5 ಸಾವಿರಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆ ನೀಡಿದ ರೋಸಿ ಎಂಬ ಮಹಾತಾಯಿಯ ಹೃದಯಸ್ಪರ್ಶಿ ಕಥೆ ಹಂಚಿಕೊಂಡ ರಂಗಸ್ವಾಮಿ ಮೂಕನಹಳ್ಳಿ
Mama Rosie: ರಂಗಸ್ವಾಮಿ ಮೂಕನಹಳ್ಳಿ ಬರಹ: ಕೇಪ್‌ಟೌನ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ಆಸರೆ ನೀಡಿರುವ ರೋಸಿ ಎಂಬ ಮಹಾತಾಯಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ರಂಗಸ್ವಾಮಿ ಮೂಕನಹಳ್ಳಿ ಹೃದಯಸ್ಪರ್ಶಿ ಬರಹ ಬರೆದಿದ್ದಾರೆ.
ಆಕೆಯ ಹೆಸರು Rosie Mashale. ಇವತ್ತಿಗೆ ಆಕೆ 'Mama rosie' ಎನ್ನುವ ಹೆಸರು ಪಡೆದಿದ್ದಾರೆ. ಸೌತ್ ಆಫ್ರಿಕಾದ ನಗರ ಒಂದರಲ್ಲಿ ವಾಸಿಸುತ್ತಿದ್ದ ಈಕೆ ಕೇಪ್ ಟೌನ್‌ಗೆ ವಲಸೆ ಬಂದಾಗ ಅಲ್ಲಿನ ಬೀದಿ ಬದಿಯ ಮಕ್ಕಳನ್ನು ನೋಡುತ್ತಾರೆ. ತುತ್ತಿನ ಚೀಲ ತುಂಬಿಸಲು ರಸ್ತೆ ಬದಿಯಲ್ಲಿ ಅಳಿದುಳಿದು ಬಿಸಾಡಿದ ಆಹಾರ ಹೆಕ್ಕಿ ತಿನ್ನುವ ಈ ಮಕ್ಕಳು ಈಕೆಯ ಅಂತಃಕರಣವನ್ನ ಕಲುಕುತ್ತದೆ .
1989ರ ಒಂದು ದಿನ ಮನೆ ಮುಂದೆ ಇದ್ದ ಇಂತ ಹತ್ತಾರು ಮಕ್ಕಳ ಮನೆಗೆ ಕರೆಯುತ್ತಾರೆ. ಅವರೊಂದಿಗೆ ಹಾಡು - ಕುಣಿತ ಮುಗಿಸಿ ತಿನ್ನಲು ಬ್ರೆಡ್ ಕೊಟ್ಟು ಕಳಿಸುತ್ತಾರೆ . ಇದು ಪರಿಪಾಠ ಆಗುತ್ತೆ . ಅನಾಥ ಮಕ್ಕಳ ಡೇ ಕೇರ್ ಸೆಂಟರ್ ಆಗುತ್ತದೆ .
ಇದಾಗಿ ಹತ್ತು ವರ್ಷದ ನಂತರ ಅಂದರೆ 2000ನೇ ಇಸವಿಯಲ್ಲಿ ಇದಕ್ಕೆಲ್ಲ ಇತಿಶ್ರೀ ಹೇಳಿ ರಿಟೈರ್ ಆಗಲು ಬಯಸುತ್ತಾರೆ. ಆದರೆ ವಿಧಿಯಾಟವೇ ಬೇರೆ ಇತ್ತು . ಈಕೆಯ ಮನೆಯ ಬಾಗಿಲಿನಲ್ಲಿ ಮೈಯಲ್ಲಿ ಹುಣ್ಣಾಗಿರುವ ಹಸುಗೂಸು ಮಲಗಿಸಿ ಹೋಗಿರುತ್ತಾರೆ . ರೋಸಿ ಮನಸ್ಸು ಮತ್ತೆ ಕರಗುತ್ತದೆ ಆ ಮಗುವನ್ನ ನೋಡಿಕೊಳ್ಳಲು ಶುರು ಮಾಡುತ್ತಾರೆ . ಈ ವಿಷಯ ಕಾಳ್ಗಿಚ್ಚಿನಂತೆ ಹಬ್ಬುತ್ತದೆ , ಇವರ ಮನೆ ಮುಂದೆ ಮಕ್ಕಳ ಮಲಗಿಸಿ ಹೋಗುವರ ಸಂಖ್ಯೆ ಹೆಚ್ಚುತ್ತದೆ. ಇಂದಿಗೆ ಈಕೆ ಐದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಆಸರೆ ನೀಡಿದ ಮಹಾತಾಯಿ!.
ಯೂನಿಸೆಫ್ ವರದಿಯ ಪ್ರಕಾರ 3.7 ದಶಲಕ್ಷ ಅನಾಥ ಮಕ್ಕಳು ಸೌತ್ ಆಫ್ರಿಕಾದಲ್ಲಿ ಇದ್ದಾರಂತೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಮಕ್ಕಳ ತಂದೆ ತಾಯಿ ಏಡ್ಸ್ ಎನ್ನುವ ಮಹಾಮಾರಿಗೆ ತುತ್ತಾಗಿ ಸತ್ತಿದ್ದಾರೆ. ರೋಸಿ ಬಳಿಯಿರುವ ಮಕ್ಕಳು ಕೂಡ ಅಂತವರೆ !.
ಹೌದು ಇಷ್ಟೊಂದು ದೊಡ್ಡ ಸಂಸ್ಥೆ ನೆಡೆಸಲು ಹಣ ಹೇಗೆ ಬರುತ್ತದೆ ? ಎನ್ನುವ ಪ್ರಶ್ನೆಗೆ ರೋಸಿ 'ನಾನು ಭಗವಂತನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ , ಎಷ್ಟು ಮಕ್ಕಳು ನನ್ನ ಬಳಿ ಬರುತ್ತಾರೋ ಅವರಿಗೆ ಅನ್ನ ನೀಡುವಷ್ಟು ಶಕ್ತಿ ನೀಡು ಎಂದು. ಅದು ಅವನಿಗೆ ಕೇಳಿಸಿದೆ ಜನ ತಾವಾಗೇ ಕೇಳದೆ ಬಂದು ಹಣ ನೀಡುತ್ತಾರೆ ಬದುಕಿನ ಬಂಡಿ ಸಾಗುತ್ತದೆ ' ಎನ್ನುತ್ತಾರೆ. ಇಷ್ಟೊಂದು ಒಳ್ಳೆಯ ಕೆಲಸ ಮಾಡುವರನ್ನು ಕೂಡ ಜನ ಬಿಡುವುದಿಲ್. ತಾವು ಮಾಡುವುದಿಲ್ಲ,ಮಾಡುವವರನ್ನು ನೋಡಿ ಸಹಿಸಿ ಕೊಳ್ಳುವುದಿಲ್ಲ .ಶಿಸ್ತಿನಿಂದ ,ಶ್ರದ್ದೆಯಿಂದ ಕೆಲಸ ಮಾಡುವವರನ್ನು ನೋಡಿದರೆ ತುರಿಕೆ ಶುರುವಾಗುತ್ತದೆ.
ನೀತಿ: ಕೆಲಸ ಮಾಡಲು ಬಯಸಿದರೆ ರಿಸೋರ್ಸ್ ಕೊರತೆಯಿಲ್ಲ ಅದು ತಾನಾಗೇ ಬರುತ್ತದೆ. ಮಾಡಬೇಕೆನ್ನುವ ಮನಸ್ಸು ನಮಗಿರಬೇಕಷ್ಟೆ!!
ಲೇಖನ: ರಂಗಸ್ವಾಮಿ ಮೂಕನಹಳ್ಳಿ