾರಿಸಲಾಗುತ್ತದೆ. ಈ ವರ್ಷ ಮಕರ ಸಂಕ್ರಾಂತಿಗೆ ಸುಮ್ಮನೆ ಗೆಣಸನ್ನು ಬೇಯಿಸಿ ತಿನ್ನುವ ಬದಲು ಗೆಣಸಿನಿಂದ ವಿಶೇಷ ಖಾದ್ಯಗಳನ್ನು ಮಾಡಿ ನೇವೈದ್ಯ ಮಾಡಲು ಪ್ರಯತ್ನಿಸಿ. ಸಿಹಿ ಗೆಣಸಿನಿಂದ ತಯಾರಿಸಬಹುದಾದ ಕೆಲವು ವಿಶೇಷ ರೆಸಿಪಿಗಳು ಇಲ್ಲಿವೆ ನೋಡಿ.
ಸಿಹಿ ಗೆಣಸಿನ ಹಲ್ವಾ
ಬೇಕಾಗುವ ಸಾಮಗ್ರಿಗಳು: ಸಿಹಿ ಗೆಣಸು – 2, ಸಕ್ಕರೆ – 2 ಚಮಚ, ತುಪ್ಪ– 7 ರಿಂದ 8 ಚಮಚ, ಏಲಕ್ಕಿ – 3 ರಿಂದ 4, ಕೇಸರಿ ದಳ – 10, ಗೋಡಂಬಿ – 10 ರಿಂದ 12,
ಸಿಹಿ ಗೆಣಸಿನ ಹಲ್ವಾ ತಯಾರಿಸುವ ವಿಧಾನ
ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಗೆ ನೀರು ಹಾಕಿ ಅದಕ್ಕೆ ಗೆಣಸು ಬೇಯಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಬೆಂದ ನಂತರ ನೀರು ಬಸಿದು ಗೆಣಸು ತಣ್ಣಗಾಗುವಂತೆ ಮಾಡಿ. ನಂತರ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಕೊಳ್ಳಿ.
ಈಗ ಕಡಾಯಿಯೊಂದರಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಬಿಸಿಯಾದ ಮೇಲೆ ಗೋಡಂಬಿ ಸೇರಿಸಿ ಹುರಿದುಕೊಳ್ಳಿ. ಗೋಡಂಬಿ ಬಣ್ಣ ಬದಲಾದ ಕೂಡಲೇ ಅದನ್ನು ಹೊರ ತೆಗೆಯಿರಿ. ಅದೇ ತುಪ್ಪಕ್ಕೆ ಸ್ಮ್ಯಾಶ್ ಮಾಡಿಕೊಂಡ ಸಿಹಿ ಗೆಣಸನ್ನು ಸೇರಿಸಿ. ಇದನ್ನು ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷ ಹುರಿದುಕೊಳ್ಳಿ, ಅದಕ್ಕೆ ಏಲಕ್ಕಿ ಪುಡಿ ಸೇರಿ ಮಿಶ್ರಣ ಮಾಡಿ. ನಂತರ ಹಾಲಿನಲ್ಲಿ ನೆನಸಿಟ್ಟ ಕೇಸರಿ ದಳ ಸೇರಿಸಿ ಪುನಃ ಮಿಶ್ರಣ ಮಾಡಿ. ತುಪ್ಪವು ಹಲ್ವಾದಿಂದ ಬಿಡುವವರೆಗೂ ಚೆನ್ನಾಗಿ ಮಿಶ್ರಣ ಮಾಡುತ್ತಲೇ ಇರಿ. ಸುಮಾರು 10 ರಿಂದ 12 ನಿಮಿಷ ಮಧ್ಯಮ ಉರಿಯಲ್ಲಿ ಕೈಯಾಡಿಸುತ್ತಲೇ ಇರಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ಗೋಡಂಬಿ ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಸಿಹಿ ಗೆಣಸಿನ ಹಲ್ವಾ ತಿನ್ನಲು ಸಿದ್ಧವಾಗಿದೆ.
ಸಿಹಿ ಗೆಣಸಿನ ಪಾಯಸ
ಬೇಕಾಗುವ ಸಾಮಗ್ರಿಗಳು: ಸಿಹಿ ಗೆಣಸು – 3 ರಿಂದ 4, ಹಾಲು – ಅರ್ಧ ಲೀಟರ್, ತುಪ್ಪ – 1 ಚಮಚ, ಸಕ್ಕರೆ – ಒಂದೂವರೆ ಚಮಚ, ಪುಡಿ ಮಾಡಿದ ಏಲಕ್ಕಿ – 3 ರಿಂದ 4, ಬೆಲ್ಲ – 1 ಚಮಚ
ಸಿಹಿ ಗೆಣಸಿನ ಪಾಯಸ ತಯಾರಿಸುವ ವಿಧಾನ
ಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆಯಿರಿ, ಇದನ್ನು ತುರಿಯಿರಿ. ಪ್ಯಾನ್‌ವೊಂದರಲ್ಲಿ ತುಪ್ಪ ಹಾಕಿ ಕರಗಲು ಬಿಡಿ. ತುರಿದಿಟ್ಟಕೊಂಡ ಗೆಣಸನ್ನು ತುಪ್ಪಕ್ಕೆ ಸೇರಿಸಿ, 2 ರಿಂದ 3 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ಇದು ಬಣ್ಣ ಬದಲಾದ ಕೂಡಲೇ ಸ್ಟೌ ಆಫ್ ಮಾಡಿ ಒಂದು ಪ್ಲೇಟ್‌ನಲ್ಲಿ ತೆಗೆದು ತಣ್ಣಗಾಗಲು ಬಿಡಿ. ಇನ್ನೊಂದು ಪಾತ್ರೆಗೆ ಹಾಲು ಹಾಕಿ ಕುದಿಯಲು ಬಿಡಿ. ಸುಮಾರು 8 ರಿಂದ 10 ನಿಮಿಷಗಳ ಕುದಿಸಿ, ಹಾಲು ಅರ್ಧದಷ್ಟಾಗಬೇಕು. ಆ ಸಮಯದಲ್ಲೇ ಸಕ್ಕರೆ ಹಾಗೂ ಏಲಕ್ಕಿ ಪುಡಿ ಸೇರಿಸಿ. ಸಕ್ಕರೆ ಕರಗಿದ ನಂತರ ಹಾಲಿಗೆ ಹುರಿದಿಟ್ಟಕೊಂಡ ಗೆಣಸನ್ನು ಹಾಕಿ. ಈ ಮಿಶ್ರಣ ದಪ್ಪವಾಗುವವರೆಗೂ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ಗೋಡಂಬಿ ಸೇರಿಸಿದರೆ ರುಚಿಯಾದ ಸಿಹಿ ಗೆಣಸಿನ ಪಾಯಸ ತಿನ್ನಲು ಸಿದ್ಧ.
ಗೆಣಸಿನ ರೊಟ್ಟಿ
ಬೇಕಾಗುವ ಸಾಮಗ್ರಿಗಳು: ಸಿಹಿ ಗೆಣಸಿನ ಪೇಸ್ಟ್ – 3 ರಿಂದ 4 ಗೆಣಸು ಬೇಯಿಸಿ ಪೇಸ್ಟ್ ಮಾಡಿಕೊಂಡಿದ್ದು, ಗೋಧಿಹಿಟ್ಟು – 3 ಕಪ್, ಎಣ್ಣೆ – 4 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಬಿಸಿ ನೀರು – ಮಿಶ್ರಣಕ್ಕೆ, ಸಕ್ಕರೆ – ಬೇಕಿದ್ದರೆ ಹಾಕಬಹುದು
ಸಿಹಿ ಗೆಣಸಿನ ರೊಟ್ಟಿ ಮಾಡುವ ವಿಧಾನ
ಸಿಹಿ ಗೆಣಸನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಕೊಳ್ಳಬೇಕು. ಈಗ ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ಅಗಲವಾದ ಪಾತ್ರೆಗೆ ಗೋಧಿಹಿಟ್ಟು, ಸ್ಮಾಶ್ ಮಾಡಿಕೊಂಡ ಗೆಣಸು, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಿಹಿ ಗೆಣಸು ತುಂಬಾ ಸಿಹಿಯಾಗಿದ್ದರೆ ಸಕ್ಕರೆ ಹಾಕಲು ಹೋಗಬೇಡಿ. ಈ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ಬಿಸಿ ನೀರು ಸೇರಿಸಿ ಚಪಾತಿ ಹಿಟ್ಟಿನಂತೆ ನಾದಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ. ನಂತರ ಚಪಾತಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ತವಾ ಬಿಸಿ ಮಾಡಿ ತುಪ್ಪ ಅಥವಾ ಎಣ್ಣೆ ಸವರಿ ರೊಟ್ಟಿಯನ್ನು ಎರಡೂ ಕಡೆ ಕಾಯಿಸಿ. ಈ ನಿಮ್ಮ ಮುಂದೆ ಸಖತ್ ಟೇಸ್ಟಿ ಆಗಿರೋ ಗೆಣಸಿನ ರೊಟ್ಟಿ ತಿನ್ನಲು ಸಿದ್ಧ.
ಸಿಹಿ ಗೆಣಸಿನ ಜಾಮೂನು
ಬೇಕಾಗುವ ಸಾಮಗ್ರಿಗಳು: ಸಿಹಿಗೆಣಸು – 2 ಸ್ಮ್ಯಾಶ್ ಮಾಡಿಕೊಂಡಿದ್ದು, ಮೈದಾ ಹಿಟ್ಟು – 2 ಕಪ್, ಉಪ್ಪು – ರುಚಿಗೆ, ಸಕ್ಕರೆ – 2 ರಿಂದ 3 ಚಮಚ, ಎಣ್ಣೆ – ಕರಿಯಲು
ಸಕ್ಕರೆ ಪಾನಕಕ್ಕೆ: ಸಕ್ಕರೆ – 2 ಕಪ್, ನೀರು – 1ಕಪ್, ಏಲಕ್ಕಿ – 2 (ಪುಡಿ ಮಾಡುವುದು), ರೋಸ್ ವಾಟರ್ – ಒಂದೆರಡು ಹನಿ, ಕೇಸರಿ – ಸ್ವಲ್ಪ, ಪಿಸ್ತಾ ಚೂರುಗಳು – ಸ್ವಲ್ಪ
ಗೆಣಸಿನ ಜಾಮೂನ್ ಮಾಡುವ ವಿಧಾನ
ಸಿಹಿ ಗೆಣಸನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆಯಿರಿ. ಇದನ್ನು ಸ್ಮ್ಯಾಶ್ ಮಾಡಿ ಅಥವಾ ಮಿಕ್ಸಿನಲ್ಲಿ ಒಂದು ಸುತ್ತು ರುಬ್ಬಿಕೊಳ್ಳಿ. 2 ಕಪ್ ಸಿಹಿಗೆಣಸಿನ ಪ್ಯೂರಿ ರೆಡಿ ಮಾಡಿಕೊಳ್ಳಿ. ಅದಕ್ಕೆ ಉಪ್ಪು ಹಾಗೂ ಮೈದಾಹಿಟ್ಟು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದರಿಂದ ನಯವಾದ ಹಿಟ್ಟು ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ರೋಲ್ ಮಾಡಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಉಂಡೆ ಬಿರುಕು ಬಾರದಂತೆ ಚೆನ್ನಾಗಿ ತಿರುವಬೇಕು. ಈಗ ಪ್ಯಾನ್‌ವೊಂದರಲ್ಲಿ ನೀರು ಹಾಗೂ ಸಕ್ಕರೆ ಹಾಕಿ, ಇದನ್ನು ಬಿಸಿ ಮಾಡಿ ಕುದಿಯಲು ಬಿಡಿ. 5 ನಿಮಿಷಗಳ ಕಾಲ ಕುದಿದ ಬಳಿಕ ಸಕ್ಕರೆ ಪಾಕ ಎಳೆ ಎಳೆಯಾಗಿ ಬಂದಿದೆಯೇ ಗಮನಿಸಿ. ಅದಕ್ಕೆ ಏಲಕ್ಕಿ, ಕೇಸರಿ ಹಾಗೂ ರೋಸ್‌ವಾಟರ್ ಸೇರಿಸಿ ಕುದಿಸಿ. ಇದನ್ನು ಒಂದು ಅಗಲ ಪಾತ್ರೆಯಲ್ಲಿ ತೆಗೆದಿರಿಸಿ. ನಂತರ ಎಣ್ಣೆ ಕಾಯಲು ಬಿಡಿ. ಎಣ್ಣೆ ಚೆನ್ನಾಗಿ ಕಾದ ನಂತರ ಜಾಮೂನ್ ಉಂಡೆಗಳನ್ನು ಕೆಂಬಣ್ಣ ಬರುವವರೆಗೂ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಹೊರ ತೆಗೆದು ಸಕ್ಕರೆ ಪಾಕದಲ್ಲಿ ಹಾಕಿ, 30 ನಿಮಿಷಗಳ ಕಾಲ ಬಿಡಿ. ಈಗ ನಿಮ್ಮ ಮುಂದೆ ರುಚಿಯಾದ ಸಿಹಿ ಗೆಣಸಿನ ಗುಲಾಬ್ ಜಾಮೂನ್ ತಿನ್ನಲು ಸಿದ್ಧ.
