ಕನ್ನಡ ಸುದ್ದಿ  /  ಜೀವನಶೈಲಿ  /  Mango: ಮೊಡವೆಗೆ ಕಾರಣವಾಗುವುದೇ ಮಾವಿನಹಣ್ಣು? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

Mango: ಮೊಡವೆಗೆ ಕಾರಣವಾಗುವುದೇ ಮಾವಿನಹಣ್ಣು? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

ಬೇಸಿಗೆ ಕಾಲದಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವರು ಮಾವಿನಹಣ್ಣು ತಿನ್ನುವುದರಿಂದ ಮೊಡವೆ ಹಾಗೂ ದದ್ದು ಉಂಟಾಗುತ್ತದೆ ಎನ್ನುತ್ತಾರೆ. ಇದು ನಿಜವೇ ಎಂದು ತಿಳಿಯಲು ಈ ಲೇಖನ ಓದಿ.

ಮೊಡವೆಗೆ ಕಾರಣವಾಗುವುದೇ ಮಾವು?
ಮೊಡವೆಗೆ ಕಾರಣವಾಗುವುದೇ ಮಾವು?

ಬೇಸಿಗೆಯಲ್ಲಿ ಹಣ್ಣುಗಳ ರಾಜ ಮಾವಿನಹಣ್ಣಿನದ್ದೇ ದರ್ಬಾರು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನಹಣ್ಣಿನದ್ದೇ ಘಮ. ರಸಭರಿತ ಮಾವಿನಹಣ್ಣಿನಲ್ಲಿ ವಿಟಮಿನ್‌ ಸಿ, ಮೆಗ್ನೇಶಿಯಂ, ಪೊಟ್ಯಾಶಿಯಂ ಹಾಗೂ ನಾರಿನಂಶ ಸಮೃದ್ಧವಾಗಿದೆ. ಆದರೆ ಈ ಹಣ್ಣಿನ ಸೇವನೆಯಿಂದ ಚರ್ಮದ ಸಮಸ್ಯೆ ಕಾಣಿಸುತ್ತದೆ ಎನ್ನುತ್ತಾರೆ, ಇದು ನಿಜವೇ ನೋಡೋಣ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಚರ್ಮರೋಗ ತಜ್ಞ ಡಾ. ಕಿರಣ್‌ ಸೇಥಿ ʼಬಾಯಲ್ಲಿ ನೀರೂರಿಸುವ ಮಾವಿನಹಣ್ಣು ತಿನ್ನುವ ಆಸೆ ನಿಮಗಿದ್ದು, ಮುಖದಲ್ಲಿ ಮೊಡವೆಯಾಗುವ ಭಯದಿಂದ ಹಣ್ಣು ತಿನ್ನದೇ ಇದ್ದೀರಾ, ನನ್ನೊಂದಿಗೆ ಬನ್ನಿ ನಾನು ನಿಮಗೆ ಕೆಲವೊಂದು ಟಿಪ್ಸ್‌ ಹೇಳುತ್ತೇನೆʼ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ವಿವರಣೆ ನೀಡುವ ಅವರು ʼಯಾವುದೇ ಕೃತಕ ಕಾರ್ಬೈಡ್‌ಗಳಿಲ್ಲದೆ, ನೈಸರ್ಗಿಕಾಗಿ ಮಾಗಿದ ಸಾವಯವ ಮಾವಿನಹಣ್ಣುಗಳನ್ನು ತಿಂದರೆ ಖಂಡಿತ ಮೊಡವೆ ಕಾಡುವುದಿಲ್ಲ. ಅಲ್ಲದೆ ಇದರಿಂದ ಮೊಡವೆಗಳಾಗುವ ಅಪಾಯವೂ ಕಡಿಮೆʼ ಎಂದಿದ್ದಾರೆ.

ʼಎರಡನೆಯದಾಗಿ, ಮಾವಿನಹಣ್ಣಿನ ಸಿಹಿಯು ನಾಲಿಗೆಯ ಚಪಲವನ್ನು ಹೆಚ್ಚಿಸುವುದು ಸಹಜ. ಆದರೆ ಅತಿಯಾದ ಸಕ್ಕರೆಯ ಅಂಶವನ್ನು ಸೇವಿಸುವುದರಿಂದ ಮೊಡವೆಗೆ ಕಾರಣವಾಗಬಹುದು, ಹಾಗಾಗಿ ಮಿತವಾಗಿ ಸೇವಿಸುವುದು ಅವಶ್ಯʼ ಎನ್ನುತ್ತಾರೆ ಆಕೆ.

ಇವರ ಹೇಳಿಕೆಯನ್ನು ವಿರೋಧಿಸುವ ಗುರುಗ್ರಾಮದ ಪಾರಸ್‌ ಹೆಲ್ತ್‌ ಸೆಂಟರ್‌ನ ವೈದ್ಯ ಡಾ. ಮನ್‌ದೀಪ್‌ ಸಿಂಗ್‌, ʼಮಾವಿನಹಣ್ಣು ಮೊಡವೆಗಳನ್ನು ಉಂಟು ಮಾಡುವುದಿಲ್ಲ. ಆದರೆ ಕೆಲವೊಮ್ಮೆ ಮಾವಿನಹಣ್ಣಿನ ಸಿಪ್ಪೆಯಲ್ಲಿ ಅಲರ್ಜಿಯನ್ನು ಉಂಟು ಮಾಡುವ ವಸ್ತುಗಳಿರುತ್ತವೆ. ಮಾವಿನರಸದಲ್ಲಿ ಗ್ಲೈಸೆಮಿಕ್‌ ಅಂಶ ಹೆಚ್ಚಿದ್ದು, ಇದು ಮೊಡವೆ ಹಾಗೂ ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದುʼ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದಕ್ಕೆ ಪೂರಕವಾಗಿ ಮಾವಿನಹಣ್ಣಿನಿಂದ ಮೊಡವೆಗಳು ಉಂಟಾಗಿವೆ ಎಂದು ನಿಮಗೆ ಅನ್ನಿಸಿದರೆ ಅಥವಾ ಅಂತಹ ಅನುಮಾನ ಕಾಡಿದರೆ, ಹಣ್ಣು ತಿನ್ನುವ ಮೊದಲು ಈ ಟಿಪ್ಸ್‌ಗಳನ್ನು ಅನುಸರಿಸಿ.

ಹೀಗೆ ಮಾಡಿ

* ತಾಜಾ ಮಾವಿನಹಣ್ಣನ್ನು ಸೇವಿಸಿ, ಜ್ಯೂಸ್‌ ಮಾಡಿ ಕುಡಿಯದೇ ಇರುವುದು ಉತ್ತಮ.

* ಮಾವಿನಹಣ್ಣಿನ ಸಿಪ್ಪೆಯನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ತಾಗಿಸಬೇಡಿ.

* ಮಾವಿನಹಣ್ಣನ್ನು ನೇರವಾಗಿ ಬಾಯಿಯಿಂದ ಕಚ್ಚಿ ತಿನ್ನಬೇಡಿ. ಅದರ ಬದಲು ಕತ್ತರಿಸಿ ಹೋಳುಗಳನ್ನಾಗಿಸಿ, ಆ ಹೋಳುಗಳನ್ನು ತಿನ್ನಿ.

* ಹಸಿ ಮಾವಿನಹಣ್ಣು ತಿನ್ನುವ ಬದಲು ಮಾವಿನಹಣ್ಣಿನ ಬೇಯಿಸಿದ ಖಾದ್ಯಗಳನ್ನು ತಯಾರಿಸಿ.

ಈ ಬಗ್ಗೆ ಇನ್ನಷ್ಟು ವಿವರಿಸುವ ಡಾ. ಕಿರಣ್‌ ಮಾವಿನ ಹಣ್ಣು ತಿನ್ನುವುದರಿಂದಾಗುವ ಅಪಾಯಗಳನ್ನು ಎದುರಿಸುವ ಉಪಾಯವನ್ನೂ ತಿಳಿಸಿದ್ದಾರೆ. ʼಮಾವಿನಹಣ್ಣು ತಿನ್ನುವುದರಿಂದ ಯಾವುದೇ ರೀತಿಯ ಮೊಡವೆ ಅಥವಾ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ ಎನ್ನುವ ಬಗ್ಗೆ ಯಾವುದೇ ಸರಿಯಾದ ವೈದ್ಯಕೀಯ ಪುರಾವೆಗಳಿಲ್ಲ. ಒಂದು ವೇಳೆ ನೀವು ಬಿಸಿಯಾದ ಅಥವಾ ಬಿಸಿಲಿನಲ್ಲಿಟ್ಟ ಮಾವಿನಹಣ್ಣನ್ನು ತಿನ್ನುವುದರಿಂದ ಮೊಡವೆಯಾಗುವುದನ್ನು ಗಮನಿಸಿದರೆ, ಮೊದಲು ಅವುಗಳನ್ನು ತಂಪು ಮಾಡಿ ನಂತರ ತಿನ್ನಿʼ ಎಂದಿದ್ದಾರೆ.

ನೆನೆಸಿಟ್ಟು ತಿನ್ನುವುದು ಉತ್ತಮ

ಮಾವಿನಹಣ್ಣನ್ನು ಸೇವಿಸುವ ಮುನ್ನ ನೆನೆಸಿಡುವ ಬಗ್ಗೆ ತಿಳಿಸುವ ಡಾ. ಮನ್‌ದೀಪ್‌ ʼಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಇದು ಮಾಗಿದ ಹಣ್ಣನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಲ್ಲದೆ ಹೆಚ್ಚುವರಿ ಫೈಟಿಕ್‌ ಆಮ್ಲ ಹಾಗೂ ಮಾವಿನ ಹಣ್ಣಿನ ಸಿಪ್ಪೆಯ ಮೇಲಿನ ರಾಸಾಯನಿಕ ಅಂಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಮೊಡವೆ ಅಥವಾ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆʼ ಎನ್ನುತ್ತಾರೆ.

ಇದನ್ನೂ ಓದಿ

Summer 2023 and mango: ಮಾವಿನಹಣ್ಣನ್ನು ನೆನೆಸಿಟ್ಟು ತಿನ್ನಬೇಕೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

Summer2023 and Mango: ಹಣ್ಣುಗಳ ರಾಜ ಮಾವಿನಹಣ್ಣು ತಿನ್ನಲು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಕೆಲವರು ಮಾವಿನಹಣ್ಣನ್ನು ನೀರಿನಲ್ಲಿ ನೆನೆಸಿ ತಿನ್ನುತ್ತಾರೆ. ಇದು ಪ್ರಾಚೀನ ಕಾಲದಿಂದಲೂ ನಡೆದ ಬಂದ ವಾಡಿಕೆಯೂ ಹೌದು. ಹಾಗಾದರೆ ಇದನ್ನು ನೆನೆಸಿ ತಿನ್ನುವುದು ಏಕೆ? ಇದರಿಂದ ಆರೋಗ್ಯ ಪ್ರಯೋಜನಗಳಿವೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.