UTI treatment: ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಮೂತ್ರನಾಳದ ಸೋಂಕು, ಇದಕ್ಕೆ ಪರಿಹಾರವೇನು?
Urinary tract infections: ಆಧುನಿಕ ಜೀವನಶೈಲಿ ಮತ್ತು ಕೆಲಸದ ಒತ್ತಡ, ಆಹಾರ ಪದ್ಧತಿ ಇಂದು ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಕೆಲವೊಂದು ಸೋಂಕುಗಳು ಸಣ್ಣ ವಯಸ್ಸಿನಲ್ಲಿಯೇ ಪುರುಷರಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ. ಮೂತ್ರನಾಳದ ಸೋಂಕು ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆಹಾರ ಕ್ರಮದಲ್ಲಿ ಬದಲಾವಣೆ, ಸಾಂಪ್ರದಾಯಿಕ ಮತ್ತು ಆರೋಗ್ಯಕರ ಆಹಾರ ಶೈಲಿಯನ್ನು ಬದಲಾಯಿಸಿ, ಜಂಕ್ ಫುಡ್ ಮೊರೆಹೋದ ಕಾರಣ ಇಂದು ನಾವು ಹಲವು ರೀತಿಯ ಕಾಯಿಲಗಳನ್ನು ಬರಮಾಡಿಕೊಂಡಂತಾಗಿದೆ. ಅದರಲ್ಲೂ ಇಳಿ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಲವೊಂದು ಕಾಯಿಲೆಗಳು ಇಂದು ಸಣ್ಣ ವಯಸ್ಸಿನಲ್ಲಿಯೇ ಅದರಲ್ಲೂ ಹೆಚ್ಚಾಗಿ ಪುರುಷರನ್ನೇ ಬಾಧಿಸುತ್ತಿವೆ. ಈ ಪೈಕಿ ಗಮನಿಸುವುದಾದರೆ, ಮೂತ್ರನಾಳದ ಸೋಂಕು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ.
ಯುರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ ಅಂದರೆ, ಯುಟಿಐ ಕಾಯಿಲೆ ಇಂದು ವಿವಿಧ ರೀತಿಯಲ್ಲಿ ಪುರುಷರನ್ನು ಬಾಧಿಸುತ್ತಿದೆ. ಈ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಪುರುಷರಲ್ಲಿ ಜಾಸ್ತಿಯಾಗುತ್ತಿದೆ.
ಮೂತ್ರನಾಳದ ಸೋಂಕಿನ ಲಕ್ಷಣಗಳೇನು?
ಮೂತ್ರನಾಳದಲ್ಲಿ ಉರಿ, ಊದಿಕೊಳ್ಳುವುದು, ಸೋಂಕು ಉಂಟಾಗುವುದು, ಮೂತ್ರ ವಿಸರ್ಜಿಸುವಾಗ ನೋವು, ಮೂತ್ರದಲ್ಲಿ ರಕ್ತದ ಹನಿಗಳು ಇದರ ಲಕ್ಷಣಗಳು. ಅದರ ಜತೆಗೆ, ಕಿಬ್ಬೊಟ್ಟೆಯಲ್ಲಿ ನೋವು, ಜ್ವರ ಬರುವುದು ಕೂಡ ಇರಬಹುದು.
ತಜ್ಞ ವೈದ್ಯರು ಹೇಳುವುದೇನು?
ಹಿಂದುಸ್ತಾನ್ ಟೈಮ್ಸ್‌ಗೆ ಈ ಕುರಿತು ಸಂದರ್ಶನ ನೀಡಿರುವ ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ ಹೈದರಾಬಾದ್‌ನ ಯುರಾಲಜಿಸ್ಟ್ ಡಾ. ಗೋಪಾಲ್ ರಾಮದಾಸ್ ತಕ್ ಅವರು, ಮೂತ್ರನಾಳದಲ್ಲಿ ಸೋಂಕು ಎಂದರೆ ಅಲ್ಲಿ ಮಾತ್ರವಲ್ಲ, ಅದು ಮೂತ್ರಪಿಂಡ, ಮೂತ್ರಕೋಶ ಮತ್ತು ಮೂತ್ರನಾಳದಲ್ಲಿ ಸೋಂಕು ಉಂಟಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪುರುಷರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳದ್ದಾರೆ.
ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್‌ಗೆ ಕಾರಣವೇನು?
ಕೆಲಸ, ಜೀವನಶೈಲಿಯ ಪರಿಣಾಮ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದು ಮುಖ್ಯ ಕಾರಣ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗಬಹುದು, ಅದರಿಂದ ಸಮಸ್ಯೆಯಾಗಬಹುದು. ಇದರಿಂದ ಮೂತ್ರಕೋಶದಲ್ಲಿ ಮೂತ್ರ ಸರಿಯಾಗಿ ವಿಲೇವಾರಿಯಾಗದೇ, ಬ್ಯಾಕ್ಟೀರಿಯಾ ಸೃಷ್ಟಿಯಾಗಬಹುದು.
ಒತ್ತಡದ ಜೀವನ
ಜೀವನಶೈಲಿಯಿಂದ ಬರುವ ಹಲವು ರೋಗಗಳಲ್ಲಿ ಇದು ಕೂಡ ಒಂದು. ಅದರಲ್ಲೂ ಪುರುಷರು ಕೆಲಸದ ಒತ್ತಡ ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸುತ್ತಾರೆ. ಇದರಿಂದ ಅವರ ರೋಗನಿರೋಧಕ ಶಕ್ತಿ ಕಡಿಮೆಯಾಗಿ, ಸಮಸ್ಯೆ ಎದುರಿಸುತ್ತಾರೆ.
ಕೆಲಸ-ಜೀವನದಲ್ಲಿ ಹೊಂದಾಣಿಕೆಯ ಕೊರತೆ
ಕೆಲಸ ಮತ್ತು ಜೀವನದಲ್ಲಿ ಅಗತ್ಯ ವಿಶ್ರಾಂತಿ ಪಡೆಯಲು ಪುರುಷರು ಕಷ್ಟಪಡುತ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ, ಸಾಕಷ್ಟು ನೀರು ಸೇವಿಸದೇ ಇರುವುದು ಕೂಡ ಕಾಯಿಲೆಗೆ ಕಾರಣ. ಅಲ್ಲದೆ, ಅಗತ್ಯ ಪ್ರಮಾಣದಲ್ಲಿ ನಿದ್ರೆ ಮಾಡದೇ ಇರುವುದು ಕೂಡ ಅವರಿಗೆ ಸಮಸ್ಯೆ ತರಬಹುದು.
ಸ್ವಚ್ಛತೆಯ ಅರಿವು ಇಲ್ಲದಿರುವುದು
ಕೆಲವೊಮ್ಮೆ ಕೆಲಸದ ಒತ್ತಡ, ಪ್ರಯಾಣ ಹೀಗೆ ಹಲವು ಕಾರಣಗಳನ್ನು ಇಟ್ಟುಕೊಂಡು, ಪುರುಷರು ಮೂತ್ರ ವಿಸರ್ಜನೆಯನ್ನು ಮುಂದೂಡುತ್ತಾರೆ. ಮೂತ್ರ ತುಂಬಿಕೊಂಡು ಒತ್ತಡ ಉಂಟಾಗುತ್ತಿದ್ದರೂ, ವಿಸರ್ಜಿಸಲು ಕೆಲವೊಮ್ಮೆ ಸಮಯ ಸಾಲುವುದಿಲ್ಲ. ಅಂತಹ ಸಂದರ್ಭದಲ್ಲಿ ಮೂತ್ರಕೋಶದ ಒಳಗಡೆ ಸೋಂಕು ಉಂಟಾಗಬಹುದು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿದು, ಮೂತ್ರ ವಿಸರ್ಜಿಸದೇ ಇದ್ದರೆ, ಅದರಿಂದ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮೂತ್ರವನ್ನು ಹಿಡಿದಿಟ್ಟುಕೊಳ್ಳಬಾರದು, ಹಾಗೆಯೇ ಮೂತ್ರ ವಿಸರ್ಜಿಸಿದ ಬಳಿಕ ಸ್ವಚ್ಛತೆಯ ಕುರಿತು ಕೂಡ ಗಮನ ಹರಿಸಬೇಕು.
