ಆಹಾರ ತಾರತಮ್ಯದ ಕಟ್ಟಳೆ ಮುರಿದು ಹೊಸನಡಿಗೆಗೆ ಚಾಲನೆ ಕೊಟ್ಟ ಮಂಡ್ಯ ಸಾಹಿತ್ಯ ಸಮ್ಮೇಳನ; ರಹಮತ್ ತರೀಕೆರೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಆಹಾರ ತಾರತಮ್ಯದ ಕಟ್ಟಳೆ ಮುರಿದು ಹೊಸನಡಿಗೆಗೆ ಚಾಲನೆ ಕೊಟ್ಟ ಮಂಡ್ಯ ಸಾಹಿತ್ಯ ಸಮ್ಮೇಳನ; ರಹಮತ್ ತರೀಕೆರೆ ಬರಹ

ಆಹಾರ ತಾರತಮ್ಯದ ಕಟ್ಟಳೆ ಮುರಿದು ಹೊಸನಡಿಗೆಗೆ ಚಾಲನೆ ಕೊಟ್ಟ ಮಂಡ್ಯ ಸಾಹಿತ್ಯ ಸಮ್ಮೇಳನ; ರಹಮತ್ ತರೀಕೆರೆ ಬರಹ

ಬಾಡೂಟವು ಆಹಾರದ ಮೇಲೆ‌ ಹೇರಲಾಗಿರುವ ಅನಗತ್ಯ ಕೀಳರಿಮೆ. ದಂಡಿಯ ಸತ್ಯಾಗ್ರಹ ಉಪ್ಪಿನ ಹಕ್ಕಿಗಾಗಿ ಮಾತ್ರ ಇರಲಿಲ್ಲ. ವಸಾಹತುಶಾಹಿ ಆಳ್ವಿಕೆಯ ಹೇರಿಕೆ ವಿರುದ್ಧವಿತ್ತು. ರಾಜಕೀಯ ವಸಾಹುಶಾಹಿ ಸೋಲಿಸಿದರೂ. ಮನಸ್ಸನ್ನು ಗುಲಾಮಗಿರಿಗೆ ಒಳಪಡಿಸುವ ಸಾಂಸ್ಕೃತಿಕ ಯಜಮಾನಿಕೆ ಸೋಲಿಸುವುದು ಕಷ್ಟ ಎನ್ನುತ್ತಾರೆ ಚಿಂತಕ ರಹಮತ್‌ ತರೀಕೆರೆ.

ಬಾಡೂಟ ಮತ್ತು ಮಂಡ್ಯ ಸಾಹಿತ್ಯ ಸಮ್ಮೇಳನ
ಬಾಡೂಟ ಮತ್ತು ಮಂಡ್ಯ ಸಾಹಿತ್ಯ ಸಮ್ಮೇಳನ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಭಾರೀ ಬೇಡಿಕೆ ಇತ್ತು. ಆದರೆ ಸಮ್ಮೇಳನ ಆಯೋಜಕರು ಬಾಡೂಟ ಮಾಡಲು ಮನಸ್ಸು ಮಾಡಿರಲಿಲ್ಲ. ಮಂಡ್ಯ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಸಂಜೆ ಊಟದ ಜೊತೆ ಮೊಟ್ಟೆ ವಿತರಿಸಿ ಬಾಡೂಟದ ಬೇಡಿಕೆಯನ್ನು ನೆರವೇರಿಸಿದ್ದೇವೆ ಎಂಬ ಆಶ್ವಾಸನೆ ಮೂಡಿಸಿದ್ದರು. ಒಂದಿಷ್ಟು ಜನ ಪ್ರಗತಿಪರ ಮನೋಭಾವದವರು ತಾವೇ ಬಾಡೂಟ ಮಾಡಿಸಿಕೊಂಡು ಬಂದು ಸಮ್ಮೇಳನ ಜಾಗದಲ್ಲಿ ಬಡಿಸಿದ್ದರು.

ಆಹಾರ ಸಂಸ್ಕೃತಿಯ ವಿಚಾರದಲ್ಲಿ ಸಮ್ಮೇಳನದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮಾಂಸಾಹಾರವು ಬಹುಜನರ ಆಹಾರ ಪದ್ಧತಿಯ ಭಾಗವಾಗಿದೆ. ಆದರೆ ಈ ವಿಚಾರದಲ್ಲಿ ಇಂದಿಗೂ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಖ್ಯಾತ ಲೇಖಕ ರಹಮತ್ ತರೀಕೆರೆ ಕೂಡ ಆಹಾರ ಸಂಸ್ಕೃತಿ ಮತ್ತು ಮಂಡ್ಯ ಸಾಹಿತ್ಯ ಸಮ್ಮೇಳನದ ಬಗ್ಗೆ ಬರೆದಿದ್ದಾರೆ. ಅವರ ಬರಹವನ್ನು ನೀವೂ ಓದಿ.

ರಹಮತ್ ತರೀಕೆರೆ ಬರಹ

ಮಂಡ್ಯದ ಪ್ರಜ್ಞಾವಂತ ಜನತೆಗೆ ಧನ್ಯವಾದಗಳು.

ಅವರು ಮೊದಲಿಗೆ ಉರಿಗೌಡ ಬೆಂಕಿಗೌಡರ ಪಿತೂರಿಯನ್ನು ಸೋಲಿಸಿದರು. ಈಗ ಆಹಾರ ತಾರತಮ್ಯದ ಕಟ್ಟಳೆಯನ್ನು ಮುರಿದು ಹೊಸನಡಿಗೆಗೆ ಚಾಲನೆ ಕೊಟ್ಟರು. ಮೊಟ್ಟೆ ಕೊಟ್ಟಿರುವುದು ಆಹಾರ ತಾರತಮ್ಯದ ವಿರುದ್ಧದ ಸುದೀರ್ಘ ಕದನದಲ್ಲಿಟ್ಟ ಒಂದು ಹೆಜ್ಜೆ ಎಂದು ನಾವು ಸಂಭ್ರಮಿಸುತ್ತಿದ್ದೇವೆ. ಪರಂತು ಈ ಸಂಭ್ರಮದಲ್ಲಿ ನಾಲ್ಕು ವೈರುಧ್ಯಗಳಿರುವುದನ್ನು ಮರೆಯುತ್ತಿದ್ದೇವೆ.

1. ಈ ದೇಶದ ಶೇ 90ರಷ್ಟು ಬಹುಸಂಖ್ಯಾತರು ತಮ್ಮ ಆಹಾರದ ಸಾರ್ವಜನಿಕ ಮಾನ್ಯತೆ ಮತ್ತು ಘನತೆಗಾಗಿ ಹೋರಾಟ ಮಾಡಬೇಕಾದ ದಯನೀಯ ಪರಿಸ್ಥಿತಿ ಇನ್ನೂ ಉಳಿದಿರುವುದು.

2. ಅತ್ಯಂತ ಅಲ್ಪಸಂಖ್ಯಾತ ಮೇಲ್ಜಾತಿಯ ಸಸ್ಯಾಹಾರ ಶ್ರೇಷ್ಠತೆಯ ಸಾಂಸ್ಕೃತಿಕ ಯಜಮಾನಿಕೆಯು ಸಮಾಜದಲ್ಲಿ ಇನ್ನೂ ಆಳವಾಗಿ ಬೇರುಬಿಟ್ಟಿರುವುದು.

3. ಈ ಯಜಮಾನಿಕೆಯನ್ನು ಮಾಂಸಾಹಾರ ಸೇವನೆ‌ ಮಾಡುವ ಬಹುಸಂಖ್ಯಾತ ಸಮುದಾಯಗಳು ಪ್ರಶ್ನೆಯಿಲ್ಲದೆ ಇನ್ನೂ ಒಪ್ಪಿಕೊಂಡಿರುವುದು.

4. ಆಹಾರ ಭೇದವು ಜಾತಿಭೇದ ಲಿಂಗಭೇದ ಧರ್ಮದ್ವೇಷ ವರ್ಗಭೇದಗಳ ದೊಡ್ಡ‌ ನಕ್ಷೆಯೊಂದರ ಒಂದು ಸಣ್ಣಚುಕ್ಕಿ ಎಂದು ಗಮನಿಸದೆ ಹೋಗಿರುವುದು.

ಮಂಡ್ಯದ ಜನ ಬಾಡೂಟವನ್ನು ಬಾಳಿನಲ್ಲಿ ಕಾಣದ ಹಪಾಹಪಿಗಳು ಎಂಬಂತೆ ಅನೇಕರು ಮಾತಾಡಿದರು.‌ ಕೆಲವರು ಖರ್ಚಿನ ಬಾಬತ್ತಿನ ಮತ್ತು ಬಡಿಸುವ ಕಷ್ಟದ ಸಮಸ್ಯೆ ಎತ್ತಿದರು. ಕೆಲವು ಮಹನೀಯರು ಮಾಂಸಾಹಾರದ ಚರ್ಚೆಯಲ್ಲಿ ಅಮೇಧ್ಯ ಶಬ್ದವನ್ನೂ ಬಳಸಿದರು. ಆಹಾರ ಸಮಾನತೆಯ ಬಗ್ಗೆ ಕಾಳಜಿಯುಳ್ಳ ಮತ್ತೆ ಕೆಲವರು, ಸಾಮಾಜಿಕ ಬದಲಾವಣೆಯ‌ ಹೋರಾಟಕ್ಕೆ ಯಾರಿಗೊ ಕಂಟ್ರಾಕ್ಟು ಕೊಟ್ಟವರಂತೆ, ಇದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ, ಜನಾಭಿಪ್ರಾಯ ಮೂಡಿಸುವುದಕ್ಕೆ ತೊಡಗದೆ, ವ್ಯಂಗ್ಯದ ಮಾತಾಡುತ್ತ, ಮೋಜು‌ ನೋಡುತ್ತ‌ ಬೇಲಿಯ ಮೇಲೇ ಕುಳಿತರು. ಸಾಹಿತ್ಯ, ರಂಗಭೂಮಿ,‌ ಸಂಗೀತ ಮೊದಲಾದ ಕಲೆಗಳು ನಮ್ಮನ್ನು ಸೆನ್ಸಿಟೈಜ್ ಮಾಡುತ್ತವೆ ಎನ್ನುವುದು ಎಷ್ಟು ದೊಡ್ಡ ಅರೆಸತ್ಯ?

ನಾವೆಲ್ಲಾ ತಿಳಿಯಬೇಕಾದ ಸಂಗತಿಯೆಂದರೆ, ಬಾಡೂಟವು ಆಹಾರದ ಮೇಲೆ‌ ಹೇರಲಾಗಿರುವ ಅನಗತ್ಯ ಕೀಳರಿಮೆ ಮತ್ತು ತಾರತಮ್ಯ ನಿವಾರಣೆಯ ಡೆಮಾಕ್ರಟಿಕ್ ಪ್ರಶ್ನೆಯನ್ನು ಒಳಗೊಂಡಿದೆ ಎನ್ನುವುದು. ದಂಡಿಯ ಸತ್ಯಾಗ್ರಹ ಉಪ್ಪಿನ ಹಕ್ಕಿಗಾಗಿ ಮಾತ್ರ ಇರಲಿಲ್ಲ. ವಸಾಹತುಶಾಹಿ ಆಳ್ವಿಕೆಯ ಹೇರಿಕೆಯ ವಿರುದ್ಧವಿತ್ತು. ರಾಜಕೀಯ ವಸಾಹುಶಾಹಿಯನ್ನು ಸೋಲಿಸುವುದು ಸುಲಭ. ಮನಸ್ಸನ್ನು ಗುಲಾಮಗಿರಿ ಒಳಪಡಿಸುವ ಸಾಂಸ್ಕೃತಿಕ ಯಜಮಾನಿಕೆ ಸೋಲಿಸುವುದು ಕಷ್ಟ. ಆದರೆ ಸೋಲಿಸುವುದು ಸಾಧ್ಯ. ಕತ್ತಲೆ ದಾರಿ ದೂರ. ಇನ್ನೂ ನಡೆಯಬೇಕಿದೆ.

ಡಿಸೆಂಬರ್ 23 ರಂದು ರಹಮತ್ ತರೀಕೆರೆ ಈ ಪೋಸ್ಟ್ ಪ್ರಕಟಿಸಿದ್ದಾರೆ. ಈಗಾಗಲೇ ಹಲವರು ಅವರ ಪೋಸ್ಟ್ ವೀಕ್ಷಿಸಿದ್ದು, 271ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 31 ಮಂದಿ ಇವರ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. 28 ಜನ ಕಾಮೆಂಟ್ ಮಾಡಿದ್ದಾರೆ.

ರಹಮತ್ ತರೀಕೆರೆ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

ಹೋರಾಟದ ಮೊದಲಲ್ಲಿ 'ಬಾಡೂಟ':  ‘ನೀವು ಹೇಳಿದ್ದು ಸರಿಯಿದೆ ಸರ್. ಹೋರಾಟದ ಮೊದಲಲ್ಲಿ 'ಬಾಡೂಟ' ಎಂಬ ಪದವು ಬಹಳ ಸಂಕೀರ್ಣವಾದ ಅರ್ಥವನ್ನು ಹೊರಡಿಸಿತು. ಅದನ್ನು ಲೋಭ ಎಂತಲೂ ನಷ್ಟ ಎಂತಲೂ ಬಗೆ ಬಗೆಯಾಗಿ ಹೇಳಿ ನಿರಾಕರಿಸಲಾಯಿತು. ಆದ್ರೆ ನಾವು ಎತ್ತಿದ ಪ್ರಶ್ನೆ ಆಹಾರದ ಘನತೆಯದ್ದಾಗಿತ್ತು. ತಳ ಮಟ್ಟದ ಹೋರಾಟವಷ್ಟೇ ಅಲ್ಲದೇ ರಾಜಕೀಯ ಒತ್ತಡಗಳನ್ನು ಸೃಷ್ಟಿವುದರಲ್ಲೂ ನಾವು ನಿರತರಾದೆವು. ಇಲ್ಲಿ ನಾವು ಯಾವ ಮಠ ಅಥವಾ ಧಾರ್ಮಿಕ ವ್ಯಕ್ತಿಗಳನ್ನು ಮಧ್ಯೆಕ್ಕೆ ತರದೇ ನಾಗರೀಕರು ಮತ್ತು ಜನಪ್ರತಿನಿಧಿಗಳ ನಡುವೆಯೇ ಪ್ರತಿರೋಧ, ದ್ವಿಪಕ್ಷೀಯ ಮಾತುಕತೆಗಳ ಮೂಲಕ ಇದನ್ನ ಜಾರಿಗೆ ತಂದೆವು. ಅವರೆಲ್ಲಾ ಪ್ರಶ್ನೆಗಳು, ಆತಂಕಗಳು, ಮುಜುಗರಗಳಿಗೆ ನೇರವಾದ ಮತ್ತು ತಾರ್ಕಿಕವಾದ ವಿವರಣೆಗಳನ್ನು ನೀಡಿದೆವು. ಮಂಡ್ಯದ ಗೆಳೆಯರು ಕೊನೆಯವರೆಗೂ ಶಾಂತವಾಗಿ ಕಾದು ಪ್ರತಿರೋಧ ದನಿಗಳನ್ನು ಮೊಳಗಿಸುತ್ತಾ ಒಂದು ಹಂತಕ್ಕೆ ಯಶಸ್ವಿಯಾದೆವು‘ ಎಂದು ರಾಜೇಂದ್ರ ಪ್ರಸಾದ್ ಕಾಮೆಂಟ್ ಮಾಡಿದ್ದಾರೆ. 

ಆಹಾರ ಪದ್ಧತಿಯ ಟೀಕೆ ಸಲ್ಲ: ಮಾಂಸದ ಊಟ, ಗುಟ್ಕಾ ಮದ್ಯಪಾನ ಇತ್ಯಾದಿ ಪುಸ್ತಕ ಮಳಿಗೆಗಳ ನಡುವೆ ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದ್ದೇ ಪ್ರತಿರೋಧ ಏಳಲು ಕಾರಣವಾಯಿತು. ಮದ್ಯಪಾನ ಮತ್ತು ಗುಟ್ಕಾದ ಬಗ್ಗೆ ನಿಷೇಧ ಇರಲಿ. ಮಾಂಸಾಹಾರವನ್ನು ಕೀಳು ಎಂದು ಭಾವಿಸಿದ್ದರಿಂದಲೇ ಇಂತಹ ಮಾತು ಬಂದಿರುವಂಥದ್ದು. ಇಲ್ಲದಿದ್ದರೆ ಬಾಡೂಟದ ಪ್ರಶ್ನೆಯೇ ಬರುತ್ತಿರಲಿಲ್ಲ. ಯಾರೇ ಆಗಲಿ ಇನ್ನೊಂದು ಆಹಾರ ಪದ್ಧತಿಯನ್ನು ಟೀಕಿಸಬಾರದು. ಅದು ಅವರವರ ಬದುಕಿನ ರೀತಿ ಮತ್ತು ಆಯ್ಕೆ. ಕೆಲವರ ದೇಹ ಪ್ರಕೃತಿಗೆ ಕೆಲವು ಒಗ್ಗುವುದಿಲ್ಲ. ಕೆಲವು ಸಂಪ್ರದಾಯಗಳಲ್ಲಿ ಬೇರೆ ಬೇರೆ ರೀತಿಯ ಆಹಾರ ಪದ್ಧತಿ ಇರುತ್ತದೆ. ಹೀಗಿರುವಾಗ, ಮಾಂಸಾಹಾರಿಗಳು ಸಸ್ಯಾಹಾರಿಗಳನ್ನು ಪುಳ್ಚಾರಿಗಳು ಎಂದು ಟೀಕಿಸುವುದನ್ನೂ ಕೂಡ ಬಿಡಬೇಕು. ನಾನು ಸಣ್ಣವನಿದ್ದಾಗ 'ಏ ಪುಳಿಕೋದ್ದೆಲ್ ಭಟ್ಟಾ' ಎಂಬ ಹಾಸ್ಯದ ಮಾತನ್ನು ನನ್ನ ಗೆಳೆಯರಿಂದ ಕೇಳಿದ್ದೆ. ಆಗ ಮನಸಾರೆ ನಕ್ಕಿದ್ದೆ. ಈಗ ನಾನು ಇನ್ನೊಂದು ಆಹಾರ ಪದ್ಧತಿಯನ್ನು ಟೀಕಿಸುವುದಿಲ್ಲ. ನನ್ನ ಆಹಾರ ಪದ್ಧತಿಯನ್ನು ಯಾರಾದರೂ ಟೀಕಿಸಿದರೆ ಕಟುವಾಗಿ ವಿರೋಧಿಸುತ್ತೇನೆ‘ ಎಂದು ಪ್ರಸನ್ನ ಪಿಬಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ. 

ಗುದ್ದಾಡಿಕೊಂಡು ಮಾಂಸ ತಿನ್ನೋದು ಬೇಕಾ: ಮಂಡ್ಯದ ಜನ ಬಾಡೂಟ ಪ್ರಿಯರು, ಆದರೆ ಅದೇ ಇಲ್ಲಿನ ಆಹಾರ ಪದ್ದತಿಯಾಗಿಲ್ಲ. ವಾರಕ್ಕೊಮ್ಮೆ, ವಿಶೇಷ ದಿನಗಳಲ್ಲಿ ಬಾಡೂಟ ಮಾಡುವ ಪದ್ಧತಿ ಇದೆಯೇ ಹೊರತು ದಿನವೂ ಉಪಯೋಗಿಸುವುದಿಲ್ಲ. ಆದರೆ ಲಕ್ಷಾಂತರ ಜನ ಭಾಗವಹಿಸುವ ಸಮ್ಮೇಳನಗಳಲ್ಲಿ ಬಾಡೂಟ ಇರಬೇಕು ಎನ್ನುವುದು, ಅದನ್ನು ವಿಶೇಷ ಅರ್ಥಗಳಲ್ಲಿ ಪ್ರತಿಪಾದಿಸುವುದು, ನಿಮ್ಮಂಥ ತಿಳಿದವರು ಅದನ್ನು ಸಮರ್ಥಿಸುವುದೇ ವಿಚಿತ್ರ.. ನಮ್ಮ ಮಂಡ್ಯಕಡೆ ಒಂದು ಬೀಗರೂಟ ಮಾಡಿ ಸೈ ಎನ್ನಿಸಿಕ್ಕೊಳ್ಳುವುದು ಕಷ್ಟ ಅಂಥಹುದರಲ್ಲಿ ಲಕ್ಷಾಂತರ ಜನ ಸೇರುವಡೆ....

ನಾವು ಮಾಂಸವನ್ನು ಯುಗಾದಿ ಹಬ್ಬದ ವರ್ಷದ ತೊಡಕಿನಲ್ಲಿ ತಿನ್ನುತ್ತೇವೆ... ಯುಗಾದಿಯಂದು ಅಲ್ಲ. ನಿನ್ನೆ ನೀವು ಸ್ವಲ್ಪ ಜನಕ್ಕೆ ಮೊಟ್ಟೆ ಕೊಟ್ಟಾಗ ಆದ ಕಿತ್ತಾಟವೆ ಸಾಕಲ್ವ.ಇದನ್ನೇ ಪ್ರಜ್ಞಾವಂತಿಕೆ ಅಂದುಕೊಂಡ್ರೆ ಹ್ಯಾಗೆ ಸರ್. ನಾವು ಮಾಂಸ ತಿಂತೀವಿ, ಹಿಂಗೆಲ್ಲ ಗುದ್ದಾಡ್ಕೊಂಡ್ ಅಲ್ಲ... ಇದು ಬೇಕಾಗು ಇರ್ಲಿಲ್ಲ‘ ಗುರುರಾಜ ಅಘಾಲಯ ಎನ್ನುವವರು ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಆಹಾರ ಸಂಸ್ಕೃತಿ ತಾರತಮ್ಯ ನಿವಾರಣೆಯಾಗಲಿ: ನಿಮ್ಮ ವಿಶ್ಲೇಷಣೆ ತುಂಬ ಮೌಲಿಕವಾದದ್ದು ಸರ್.ಆಹಾರ ಸಂಸ್ಕೃತಿಯ ತಾರತಮ್ಯ ನಿವಾರಣೆಯ ಈ ಹೊಸ ನಡಿಗೆಯ ದಾರಿ ಸಮ್ಮೇಳನವನ್ನೂ ಮೀರಿ ನಾಡಿನ ಎಲ್ಲ ಸಾರ್ವಜನಿಕ ಸಭೆ ಸಮಾರಂಭಗಳನ್ನೂ ವ್ಯಾಪಿಸುವಂತಾಗಲಿ. ಮತ್ತೆ,ಅದನ್ನೂ ಮೀರಿ ಎಲ್ಲರ ಮನಸುಗಳಿಗೂ ವ್ಯಾಪಿಸಲಿ ಗುರುರಾಜ ಕಾರ್ಕಳ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 

Whats_app_banner