Marriage Problem: ಸಾಂಸಾರಿಕ ಜೀವನದಲ್ಲಿ ದಂಪತಿ ಮಾಡುವ ಸಾಮಾನ್ಯ ತಪ್ಪುಗಳು, ಸಂಬಂಧ ಸುಧಾರಿಸಲು ಈ ವಿಚಾರಗಳ ಮೇಲೆ ಗಮನ ಹರಿಸಿ
ಮದುವೆ ಎನ್ನುವುದು ಒಂದು ಪವಿತ್ರ ಬಂಧನ. ಆದರೆ ಅದು ಮದುಮಗ ಮತ್ತು ಮದುಮಗಳಿಗೆ ಖುಷಿ ನೀಡುವಂತಿರಬೇಕು, ಮದುವೆಯಾದ ಬಳಿಕ ಮಾಡುವ ಕೆಲವೊಂದು ತಪ್ಪುಗಳು ದಂಪತಿ ನಡುವೆ ವಿರಸಕ್ಕೆ ಕಾರಣವಾಗಬಹುದು. ಅದನ್ನು ಸರಿಪಡಿಸುವುದು ಹೇಗೆ?

ಮದುವೆ ಎಂದರೆ ಹಲವರಿಗೆ ಸಂಭ್ರಮ, ಇನ್ನು ಹಲವರಿಗೆ ಭಯವೂ ಇರಬಹುದು. ಮತ್ತೆ ಕೆಲವರಿಗೆ ಕುತೂಹಲ. ಇನ್ನು ಕೆಲವರಿಗೆ ಆತಂಕ, ಆದರೆ ಮದುವೆ ಎನ್ನುವುದು ಜೀವನದ ಒಂದು ಅತ್ಯಂತ ಮಹ್ವತಪೂರ್ಣ ಘಟ್ಟವೂ ಹೌದು. ಮದುವೆಯ ಉದ್ದೇಶವನ್ನು ಸಫಲಗೊಳಿಸಲು ದಂಪತಿ ಶ್ರಮಿಸುತ್ತಾರೆ. ಅದಕ್ಕಾಗಿ ಕೆಲವೊಂದು ಹೊಂದಾಣಿಕೆ, ತ್ಯಾಗ ಅನಿವಾರ್ಯ. ಆದರೆ ಕೆಲವೊಮ್ಮೆ ಮದುವೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣ ಹಲವು. ಜತೆಗೆ ಒಮ್ಮೆ ಉಂಟಾದ ಬಿರುಕನ್ನು ಸರಿಪಡಿಸದಿದ್ದರೆ, ಮತ್ತೆ ಅದರಿಂದ ಸಮಸ್ಯೆ ಸೃಷ್ಟಿಯಾಗಿ ದೊಡ್ಡದಾಗುತ್ತದೆ. ಹೀಗಾಗಿ ಸಮಸ್ಯೆಯನ್ನು ಕಂಡು, ಅದಕ್ಕೆ ಪರಿಹಾರವನ್ನೂ ದಂಪತಿಯೇ ಮಾಡಿಕೊಳ್ಳುವುದು ಸೂಕ್ತ. ಹಾಗಾದಾಗ ಮಾತ್ರ ಸಂಬಂಧವನ್ನು ಸುಧಾರಿಸಬಹುದು. ಇಲ್ಲವಾದರೆ ಸುಗಮ ದಾಂಪತ್ಯಕ್ಕೆ ಅಡ್ಡಿಯಾಗಬಹುದು ಮತ್ತು ಮಾನಸಿಕ ನೆಮ್ಮದಿ ಇಲ್ಲವಾಗಬಹುದು.
ಮದುವೆಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಮತ್ತು ಪರಿಹಾರ
ಇಬ್ಬರು ವಿಭಿನ್ನ ಆಲೋಚನೆಯವರು ಒಟ್ಟುಗೂಡಿದಾಗ ಅಲ್ಲಿ ಭಿನ್ನಾಭಿಪ್ರಾಯ ಸಹಜ. ಅಂತಹ ಸಂದರ್ಭದಲ್ಲಿ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಸಂಬಂಧದಲ್ಲಿ ಪ್ರೀತಿ ಮತ್ತು ಗೆಳೆತನವನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಇಬ್ಬರೂ ಸೌಹಾರ್ದತೆಯಿಂದ ಇದ್ದರೆ ಅವರ ಸಂಬಂಧವೂ ಚೆನ್ನಾಗಿರುತ್ತದೆ.
ಪೊಸೆಸಿವ್‌ನೆಸ್ ಬದಲು ನಂಬಿಕೆ ಬೆಳೆಸಿಕೊಳ್ಳಿ
ಮದುವೆಯಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಅಧಿಕಾರ ಚಲಾಯಿಸುವುದಲ್ಲ. ಅಂತಹ ಮನಸ್ಥಿತಿ ಬಿಟ್ಟು, ನಂಬಿಕೆಯನ್ನು ಬೆಳೆಸಬೇಕು. ಆಗ ಆರೋಗ್ಯಕರ ಸಂಬಂಧ ನಮ್ಮದಾಗುತ್ತದೆ. ನಿಮ್ಮ ಸಂಗಾತಿಗೆ ಸ್ವಾತಂತ್ರ್ಯ ನೀಡಿ, ಅವರ ಭಾವನೆಗಳನ್ನು ಕೂಡ ಗೌರವಿಸಿ.
ನಿಮ್ಮ ಆರೋಗ್ಯ ಕಡೆಗಣಿಸಬೇಡಿ
ನಿಮ್ಮ ಸಂಗಾತಿಯ ಆರೋಗ್ಯವನ್ನು ನೀವು ನೋಡಿಕೊಳ್ಳಬೇಕು ನಿಜ, ಆದರೆ ಅದರ ಜೊತೆಗೆ ನಿಮ್ಮ ಆರೋಗ್ಯವನ್ನು ಕೂಡ ನೋಡಿಕೊಳ್ಳಿ. ನಿಮ್ಮ ಮದುವೆಯ ಜತೆಗೆ, ಹಳೆಯ ಹವ್ಯಾಸ, ಗೆಳೆಯರು ಮತ್ತು ವೈಯಕ್ತಿಕ ಉದ್ಯೋಗದ ಭಡ್ತಿ, ಸಾಧ್ಯತೆಗಳನ್ನು ಕೈಬಿಡಬೇಡಿ.
ಮುಕ್ತ ಸಂವಹನ ಇರಲಿ
ಮುಕ್ತ ಮತ್ತು ಪ್ರಾಮಾಣಿಕ ಸಂಹವನ ನಿಮ್ಮಿಬ್ಬರಲ್ಲೂ ಇರಲಿ. ಮಾತುಕತೆಗೆ ನೀವು ಆದ್ಯತೆ ಕೊಡದಿದ್ದರೆ, ಅದರಿಂದ ಅಂತರ ಏರ್ಪಡುತ್ತದೆ. ಹೀಗಾಗಿ ಸದಾ ಖುಷಿಯಲ್ಲಿ ಮಾತನಾಡಿಕೊಂಡಿರಿ.
ಕೃತಜ್ಞತೆ ಹೇಳುವುದನ್ನು ಮರೆಯಬೇಡಿ
ಪ್ರತಿದಿನವೂ ನಿಮ್ಮ ಸಂಗಾತಿಗೆ ಕೃತಜ್ಞತೆ ಹೇಳುವುದನ್ನು ಮರೆಯಬೇಡಿ. ನಿಮ್ಮ ಒಳಿತಿಗಾಗಿ ಅವರೂ ಕಷ್ಟಪಟ್ಟಿರುತ್ತಾರೆ. ಹೀಗಾಗಿ ಅದನ್ನು ಗೌರವಿಸಬೇಕು ಮತ್ತು ಧನ್ಯವಾದ ಹೇಳಬೇಕು.
ಪರಸ್ಪರ ಸಮಯ ಕೊಡಿ
ಕೆಲಸದ ಒತ್ತಡ, ಜೀವನಶೈಲಿಯ ಸಮಸ್ಯೆಯಿಂದ ಪರಸ್ಪರ ನಿಮಗೆ ಒಟ್ಟಿಗೆ ಇರಲು ಸಮಯ ಇರುತ್ತಿಲ್ಲ ಎಂದಾದರೆ ನೀವು ಪರಸ್ಪರ ಸಮಯ ಕೊಡಲೇಬೇಕು. ಹಾಗಾದಾಗ ಮಾತ್ರ ನಿಮ್ಮ ಮಾತುಕತೆ ಸಾಗುತ್ತದೆ ಮತ್ತು ಭಾವನೆಗಳನ್ನು ಹಂಚಿಕೊಳ್ಳಬಹುದು.
ತೊಂದರೆಗಳನ್ನು ಜತೆಯಾಗಿ ಎದುರಿಸಿ
ಬದುಕಿನಲ್ಲಿ ಹಲವು ಏರುಪೇರು ಉಂಟಾಗುತ್ತದೆ. ಕೆಲವೊಮ್ಮೆ ದೊಡ್ಡ ತೊಂದರೆಯೊಂದು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಜತೆಯಾಗಿ ಅವುಗಳನ್ನು ಎದುರಿಸಿ, ಪರಸ್ಪರ ಸಹಕಾರದಿಂದ ಸಂಕಷ್ಟವನ್ನು ಎದುರಿಸಿ ಪಾರಾಗಿ.
ಇತಿಮಿತಿ ಗೌರವಿಸಿ, ಸ್ವಾತಂತ್ರ್ಯವನ್ನು ಕೊಡಿ
ಮದುವೆಯಾಗಿ ಸಂಗಾತಿಯಾಗಿ ಬಂದ ಕೂಡಲೇ ಅವರ ಮೇಲೆ ಇತಿಮಿತಿ ಹೇರುವುದಲ್ಲ. ಅದರಿಂದ ಒತ್ತಡ ಉಂಟಾಗಬಹುದು. ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು. ಅಂತಹ ಸಂದರ್ಭದಲ್ಲಿ ಇತಿಮಿತಿಯನ್ನು ಅರಿತು ಮುನ್ನಡೆದರೆ ಉತ್ತಮ.
ರೊಮ್ಯಾನ್ಸ್ ಇರಲಿ
ಮದುವೆಯಾದ ಹೊಸತರಲ್ಲಿ ಇರುವ ಆ ಖುಷಿ ಮತ್ತು ಪ್ರೀತಿ ಯಾವತ್ತೂ ಇಬ್ಬರಲ್ಲೂ ಇರಲಿ. ಸಂಗಾತಿಯ ಜತೆ ರೊಮ್ಯಾನ್ಸ್ ಮರೆಯಬೇಡಿ, ಅಲ್ಲದೆ, ಸರ್ಪ್ರೈಸ್ ಕೊಡುವುದನ್ನು ಕೂಡ ನಿಲ್ಲಿಸಬೇಡಿ. ಕ್ಯಾಂಡಲ್ ಲೈಟ್ ಡಿನ್ನರ್ ಪ್ಲ್ಯಾನ್ ಮಾಡಿ. ಸಂಗಾತಿಗೆ ಖುಷಿ ಕೊಡಿ.
ಆದ್ಯತೆಗಳನ್ನು ನೀಡಿ
ನಿಮ್ಮ ಸಂಗಾತಿ ನಿಮ್ಮ ಮೊದಲ ಆದ್ಯತೆಯಾಗಿರಲಿ. ಸಂತೋಷದ ಸಂಗತಿಯೇ ಇರಲಿ, ದುಃಖದ ವಿಚಾರವೇ ಇರಲಿ. ಸಂಗಾತಿ ಜತೆ ಮೊದಲ ಆದ್ಯತೆಯಾಗಿ ಎಲ್ಲ ವಿಚಾರ ಹಂಚಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮದುವೆ ಸಂತಸದಾಯಕವಾಗಿರುತ್ತದೆ.
