ಕಾರ್ಟಿಸೋಲ್ ಬಲೆ ಎಂಬ ಖಿನ್ನತೆಗೆ ದೂಡುವ ಚಕ್ರವ್ಯೂಹ; ಹಳೆ ನೆನಪುಗಳ ಸರಪಳಿಯಿಂದ ಬಿಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್ – ಕಾಳಜಿ ಅಂಕಣ
ಕನ್ನಡ ಸುದ್ದಿ  /  ಜೀವನಶೈಲಿ  /  ಕಾರ್ಟಿಸೋಲ್ ಬಲೆ ಎಂಬ ಖಿನ್ನತೆಗೆ ದೂಡುವ ಚಕ್ರವ್ಯೂಹ; ಹಳೆ ನೆನಪುಗಳ ಸರಪಳಿಯಿಂದ ಬಿಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್ – ಕಾಳಜಿ ಅಂಕಣ

ಕಾರ್ಟಿಸೋಲ್ ಬಲೆ ಎಂಬ ಖಿನ್ನತೆಗೆ ದೂಡುವ ಚಕ್ರವ್ಯೂಹ; ಹಳೆ ನೆನಪುಗಳ ಸರಪಳಿಯಿಂದ ಬಿಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್ – ಕಾಳಜಿ ಅಂಕಣ

ರೂಪಾ ರಾವ್ ಬರಹ: ನಮ್ಮ ಮೆದುಳು ಹಳೆಯ ಸವಿ ನೆನಪುಗಳನ್ನು ಟೆಫ್ಲಾನ್ ಕಾವಲಿಯಂತೆ ಬೇಗ ಮರೆತುಬಿಡುತ್ತವೆ. ಆದರೆ ಹಳೆಯ ನೆಗೆಟಿವ್ ಮೆಮೋರಿಗಳಿಗೆ ಗೋಂದಿನಂತೆ ಅಂಟಿಕೊಂಡುಬಿಡುತ್ತವೆ. ಹಳೆಯ ನೆನಪುಗಳ ಬಲೆಯಿಂದ ಬಿಡಿಸಿಕೊಂಡು ಹೊಸ ಜಗತ್ತು ನೋಡಿ.

ಕಾಳಜಿ ಅಂಕಣ – ರೂಪಾ ರಾವ್
ಕಾಳಜಿ ಅಂಕಣ – ರೂಪಾ ರಾವ್

ಕೆಲವೊಮ್ಮೆ ನಾವು ಕಣ್ಣು ಮುಚ್ಚಿ ಕೂತಿರುತ್ತೇವೆ ಅಥವಾ ಮಲಗಿರುತ್ತೇವೆ. ಆದರೆ ನಾವು ಕಾಲ ಪ್ರವಾಹದಲ್ಲಿ ಹಿಂದೆ ಸರಿದು ಹೋಗಿರುತ್ತೇವೆ. ಒಬ್ಬ ಕ್ಲೈಂಟ್ ನನ್ನ ಬಳಿ ಹೇಳಿದ್ರು, ‘ಮೇಡಂ, ನಾನು ಶೂನ್ಯದಲ್ಲಿದ್ದಂತೆ ಭಾಸವಾಗುತ್ತೆ. ಝೋನ್ ಔಟ್ ಆಗಿರುತ್ತೇನೆ. ಆಫೀಸಿನ ಮೀಟಿಂಗ್‌ನಲ್ಲಿ ಭೌತಿಕವಾಗಿ ಹಾಜರಿರುತ್ತೇನೆ. ಆದರೆ ಮನಸು ಅಲ್ಲಿ ಇರುವುದೇ ಇಲ್ಲ‘

ಮುಂದೆ ಥೆರಪಿಯಲ್ಲಿ ಮಾತಾಡುತ್ತಾ ಅರ್ಥ ಆಗಿದ್ದು ಆತ ಶೂನ್ಯದಲ್ಲಿರುತ್ತಿರಲಿಲ್ಲ, ಬದಲಿಗೆ ತನ್ನ ಗತದಲ್ಲಿ ಮುಳುಗಿಹೋಗುತ್ತಿದ್ದರು. ಯಾವುದೋ ಹಳೆಯ ನೋವು, ಒಂದು ತಪ್ಪಿ ಹೋದ ಅವಕಾಶ, ಯಾರೋ ಆಡಿದ ಒಂದು ಮಾತು.. ಹೀಗೆ ಅವರ ಸಂಪೂರ್ಣ ಮನಸ್ಸು ಈ ವಿಚಾರಗಳ ಸುತ್ತಲೂ ಸುತ್ತುತ್ತಿತ್ತು.

ಇದನ್ನು ಗತದ ಬಲೆ ಎಂದು ಕರೆಯೋಣ. ಆದರೆ ಇದು ಎಂತಹದೋ ಸಿಹಿ ನೆನಪುಗಳ ಬಗ್ಗೆ ಅಲ್ಲ. ಇದು ನಮ್ಮನ್ನು ಬಿಗಿಯಾಗಿ ಹಿಡಿದಿರುವ ಅಲ್ಲಿಂದ ಹೊರ ಬರಲಾಗದ ಕಹಿ ನೆನಪುಗಳ ಚಕ್ರವ್ಯೂಹ‌. ಇದೇ ನಮ್ಮನ್ನು ಕಾರ್ಟಿಸೋಲ್ ಎಂಬ ಮೆದುಳಿನ ಹಾರ್ಮೋನಿನ ನಿಲ್ಲದ ಓಟಕ್ಕೆ ಕರೆದೊಯ್ಯುವ ಬಲೆ ಕೂಡ.

ನೆನಪು ಎಂದರೇನು? ನಮ್ಮ ಮನಸ್ಸು ಹಿಂದಕ್ಕೆ ಚಲಿಸುವುದು. ಕೆಲವೊಮ್ಮೆ ಅದು ಹಿತವಾಗಿರಬಹುದು. ಮನಸ್ಸಿಗೇನೋ ನೆಮ್ಮದಿ ಕೊಡುವ ತಾಣವೂ ಆಗಿರಬಹುದು ಅಥವಾ ಹೀಗೆ ಆಗಿದ್ದಿದ್ದರೆ , ನಾ ಹೀಗೆ‌ ಮಾಡಿದ್ದಿದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಅಪರಾಧಿ ಮನೋಭಾವವು ಕೂಡ‌ ಆಗಿರಬಹುದು.

ಆದರೆ ಅದರಲ್ಲಿ ನಾವು ಮತ್ತೆ ಮತ್ತೆ ಸಾಗುತ್ತಾ ಮುಳುಗಿಬಿಟ್ಟಾಗ ಪ್ರಸ್ತುತದಿಂದ ಕಳಚಿಕೊಂಡಾಗ ಅದೊಂದು ಇಂದಿನ ಸಮಸ್ಯೆಗಳಿಂದ ಓಡಿ ಹೋಗಿ ಫ್ಯಾಂಟಸಿ ಆಲೋಚನೆಗಳಲ್ಲಿ ಬಚ್ಚಿಟ್ಟುಕೊಳ್ಳುವ ಅಡಗುತಾಣವಾಗಿಬಿಡುತ್ತದೆ‌.

ಇದನ್ನೇ ನ್ಯೂರೋಸೈನ್ಸ್‌ ಮೂಲಕ ಹೀಗೆ ವಿವರಿಸಬಹುದು. ಹಳೆಯ ನೆನಪುಗಳು ನಮ್ಮ ಮೆದುಳಿನ ಹಿಪೋಕ್ಯಾಂಪಸ್, ಪ್ರಿಫ್ರಂಟಲ್ ಕಾರ್ಟೆಕ್ಸ್ ಭಾಗಗಳನ್ನು ಸಕ್ರಿಯಗೊಳಿಸುತ್ತವೆ. ಹೆಮ್ಮೆಯ, ಖುಷಿ ಕೊಡುವ ನೆನಪುಗಳು ಇದ್ದರೆ ಖುಷಿ ಹಾರ್ಮೋನ್ ಡೋಪಮೈನ್ ಹೆಚ್ಚಾಗಿ ಸಂತೋಷ ಕೊಡುತ್ತದೆ. ಆದರೆ ನೋವಿನ, ಅಪರಾಧಿತನ ಕೊಡುವ ನೆನಪುಗಳು ಇದ್ದಾಗ ಅದು ಅಮಿಗ್ದಾಲಾ ಎಂಬ ಭಾವನೆಗಳ ಕೇಂದ್ರವನ್ನು ಪ್ರಚೋದಿಸುತ್ತದೆ. ಆಗ ನಮ್ಮ ಮೆದುಳಿನ ಕೇಂದ್ರ ಅಲ್ಲೇನೋ ಅಪಾಯವಿದೆ ಎಂದು ಭಾವಿಸಿ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ.

ಇದೇ ನೆನಪು + ನೋವಿನ ಅನುಭವ + ಹಳೆಯ ನೆನಪುಗಳ ನಿಲ್ಲದ ಚಕ್ರ =ಕಾರ್ಟಿಸೋಲ್ ಟ್ರ್ಯಾಪ್‌. ನೀವು ಯಾವಾಗಲೂ ‘ಆಗ ನಾನು ಏಕೆ ಹೀಗೆ ಮಾಡ್ಲಿಲ್ಲ?‘, ‘ಅವನು ಹೀಗೆ ಹೇಳ್ಬೇಕಿತ್ತಾ?‘ ‘ಅವಳಿರಬೇಕಿತ್ತು‘, ‘ನಾನೇ ತಪ್ಪು ಮಾಡಿ ಬಿಟ್ಟೆನಾ?‘ ಎಂಬೆಲ್ಲಾ ಪ್ರಶ್ನೆಗಳಲ್ಲಿ ಮುಳುಗಿದ್ದರೆ ನೀವು ಕಾರ್ಟಿಸೋಲ್‌ನ ಬಲೆಗೆ ಸಿಕ್ಕಿದ್ದಿರಿ ಎಂದರ್ಥ.

ಕಾರ್ಟಿಸೋಲ್ ಬಲೆಗೆ ಸಿಕ್ಕಿರುವ ಲಕ್ಷಣಗಳು

ದಿನದ ಬಹುಭಾಗ ಹಳೆಯ ನೆನಪುಗಳಲ್ಲಿ ಮುಳುಗಿರುವುದು. ಕಣ್ಣಲ್ಲಿ ನೀರು, ಎದೆಯಲ್ಲಿ ಭಾರ. ‘ಆಗ ಹೀಗೆ ಮಾಡಿದ್ದೆ ಮಾಡಬಾರದಿತ್ತು…‘ ಅನ್ನೋ ನಿರಂತರ ಬೇಸರ. ಪ್ರಸ್ತುತ ಜೀವನದಲ್ಲಿ ಉತ್ಸಾಹದ ಕೊರತೆ. ನೆನಪುಗಳು ಒಂದು ನಿರಂತರ ಮೌನ ಯುದ್ಧದಂತೆ ಪದೇ ಪದೇ ಬಂದು ಬೀಳುತ್ತಿರುವುದು. ನಿಮ್ಮ ದೈನಂದಿನ ಕೆಲಸಗಳೂ ಭಾರವಾದಂತೆ ಅನಿಸುವುದು.

ಡಾ. ರಿಕ್ ಹ್ಯಾನ್ಸನ್ ತಮ್ಮ ಪುಸ್ತಕ Hardwiring Happinessನಲ್ಲಿ ಹೇಳ್ತಾರೆ: ‘The brain is like Velcro for negative experiences and Teflon for positive ones‘.

ನಮ್ಮ ಮೆದುಳು ಹಳೆಯ ಸವಿ ನೆನಪುಗಳನ್ನು ಟೆಫ್ಲಾನ್ ಕಾವಲಿಯಂತೆ ಬೇಗ ಮರೆತುಬಿಡುತ್ತವೆ. ಆದರೆ ಹಳೆಯ ನೆಗೆಟಿವ್ ಮೆಮೋರಿಗಳಿಗೆ ಗೋಂದಿನಂತೆ ಅಂಟಿಕೊಂಡುಬಿಡುತ್ತವೆ.

ನಿಜ ಹೇಳಬೇಕೆಂದರೆ, ನೆನಪುಗಳು ನಮ್ಮ ಅತ್ಯಂತ ಒಳ್ಳೆಯ ಸ್ನೇಹಿತರಾಗಬಹುದು, ಆದರೆ ಕೆಲವೊಮ್ಮೆ ಅವು ನಮ್ಮ ಮನಸಿನ ಜೈಲಿನ ಜೈಲರ್ ಸಹ ಆಗಬಹುದು. ಆ ಜೈಲರ್ ಹೆಸರು ಕಾರ್ಟಿಸೋಲ್. ಅಲ್ಲಿಂದ ಹೊರಬರುವ ಹಾಗೇ ಕಾಡುವ ಜೈಲರ್‌. ಇದರಿಂದ ಹೊರಬರಬೇಕೆಂದರೆ ಜೈಲರ್ ಅನ್ನು ರಿಲಾಕ್ಸ್ ಆಗಿಸಬೇಕು.

ಈ ಕಾರ್ಟಿಸೋಲ್ ಟ್ರಾಪ್‌ನಿಂದ ಹೊರ ಬರುವ ಮಾರ್ಗ

1.ನಿಮ್ಮ ಮನಸಿಗೆ ಹೀಗೆ ಕೇಳಿಕೊಳ್ಳಿ ಈ ನೆನಪು ಪ್ರಸ್ತುತ ಬದುಕಿಗೆ ಆಧಾರವೇ? ಅಥವಾ ಪ್ರಸ್ತುತ ಬದುಕಿನಿಂದ ತಪ್ಪಿಸಿಕೊಳ್ಳುವ ಮಾರ್ಗವೋ?

2. ಬದುಕಿನ ಆ ನೆನಪುಗಳಿಂದ ಆಗುತ್ತಿರುವ ಭಾವನೆಗಳಿಗೊಂದು ಹೆಸರು ಕೊಡಿ. ಆ ನೆನಪುಗಳನ್ನು ಒಂದು ಜರ್ನಲ್ ಮೂಲಕ ಬರೆಯಿರಿ.

3. ಪ್ರಸ್ತುತ ವರ್ತಮಾನಕ್ಕೆ ಬರಲು ಕಲಿಯಿರಿ. ಒಂದು ಆಳವಾದ ಉಸಿರನ್ನೆಳೆದು, ನಿಮ್ಮ ಸುತ್ತಲೂ ಏನಿದೆ ಅಂತ ಗಮನಿಸಿ.

4. ನಾಳೆಗೆ ಹೊಸ ಹಿತವಾದ ನೆನಪುಗಳನ್ನು ಸೃಷ್ಟಿಸಿ

ಇಂದು ನೀವು ಮಾಡಿದ ಒಂದು ಸಣ್ಣ, ಆದರೆ ಅರ್ಥಪೂರ್ಣ ಕೆಲಸ ನಾಳೆಯ ಸ್ವೀಟ್ ಮೆಮೋರಿ ಆಗಬಹುದು.

ಯಾವಾಗಲಾದರೂ ಒಂದು ನೆನಪಿನ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಾಗ ಈ ಪ್ರಶ್ನೆ ಕೇಳಿಕೊಳ್ಳಿ. ಈ ನೆನಪು ನನ್ನನ್ನು ಹೀಲ್ (ಗುಣ ಪಡಿಸುತ್ತಿದೆಯಾ) ಮಾಡುತ್ತಿದೆಯಾ? ಅಥವಾ ಮನಸಿನ ಗಾಯವನ್ನು ಇನ್ನೂ ಉಲ್ಬಣಗೊಳಿಸುತ್ತಿದೆಯಾ? ಆ‌ ಕ್ಷಣಕ್ಕೆ ನಿಮ್ಮ ಅರಿವೇ ನಿಮ್ಮನ್ನು ಅಲ್ಲಿಂದ ಹೊರ ಕರೆ ತರುತ್ತದೆ.

ಡಾ. ರಿಕ್ ಹ್ಯಾನ್ಸನ್ ಅವರ ಮೆಟಾಫರ್ ಇಲ್ಲಿಗೆ ಬಹಳವಾಗಿ ಅನ್ವಯವಾಗುತ್ತದೆ.

ಮನಸ್ಸು ಒಂದು ತೋಟ ಎಂದು ಕಲ್ಪಿಸಿಕೊಳ್ಳಿ. ನೀವು ಅದರೊಳಗಿನ ಗಿಡಗಳನ್ನೂ, ಹೂವನ್ನೂ ಕೇಂದ್ರೀಕರಿಸಿ ಯಾವ ರೀತಿಯ ಯೋಚನೆ ಇಲ್ಲದೇ ಶಾಂತವಾಗಿ ನೋಡಬಹುದು. ಹಾಗೆಯೇ ಮನಸ್ಸಿನಲ್ಲಿ ತೊಂದರೆ ನೀಡುವ ನಕಾರಾತ್ಮಕ ವಿಚಾರಗಳನ್ನು ಕಡಿಮೆ ಮಾಡುವ ಅಲ್ಲಿ ಬೆಳೆದಿರುವ ಕಳೆಯನ್ನು ತೆಗೆದುಹಾಕುವುದು ಜೊತೆಗೆ ಅಲ್ಲಿ ಇನ್ನಷ್ಟು ಬಣ್ಣಬಣ್ಣದ ಹಿತವಾದ ಹೂಗಳ ಗಿಡಗಳನ್ನು ಬೆಳೆಸಬಹುದು ಅಂದರೆ ಧನಾತ್ಮಕವಾಗಿ ಯೋಚಿಸುವುದು.

ಶಂಕರ್‌ನಾಗ್ ಅವರು ತಮ್ಮ ಹಾಡೊಂದರಲ್ಲಿ ಹೇಳಿದಂತೆ ‘ನಾಳೆ ಎಂಬುವ ಚಿಂತೆ ನಮಗಿಲ್ಲ, ನೆನ್ನೆ ನಡೆದುದ ಮತ್ತೆ ಎಂದಿಗೂ ನೆನೆಯಲ್ಲ, ಇಂದು ಏನು ಬೇಕು ಅಂದ್ರೆ ಚಿಂತೆ ಸಾಕು‌‘. ಈ ಕ್ಷಣಕ್ಕೆ ಬದುಕುವುದನ್ನು ಅಭ್ಯಾಸ ಮಾಡಿಕೊಂಡರೆ ಸಾಕು, ನಾಳೆ ನಮ್ಮದೇ ಆಗಿರುತ್ತೆ.

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.