Menstrual Hygiene Day: ಮುಟ್ಟಿನ ನೈರ್ಮಲ್ಯ ದಿನ ಆಚರಿಸುವುದರ ಉದ್ದೇಶವೇನು? ಈ ದಿನದ ಮಹತ್ವ, ಈ ವರ್ಷದ ಥೀಮ್‌ ಕುರಿತ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Menstrual Hygiene Day: ಮುಟ್ಟಿನ ನೈರ್ಮಲ್ಯ ದಿನ ಆಚರಿಸುವುದರ ಉದ್ದೇಶವೇನು? ಈ ದಿನದ ಮಹತ್ವ, ಈ ವರ್ಷದ ಥೀಮ್‌ ಕುರಿತ ವಿವರ ಇಲ್ಲಿದೆ

Menstrual Hygiene Day: ಮುಟ್ಟಿನ ನೈರ್ಮಲ್ಯ ದಿನ ಆಚರಿಸುವುದರ ಉದ್ದೇಶವೇನು? ಈ ದಿನದ ಮಹತ್ವ, ಈ ವರ್ಷದ ಥೀಮ್‌ ಕುರಿತ ವಿವರ ಇಲ್ಲಿದೆ

ಮುಟ್ಟು ಎನ್ನುವುದು ಮಹಿಳೆಯರಿಗೆ ಪ್ರತಿ ತಿಂಗಳು ಬರುವ ನೈಸರ್ಗಿಕ ಪ್ರಕ್ರಿಯೆ. ಸಾಮಾನ್ಯವಾಗಿ 14 ರಿಂದ 45 ವರ್ಷದ ಮಹಿಳೆಯರು ಪ್ರತಿ ತಿಂಗಳು ಮುಟ್ಟಾಗುತ್ತಾರೆ. ಇದು ಸಹಜ ಪ್ರಕ್ರಿಯೆಯಾದರೂ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಗುತ್ತದೆ.

ಮುಟ್ಟಿನ ನೈರ್ಮಲ್ಯ ದಿನದ ಆಚರಣೆಯ ಉದ್ದೇಶವೇನು? ಈ ದಿನದ ಮಹತ್ವ, ಈ ವರ್ಷದ ಥೀಮ್‌ ತಿಳಿಯಿರಿ
ಮುಟ್ಟಿನ ನೈರ್ಮಲ್ಯ ದಿನದ ಆಚರಣೆಯ ಉದ್ದೇಶವೇನು? ಈ ದಿನದ ಮಹತ್ವ, ಈ ವರ್ಷದ ಥೀಮ್‌ ತಿಳಿಯಿರಿ

ಪ್ರತಿ ಹೆಣ್ಣುಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಮುಟ್ಟಿನ ದಿನಗಳನ್ನು ಎದುರಿಸುತ್ತಾರೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ಸಂದರ್ಭದಲ್ಲಿ ಮೊದಲ ಬಾರಿಗೆ ಋತುಮತಿಯಾಗುತ್ತಾರೆ. ಋತುಮತಿಯಾಗಿ ಐದಾರು ತಿಂಗಳು ಅಥವಾ 1 ವರ್ಷ ನಿರಂತರ ಮುಟ್ಟಾಗುವುದಿಲ್ಲ. ಆ ನಂತರ ಪ್ರತಿ ತಿಂಗಳು ಮುಟ್ಟಾಗುತ್ತಾರೆ. ಸಾಮಾನ್ಯವಾಗಿ ಮಹಿಳೆಯರಿಗೆ 45 ರಿಂದ 50 ವರ್ಷದ ಅವಧಿಯಲ್ಲಿ ಋತುಬಂಧವಾಗುತ್ತದೆ. ಋತುಬಂಧ ಎಂದರೆ ಮುಟ್ಟು ನಿಲ್ಲುವ ಪ್ರಕ್ರಿಯೆ. ಮುಟ್ಟಾಗುವುದು ಸಹಜ ಹಾಗೂ ನೈಸರ್ಗಿಕ ಪ್ರಕ್ರಿಯೆ ಎನ್ನುವುದು ನಿಜವಾದರೂ ಕೂಡ ಈ ದಿನಗಳಲ್ಲಿ ನೈರ್ಮಲ್ಯ ಅಥವಾ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮುಟ್ಟಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹೀಗೆ ಆ ದಿನಗಳ ಸ್ವಚ್ಛತೆಯ ಬಗ್ಗೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ.

ಪ್ರತಿ ವರ್ಷ ಮೇ 28 ರಂದು ಮುಟ್ಟಿನ ಆರೋಗ್ಯದ ಮಹತ್ವ, ಮುಟ್ಟಿನ ಉತ್ಪನ್ನಗಳ ಸೂಕ್ತ ಬಳಕೆ ಮತ್ತು ಮುಟ್ಟಿನ ದಿನಗಳಲ್ಲಿ ಮಹಿಳೆಯರನ್ನು ದಾರಿ ತಪ್ಪಿಸುವ ಕ್ರಮಗಳು ಹಾಗೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ವಿಚಾರಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ.

ಮುಟ್ಟಿನ ದಿನಗಳಲ್ಲಿ ಮಹಿಳೆಯರು ಹಲವು ತೊಂದರೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಪ್ಯಾಡ್‌ ಬದಲಿಸಲು ಸೂಕ್ತ ಶೌಚಾಲಯಗಳ ಕೊರತೆಯು ಒಂದು. ಒಂದೇ ಪ್ಯಾಡ್‌ ಅನ್ನು ದೀರ್ಘ ಸಮಯದವರೆಗೆ ಧರಿಸುವುದು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಜೊತೆಗೆ ಮುಟ್ಟಿನ ದಿನಗಳಲ್ಲಿ ಮಹಿಳೆಯರು ಗುಪ್ತಾಂಗಗಳನ್ನು ಸರಿಯಾಗಿ ಸ್ವಚ್ಛ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ಕೂಡ ಅಪಾಯಕ್ಕೆ ಕಾರಣವಾಗಬಹುದು.

ಮುಟ್ಟಿನ ನೈರ್ಮಲ್ಯ ದಿನದ ಆಚರಣೆಯ ಉದ್ದೇಶವೇನು?

ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಮುಟ್ಟಿನ ದಿನಗಳಲ್ಲಿ ಮಹಿಳೆಯರು ಎದುರಿಸುವ ಸವಾಲುಗಳನ್ನು ಜಯಿಸಲು ಸಹಾಯ ಮಾಡುವುದು. ಋತುಚಕ್ರದ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವ ಮೂಲಕ, ನಾವು ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಬಹುದು. ಆದರೆ ಹಲವಾರು ಇತರ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಮುಟ್ಟಿನ ನೈರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಜನರು ತಿಳುವಳಿಕೆ ಹೊಂದಿರಲೇಬೇಕು.

ಯುನಿಸೆಫ್‌ ಪ್ರಕಾರ ಆರೋಗ್ಯ ಮತ್ತು ಶಿಕ್ಷಣದಂತಹ ವಿವಿಧ ಕ್ಷೇತ್ರಗಳಲ್ಲಿ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಗಣನೆಗೆ ತೆಗೆದುಕೊಳ್ಳುವ ರಾಷ್ಟ್ರೀಯ ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರಗಳಿಗೆ ಸಹಾಯ ಮಾಡುವುದು ಅವರ ಮುಖ್ಯ ಕಾರ್ಯವಾಗಿದೆ. ಇದರ ಲಿಂಗ ಸಮಾನತೆಯನ್ನು ಬೆಂಬಲಿಸಲು ಉದ್ದೇಶವನ್ನೂ ಹೊಂದಿದೆ.

ಮುಟ್ಟಿನ ನೈರ್ಮಲ್ಯ ದಿನ 2024ರ ಥೀಮ್‌

ಮುಟ್ಟಿನ ಸುತ್ತಲಿನ ಕಳಂಕ ಹಾಗೂ ನಿಷೇಧಗಳನ್ನು ದೂರಾಗಿಸುವ ಉದ್ದೇಶದಿಂದ ಮುಟ್ಟುಸ್ನೇಹಿ ಜಗತ್ತಿಗಾಗಿ ಎಲ್ಲರೂ ಒಂದಾಗೋಣ ಎಂಬುದಾಗಿದೆ. ಅನಾದಿ ಕಾಲದಿಂದಲೂ ಮುಟ್ಟು ಎಂಬುದು ಅಸ್ಪಷತೆಯ ಅಂಶವಾಗಿದೆ. ಹಿಂದಿನಿಂದ ಇಂದಿನವರೆಗೆ ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗಡೆ ಇರಿಸುವುದು , ಮುಟ್ಟಾದ ಹೆಣ್ಣುಮಕ್ಕಳನ್ನು ಅಪರಾಧ ಭಾವದಲ್ಲಿ ನೋಡುವುದು ಇತ್ಯಾದಿ ಮಾಡುತ್ತಾರೆ. ಇದರಿಂದ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಸಾಧಿಸುವುದು ಕಷ್ಟಸಾಧ್ಯವಾಗುತ್ತದೆ. ಹಾಗಾಗಿ ಮುಟ್ಟಿನ ದಿನಗಳ ಬಗೆಗಿನ ತಪ್ಪುಕಲ್ಪನೆಯನ್ನು ದೂರ ಮಾಡುವುದು ಈ ಥೀಮ್‌ನ ಉದ್ದೇಶ. 

ಮುಟ್ಟಿನ ನೈರ್ಮಲ್ಯ ದಿನದ ಮಹತ್ವ

ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸುವುದು ಬಹಳ ಮುಖ್ಯ ಏಕೆಂದರೆ ಇದು ಮರಬಳಕೆ ಮಾಡಬಹುದಾದ ಬಟ್ಟೆ ಪ್ಯಾಡ್‌ಗಳು, ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಟ್ಯಾಂಪೂನ್‌ಗಳು, ಮುಟ್ಟಿನ ಪ್ಯಾಂಟಿಗಳು ಹಾಗೂ ಆ ದಿನಗಳಲ್ಲಿ ಬಳಸುವ ವಸ್ತುಗಳ ಸುರಕ್ಷತೆಯನ್ನು ಉತ್ತೇಜಿಸುತ್ತದೆ. ಹಳ್ಳಿಗಳಲ್ಲಿ ಮಹಿಳೆಯರು ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಸುತ್ತಾರೆ. ಆ ಈ ಬಟ್ಟೆಯನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ನಂತರ ಬಳಸಬೇಕು. ಒಂದು ವೇಳೆ ಸರಿಯಾಗಿ ತೊಳೆಯದೇ ಅಥವಾ ಅರೆ ಒಣಗಿದ ಬಟ್ಟೆ ಬಳಸುವುದರಿಂದ ಯೋನಿ ಸೋಂಕು, ಗರ್ಭಾಶಯದ ಸೋಂಕು ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗುತ್ತವೆ.

ಮುಟ್ಟಿನ ದಿನಗಳಲ್ಲಿ ನಾಲ್ಕೈದು ಗಂಟೆಗಳಿಗೊಮ್ಮೆ ಪ್ಯಾಡ್‌ ಬದಲಿಸುವ ಜೊತೆಗೆ ಟ್ಯಾಂಪೂನ್‌ ಬಳಕೆಯಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

Whats_app_banner