ಒತ್ತಡದ ಬದುಕಿನಿಂದ ಹೊರಬರಲು ಇಲ್ಲಿದೆ ಸರಳ ಮಾರ್ಗ; ಈ ಟಿಪ್ಸ್ ಅನುಸರಿಸಿ ಒತ್ತಡದಿಂದ ಮುಕ್ತಿ ಹೊಂದಿ
ಇಂದು ಬಹುತೇಕ ಮಂದಿ ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕಾದದ್ದು ಅನಿವಾರ್ಯ. ಒತ್ತಡದಿಂದ ಹೊರಬರಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದ್ದು, ಅದನ್ನು ಅನುಸರಿಸಬಹುದು. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಇಂದು ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಒತ್ತಡವನ್ನು ಕಡಿಮೆ ಮಾಡದಿದ್ದರೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನೀವು ಅನುಭವಿಸುತ್ತಿರುವ ಒತ್ತಡವು ನಿಮ್ಮ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವನ್ನು ಬೇರ್ಪಡಿಸಿಬಹುದು. ಹೀಗಾಗಿ ಒತ್ತಡದ ಬದುಕಿನಿಂದ ಆಚೆ ಬರುವುದು ಮುಖ್ಯ. ದೀರ್ಘಕಾಲದ ಒತ್ತಡವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರ, ವ್ಯಾಯಾಮ, ಸಾಕಷ್ಟು ನಿದ್ರೆ, ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ಅತ್ಯಗತ್ಯ. ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ ನೀವು ತಕ್ಷಣವೇ ಒತ್ತಡದಿಂದ ಹೊರಬರಬಹುದು. ಈ ಬಗ್ಗೆ ಇಲ್ಲಿದೆ ವಿವರ.
ಅಲ್ಲದೆ, ಕೆಲವು ಸಲಹೆಗಳು ಒತ್ತಡವನ್ನು ತಕ್ಷಣ ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ. ಕೇವಲ ಐದು ನಿಮಿಷಗಳಲ್ಲಿ ಒತ್ತಡ ನಿವಾರಿಸುವ ಬಗ್ಗೆ ಇಲ್ಲಿದೆ ಸಲಹೆ.
ಒತ್ತಡ ನಿವಾರಿಸಲು ಸಲಹೆ
ನೀರು ಕುಡಿಯಿರಿ: ನೀವು ಒತ್ತಡಕ್ಕೆ ಒಳಗಾದಾಗ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯಕ್ಕಾಗಿ ದೇಹವನ್ನು ನಿರ್ಜಲೀಕರಣದಿಂದ ಕಾಪಾಡುವುದು ಬಹಳ ಮುಖ್ಯ. ದೇಹ ನಿರ್ಜಲೀಕರಣಗೊಂಡಾಗಲೂ ದಣಿವು ಮತ್ತು ಹೆಚ್ಚಿನ ಒತ್ತಡವನ್ನು ಅನುಭವಿಸಬಹುದು. ವರ್ಲ್ಡ್ ಜರ್ನಲ್ ಆಫ್ ಸೈಕಿಯಾಟ್ರಿ ಪ್ರಕಾರ, ಕಡಿಮೆ ನೀರನ್ನು ಸೇವಿಸುವ ಜನರಿಗೆ ಹೋಲಿಸಿದರೆ ಹೆಚ್ಚು ನೀರು ಕುಡಿಯುವ ಜನರು ಒತ್ತಡ, ಆತಂಕ ಮತ್ತು ಖಿನ್ನತೆಯ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ.
ಆಳವಾದ ಉಸಿರಾಟವನ್ನು ತೆಗೆದುಕೊಳ್ಳಿ: ಉಸಿರಾಟದ ವ್ಯಾಯಾಮವು ಒತ್ತಡದ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ನೀವು ತುಂಬಾ ಒತ್ತಡಕ್ಕೊಳಗಾದಾಗ, ನಿಮ್ಮ ಮೂಗಿನ ಮೂಲಕ ಆಳವಾಗಿ ಉಸಿರೆಳೆದುಕೊಳ್ಳಿ, ಕೆಲವು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ ಮತ್ತು ಬಾಯಿಯ ಮೂಲಕ ನಿಧಾನವಾಗಿ ಉಸಿರನ್ನು ಹೊರಹಾಕಿ. ಈ ಲಯಬದ್ಧ ಉಸಿರಾಟವು ನರಮಂಡಲವನ್ನು ಶಾಂತಗೊಳಿಸುವುದಲ್ಲದೆ ನಿಮಗೆ ವಿಶ್ರಾಂತಿ ನೀಡಲು ಸಹಕಾರಿಯಾಗಿದೆ.
ಸಂಗೀತವನ್ನು ಆಲಿಸಿ: ಸಂಗೀತವು ನಿಮ್ಮ ಭಾವನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಒತ್ತಡ ನಿರ್ವಹಣೆಯಲ್ಲಿ ಇದು ಪ್ರಬಲ ಸಾಧನವಾಗಿದೆ ಎಂದು ಅಧ್ಯಯನಗಳು ತೋರಿಸಿವೆ. ಪಿಎಲ್ಒಎಸ್ ಒನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಸಂಗೀತವು ಒತ್ತಡಕ್ಕೆ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ತ್ವರಿತ ಪರಿಹಾರ ಮತ್ತು ವಿಶ್ರಾಂತಿಯನ್ನು ಪ್ರಚೋದಿಸುತ್ತದೆ ಎಂದು ಹೇಳಿದೆ. ಹೀಗಾಗಿ ನಿಮಗಿಷ್ಟದ ಯಾವುದೇ ಸಂಗೀತವನ್ನು ಕೇಳಬಹುದು. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಬಾಲಾಸನ ಪ್ರಯತ್ನಿಸಿ: ಒತ್ತಡ ನಿವಾರಿಸಲು ಯೋಗಾಸನವು ಕೂಡ ದಿವ್ಯೌಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಬಾಲಾಸನ ಭಂಗಿಯು ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ಉತ್ತೇಜಿಸುವ ಸರಳ ಮತ್ತು ಪರಿಣಾಮಕಾರಿ ಯೋಗ ಭಂಗಿಯಾಗಿದೆ. ನೀವು ತುಂಬಾ ಒತ್ತಡಕ್ಕೆ ಒಳಗಾದಾಗ ಈ ಭಂಗಿಯು ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ, ನೀವು ನೆಲದ ಮೇಲೆ ಮಂಡಿಯೂರಿ, ಹಿಮ್ಮಡಿಗಳನ್ನು ನೆಲದ ಮೇಲೆ ಇರಿಸಿ ಕುಳಿತುಕೊಳ್ಳಿ. ಮೊಣಕಾಲುಗಳನ್ನು ಮಡಿಚಿ ಎದೆಯನ್ನು ಬಗ್ಗಿಸಿ, ಎರಡೂ ಅಂಗೈಗಳನ್ನು ನೆಲಕ್ಕೆ ಸ್ಪರ್ಶಿಸಿ ಮುಂದೆ ಬಾಗಿ. ಉಸಿರಾಟದ ಮೇಲೆ ಗಮನ ಕೇಂದ್ರೀಕೃತವಾಗಿರಲಿ. ಈ ರೀತಿಯ ಯೋಗ ಭಂಗಿ ಮಾಡುವುದರಿಂದ ಒತ್ತಡ ನಿವಾರಿಸಬಹುದು.
ಅರೋಮಾಥೆರಪಿ: ಧ್ಯಾನ ಮತ್ತು ಒತ್ತಡ ನಿರ್ವಹಣಾ ತಂತ್ರಗಳ ಜೊತೆಗೆ, ಅರೋಮಾಥೆರಪಿ ನಿಮ್ಮ ಒತ್ತಡವನ್ನು ತಕ್ಷಣ ಕಡಿಮೆ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‍ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪರಿಮಳಯುಕ್ತ ಮೇಣದಬತ್ತಿಗಳು ಮಾನಸಿಕ ಪ್ರಯೋಜನಗಳನ್ನು ಹೊಂದಿವೆ. ಅವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತವೆ. ನೀವು ಲ್ಯಾವೆಂಡರ್, ಕ್ಯಾಮೊಮೈಲ್ ಅಥವಾ ನೀಲಗಿರಿಯಂತಹ ಪರಿಮಳಯುಕ್ತ ಪದಾರ್ಥಗಳನ್ನು ಬಳಸಬಹುದು.
ನಡಿಗೆ: ದಿನವಿಡೀ ಕುಳಿತುಕೊಳ್ಳುಕೊಂಡೇ ಕೆಲಸ ಮಾಡುವುದಕ್ಕಿಂತ ಪ್ರತಿ ಗಂಟೆಗೆ 5 ನಿಮಿಷಗಳ ನಡಿಗೆ ಅಥವಾ ದಿನಕ್ಕೆ 4 ರಿಂದ 5 ಬಾರಿ ಹೊರಗೆ ವಾಕ್ (ನಡಿಗೆ) ಮಾಡುವುದು ಉತ್ತಮ. ತಾಜಾ ಗಾಳಿ, ನೈಸರ್ಗಿಕ ಬೆಳಕು ಮತ್ತು ದೈಹಿಕ ಚಲನೆಯು ಮನಸ್ಸನ್ನು ಶಾಂತಗೊಳಿಸಲು ಸಹಕಾರಿಯಾಗಿದೆ. ಒತ್ತಡ ನಿಭಾಯಿಸಲು ಉದ್ಯಾನವನ ಅಥವಾ, ಸ್ವಲ್ಪ ದೂರ ನಡೆಯುವುದು ಉತ್ತಮ.
ಇದನ್ನೂ ಓದಿ: ಮಾನಸಿಕ ಆರೋಗ್ಯ ಸುಧಾರಿಸುವ 8 ಯೋಗಾಸನಗಳು
