Menstrual Hygiene Day: ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮಹಿಳೆಯರು ತಪ್ಪದೇ ಪಾಲಿಸಬೇಕಾದ 5 ನಿಯಮಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Menstrual Hygiene Day: ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮಹಿಳೆಯರು ತಪ್ಪದೇ ಪಾಲಿಸಬೇಕಾದ 5 ನಿಯಮಗಳಿವು

Menstrual Hygiene Day: ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮಹಿಳೆಯರು ತಪ್ಪದೇ ಪಾಲಿಸಬೇಕಾದ 5 ನಿಯಮಗಳಿವು

ಋತುಸ್ರಾವ ಪ್ರತಿಯೊಬ್ಬ ಹೆಣ್ಣಿನ ಬಾಳಲ್ಲೂ ಬರುತ್ತದೆ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ ಸಹ ಮಹಿಳೆಯ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ತಮ್ಮ ನೈರ್ಮಲ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ.

ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮಹಿಳೆಯರು ತಪ್ಪದೇ ಪಾಲಿಸಬೇಕಾದ 5 ನಿಯಮಗಳಿವು
ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮಹಿಳೆಯರು ತಪ್ಪದೇ ಪಾಲಿಸಬೇಕಾದ 5 ನಿಯಮಗಳಿವು

ಮುಟ್ಟು ಪ್ರಕೃತಿ ಸಹಜವಾದರೂ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಋತುಚಕ್ರ ಎನ್ನುವುದು ಪ್ರತಿಯೊಬ್ಬ ಹೆಣ್ಣು ತನ್ನ ಜೀವನದಲ್ಲಿ ಎದುರಿಸುವ ಒಂದು ಹಂತ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಹೆಣ್ತನವನ್ನು ಅನುಭವಿಸಲು ಸಿಗುವ ಆ ನಾಲ್ಕು ದಿನಗಳನ್ನು ನಾವು ಅತ್ಯಂತ ಸ್ವಚ್ಛತೆಯಿಂದ ಕಳೆಯಬೇಕಾಗಿರುವುದು ಬಹಳ ಮುಖ್ಯ. ಈ ವರ್ಷದ ಮುಟ್ಟಿನ ನೈರ್ಮಲ್ಯ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಪ್ರತಿ ಮಹಿಳೆಯು ಋತುಸ್ರಾವದ ಸಂದರ್ಭದಲ್ಲಿ ಯಾವ ರೀತಿ ತನ್ನ ದೇಹದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಸ್ಯಾನಿಟರಿ ಉತ್ಪನ್ನಗಳನ್ನು ಆಗಾಗ ಬದಲಾಯಿಸುವುದು

ಮುಟ್ಟಿನ ಸಂದರ್ಭದಲ್ಲಿ ನೀವು ಬಳಸುವ ಸ್ಯಾನಿಟರಿ ಉತ್ಪನ್ನಗಳಾದ ಪ್ಯಾಡ್, ಟ್ಯಾಂಪೂನ್ ಅಥವಾ ಮೆನ್ಸ್ಟ್ರುವಲ್ ಕಪ್‌ಗಳನ್ನು ಪ್ರತಿ 4-6 ಗಂಟೆಗಳಿಗೊಮ್ಮೆ ಬದಲಾಯಿಸುವುದು ಬಹಳ ಮುಖ್ಯವಾಗಿದೆ. ಅವುಗಳನ್ನು ಹೆಚ್ಚು ಕಾಲದವರೆಗೂ ಬದಲಾಯಿಸದೇ ಹಾಗೆಯೇ ಉಳಿಯುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಿ ಏನಾದರೂ ಅಪಾಯಕಾರಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಲಕ್ಕೆ ಇವುಗಳ ಬದಲಾವಣೆ ಮಾಡುವುದು ಮುಖ್ಯವಾಗಿದೆ.

ಸ್ಯಾನಿಟರಿ ಉತ್ಪನ್ನಗಳ ವಿಲೇವಾರಿ

ಮೆನ್ಸ್ಟ್ರುವಲ್ ಕಪ್‌ಗಳನ್ನು ನೀವು ಒಮ್ಮೆ ಬಳಸಿದ ಬಳಿಕ ಬಿಸಿನೀರಿನಲ್ಲಿ ತೊಳೆದು ಕೆಲವು ಸಮಯದವರೆಗೆ ಪುರ್ನಬಳಕೆ ಮಾಡಬಹುದಾಗಿದೆ. ಉತ್ತಮ ಪರಿಸರಕ್ಕೆ ನೀವು ನೀಡಬಹುದಾದ ಕೊಡುಗೆ ಏನೆಂದರೆ ಮುಟ್ಟಿನ ದಿನಗಳಲ್ಲಿ ಕಪ್‌ಳನ್ನು ಬಳಸುವುದು. ಆದರೆ ಇವುಗಳನ್ನು ಬಳಸಲು ಸಾಧ್ಯವಾಗದೇ ನೀವಿನ್ನೂ ಪ್ಯಾಡ್‌ಗಳನ್ನೇ ಬಳಸುತ್ತಿದ್ದರೆ ಅವುಗಳನ್ನು ಬಳಸಿದ ಬಳಿಕ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ. ಶೌಚಾಲಯದಲ್ಲಿ ಅವುಗಳನ್ನು ಫ್ಲಶ್ ಮಾಡುವ ಅಭ್ಯಾಸ ಬಿಡಿ. ಟಿಶ್ಯೂ ಪೇಪರ್‌ಗಳಲ್ಲಿ ಪ್ಯಾಡ್‌ಗಳನ್ನು ಸುತ್ತಿ ಅವುಗಳನ್ನು ವಿಲೇವಾರಿ ಮಾಡಬೇಕು.

ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಿ

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯು ತಮ್ಮ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿದೆ. ದಿನಕ್ಕೆ ಎರಡು ಬಾರಿಯಾದರೂ ನಿಮ್ಮ ಯೋನಿಯನ್ನು ಸರಿಯಾಗಿ ತೊಳೆದುಕೊಳ್ಳಿ. ಆ ಜಾಗದಲ್ಲಿ ತೇವಾಂಶ ನಿಲ್ಲಲ್ಲು ಅವಕಾಶ ನೀಡಿದರೆ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಹೀಗಾಗಿ ಟಾಯ್ಲೆಟ್ ಪೇಪರ್‌ಗಳಿಂದ ಆ ಭಾಗವನ್ನು ಚೆನ್ನಾಗಿ ಒರೆಸಿಕೊಳ್ಳಿ. ಒಳ ಉಡುಪನ್ನು ಆಗಾಗ ಬದಲಾಯಿಸುತ್ತೀರಿ. ಹತ್ತಿಯ, ಬಿಗಿಯಾಗಿ ಇರದ ಒಳ ಉಡುಪುಗಳನ್ನೇ ಆಯ್ಕೆ ಮಾಡಿಕೊಳ್ಳಿ.

ನೀರು ಹಾಗೂ ಪೋಷಕಾಂಶಯುಕ್ತ ಆಹಾರಗಳ ಸೇವನೆ

ಋತುಚಕ್ರದ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿಯುವುದು, ಹಣ್ಣು ಹಾಗೂ ತರಕಾರಿಗಳ ಸೇವನೆ, ಧಾನ್ಯಗಳಿಂದ ಸಮೃದ್ಧವಾದ ಆಹಾರಗಳನ್ನು ತಿನ್ನುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಕ್ಷೇಮವಾಗಿ ಇರುತ್ತದೆ. ಆದಷ್ಟು ಕೆಫಿನ್‌ಯುಕ್ತ ಹಾಗೂ ಉಪ್ಪಿನಂಶ ಜಾಸ್ತಿ ಇರುವ ಆಹಾರಗಳಿಂದ ದೂರವಿರಿ.

ಸುರಕ್ಷಿತ ಲೈಂಗಿಕ ಕ್ರಿಯೆ

ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡದೇ ಇರುವುದು ಒಳ್ಳೆಯದೇ ಆಗಿದೆ. ಆದರೂ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಲೈಂಗಿಕವಾಗಿ ಹರಡುವ ಸೋಂಕುಗಳು ನಿಮ್ಮನ್ನು ಕಾಡುವ ಸಾಧ್ಯತೆ ಇರುತ್ತದೆ. ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೋಮ್‌ಗಳನ್ನು ಬಳಕೆ ಮಾಡಿ. ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ STI ಪರೀಕ್ಷೆ ಮಾಡಿಸಿ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner