ಋತುಬಂಧವು ಮುಟ್ಟಳಿ ಆಗಬಾರದೆ? ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ ಕವಿ ವಡ್ಡಗೆರೆ ನಾಗರಾಜಯ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಋತುಬಂಧವು ಮುಟ್ಟಳಿ ಆಗಬಾರದೆ? ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ ಕವಿ ವಡ್ಡಗೆರೆ ನಾಗರಾಜಯ್ಯ

ಋತುಬಂಧವು ಮುಟ್ಟಳಿ ಆಗಬಾರದೆ? ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ ಕವಿ ವಡ್ಡಗೆರೆ ನಾಗರಾಜಯ್ಯ

ಕವಿ ವಡ್ಡಗೆರೆ ನಾಗರಾಜಯ್ಯ ಅವರು ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ್ದಾರೆ. ಋತುಬಂಧವು ಮುಟ್ಟಳಿ ಆಗಬಾರದೆ? ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್‌ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಮುಟ್ಟಳಿ: ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ ಕವಿ ವಡ್ಡಗೆರೆ ನಾಗರಾಜಯ್ಯ
ಮುಟ್ಟಳಿ: ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ ಕವಿ ವಡ್ಡಗೆರೆ ನಾಗರಾಜಯ್ಯ

ಮೆನೊಪಾಸ್‌ಗೆ ಋತುಬಂಧ ಎಂಬ ಪದ ಬಳಕೆಯಲ್ಲಿದೆ. ಕವಿ ವಡ್ಡಗೆರೆ ನಾಗರಾಜಯ್ಯ ಅವರು ಮೆನೊಪಾಸ್‌ಗೆ ಕನ್ನಡದಲ್ಲಿಯೇ ಹೊಸ ಪದ ಟಂಕಿಸಿದ್ದಾರೆ. ಋತುಬಂಧವು ಮುಟ್ಟಳಿ ಆಗಬಾರದೆ? ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್‌ ಹೊಸ ಚರ್ಚೆಗೆ ನಾಂದಿ ಹಾಡಿದೆ. ವಡ್ಡಗೆರೆ ನಾಗರಾಜಯ್ಯ ಬರೆದ ಲೇಖನವನ್ನು ಯಥಾವತ್‌ ಈ ಮುಂದೆ ನೀಡಲಾಗಿದೆ.

ಕವಿ ವಡ್ಡಗೆರೆ ನಾಗರಾಜಯ್ಯ ಸೋಷಿಯಲ್‌ ಮೀಡಿಯಾ ಪೋಸ್ಟ್‌

ಮುಟ್ಟು ನಿಲ್ಲುವ ಪ್ರಕ್ರಿಯೆಯನ್ನು ಇಂಗ್ಲೀಶಿನಲ್ಲಿ menopause ಎನ್ನುತ್ತಾರೆ. ನಾಲ್ಕೈದು ವರ್ಷಗಳ ಹಿಂದೆ ನನ್ನ ಕೆಲವು ಗೆಳತಿಯರಿಗೆ, 'ಮುಟ್ಟು ನಿಲ್ಲುವಿಕೆಗೆ (ಮೆನೋಪಾಸ್) ಕನ್ನಡದಲ್ಲಿ ಏನಂತಾರೆ?' ಎಂಬ ಪ್ರಶ್ನೆ ಕೇಳಿದೆ.

ಒಂದಿಬ್ಬರು ಸಂಕೋಚದಿಂದ 'ನನಗೆ ಅದರ ಬಗ್ಗೆ‌ ಮಾಹಿತಿ ಇಲ್ಲ' ಅಂದರು. ಒಬ್ಬ ಗೆಳತಿ, 'ನಂಗಿನ್ನೂ ಮೂವತ್ತೆಂಟು. ಅದರ ಬಗ್ಗೆ ಈಗಲೇ ಯಾಕೆ ತಲೆ ಕೆಡಿಸಿಕೊಳ್ಳಲಿ?' ಅಂದಳು. ಇನ್ನೊಬ್ಬ ಗೆಳತಿ, 'ನಿನ್ನ ಯೆಣ್ತಿನ ಕೇಳು. ನಂಗ್ಯಾಕೆ ಕೇಳ್ತೀಯ' ಅಂದಳು. ಐದಾರು ಗೆಳತಿಯರು 'ಋತುಬಂಧ' ಎಂದು ಹೇಳಿದರು.

''ಋತುಬಂಧ', 'ಋತುಸ್ತಂಭನ' ಎಂಬುವೆಲ್ಲವೂ ಸಂಸ್ಕೃತ ಪದಗಳು. 'ಮೆನೋಪಾಸ್' ಎಂಬ ಇಂಗ್ಲಿಷ್ ಪದಕ್ಕೆ ಪರ್ಯಾಯ ಕನ್ನಡ ಪದವನ್ನು ಆಲೋಚಿಸಿ ಹೇಳಿರಿ'' ಎಂದು ಕೇಳಿದೆ. 'ಮುಟ್ಟು ನಿಲ್ಲುವಿಕೆ', 'ಮುಟ್ಟು ನಿಂತದೆ', 'ಮುಟ್ಟು ನಿಂತಾಗಿದೆ', 'ಮುಟ್ಟು ನಿಂತತಿ' ಹೀಗೆ ಇಂಥವೇ ಕೆಲವು ಪದಗಳನ್ನು ಹೇಳಿದರು.

'Menopause' ಎಂಬುದು ಇಂಗ್ಲೀಷಿನಲ್ಲಿ single word. ಹಾಗೆಯೇ ಅದೇ ಮಾದರಿಯಲ್ಲಿ ನನಗೆ ಕನ್ನಡದಲ್ಲಿ ಒಂದು ಪದ ಅಥವಾ ಒಂದು ಕೂಡುಪದ ಬೇಕು, ಹುಡುಕಿ ಹೇಳಿರೆಂದು ಕೇಳಿದೆ.

ಅವರೆಲ್ಲರೂ ಸೂಕ್ತ ಪದಕ್ಕಾಗಿ ಗೂಗಲಾಡತೊಡಗಿದರು. ಎಷ್ಟು ಗೂಗಲಾಡಿದರೂ ಅವರಿಂದ ನನಗೊಪ್ಪುವ ಪದವನ್ನು ಹುಡುಕಲಾಗಲಿಲ್ಲ.

ನನಗೆ ತಟ್ಟಂತಾ ಒಂದು ಪದ ಹೊಳೆಯಿತು. 'ಮುಟ್ಟು+ಅಳಿ= ಮುಟ್ಟಳಿ' ಎಂದು ಟಂಕಿಸಿ ಹೇಳಿದೆ. ಎಲ್ಲರೂ 'ಬೇಶ್!' ಅಂದರು. ಡಿಕ್ಷನರಿ ಹಿಡಿದು ಅಥವಾ ಗೂಗಲಿನಲ್ಲಿ ಗೂಗಲಾಡುತ್ತಾ ನೋಡುವುದಕ್ಕಿಂತಲೂ ಹೀಗೆ ಸ್ವತಂತ್ರ ಪದವನ್ನು ಟಂಕಿಸುವುದು ಚೆಂದವಲ್ಲವೇ? ಎಂದು ವಡ್ಡಗೆರೆ ನಾಗರಾಜಯ್ಯ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಹೊಸ ಚರ್ಚೆಗೆ ನಾಂದಿ ಹಾಡಿದ ಮುಟ್ಟಳಿ ಪದ

ಇವರ ಈ ಪೋಸ್ಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅವುಗಳಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ. ಲೇಖಕಿ, ಸಂಶೋಧಕಿ ಇಂದಿರಾ ಹೆಗ್ಗಡೆ ಅವರು "ಎಷ್ಟೊಂದು ಸರಿ ಹೊಂದುತ್ತೆ?" ಎಂದು ಬರೆದು ಈ ಪದ ಸೂಕ್ತವಾಗಿದೆ ಎಂದಿದ್ದಾರೆ. "ದುಡಿಯುವವ ಎಂಬ ಪದಕ್ಕೆ "ಗಳಿಸಾಳಿ" ಎಂಬ ಪದ ಕನ್ನಡದಲ್ಲಿದೆ. ಮನೆಯಲ್ಲಿ ಒಬ್ಬನೇ ಗಳಿಸಾಳಿ ಎಂಬ ವಾಕ್ಯವನ್ನು ದಿ.ಡಾ.ಬೆಟಗೇರಿ ಕೃಷ್ಣ ಶರ್ಮರ ಗದ್ಯದಲ್ಲಿ ಓದಿದ್ದೆ.ಇದೇ ರೀತಿಯಲ್ಲಿ ನೂರಾರು ಕನ್ನಡ ಪದ ಬಳಸುತ್ತಿದ್ದರು. ನಮ್ಮ ದಿನಗಳೀಗ ವಿಚಿತ್ರ. ಕರ್ಡ್,ರೈಸ್,ಟೈಮ್,ಸಾಂಗ್,ಸಾಲ್ಟ್...ಹೀಗೆ. ಬಳಸುತ್ತಲೇ ಇದ್ದ ಸುಲಭ ಕನ್ನಡ ಪದಗಳನ್ನು ಬಿಟ್ಟು ಸಾಗಿದ್ದೇವೆ" ಎಂದು ವಿಜಯೇಂದ್ರ ಪಾಟೀಲ್‌ ಬರೆದಿದ್ದಾರೆ.

"ಹಾಂ ಸರ್ ಈ 'ಮುಟ್ಟು' ಎನ್ನುವ ಶಬ್ದವು ಹೆಣ್ಣಿನ ಜೀವನದಲ್ಲಿ ಶಬ್ದಕೋಶದ ಮೂಲಕಾನೂ ಮುಟ್ಟಾದ ನಡೆಸಿದೆ. ಇದು ಹೆಣ್ಣಿನ ಭಾಗದಲ್ಲಿ ತಪ್ಪು ಅರ್ಥ ಪ್ರಕಲ್ಪಿಸಿದೆ. ಮುಟ್ಟು ಅಂದರೆ ಮುಟ್ಟಬೇಡ ಎಂದು ಪಾಲಿಸುತ್ತಾ ಬಂದ ಸಂ...... ಸ್ಕ್ರೃತಿ ನಮ್ಮದು. ಅರ್ಥವಾಗದ, ಅರ್ಥವಿರದ, ಅರ್ಥ ತುಂಬದ..... ಶಬ್ದ ಅದು. ಮತ್ತದನ್ನೇ ಟಂಕಿಸೊದು ಬೇಡ. 'ಅಂಡಳಿ' ಅನ್ನಿ.... ಅಂಡ ಇಂಗು/ಇಂಗುವಿಕೆ ಅನ್ನಿ, ಅಂಡತಡೆ, ತತ್ತಿಯ ಅನುತ್ಪತ್ತಿ, ಗರ್ಭತಡೆ.... ಆಗಬಹುದಲ್ಲವೆ?" ಎಂದು ವಿದ್ಯಾ ಕುಂದರಗಿ ಬರೆದಿದ್ದಾರೆ. ಇದಕ್ಕೆ ವಡ್ಡಗೆರೆ ನಾಗರಾಜಯ್ಯ "ನೀವಿಲ್ಲಿ ಹೇಳಿರುವ ಅಂಡ, ಗರ್ಭ, ಉತ್ಪತ್ತಿ ಎಂಬುವು ಕೂಡಾ ಸಂಸ್ಕೃತ ಪದಗಳು. ಕನ್ನಡದ ಅಳಿ ಎಂಬ ಪದದೊಂದಿಗೆ ಸಂಧಿಕಾರ್ಯ ಏರ್ಪಡಿಸಿ ಅಂಡಳಿ ಮಾಡಿದ್ದೀರಿ. ಅಂಡತಡೆ ಅಥವಾ ಗರ್ಭತಡೆ ಎಂಬುದು ಕೂಡು ಪದವಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ನಿಮ್ಮಲ್ಲಿ ಮುಟ್ಟು ಅಂತಾರೆ ಅಂತ ಹೊಸಾ ಶಬ್ದ ಮಾಡಕ್ಕಾಗುತ್ತ? ನಮ್ ಕಡೆ ಹೊರಗೆ ಅಂತಾರೆ.. ಹೊರಗಳಿ ಅಂತ ಮಾಡ್ಬೇಕು.. ಸುಮ್ನೆ ಅಪಶಬ್ದಗಳನ್ನ ತಯಾರು ಮಾಡುವುದು ನಿಲ್ಲಿಸಿ.

ಒಂದು ವೇಳೆ ಟಂಕಿಸುವುದೇ ಆದಲ್ಲಿ, ಕುವೆಂಪು, ಕುಮಾರವ್ಯಾಸರ ಹಾಗೆ ಸಾಹಿತ್ಯದಲ್ಲಿ ಬಳಸಿ ನಂತರ ಜನಮಾನಸದಲ್ಲಿ ಉಳಿಯುವ ಹಾಗೆ ಮಾಡಿ" ಎಂದು ಈಶ್ವರ್‌ ಭಟ್‌ ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ವಡ್ಡಗೆರೆ ನಾಗರಾಜಯ್ಯ ಅವರು "ಹೊರಗೆ' ಎಂಬ ಪದವು 'ಮುಟ್ಟು' ಎಂಬುದಕ್ಕೆ ಕಲ್ಪಿತ ಅರ್ಥ ವ್ಯಂಜಿಸುವ ಪದವೇ ಹೊರತು 'ಮುಟ್ಟು' ಎಂದರ್ಥವಲ್ಲ. ಮುಟ್ಟಳಿ ಎಂಬುದು ಅಪಶಬ್ದವೆಂದು ನೀವು ಹೇಳುತ್ತಿರುವುದನ್ನು ನೋಡಿದರೆ, ಯಾವುದೇ ಭಾಷೆಯಲ್ಲಿ ಶಬ್ದ ವ್ಯುತ್ಪತ್ತಿ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯದಿರುವ ನಿಮ್ಮ ಅಲ್ಪಮತಿಯನ್ನು ತೋರಿಸುತ್ತದೆ. ಹೆಚ್ಚಾನೆಚ್ಚಿಗೆ ಮೌಖಿಕರು ಹಾಗೂ ಕವಿ ಸಾಹಿತಿಗಳು ಸಂದರ್ಭೋಚಿತ ಅನುಕೂಲದಲ್ಲಿ ಶಬ್ದಗಳನ್ನು ಟಂಕಿಸುತ್ತಾರೆ. ಅವು ಕ್ರಮೇಣವಾಗಿ ರೂಢಿಗೆ ಬರುತ್ತವೆ. ನೀವು ಭಾಷೆಯ ಸಂಪನ್ನತೆಯಲ್ಲಿ ಎಷ್ಟೊಂದು ಕಡುಬಡವರಾಗಿದ್ದೀರಿ ಎಂಬುದಕ್ಕೆ, 'ಅಪಶಬ್ದಗಳನ್ನು ತಯಾರು ಮಾಡುವುದನ್ನ ನಿಲ್ಲಿಸಿ' ಎಂಬ ನಿಮ್ಮ ವಾಕ್ಯವೇ ಸಾಕ್ಷಿ. ಶಬ್ದಗಳನ್ನು ತಯಾರಿಸಲು ಶಬ್ದವೇನು ಕೈಗಾರಿಕೆಯ ವಸ್ತುವೇ? ನೀವಿನ್ನು ಕುಮಾರವ್ಯಾಸ ಮತ್ತು ಕುವೆಂಪು ಅವರ ಹೆಸರುಗಳನ್ನು ಪ್ರಸ್ತಾಪಿಸಿದಿರಿ. ಇವರಿಬ್ಬರೂ ಸೃಜನಶೀಲ ಸಾಹಿತಿಗಳಾಗಿ ಕನ್ನಡ ಸಂವರ್ಧನೆಗೆ ನೀಡಿರುವ ಕೊಡುಗೆ ದೊಡ್ಡದು. ಈ ಕವಿಗಳಿಗಿಂತಲೂ ಕನ್ನಡದ ಶಬ್ದಗಳನ್ನು ಹೆಚ್ಚು ಟಂಕಿಸಿರುವುದು ಜನಪದ ಅನಕ್ಷರಸ್ಥರು ಎಂಬುದು ನಿಮಗೆ ತಿಳಿದಿರಲಿ. ಹಾಗೆಯೇ ಭಾಷೆಯಲ್ಲಿ ಶಬ್ದಗಳನ್ನು ಟಂಕಿಸುವ ಪ್ರಯೋಗ ಒಂದು ನಿರಂತರ ಪ್ರಕ್ರಿಯೆ. ಧನ್ಯವಾದಗಳು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Whats_app_banner