ಮಕರ ಸಂಕ್ರಾಂತಿ ವಿಶೇಷ; ಸಂಪ್ರದಾಯದ ಭಾಗವಷ್ಟೇ ಅಲ್ಲ, ಎಳ್ಳು–ಬೆಲ್ಲ ತಿನ್ನುವುದರಿಂದ ಆರೋಗ್ಯಕ್ಕೂ ಇದೆ ಹತ್ತಾರು ಪ್ರಯೋಜನ
ಮಕರ ಸಂಕ್ರಾಂತಿ ಎಂದರೆ ಎಳ್ಳು–ಬೆಲ್ಲ ನೆನಪಾಗುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳುತ್ತಾರೆ. ಎಳ್ಳು–ಬೆಲ್ಲ ತಿನ್ನುವುದು ಕೇವಲ ಸಂಪ್ರದಾಯ, ಆಚರಣೆಯ ಭಾಗವಷ್ಟೇ ಅಲ್ಲ, ಇದರಿಂದ ಆರೋಗ್ಯಕ್ಕೂ ಇದೆ ಸಾಕಷ್ಟು ಪ್ರಯೋಜನ. ಸಂಕ್ರಾಂತಿ ಸಮಯದಲ್ಲಿ ಎಳ್ಳು–ಬೆಲ್ಲದ ಪ್ರಯೋಜನ ತಿಳಿಯೋಣ.
ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿದೆ. ಹೊಸ ವರ್ಷ ಮೊದಲ ಹಾಗೂ ಹಿಂದೂಗಳು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿ ಸಮಯದಲ್ಲಿ ಎಳ್ಳು–ಬೆಲ್ಲ ಹಂಚುವ ಪದ್ಧತಿ ಇದೆ. ಆತ್ಮೀಯರಿಗೆ ಎಳ್ಳು–ಬೆಲ್ಲ ನೀಡುವ ಮೂಲಕ ಒಳ್ಳೆಯದಾಗಲಿ ಎಂದು ಹರಸುತ್ತಾರೆ.
ಮಕರ ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲ ಸಂಪ್ರದಾಯದ ಭಾಗವಾಗಿದ್ದರೂ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಇದೆ ಸಾಕಷ್ಟು ಪ್ರಯೋಜನ. ಈ ಎರಡರಲ್ಲೂ ಸಾಕಷ್ಟು ಪೋಷಕಾಂಶಗಳಿದ್ದು, ಇದು ದೇಹಕ್ಕೆ ಉತ್ತಮ. ಹಾಗಾದರೆ ಎಳ್ಳು–ಬೆಲ್ಲ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಎಳ್ಳು–ಬೆಲ್ಲ ಏಕೆ ತಿನ್ನಬೇಕು?
ಸಾಮಾನ್ಯವಾಗಿ ಮಕರ ಸಂಕ್ರಾಂತಿ ಸಮಯದಲ್ಲಿ ಚಳಿ ಜೋರಿರುತ್ತದೆ. ಇದು ಚಳಿಗಾಲವಾದ ಕಾರಣ ದೇಹವನ್ನು ಬೆಚ್ಚಗಿಡುವುದು ಅತ್ಯಗತ್ಯ. ಎಳ್ಳು ಹಾಗೂ ಬೆಲ್ಲವು ದೇಹದಲ್ಲಿ ಶಾಖ ಹಾಗೂ ಶಕ್ತಿಯನ್ನು ಉತ್ಪಾದಿಸುತ್ತವೆ. ಎಳ್ಳಿನಲ್ಲಿ ಎಣ್ಣೆ ಅಂಶ ಸಮೃದ್ಧವಾಗಿದೆ ಮತ್ತು ಪ್ರೊಟೀನ್, ಕ್ಯಾಲ್ಸಿಯಂ, ಬಿ ಕಾಂಪ್ಲೆಕ್ಸ್ ಮತ್ತು ಕಾರ್ಬೋಹೈಡ್ರೇಟ್ ಇತ್ಯಾದಿಗಳನ್ನು ಹೊಂದಿರುತ್ತದೆ. ಬೆಲ್ಲ ಬಿಸಿ ಸ್ವಭಾವವನ್ನು ಹೊಂದಿದೆ. ಎಳ್ಳು ಮತ್ತು ಬೆಲ್ಲವನ್ನು ಬೆರೆಸಿ ತಯಾರಿಸುವ ಲಡ್ಡುಗಳು ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಶಾಖವನ್ನು ತರುತ್ತವೆ. ಅಂದರೆ ಎಳ್ಳು ಮತ್ತು ಬೆಲ್ಲ ದೇಹಕ್ಕೆ ಉಷ್ಣತೆ ನೀಡಿ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಈ ಕಾರಣಕ್ಕಾಗಿಯೇ ಮಕರ ಸಂಕ್ರಾಂತಿಗೆ ಎಳ್ಳು ಬೆಲ್ಲ ಹಂಚಲಾಗುತ್ತದೆ.
ಎಳ್ಳು ಬೆಲ್ಲ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರದಲ್ಲಿರುತ್ತದೆ. ಇದು ಮೂಳೆಗಳ ಬಲವರ್ಧನೆಗೂ ಸಹಕಾರಿ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಚಳಿಎಗಾಲದಲ್ಲಿ ಸಂಧಿವಾತದಂತಹ ನೋವನ್ನು ನಿವಾರಿಸುತ್ತದೆ. ಜೊತೆಗೆ ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ಚಳಿಗಾಲದ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ.
ಎಳ್ಳಿನ ಆರೋಗ್ಯ ಪ್ರಯೋಜನಗಳು
- ಎಳ್ಳಿನಲ್ಲಿ ಸಾಕಷ್ಟು ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ
- ಅಧ್ಯಯನಗಳ ಪ್ರಕಾರ ಎಳ್ಳು ಎಲ್‌ಡಿಎಲ್ ಎಂದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟ್ರೈಗ್ಲಿಸರೈಡ್ ಅಂಶವನ್ನು ಹೆಚ್ಚಿಸಲು ನೆರವಾಗುತ್ತದೆ.
- ಎಳ್ಳು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ.
- ಇದರಲ್ಲಿ ಪ್ರೊಟೀನ್ ಹಾಗೂ ಅಗತ್ಯ ಅಮೈನೊ ಆಮ್ಲಗಳ ಪ್ರಮಾಣ ಹೆಚ್ಚಿದೆ.
- ಎಳ್ಳಿನಲ್ಲಿ ಮೆಗ್ನೀಶಿಯಂ ಅಂಶ ಹೇರಳವಾಗಿದ್ದು, ಇದು ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ.
- ಎಳ್ಳಿನಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಅಂಶವಿದ್ದು, ಇದು ಮೂಳೆಗಳನ್ನು ಸದೃಢವಾಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Winter Health: ಚಳಿಗಾಲದಲ್ಲಿ ಎಳ್ಳು, ಬೆಲ್ಲ ತಿನ್ನೋದ್ರಿಂದ ಒಂದಲ್ಲ ಎರಡಲ್ಲ ಆರೋಗ್ಯಕ್ಕಿದೆ ನೂರಾರು ಪ್ರಯೋಜನ
ಬೆಲ್ಲದ ಆರೋಗ್ಯ ಪ್ರಯೋಜನಗಳು
- ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ದೇಹದಲ್ಲಿರುವ ವಿಷಾಂಶಗಳನ್ನು ಹೊರ ಹಾಕಲು ನೆರವಾಗುತ್ತದೆ.
- ಬೆಲ್ಲವು ವಿಟಮಿನ್, ಮಿನರಲ್ಸ್, ಕ್ಯಾಲ್ಸಿಯಂ, ಜಿಂಕ್, ಪೊಟ್ಯಾಶಿಯಂಗಳ ಸಮೃದ್ಧ ಮೂಲವಾಗಿದೆ.
- ಇದು ಅಲರ್ಜಿ ವಿರೋಧಿ ಗುಣವನ್ನು ಹೊಂದಿದ್ದು, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
- ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)