ಎಷ್ಟು ನೀರು ಸೇರಿದರೂ ಭರ್ತಿಯಾಗದ ವಿಸ್ಮಯಕಾರಿ ಬಾವಿ: ರಹಸ್ಯ ಕೂಪದ ರಹಸ್ಯವೇನು? -ಇಲ್ಲಿದೆ ವಿವರ-mangaluru news unique well located in sullia does not fill up climate change impact coastal environment ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟು ನೀರು ಸೇರಿದರೂ ಭರ್ತಿಯಾಗದ ವಿಸ್ಮಯಕಾರಿ ಬಾವಿ: ರಹಸ್ಯ ಕೂಪದ ರಹಸ್ಯವೇನು? -ಇಲ್ಲಿದೆ ವಿವರ

ಎಷ್ಟು ನೀರು ಸೇರಿದರೂ ಭರ್ತಿಯಾಗದ ವಿಸ್ಮಯಕಾರಿ ಬಾವಿ: ರಹಸ್ಯ ಕೂಪದ ರಹಸ್ಯವೇನು? -ಇಲ್ಲಿದೆ ವಿವರ

ಸೃಷ್ಟಿಯ ಮುಂದೆ ಮಾನವ ಕೇವಲ ಹುಳುವಷ್ಟೇ. ಸೃಷ್ಟಿಯ ನಿಯಮಗಳು ಮನುಷ್ಯನ ಯೋಚನೆಗೆ ಸಿಗದಷ್ಟು ಅಗಾಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಜ್ಜಾವರದಲ್ಲಿ ಇತ್ತೀಚೆಗೆ ವಿಶಿಷ್ಟ ಬಾವಿ ಪತ್ತೆಯಾಗಿದ್ದು, ವಿಸ್ಮಯ ಮೂಡಿಸಿದೆ.ಈ ರಹಸ್ಯ ಬಾವಿಯ ಬಗ್ಗೆ ಇಲ್ಲಿದೆ ಮಾಹಿತಿ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಸುಳ್ಯದಲ್ಲಿದೆ ವಿಸ್ಮಯಕಾರಿ ಬಾವಿ, ಇದರ ರಹಸ್ಯದ ಬಗ್ಗೆ ಇಲ್ಲಿದೆ ಮಾಹಿತಿ.
ಸುಳ್ಯದಲ್ಲಿದೆ ವಿಸ್ಮಯಕಾರಿ ಬಾವಿ, ಇದರ ರಹಸ್ಯದ ಬಗ್ಗೆ ಇಲ್ಲಿದೆ ಮಾಹಿತಿ.

ಮಂಗಳೂರು: ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಪ್ರಕೃತಿಯಲ್ಲಿ ನಡೆಯುವ ವಿಚಿತ್ರಗಳು ನಿಗೂಢವಾಗಿದೆ. ಪ್ರಕೃತಿಯು ವಿಸ್ಮಯಕಾರಿಯಾಗಿದ್ದು, ವೈವಿಧ್ಯಗಳು ಇದರೊಳಗೆ ಅಡಗಿವೆ. ಸೃಷ್ಟಿಯ ಮುಂದೆ ಮಾನವ ಕೇವಲ ಹುಳುವಷ್ಟೇ. ಸೃಷ್ಟಿಯ ನಿಯಮಗಳು ಮನುಷ್ಯನ ಯೋಚನೆಗೆ ಸಿಗದಷ್ಟು ಅಗಾಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅಜ್ಜಾವರದಲ್ಲಿ ಇತ್ತೀಚೆಗೆ ವಿಶಿಷ್ಟ ಬಾವಿ ಪತ್ತೆಯಾಗಿದ್ದು, ವಿಸ್ಮಯ ಮೂಡಿಸಿದೆ. ಏನಿದು ಬಾವಿ, ಇದರ ವೈಶಿಷ್ಟ್ಯವೇನು ಎಂಬುದನ್ನು ತಿಳಿಯಲೂ ನಿಮಗೂ ಕುತೂಹಲವಿದೆಯೇ? ಹಾಗಿದ್ದರೆ ಮುಂದೆ ಓದಿ..

ಅರಣ್ಯ ಪ್ರದೇಶದೊಳಗಿದೆ ಈ ತಾಣ

ಸುಳ್ಯದ ಅರಣ್ಯ ಪ್ರದೇಶದಲ್ಲಿ ನೂರಾರು ಎಕರೆ ಪ್ರದೇಶಗಳಿಂದ ಹರಿದು ಬರುವ ನೀರು ಒಂದೆಡೆ ಸೇರುತ್ತಿದೆ. ಬಹುತೇಕ ಕಡೆ ಈ ರೀತಿ ಇರುವುದು ಸಾಮಾನ್ಯ, ಇದೇನು ದೊಡ್ಡ ವಿಷಯವಲ್ಲ ಎಂದು ನಿಮಗನಿಸಬಹುದು. ಆದರೆ, ನೀರು ಸೇರುವ ಜಾಗ ಮಾತ್ರ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಸುಳ್ಯ ನಾರ್ಕೋಡು - ಅಜ್ಜಾವರ ರಸ್ತೆಯ ಅಜ್ಜಾವರ ಗ್ರಾಮದ ಮೇನಾಲದ ಮೆದಿನಡ್ಕ ಅರಣ್ಯ ಪ್ರದೇಶದಲ್ಲಿ ಈ ಜಾಗವಿದೆ. ಇದು ಮಳೆಗಾಲದಲ್ಲಿ ಮಾತ್ರ ಕಾಣಿಸುತ್ತದೆ. ಇದಕ್ಕೆ ಕಾರಣ ನೀರಿನ ಹರಿವು. ಮೇದಿನಡ್ಕ ಅರಣ್ಯ ಪ್ರದೇಶ ಹಾಗೂ ಆಸುಪಾಸಿನ ಸುಮಾರು 150 ರಿಂದ 200 ಎಕರೆವರೆಗಿನ ಪ್ರದೇಶದ ಒರತೆ ನೀರು ಮಳೆಗಾಲದಲ್ಲಿ ಹರಿದು ಬಂದು ಅರಣ್ಯದೊಳಗಿನ ಬಾವಿಯೊಳಗೆ ಸೇರುತ್ತದೆ. ಇದನ್ನು ಮಳೆಗಾಲದಲ್ಲಿ ನೋಡಲು ಬಹಳ ಆಕರ್ಷಕವಾಗಿ ಕಾಣಿಸುತ್ತದೆ.

ಇದು ನೈಸರ್ಗಿಕ ಬಾವಿಯೋ ಅಥವಾ ಯಾರಾದರೂ ನಿರ್ಮಿಸಿದ್ದೋ?

ಅರಣ್ಯ ಪ್ರದೇಶದ ಒಳಗೆ ಈ ಪುರಾತನ ಬಾವಿ ನೈಸರ್ಗಿಕವಾಗಿ ನಿರ್ಮಾಣವಾದದ್ದೋ ಅಥವಾ ಯಾರಾದರೂ ಇದನ್ನು ನಿರ್ಮಿಸಿದರೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಅರಣ್ಯ ಪ್ರದೇಶದ ಎತ್ತರದ ಪ್ರದೇಶದಿಂದ ಹರಿದು ಬರುವ ನೀರು ಈ ಬಾವಿಗೆ ಸೇರುತ್ತಿದೆ. ಈ ಬಾವಿ ವೃತ್ತಾಕಾರದಲ್ಲಿದ್ದು, ಬಂಡೆ ಕಲ್ಲು, ಮುರ ಕಲ್ಲಿನಿಂದ ಕೆತ್ತಿ ನಿರ್ಮಿಸಿದಂತೆ ಕಂಡುಬರುತ್ತಿದೆ. ಬಾವಿಯು 15 ರಿಂದ 20 ಅಡಿ ಆಳವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಬಾವಿಯ ನೀರು ಎಲ್ಲಿಗೆ ಹೋಗುತ್ತದೆ?

ಬಾವಿಯ ಅಡಿ ಭಾಗದಲ್ಲಿ ಸೆಳೆಯಂತಿದ್ದು, ಇದೇ ಸೆಳೆಯಿಂದ ನೀರು ಹರಿದು ಸುಮಾರು 500 ಮೀಟರ್ ದೂರದವರೆಗೆ ಹೋಗುತ್ತದೆ. ವಿಚಿತ್ರ ಎಂದರೆ ಮಳೆಗಾಲದಲ್ಲಿ ನಿರಂತರ ನೀರು ಹರಿದು ಬಂದು ಸೇರುತ್ತಿದ್ದರೂ, ಬಾವಿ ಮಾತ್ರ ತುಂಬುತ್ತಿಲ್ಲ. ಬಾವಿಯೊಳಗಿನಿಂದ ನೀರು ಬೇರೆಡೆಗೆ ಹರಿದು ಸಾಗುತ್ತದೆ. ಬಾವಿಗೆ ಸೇರುವ ನೀರು ತುದಿಯಡ್ಕ ಬೈಲು ಎಂಬಲ್ಲಿಗೆ ಸೇರುತ್ತದೆ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಪಯಸ್ವಿನಿ ನದಿಗೆ ಸೇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಂತ ಯಾರಲ್ಲೂ ಇದಕ್ಕೆ ಸ್ಪಷ್ಟ ಉತ್ತರವಿಲ್ಲ.

ಬೇಸಿಗೆಯಲ್ಲಿ ಈ ಬಾವಿ ಹಾಗೂ ಸುತ್ತಮುತ್ತಲ ಪ್ರದೇಶ ನೀರು ಇಲ್ಲದೆ ವಿವಿಧ ಸಮತಟ್ಟಾದ ಕಲ್ಲಿನ ಪದರದಲ್ಲಿ ವಿವಿಧ ಆಕೃತಿಗಳು ಕಾಣಿಸುತ್ತದೆ. ಬಾವಿಯ ಸುಮಾರು 400 ಮೀಟರ್ ದೂರದ ಮೇಲ್ಘಾಗದ ಪರಿಸರದಲ್ಲಿ ವಿಶಾಲವಾದ ಮೈದಾನದಂತಿರುವ ಕಲ್ಲಿನ ಪದರಗಳ ಜಾಗವಿದೆ. ನಿಖರವಾಗಿ ತಿಳಿದುಬಾರದಿದ್ದರೂ ಇದು ವಿಚಿತ್ರ ಆಕೃತಿಗಳಂತೆ ಗೋಚರಿಸುತ್ತದೆ. ಹಸು-ಕರು, ಆನೆ, ರೇಖೆಗಳು, ಚೌಕಾಕಾರದ ಆಕೃತಿಗಳು, ವೃತ್ತಾಕಾರದ ಚಕ್ರಗಳು, ಬಾಣದ ಗುರುತುಗಳು, ಚೆನ್ನೆಮಣೆಯಂತ ಆಕೃತಿಗಳು ಕಂಡುಬಂದಿದೆ. ಒಟ್ಟಿನಲ್ಲಿ ಮೆದಿನಡ್ಕ ಪ್ರದೇಶದ ವಿಸ್ಮಯ ಬಾವಿ, ವಿಶಾಲ ಮೈದಾನ ಕುತೂಹಲವನ್ನು ಸೃಷ್ಟಿಸುತ್ತಿದೆ. ಇದಲ್ಲದೆ, ಈ ಭಾಗದಲ್ಲಿ ಇನ್ನೂ ಇದೇ ರೀತಿಯ ಎರಡು ಬಾವಿಗಳಿವೆ. ಹಚ್ಚ ಹಸಿರಿನಲ್ಲಿ ನಿಗೂಢವಾಗಿರುವ ಈ ಬಾವಿಯ ಬಗ್ಗೆ ಸಂಶೋಧನೆ ನಡೆಸಿದ ಬಳಿ ಜನರ ಸಂಶಯಗಳಿಗೆ ಉತ್ತರ ದೊರಕಲಿದೆ.

ಅಧ್ಯಯನಕ್ಕೆ ಸಂಶೋಧಕರ ತಂಡ

ವಿಸ್ಮಯಕಾರಿ ಬಾವಿ ಮತ್ತು ಕಲ್ಲಿನ ಪದರಗಳಲ್ಲಿ ಕಂಡು ಬರುವ ವಿವಿಧ ಆಕೃತಿಗಳ ಅಧ್ಯಯನಕ್ಕೆ ಉಡುಪಿ ಕಾಲೇಜಿನ ಇತಿಹಾಸ ತಜ್ಞ ಪ್ರೊ. ಮುರುಗೇಶ್ ಅವರ ತಂಡ 10 ದಿನದಲ್ಲಿ ಅಜ್ಜಾವರದ ಮೇನಾಲದ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ವಿಸ್ಮಯಕಾರಿ ಬಾವಿಯ ಬಗ್ಗೆ ಇರುವ ಕುತೂಹಲಕ್ಕೆ ತೆರೆಬೀಳಲಿದೆ.