ಮಾವಿನ ಋತುವಿನಲ್ಲಿ ಮಾರುಕಟ್ಟೆಗೆ ಮೊದಲು ಆಗಮಿಸುವ ಸಿಂದೂರ ಮಾವು; ಸಿಹಿಹುಳಿ ಸಮ್ಮಿಶ್ರಣದ ವಿಶಿಷ್ಠ ಹಣ್ಣು
ಸಿಂದೂರ ಎಂದಾಕ್ಷಣ ಆಪರೇಷನ್ ಸಿಂದೂರ ನೆನಪಾಗುತ್ತದೆ, ಆದರೆ ನಾವಿಲ್ಲಿ ಹೇಳ್ತಾ ಇರೋದು ಸಿಂದೂರ ಮಾವಿನಹಣ್ಣಿನ ಬಗ್ಗೆ. ಕೆಂಪು ಕೆಂಪಾದ ಈ ಮಾವಿನ ಹಣ್ಣಿಗೇಕೆ ಸಿಂದೂರ ಎಂಬ ಹೆಸರು ಬಂತು, ಈ ಹಣ್ಣಿನ ವೈಶಿಷ್ಟ್ಯವೇನು ನೋಡಿ.

ಹಣ್ಣುಗಳ ರಾಜ ಮಾವಿನಲ್ಲಿ ಸಾಕಷ್ಟು ವಿಧಗಳಿವೆ. ಒಂದಕ್ಕಿಂತ ಒಂದು ಮಾವಿನ ಹಣ್ಣಿನ ರುಚಿ ಅದ್ಭುತವಾಗಿರುತ್ತೆ, ಮಾತ್ರವಲ್ಲ ಮಾವಿಗಿರುವ ಹೆಸರುಗಳು ಕೂಡ ಒಂದಕ್ಕಿಂತ ಒಂದು ಡಿಫ್ರೆಂಟ್. ಬೇಸಿಗೆಯ ದಿನಗಳಲ್ಲಿ ಜಿಹ್ವ ಚಾಪಲ್ಯ ತಣಿಸುವ ಮಾವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ನಿಮಗೆ ಮಾವಿನ ಹಣ್ಣು ಫೇವರಿಟ್ ಅಂತಾದ್ರೆ ನೀವು ಖಂಡಿತ ಸಿಂದೂರ ಮಾವಿನ ಹಣ್ಣಿನ ಬಗ್ಗೆ ಕೇಳಿರುತ್ತೀರಿ. ಸಿಂದೂರಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಆದರೆ ಈ ಕೆಂಪು ಕೆಂಪು ಬಣ್ಣದ ಹಣ್ಣು ಸಿಹಿ-ಹುಳಿ ರುಚಿಯೊಂದಿಗೆ ಸುವಾಸನೆಯನ್ನೂ ಹರಡುತ್ತದೆ. ಸಿಂದೂರ ಮಾವಿನ ಹಣ್ಣಿಗೇಕೆ ಈ ಹೆಸರು ಬಂತು, ಈ ಹಣ್ಣಿನ ವೈಶಿಷ್ಟ್ಯವೇನು, ಇದನ್ನು ಎಲ್ಲಿ ಹೆಚ್ಚು ಬೆಳೆಯಲಾಗುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ.
ಸಿಂದೂರ ಮಾವಿನ ಹೆಸರಿನ ಇತಿಹಾಸ
‘ಸಿಂದೂರ’ ಎಂಬ ಹೆಸರು ಮಾವಿನ ಹಣ್ಣಿನ ಲೇಬಲ್ ಮಾತ್ರವಲ್ಲ, ಇದು ಭಾರತದ ಸಾಂಸ್ಕೃತಿಕ ಇತಿಹಾಸದ ಪ್ರತಿಬಿಂಬವೂ ಆಗಿದೆ. ಸಂಸ್ಕೃತದಲ್ಲಿ, ಸಿಂದೂರ ಎಂದರೆ ಪವಿತ್ರ ಕೆಂಪು ವರ್ಣದ್ರವ್ಯ. ಇದನ್ನು ಧಾರ್ಮಿಕ ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಶುಭ ಮತ್ತು ಶುದ್ಧತೆಯನ್ನು ಸೂಚಿಸುವ ಈ ರೋಮಾಂಚಕ ಬಣ್ಣವು ಮಾವಿನ ಹಣ್ಣಿನ ನೋಟವನ್ನು ಪ್ರತಿಬಿಂಬಿಸುತ್ತದೆ.
ಮಾವಿನ ಬಣ್ಣ ಮತ್ತು ಅದರ ಸಾಂಸ್ಕೃತಿಕ ಮಹತ್ವದ ನಡುವಿನ ಸಂಪರ್ಕವು ಈ ವೈವಿಧ್ಯತೆಗೆ ಆಳವಾದ, ಬಹುತೇಕ ಆಧ್ಯಾತ್ಮಿಕ ಆಕರ್ಷಣೆಯನ್ನು ನೀಡುತ್ತದೆ. ಅನೇಕ ವಿಧಗಳಲ್ಲಿ, ಸಿಂಧೂರ ಮಾವು ಭಾರತೀಯ ಸಂಪ್ರದಾಯದ ಸಾರವನ್ನು ಸಾಕಾರಗೊಳಿಸುತ್ತದೆ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಒಂದೇ ಹಣ್ಣಿನಲ್ಲಿ ಸಂಪರ್ಕಿಸುತ್ತದೆ. ಸಿಂದೂರ ತಿಲಕದ ಕೆಂಪು ಬಣ್ಣ ಹೊಂದಿರುವ ಕಾರಣ ಈ ಮಾವಿನ ಸಿಂದೂರ ಎಂದು ಹೆಸರಿಡಲಾಯಿತು ಎಂದು ಹೇಳಲಾಗುತ್ತದೆ.
ಸಿಂದೂರ ಮಾವಿನ ಹಣ್ಣಿನ ವಿಶೇಷತೆ ಏನು?
ಸಿಂದೂರ ಮಾವಿನ ಹಣ್ಣು ಸಿಹಿ, ಹುಳಿ ರುಚಿಯ ಸಂಯೋಜನೆಯಾಗಿದೆ. ಅತಿಯಾಗಿ ಸಿಹಿಯಾಗಿರುವ ಅಥವಾ ತುಂಬಾ ಹುಳಿಯಾಗಿರುವ ಇತರ ಹಲವು ಮಾವಿನ ಪ್ರಭೇದಗಳಿಗಿಂತ ಭಿನ್ನವಾಗಿ, ಈ ಮಾವು ಮೃದುವಾದ, ಸಂಪೂರ್ಣವಾಗಿ ಸಮತೋಲಿತ ಪರಿಮಳವನ್ನು ನೀಡುತ್ತದೆ. ಇದರ ಸಿಹಿ ರುಚಿಯ ಮಧ್ಯೆ ಹುಳಿಯು ಇಣುಕುತ್ತದೆ. ಇದರ ಭಿನ್ನ ರುಚಿಯು ಖಂಡಿತ ಮಾವು ಪ್ರಿಯರಿಗೆ ಇಷ್ಟವಾಗುತ್ತದೆ.
ಮಾವಿನ ಹಣ್ಣಿನ ಸೀಸನ್ ಆರಂಭವಾದಾಗ ಮೊದಲು ಈ ಹಣ್ಣು ಮಾರುಕಟ್ಟೆ ಪ್ರವೇಶಿಸುತ್ತದೆ. ಇತರ ಮಾವಿನ ಪ್ರಭೇದಗಳು ಹಣ್ಣಾಗಲು ಸಮಯ ತೆಗೆದುಕೊಳ್ಳಬಹುದು, ಆದರೆ ಈ ಹಣ್ಣುಗಳನ್ನು ಮಾರುಕಟ್ಟೆಯನ್ನು ಅಲಂಕರಿಸಿ, ಬೇಸಿಗೆಯ ಆರಂಭವನ್ನು ಸೂಚಿಸುತ್ತವೆ.
ಸಿಂದೂರ ಮಾವಿನಹಣ್ಣು ಎಲ್ಲಿ ಬೆಳೆಯಲಾಗುತ್ತದೆ?
ಸಿಂದೂರ ಮಾವು ದಕ್ಷಿಣ ಭಾರತದ ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಈ ಮಾವಿನಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿನ ಬೆಚ್ಚಗಿನ ಹವಾಮಾನ ಮತ್ತು ಫಲವತ್ತಾದ ಮಣ್ಣು ಸಿಂದೂರ ಮಾವಿನ ಬೆಳೆಗೆ ಹೇಳಿ ಮಾಡಿಸಿದಂತಿದೆ. ಈ ಹಣ್ಣು ಬೇಸಿಗೆಯ ಆರಂಭದಲ್ಲಿ ಅಂದರೆ ಮಾರ್ಚ್‌ನಿಂದ ಮೇವರೆಗೆ ಲಭ್ಯವಿರುತ್ತದೆ.
ಸಿಂದೂರ ಮಾವಿನಹಣ್ಣಿನ ಖರೀದಿ ಹೇಗೆ?
ಸಿಂದರೂ ಮಾವಿನಹಣ್ಣು ದಕ್ಷಿಣ ಭಾರತದಲ್ಲಿ ಹೆಚ್ಚು ಬೆಳೆಯುವುದಾದರೂ ಭಾರತದಾದ್ಯಂತ ಮಾರುಕಟ್ಟೆಗಳಲ್ಲಿ ಈ ಹಣ್ಣು ಲಭ್ಯವಿರುತ್ತದೆ. ದಕ್ಷಿಣ ಭಾರತದಲ್ಲಿ ಈ ಹಣ್ಣು ಸ್ಥಳೀಯ ಮಾರುಕಟ್ಟೆ, ಹಣ್ಣಿನ ಅಂಗಡಿಗಳಲ್ಲೂ ಸಿಗುತ್ತದೆ. ಈ ವರ್ಷ ಬೇಸಿಗೆ ಮುಗಿಯುವ ಮೊದಲು ನೀವು ಸಿಂದೂರ ಮಾವಿನಹಣ್ಣಿನ ರುಚಿ ನೋಡಿ.
ಈ ವಿಶೇಷ ರುಚಿಯ ಮಾವಿನಹಣ್ಣು ಆನ್‌ಲೈನ್ ವೇದಿಕೆಗಳಲ್ಲೂ ಲಭ್ಯವಿದೆ. ಬಿಗ್‌ಬಾಸ್ಕೆಟ್, ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಜಾಲತಾಣಗಳಲ್ಲೂ ನೀವು ಸಿಂದೂರ ಮಾವಿನಹಣ್ಣು ಖರೀದಿ ಮಾಡಬಹುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)