Kannada Newspaper Day: ಕರಾವಳಿಯಲ್ಲಿ ಉದಯವಾಗಿತ್ತು ಕನ್ನಡದ ಮೊದಲ ಪತ್ರಿಕೆ; ಮಂಗಳೂರ ಸಮಾಚಾರದ ಹುಟ್ಟು, ಸಂಪಾದಕ, ಮುದ್ರಣದ ಕುರಿತ ಕಥನ
1841, ಜುಲೈ 1ರಂದು ‘ಮಂಗಳೂರ ಸಮಾಚಾರ’ ಎಂಬ ಕನ್ನಡ ಪತ್ರಿಕೆಯನ್ನು ಬಾಸೆಲ್ ಮಿಷನ್ ಸಂಸ್ಥೆ ಹೊರತಂದಿತ್ತು. ಅದು ಕನ್ನಡದ ಮೊದಲ ಪತ್ರಿಕೆ ಎಂದು ದಾಖಲಾಗಿರುವ ಕಾರಣ ಇದರ ಹುಟ್ಟಿನ ದಿನವನ್ನು ಕನ್ನಡ ಪತ್ರಿಕಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಪತ್ರಿಕೆ ಹುಟ್ಟು, ಮುದ್ರಣ, ಕರಾವಳಿ ಕನ್ನಡ ಪತ್ರಿಕೋದ್ಯಮದ ಕುರಿತು ಬೆಳಕು ಚೆಲ್ಲಿದ್ದಾರೆ ಪತ್ರಕರ್ತ ಹರೀಶ್ ಮಾಂಬಾಡಿ.
ಮಂಗಳೂರು: ಪ್ರತಿ ವರ್ಷ ಜುಲೈ 1ರಂದು ಕನ್ನಡ ಪತ್ರಿಕಾ ದಿನಾಚರಣೆ (Kannada Newspaper Day) ಆಚರಿಸಲಾಗುತ್ತದೆ. ಇದಕ್ಕೆ ಕಾರಣ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ (Mangalura Samachara)’ ಜನ್ಮತಾಳಿದ್ದು ದಿನ ಜುಲೈ 1ರಂದು.
ದಾಖಲೆಗಳ ಪ್ರಕಾರ, 1841ರ ಜುಲೈ 1ರಂದು ಮಂಗಳೂರ ಸಮಾಚಾರವನ್ನು ಬಾಸೆಲ್ ಮಿಶನ್ ಸಂಸ್ಥೆ ಮಂಗಳೂರಿನಿಂದ ಹೊರಡಿಸಲು ಆರಂಭಿಸಿತ್ತು. ಈ ಪತ್ರಿಕೆ ಆರಂಭಿಸಿದ ಮೂಲ ಉದ್ದೇಶ ಕ್ರಿಶ್ಚಿಯನ್ನರ ಧಾರ್ಮಿಕ ವಿಚಾರಗಳನ್ನು ಜನರಿಗೆ ತಿಳಿಯಪಡಿಸುವುದಾದರೂ ಕನ್ನಡ ಭಾಷೆ ಇದರಲ್ಲಿ ಬಳಕೆಯಾದ ಕಾರಣ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ಸಂಪಾದಕ ಹರ್ಮನ್ ಮೋಗ್ಲಿಂಗ್ (Hermann Moegling) ಕನ್ನಡದಲ್ಲಿ ಆರಂಭಗೊಂಡ ಪತ್ರಿಕೆಯ ವಿದೇಶಿ ಸಂಪಾದಕ ಎಂಬುದು ಇದರ ಇನ್ನೊಂದು ವಿಶೇಷ.
ಕನ್ನಡ ಪತ್ರಿಕೋದ್ಯಮ ಚರಿತ್ರೆ ಆರಂಭ
ಮಂಗಳೂರ ಸಮಾಚಾರ ಆರಂಭಗೊಳ್ಳುವ ಮೂಲಕ ಕನ್ನಡ ಪತ್ರಿಕೋದ್ಯಮದ ಚರಿತ್ರೆಯೂ ಆರಂಭಗೊಂಡಿತು. ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದವರು ಇಲ್ಲಿ ಕಲ್ಲಚ್ಚಿನ ಮುದ್ರಣ ಬೆಳಕಿಗೆ ತಂದರು. ತದ ನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು. ಸ್ವಿಟ್ಜರ್ಲೆಂಡ್‌ನ ಬಾಸೆಲ್‍ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು ಇಲ್ಲಿ ಕೈಗಾರಿಕೆ, ವಿದ್ಯಾಸಂಸ್ಥೆ, ಮುದ್ರಣಾಲಯಗಳನ್ನು ಸ್ಥಾಪಿಸಿದರು. 1841ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದರು. ಮಂಗಳೂರಿನಲ್ಲಿ ಕ್ರೈಸ್ತ ಬೋಧಾ ಶಿಬಿರದಲ್ಲಿ ಅಧ್ಯಾಪಕರಾಗಿದ್ದ ಮೋಗ್ಲಿಂಗ್ ಕಾರ್ಯಕ್ಷೇತ್ರಗಳು ಧಾರವಾಡ, ಮಂಗಳೂರು ಮತ್ತು ಕೊಡಗು ಆಗಿತ್ತು. 1836ರಿಂದ 1860ರವರೆಗೆ ಭಾರತದಲ್ಲಿ ವಾಸವಾಗಿದ್ದ ಮೋಗ್ಲಿಂಗ್, ಕಾಲ್ನಡಿಗೆಯಲ್ಲಿ ಕರ್ನಾಟಕ ಸಂಚರಿಸಿದ್ದರು.
ಕನ್ನಡ, ಸಂಸ್ಕೃತ, ಗ್ರೀಕ್, ಜರ್ಮನ್ ಭಾಷೆಯ ಜ್ಞಾನ ಅವರಿಗಿತ್ತು. ಕ್ರೈಸ್ತಗೀತೆಗಳು, ಯಾತ್ರಿಕನ ಸಂಚಾರ, ಚಿಕ್ಕವನಾದ ಹೆನ್ರಿಯೂ ಅವನ ಬೋಯಿಯೂ ಹೀಗೆ ಧಾರ್ಮಿಕ ಶಿಕ್ಷಣ, ನೀತಿ ಪ್ರಬೋಧ ಕಥೆಗಳನ್ನು, ಕವನಗಳನ್ನು ಬರೆದ ಮೋಗ್ಲಿಂಗ್, ದಾಸರ ಪದಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದರು. ಮಂಗಳೂರ ಸಮಾಚಾರವನ್ನು ಪ್ರತಿ ತಿಂಗಳ 1 ಮತ್ತು 15ರಂದು ಪ್ರಕಟಿಸಿದ್ದ ಮೋಗ್ಲಿಂಗ್, ಸತತ 16 ಸಂಚಿಕೆಗಳನ್ನು ಪ್ರಕಟಿಸಿದ್ದರು. ಕೊನೆಯ 16ನೇ ಸಂಚಿಕೆ 1844ರ ಫೆಬ್ರವರಿ 15ರಂದು ಪ್ರಕಟವಾಯಿತು.
ಇವೆಲ್ಲವೂ ಪ್ರಕಟವಾದದ್ದು, ಬಾಸೆಲ್ ಮಿಷನ್‌ನ ಕಲ್ಲಚ್ಚಿನ ಮುದ್ರಣಾಲಯದಿಂದ. ಮುಂದೆ ಇದೇ ಪತ್ರಿಕೆ ಬಳ್ಳಾರಿಯಿಂದ ಕಂನಡ ಸಮಾಚಾರ ಹೆಸರಿಂದ ಪ್ರಕಟವಾಯಿತು. ಬಳಿಕ ಅದೂ ನಿಂತುಹೋಯಿತು.
1ನೇ ಪುಸ್ತಕ, 1ನೇ ಅಂಕೆ, 1ನೇ ಜುಲೈ, ಕ್ರಯ 1 ದುಡ್ಡು
ನಾಲ್ಕು ಪುಟಗಳ ಈ ಪತ್ರಿಕೆಯಲ್ಲಿ ‘ವೂರ ವರ್ತಮಾನ’, ‘ಸರಕಾರದವರ ನಿರೂಪಗಳು’, ʼಸರ್ವರಾಜ್ಯ ವರ್ತಮಾನಗಳು’, ‘ನೂತನವಾದ ಆಶ್ಚರ್ಯದ ಸುದ್ದಿಗಳು’, ‘ಅಂನ್ಯರ ನಡೆಗಳು’, ‘ಸುಬುದ್ಧಿಗಳು’, ‘ಕಥೆಗಳು’, ‘ಯಾರಾದರೂ ವೊಂದು ವರ್ತಮಾನ ಅಥವಾ ವೊಂದು ಮಾತು ಯಿದರಲ್ಲಿ ಶೇರಿಸಿ ಛಾಪಿಸಬೇಕುʼ ಎಂದ ಬರೆದು ಕಳುಹಿಸಿದರೆ, ಆ ಸಂಗತಿ ಸತ್ಯವಾಗಿದ್ದರೆ, ಅದು ಸಹಾ ಯೀ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ’’ (ಸಂಪಾದಕರ ಪತ್ರಗಳು), ‘ಸಾಮತಿ ಕಥೆ’, ‘ಪುರಂದರದಾಸರ ಪದ’..ಇವುಗಳೆಲ್ಲ ಇವೆ ಎಂದು ನಮೂದಿಸಲಾಗಿತ್ತು.
‘ಬೆಳಿಗ್ಗೆ ಬಂದ್ರದಲ್ಲ್ಯಾಗಲಿ ಕಚೇರಿ ಹತ್ತರವಾಗಲಿ ವೊಬ್ಬನು ಬಾಯಿಗೆ ಬಂದ ಹಾಗೆ ವೊಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಷರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ನಂಬಿಸುತ್ತಾರೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳು ಯಂತಾ ಕಾಣುವಷ್ಟರೊಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿಯಾಯ್ತು. ಈ ಪ್ರಕಾರ ಬಹಳ ಜನರು ಕಾಲಕ್ರಮಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಇ ಮನುಷ್ಯರ ಸಮಾಚಾರ ಅಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದುದರಿಂದ ನಿಜ ಸಮಾಚಾರದ ಸಂಗ್ರಹವನ್ನು ಕೂಡಿಸಿ ಪಕ್ಷಕ್ಕೆ ವೊಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬದಾಗಿ ನಿಶ್ಚಯಿಸಿಯದೆ. ಮಂಗಳೂರ ಸಮಾಚಾರದ ಕಾಗದದಲ್ಲಿ ಬರಿಯುವ ವರ್ತಮಾನಗಳ ವಿವರದ ಪಟ್ಟಿ’’ – ಹೀಗೆ ಮಂಗಳೂರ ಸಮಾಚಾರದಲ್ಲಿ ನಮೂದಿಸಲಾಗಿತ್ತು. ಇದು ಅಂದಿನ ಕಾಲಘಟ್ಟವನ್ನು, ಜನಜೀವನದ ರೀತಿಯನ್ನೂ ಸೂಚಿಸುತ್ತದೆ.
ದಕ್ಷಿಣ ಕನ್ನಡ ಮತ್ತು ಕನ್ನಡ ಪತ್ರಿಕಾರಂಗ
ಉಡುಪಿಯನ್ನು ಸೇರಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮುಂದೆ ಸ್ವಾತಂತ್ರ್ಯ ಚಳವಳಿಯ ಸಂದರ್ಭ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಪತ್ರಿಕಾ ಕ್ರೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದವು. ಡಾ. ಕೆ.ಶಿವರಾಮ ಕಾರಂತ, ಕಡೆಂಗೋಡ್ಲು ಶಂಕರ ಭಟ್ಟ ಸಹಿತ ಹಲವು ಸಾಹಿತಿಗಳೂ ತಮ್ಮದೇ ಆದ ಕೊಡುಗೆಗಳನ್ನು ಪತ್ರಿಕೆಗಳ ವಿಸ್ತಾರಕ್ಕೆ ನೀಡಿದರು. ಮಂಗಳೂರು ಕೇಂದ್ರೀಕರಿಸಿ ಪತ್ರಿಕೆಗಳಲ್ಲಿ ಸ್ವಾತಂತ್ರ್ಯಾನಂತರದ್ದರಲ್ಲಿ ಪ್ರಮುಖವಾದದ್ದು ನವಭಾರತ. ಅದಾದ ಬಳಿಕ ಮಣಿಪಾಲದಲ್ಲಿ ಉದಯವಾಣಿ ಆರಂಭಗೊಂಡರೆ, ಮಂಗಳೂರಿನಿಂದ ಮುಂಗಾರು ಪತ್ರಿಕೆ ಡಾ. ವಡ್ಡರ್ಸೆ ರಘುರಾಮ ಶೆಟ್ಟರ ಸಾರಥ್ಯದಲ್ಲಿ ಆರಂಭಗೊಂಡು ದಶಕಗಳ ಕಾಲ ಮೆರೆಯಿತು. ಹಾಗೆಯೇ ಜನವಾಹಿನಿ, ಹೊಸದಿಗಂತ, ವಾರ್ತಾಭಾರತಿಯಂಥ ರಾಜ್ಯಮಟ್ಟದ ಪತ್ರಿಕೆಗಳು, ಕುಂದಪ್ರಭ, ಸುದ್ದಿ ಬಿಡುಗಡೆಯಂಥ ಪ್ರಾದೇಶಿಕ ಪತ್ರಿಕೆಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾದವು. ಅಡಿಕೆ ಪತ್ರಿಕೆಯಂತೂ ಕೃಷಿಕರ ಕೈಗನ್ನಡಿಯಾಯಿತು. ಹೀಗೆ ಕರಾವಳಿ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪತ್ರಿಕೆಗಳ ಬೆಳವಣಿಗೆ ಜೊತೆ ಕನ್ನಡ ಭಾಷಾಭ್ಯುದಯಕ್ಕೂ ಕಾರಣವಾಯಿತು.