ವಿಶ್ವದ 20 ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿ ಬಿಡುಗಡೆ; ಭಾರತದ ಆಮ್‌ರಸಕ್ಕೆ ಮೊದಲ ಸ್ಥಾನ, ಈ ಖಾದ್ಯವೂ ಲಿಸ್ಟ್‌ನಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಶ್ವದ 20 ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿ ಬಿಡುಗಡೆ; ಭಾರತದ ಆಮ್‌ರಸಕ್ಕೆ ಮೊದಲ ಸ್ಥಾನ, ಈ ಖಾದ್ಯವೂ ಲಿಸ್ಟ್‌ನಲ್ಲಿದೆ

ವಿಶ್ವದ 20 ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿ ಬಿಡುಗಡೆ; ಭಾರತದ ಆಮ್‌ರಸಕ್ಕೆ ಮೊದಲ ಸ್ಥಾನ, ಈ ಖಾದ್ಯವೂ ಲಿಸ್ಟ್‌ನಲ್ಲಿದೆ

ವಿಶ್ವದ ಅತ್ಯುತ್ತಮ ಮಾವಿನ ಹಣ್ಣಿನ ಖಾದ್ಯಗಳಲ್ಲಿ ಭಾರತದ ಆಮ್‌ರಸಕ್ಕೆ ಅಗ್ರಸ್ಥಾನ ಸಿಕ್ಕಿದೆ. ಇದು ಪ್ರಪಂಚದ ಬೆಸ್ಟ್‌ ಮ್ಯಾಂಗೋ ಡಿಶ್‌ ಎನ್ನುವ ಕಿರೀಟ ಮುಡಿಗೇರಿಸಿಕೊಂಡಿದೆ. ಮಾವಿನ ಹಣ್ಣಿನಿಂದ ತಯಾರಾಗುವ ವಿಶ್ವದ ಇತರ 20 ಬೆಸ್ಟ್‌ ರೆಸಿಪಿಗಳ ಪಟ್ಟಿ ಇಲ್ಲಿದೆ.

ವಿಶ್ವದ 20 ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿ ಬಿಡುಗಡೆ
ವಿಶ್ವದ 20 ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿ ಬಿಡುಗಡೆ

ಇದು ಮಾವಿನ ಹಣ್ಣಿನ ಕಾಲ, ಎಲ್ಲಿ ನೋಡಿದರೂ ಮಾವಿನ ಹಣ್ಣಿನ ಘಮವೇ ಹರಡಿರುತ್ತದೆ. ಮಾವಿನ ಹಣ್ಣು ತಿನ್ನುವುದು ಮಾತ್ರವಲ್ಲ ಇದರಿಂದ ಬಗೆ ಬಗೆಯ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನೂ ತಯಾರಿಸಬಹುದು. ಇದೀಗ ಭಾರತದಲ್ಲಿ ತಯಾರಾಗುವ ಮಾವಿನ ಹಣ್ಣಿನ ಖಾದ್ಯವೊಂದು ವಿಶ್ವದ ಅತ್ಯುತ್ತಮ ಮಾವಿನ ಖಾದ್ಯ ಎನ್ನುವ ಪಟ್ಟ ಗಿಟ್ಟಿಸಿಕೊಂಡಿದೆ.

ಪ್ರಸಿದ್ಧ ಆನ್‌ಲೈನ್ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್‌ಅಟ್ಲಾಸ್ ಭಾರತದಲ್ಲಿ ಅದರಲ್ಲೂ ಬೇಸಿಗೆಯಲ್ಲಿ ವಿಶೇಷವಾಗಿ ತಯಾರಿಸುವ ಆಮ್‌ರಸವನ್ನು ಮಾವಿನ ಹಣ್ಣಿನ ಖಾದ್ಯಗಳಲ್ಲಿ ದಿ ಬೆಸ್ಟ್‌ ಎಂದು ಗುರುತಿಸಿದೆ. ಈ ಮನ್ನಣೆಯು ಭಾರತೀಯ ಪಾಕಪದ್ಧತಿಯ ರುಚಿ ಮತ್ತು ವೈವಿಧ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ. ಟೇಸ್‌ ಅಟ್ಲಾಸ್‌ ಗುರುತಿಸಿದ ವಿಶ್ವ 20 ವಿವಿಧ ಬಗೆಯ ಮಾವಿನ ಖಾದ್ಯಗಳಲ್ಲಿ ಆಮ್‌ರಸ ಮೊದಲ ಸ್ಥಾನ ಗಳಿಸಿದೆ.

ಈ ಪಟ್ಟಿಯಲ್ಲಿ ಆಮ್‌ರಸ ಮಾತ್ರವಲ್ಲ ಭಾರತದಲ್ಲಿ ಮಾವಿನ ಸೀಸನ್‌ನಲ್ಲಿ ಮಾಡುವ ಇನ್ನೊಂದು ಖಾದ್ಯ ಕೂಡ ಸ್ಥಾನ ಪಡೆದುಕೊಂಡಿದೆ. ಅದು ಯಾವುದು ಅಂತೀರಾ, ಅದುವೇ ಮಾವಿನ ಚಟ್ನಿ. ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಮಾವಿನ ಚಟ್ನಿ ಟೇಸ್ಟ್‌ ಅಟ್ಲಾಸ್‌ನ ವಿಶ್ವದ 20 ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿಯಲ್ಲಿ 5 ಸ್ಥಾನ ಗಳಿಸಿದೆ.

ಹಾಗಾದರೆ ಟೇಸ್ಟ್‌ ಅಟ್ಲಾಸ್‌ನಲ್ಲಿರುವ ಮಾವಿನ ಇತರ ಬೆಸ್ಟ್‌ ಖಾದ್ಯಗಳು ಯಾವುವು, ಆಮ್‌ರಸ, ಮ್ಯಾಂಗೋ ಚಟ್ನಿಯ ವಿಶೇಷಗಳೇನು ಎನ್ನುವ ವಿವರ ಇಲ್ಲಿದೆ.

ವಿಶ್ವದ 20 ಬೆಸ್ಟ್‌ ಮಾವಿನ ಹಣ್ಣಿನ ರೆಸಿಪಿಗಳು

1. ಆಮ್‌ರಸ (ಭಾರತ)

2. ಮ್ಯಾಂಗೋ ಸ್ಟಿಕಿ ರೈಸ್‌ (ಥಾಯ್ಲೆಂಡ್‌)

3. ಸೋರ್ಬೆಟ್ಸ್ (ಫಿಲಿಪ್ಪೀನ್ಸ್)

4. ರುಜಾಕ್ (ಜಾವಾ, ಇಂಡೋನೇಷ್ಯಾ)

5. ಮಾವಿನ ಚಟ್ನಿ (ಮಹಾರಾಷ್ಟ್ರ, ಭಾರತ)

6. ಮಾವಿನ ಪೊಮೆಲೊ ಸಾಗೋ (ಹಾಂಗ್ ಕಾಂಗ್, ಚೀನಾ)

7. ಚೈನೀಸ್ ಮ್ಯಾಂಗೊ ಪುಡ್ಡಿಂಗ್ (ಗುವಾಂಗ್‌ಡಾಂಗ್, ಚೀನಾ)

8. ರುಜಾಕ್ ಸಿಂಗೂರ್ (ಸುರಬಯಾ, ಇಂಡೋನೇಷ್ಯಾ)

9. ಬಯೋಬಿಂಗ್‌ (ಚೀನಾ)

10. ಮಮುವಾಂಗ್ ನಾಮ್ ಪ್ಲಾ ವಾನ್ (ಥೈಲ್ಯಾಂಡ್)

11. ಸೋಮ್ ಟಾಮ್ ಮಾಮುವಾಂಗ್ (ಥೈಲ್ಯಾಂಡ್)

12. ಗಾಜ್ಪಾಚೊ ಡಿ ಮಾಂಗೊ (ಆಂಡಲೂಸಿಯಾ, ಸ್ಪೇನ್)

13. ಆಮ್ ದಾಲ್ (ಪಶ್ಚಿಮ ಬಂಗಾಳ, ಭಾರತ)

14. ಜಿಂಜರ್ ಮ್ಯಾಂಗೋ ಚಿಕನ್ (ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು)

15. ಗ್ರೀನ್‌ ಮ್ಯಾಂಗೊ ಸಲಾಡ್ ಅಥವಾ ಕ್ರೂಕ್ ಸ್ವಯ್ (ಕಾಂಬೋಡಿಯಾ)

16. ನಾಮ್ ಪ್ಲಾ ವಾನ್ (ಥೈಲ್ಯಾಂಡ್)

17. ಅಂಬಾ (ಮಹಾರಾಷ್ಟ್ರ, ಭಾರತ)

18. ರುಜಾಕ್ ಪೆಟಿಸ್ (ಸುರಬಯಾ, ಇಂಡೋನೇಷ್ಯಾ)

19. ಮ್ಯಾಂಗೋಸ್ ಎ ಲಾ ಕ್ಯಾನೆಲಾ (ತಮೌಲಿಪಾಸ್, ಮೆಕ್ಸಿಕೋ)

20. ರುಜಾಕ್ ಕುಕಾ (ಪಶ್ಚಿಮ ಜಾವಾ, ಇಂಡೋನೇಷ್ಯಾ)

ಆಮ್‌ರಸ

ಆಮ್‌ರಸವು ಭಾರತದ ಪಶ್ಚಿಮ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ತಯಾರಿಸುವ ಅದ್ಭುತ ರುಚಿಯ ಸಿಹಿತಿನಿಸು. ಇದನ್ನು ಸಂಪೂರ್ಣವಾಗಿ ಮಾಗಿದ ಮಾವಿನಹಣ್ಣಿನ ತಿರುಳನ್ನು ಪ್ಯೂರಿ ಮಾಡುವ ಮೂಲಕ ತಯಾರಿಸಲಾಗುತ್ತದೆ. ಇದು ಮಾವಿನ ನೈಸರ್ಗಿಕ ಪರಿಮಳ ಹಾಗೂ ರುಚಿಯನ್ನು ನೀಡುವ ತಿನಿಸು. ಇದಕ್ಕೆ ಏಲಕ್ಕಿ, ಕೇಸರಿ ಸೇರಿಸುವ ಮೂಲಕ ಇದರ ರುಚಿಯನ್ನು ಹೆಚ್ಚಿಸಲಾಗುತ್ತದೆ.

ಮಾವಿನ ಚಟ್ನಿ

ಭಾರತದಲ್ಲಿ ಮಾವಿನ ಸೀಸನ್‌ನಲ್ಲಿ ಬಹುತೇಕ ರಾಜ್ಯಗಳಲ್ಲಿ ತಯಾರಿಸುವ ಖಾದ್ಯ ಎಂದರೆ ಮಾವಿನ ಚಟ್ನಿ. ಮಾಗಿದ ಮಾವಿನ ಹಣ್ಣುಗಳು ಮತ್ತು ಮಸಾಲೆಗಳಿಂದ ತಯಾರಿಸಿದ ಈ ಸಿಹಿ ಮತ್ತು ಖಾರದ ಖಾದ್ಯದ ರುಚಿ ನಿಜಕ್ಕೂ ಅದ್ಭುತ. ಆಮ್ರಾಸ್‌ಗಿಂತ ಭಿನ್ನವಾಗಿ, ಮಾವಿನ ಚಟ್ನಿಯು ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿಗಳು, ಜೀರಿಗೆ, ಕೊತ್ತಂಬರಿ ಮುಂತಾದುವನ್ನು ಸೇರಿಸಿ ತಯಾರಿಸಲಾಗುತ್ತದೆ. ಇದು ಹೆಚ್ಚು ಸಂಕೀರ್ಣ ಪರಿಮಳವನ್ನು ಹೊಂದಿರುತ್ತದೆ.

ವಿಶ್ವದ ಬೆಸ್ಟ್‌ ಮಾವಿನ ಖಾದ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮ್ಯಾಂಗೋ ಚಟ್ನಿ ಹಾಗೂ ಆಮ್‌ರಸ್‌ವನ್ನು ಈ ಸೀಸನ್‌ ಮುಗಿಯುವ ಮುನ್ನ ಒಮ್ಮೆಯಾದ್ರೂ ತಿನ್ನದೇ ಇರಬೇಡಿ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.