ಮಕರ ಸಂಕ್ರಾಂತಿ ಕಳೆ ಹೆಚ್ಚಿಸುವ ಸಾಂಪ್ರಾದಾಯಿಕ ಧಿರಿಸುಗಳು; ಈ ಹಬ್ಬಕ್ಕೆ ಹೀಗೆಲ್ಲಾ ರೆಡಿ ಆಗಬಹುದು ನೋಡಿ
Makar Sankranti: ಮಕರ ಸಂಕ್ರಾಂತಿ ಆಚರಣೆಗೆಯ ಜನರು ಸಕಲ ತಯಾರಿ ನಡೆಸುತ್ತಿದ್ದಾರೆ. ಹಬ್ಬ ಬಂತೆಂದರೆ ಸಾಕು ಹೆಣ್ಮಕ್ಕಳ ತಯಾರಿ ಜೋರಾಗಿರುತ್ತದೆ. ಅದು ಅಡುಗೆ ಮನೆಯಿಂದ ಹಿಡಿದು ತಾವು ಧರಿಸುವ ಉಡುಪಿನವರೆಗೆ ಹಬ್ಬದ ಸಂಭ್ರಮ ಕಳೆಗಟ್ಟಿರುತ್ತದೆ. ಮಹಿಳೆಯರು, ಮಕ್ಕಳು ಮಾತ್ರವಲ್ಲ ಪುರುಷರು ಕೂಡ ಸಾಂಪ್ರದಾಯಿಕ ಧಿರಿಸು ತೊಟ್ಟು ಹಬ್ಬಕ್ಕೆ ಹೊಸ ಕಳೆ ತರುತ್ತಾರೆ.

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆಯ ಜನರು ಸಕಲ ತಯಾರಿ ನಡೆಸುತ್ತಿದ್ದಾರೆ. ದೇಶದೆಲ್ಲೆಡೆ ಸಂಕ್ರಾಂತಿಯನ್ನು ವಿವಿಧ ಹೆಸರಿನಿಂದ ಆಚರಿಸಲಾಗುತ್ತದೆ. ಪ್ರತಿಯೊಂದು ರಾಜ್ಯದಲ್ಲೂ ಈ ಸುಗ್ಗಿಯ ಹಬ್ಬವನ್ನು ವಿಶಿಷ್ಟ ಸಂಪ್ರದಾಯದಿಂದ ಆಚರಿಸುತ್ತಾರೆ. ಗುಜರಾತ್‌ನಲ್ಲಿ ವರ್ಣರಂಜಿತ ಗಾಳಿಪಟ ಹಾರಿಸುವ ಸ್ಪರ್ಧೆಗಳಿಂದ ತಮಿಳುನಾಡಿನ ಸಾಂಪ್ರದಾಯಿಕ ಸುಗ್ಗಿಯ ಹಬ್ಬಗಳವರೆಗೆ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿ ಅಂದ್ರೆ ಎಳ್ಳು-ಬೆಲ್ಲ ಬೀರುವುದು ಮಾತ್ರವಲ್ಲ, ಇನ್ನೊಂದು ಆಸಕ್ತಿಯ ವಿಚಾರವೆಂದರೆ ಹಬ್ಬದಲ್ಲಿ ವಿವಿಧ ರಾಜ್ಯಗಳಲ್ಲಿ ಜನರು ಧರಿಸುವ ಸಾಂಪ್ರದಾಯಿಕ ಬಟ್ಟೆಗಳು.
ಹಬ್ಬ ಬಂತೆಂದರೆ ಸಾಕು ಹೆಣ್ಮಕ್ಕಳ ತಯಾರಿ ಜೋರಾಗಿರುತ್ತದೆ. ಅದು ಅಡುಗೆ ಮನೆಯಿಂದ ಹಿಡಿದು ತಾವು ಧರಿಸುವ ಉಡುಪಿನವರೆಗೆ ಹಬ್ಬದ ಸಂಭ್ರಮ ಕಳೆಗಟ್ಟಿರುತ್ತದೆ. ಮಹಿಳೆಯರು, ಮಕ್ಕಳು ಮಾತ್ರವಲ್ಲ ಪುರುಷರು ಕೂಡ ಸಾಂಪ್ರದಾಯಿಕ ಧಿರಿಸು ತೊಟ್ಟು ಹಬ್ಬಕ್ಕೆ ಹೊಸ ಕಳೆ ತರುತ್ತಾರೆ. ಹಬ್ಬಕ್ಕೆ ಪ್ರಾದೇಶಿಕ ಪದ್ಧತಿಗಳನ್ನು ಅವಲಂಬಿಸಿ ಮಕ್ಕಳು ವಿವಿಧ ರೀತಿಯ ಸಾಂಪ್ರದಾಯಿಕ ಮತ್ತು ಹಬ್ಬದ ಉಡುಪುಗಳನ್ನು ಧರಿಸಬಹುದು. ಯಾವ ರೀತಿಯ ಉಡುಗೆ ತೊಡಬಹುದು ಎಂಬುದು ಇಲ್ಲಿದೆ.
ಹಬ್ಬಕ್ಕೆ ಹೆಣ್ಣು ಮಕ್ಕಳು ಧರಿಸಬಹುದಾದ ಉಡುಪು
ಹೆಣ್ಣು ಮಕ್ಕಳು ಹಬ್ಬಕ್ಕೆ ಲೆಹೆಂಗಾ ಚೋಲಿ ಧರಿಸಬಹುದು. ರವಿಕೆ (ಬ್ಲೌಸ್), ಪಾದದವರೆಗೆ ತಾಗುವ ಲಂಗ (ಸ್ಕರ್ಟ್), ಜತೆಗೆ ದುಪ್ಪಟ್ಟಾವನ್ನು ಧರಿಸಬಹುದು. ಹತ್ತಿ ಅಥವಾ ರೇಷ್ಮೆಯಿಂದ ಕಸೂತಿ ಮಾಡಲಾದ ಲೆಹೆಂಗಾ ಧರಿಸಿದರೆ ಮಕ್ಕಳಿಗೆ ಚೆನ್ನಾಗಿ ಒಪ್ಪುತ್ತದೆ. ನೆಟೆಡ್‍ನಲ್ಲೂ ಇಂತಹ ಉಡುಪುಗಳು ಇಂದು ಸಾಕಷ್ಟು ಲಭ್ಯವಿದೆ.
ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕವಾಗಿ ತೊಡಲಾಗುವ ಸೀರೆಯಿಂದ ಹೊಲಿಗೆ ಮಾಡಿರುವ ರವಿಕೆ ಹಾಗೂ ಉದ್ದನೆಯ ಲಂಗವನ್ನು ತೊಡಬಹುದು. ಇದು ಕೂಡ ಚೆನ್ನಾಗಿ ಕಾಣುತ್ತದೆ. ಕೆಲವರು ಇದಕ್ಕಾಗಿ ಹೊಸ ಸೀರೆಯನ್ನು ಖರೀದಿಸಿ ಮಕ್ಕಳಿಗೆ ಹೊಲಿಸಿದರೆ, ಇನ್ನೂ ಕೆಲವರು ತಮಗೆ ಬೇಡದ ಸೀರೆಯಲ್ಲಿ ಮಕ್ಕಳ ಉಡುಪು ತಯಾರಿಸುತ್ತಾರೆ.
ಅಲ್ಲದೆ ಇತ್ತೀಚಿಗೆ ಮಾಡಲಾದ ವಿನ್ಯಾಸವನ್ನು ಕೂಡ ಧರಿಸಬಹುದು. ಅನಾರ್ಕಲಿ ಉಡುಗೆ, ಮಕ್ಕಳಿಗೆಂದೇ ವಿಭಿನ್ನ ಶೈಲಿಯಲ್ಲಿ ಚೂಡಿದಾರ್‌ಗಳು ಲಗ್ಗೆಯಿಟ್ಟಿವೆ. ಮಕ್ಕಳು ಇಂತಹ ಉಡುಗೆಯನ್ನು ಇಷ್ಟಪಡುತ್ತಾರೆ.
ಬಟ್ಟೆಯ ಜೊತೆ ಜ್ಯುವೆಲ್ಲರಿಗಳನ್ನು ಕೂಡ ಹಾಕಿದ್ರೆ ಇನ್ನೂ ಸೊಗಸಾಗಿ ಕಾಣುತ್ತಾರೆ. ಕುತ್ತಿಗೆಗೆ ನೆಕ್ಲೇಸ್ ಅಥವಾ ಚೋಕರ್ ಹಾಕಬಹುದು. ಕೈಗೆ ಚಿನ್ನದ ಬಣ್ಣದ ಬಳೆಗಳು ಅದರಲ್ಲಿ ಸ್ಟೋನ್‌ಗಳಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತದೆ. ಹಣೆಗೆ ಚಿಕ್ಕ ಬೊಟ್ಟು. ತಲೆಗೆ ಬೈತಲೆ ಇಟ್ಟರೆ ಇನ್ನೂ ಚಂದ.
ಗಂಡು ಮಕ್ಕಳು ಧರಿಸಬಹುದಾದ ಉಡುಗೆಗಳು
ದಕ್ಷಿಣ ಭಾರತದಲ್ಲಿ ಮಕ್ಕಳಿಗೂ ಕೂಡ ದೊಡ್ಡವರಂತೆ ಪಂಚೆ, ಶರ್ಟ್ ಹಾಕುವುದು ಸಾಮಾನ್ಯ. ಬಿಳಿ ಪಂಚೆ, ಬಿಳಿ ಶರ್ಟ್ ಅಥವಾ ಬೇರೆ ಯಾವುದೇ ಬಣ್ಣದ ಶರ್ಟ್ ತೊಡಬಹುದು. ಹಾಗೆಯೇ ಹೆಗಲ ಮೇಲೆ ಒಂದು ಬಿಳಿ ಬಣ್ಣದ ಶಾಲು ಹಾಕಿದ್ರೆ ಪರಿಪೂರ್ಣವಾದಂತೆ. ಹಾಗೆಯೇ ಶೆರ್ವಾನಿ, ಕುರ್ತಾ ಮತ್ತು ಪೈಜಾಮವನ್ನು ಸಹ ಧರಿಸಬಹುದು. ಕುರ್ತಾ (ಚೂಡಿದಾರ್ ಟಾಪ್‍ನಂತೆ) ಮತ್ತು ಪೈಜಾಮ (ಅಗಲದ ಪ್ಯಾಂಟ್) ಅನ್ನು ಮಕ್ಕಳು ಧರಿಸಬಹುದು. ಇದು ಮಕ್ಕಳಿಗೆ ಧರಿಸಲು ಆರಾಮದಾಯಕವಾಗಿರುತ್ತದೆ. ಇದಕ್ಕೆ ಸ್ಟೈಲಿಶ್ ಜಾಕೆಟ್ ಕೂಡ ತೊಡಬಹುದು.
ಗಂಡು ಮಕ್ಕಳಿಗೆ ಅಷ್ಟೊಂದು ಜ್ಯುವೆಲ್ಲರಿಯ ಅವಶ್ಯಕತೆ ಇರುವುದಿಲ್ಲ. ಕುತ್ತಿಗೆಗೆ ಒಂದು ಸರ (ಉದ್ದನೆಯ ನೆಕ್ಲೇಸ್), ಕೈಗೆ ಬ್ರ್ಯಾಸ್‌ಲೆಟ್ ಹಾಕಬಹುದು. ಹಾಗೆಯೇ ಕಾಲಿಗೆ ಸಾಂಪ್ರಾದಾಯಿಕ ಪಾದರಕ್ಷೆಗಳನ್ನು ತೊಟ್ಟರೆ ಚೆನ್ನಾಗಿ ಕಾಣುತ್ತದೆ.
ಹಬ್ಬಕ್ಕೆ ಮಹಿಳೆಯರು ಹಾಗೂ ಪುರುಷರು ತೊಡಬಹುದಾದ ಉಡುಪುಗಳು
ಹಬ್ಬಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸಾಂಪ್ರದಾಯಿಕ ಉಡುಪುಗಳನ್ನೇ ಹೆಚ್ಚಾಗಿ ತೊಡುತ್ತಾರೆ. ಮುಖ್ಯವಾಗಿ ಕರ್ನಾಟಕದಲ್ಲಿ ಪುರುಷರು ಲುಂಗಿ, ಧೋತಿ, ಕುರ್ತಾ ಧರಿಸಬಹುದು. ಮಹಿಳೆಯರು ಸೀರೆ ಅಥವಾ ಸಲ್ವಾರ್-ಕಮೀಜ್ ಧರಿಸುತ್ತಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪುರುಷರು ಧೋತಿ-ಕುರ್ತಾ ಅಥವಾ ಲುಂಗಿಯಂತಹ ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಾರೆ. ಮಹಿಳೆಯರು ಸೀರೆ ಅಥವಾ ಸಲ್ವಾರ್-ಕಮೀಜ್ ಧರಿಸುತ್ತಾರೆ. ಯಾವ ಬಣ್ಣದ ಸೀರೆ ಧರಿಸಬಹುದು ಎಂದು ಯೋಚಿಸುತ್ತಿದ್ದರೆ, ಹಳದಿ, ಹಸಿರು ಮತ್ತು ಗೋಲ್ಡನ್ (ಚಿನ್ನದ) ಬಣ್ಣಗಳು ಸಂಕ್ರಾಂತಿ ಆಚರಣೆಯ ಸಮಯದಲ್ಲಿ ಬಹಳ ಜನಪ್ರಿಯವಾಗಿದೆ.
ಇನ್ನು ಗುಜರಾತ್‌ನಲ್ಲಿ ಪುರುಷರು ಕುರ್ತಾ-ಪೈಜಾಮ ಅಥವಾ ಧೋತಿ-ಕುರ್ತಾದಂತಹ
ಸಾಂಪ್ರದಾಯಿಕ ಉಡುಪನ್ನು ಧರಿಸಿದ್ರೆ, ಮಹಿಳೆಯರು ವರ್ಣರಂಜಿತ ಸೀರೆ ಅಥವಾ ಚನಿಯಾ ಚೋಲಿಗಳನ್ನು ಧರಿಸುತ್ತಾರೆ. ಹಾಗೆಯೇ ಮೇಕಪ್ ಕೂಡ ಅತಿಯಾಗಿ ಮಾಡಬೇಕೆಂದಿಲ್ಲ. ಸರಳವಾಗಿ ಹಾಕಿದರೆ ಸಾಕು.
ಚಳಿಗಾಲವಾದ್ದರಿಂದ ಮುಖಕ್ಕೆ ಮಾಯಿಶ್ಚರೈಸರ್ ಬೇಕೆ ಬೇಕು. ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ ನಂತರ ಸ್ವಲ್ಪ ಫೌಂಡೇಶನ್ ಕ್ರೀಮ್, ಬೇಕಿದ್ದರೆ ಕನ್ಸೀಲರ್ ಹಾಕಬಹುದು. ನಂತರ ಕಾಂಪ್ಯಾಕ್ಟ್ ಪೌಡರ್, ತುಟಿಗೆ ಲಿಪ್‍ಸ್ಟಿಕ್, ಕಣ್ಣಿಗೆ ಐ ಲೈನರ್ (ಕಾಡಿಗೆ), ಹಣೆಗೊಂದು ಬೊಟ್ಟು ಇಟ್ಟರೆ ತುಂಬಾ ಚೆನ್ನಾಗಿ ಕಾಣುವಿರಿ. ಹಬ್ಬಕ್ಕೆ ನೆಂಟರಿಷ್ಟರು ಬರುವುದರಿಂದ ಬಹಳ ಬೇಗನೆ ಸಿದ್ಧವಾಗಬಹುದು.
ಮಕರ ಸಂಕ್ರಾಂತಿಯು ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಆಚರಿಸುವ ಹಬ್ಬವಾಗಿದೆ. ಹಬ್ಬದ ಸಂದರ್ಭದಲ್ಲಿ ಧರಿಸುವ ಸಾಂಪ್ರದಾಯಿಕ ಉಡುಪುಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕತೆಯೊಂದಿಗೆ ಸಂಪ್ರದಾಯವನ್ನು ಬೆರೆಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸಂಕ್ರಾಂತಿ ಎಂದರೆ ಪ್ರಕಾಶಮಾನವಾದ ಬಣ್ಣಗಳು ಮತ್ತು ಸಂತೋಷದಾಯಕ ಆಚರಣೆಯ ಸಮಯ. ಆದ್ದರಿಂದ ನೀವು ಧರಿಸುವ ಬಟ್ಟೆಗಳು ಹಬ್ಬದ ಉತ್ಸಾಹವನ್ನು ಪ್ರತಿಬಿಂಬಿಸುವಂತಿರಬೇಕು.

ವಿಭಾಗ