Good Girl Syndrome: ಏನಿದು ಗುಡ್ ಗರ್ಲ್ ಸಿಂಡ್ರೋಮ್, ಇದೊಂದು ಮಾನಸಿಕ ವಾಧ್ಯಿಯೇ, ಇದರ ಲಕ್ಷಣಗಳೇನು; ಇಲ್ಲಿದೆ ಮಾಹಿತಿ
ಗುಡ್ ಗರ್ಲ್ ಸಿಂಡ್ರೋಮ್ ಇದು ಇತರನನ್ನು ಮೆಚ್ಚಿಸುವ ಸಲುವಾಗಿ ಹಾಗೂ ಎಲ್ಲದರಲ್ಲೂ ಪರಿಪೂರ್ಣವಾಗಿ ಇರಬೇಕು ಎಂದು ಬಯಸುವ ನಡವಳಿಕೆಗಳನ್ನು ಹೊಂದಿರುತ್ತದೆ. ಇದು ಮುಂದುವರಿದರೆ ವಿವಿಧ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾದರೆ ಏನಿದು ಗುಡ್ ಗರ್ಲ್ ಸಿಂಡ್ರೋಮ್, ಇದರ ಲಕ್ಷಣಗಳೇನು ಎಂಬ ವಿವರ ಇಲ್ಲಿದೆ.

ಗುಡ್ ಗರ್ಲ್ ಸಿಂಡ್ರೋಮ್ ಹೆಸರು ಖಂಡಿತ ವಿಚಿತ್ರವಾಗಿದೆ, ಹೀಗೊಂದು ವ್ಯಾಧಿ ಇರಲು ಸಾಧ್ಯವೇ ಎಂದು ನಿಮಗೆ ಅನ್ನಿಸಬಹುದು. ಆದರೆ ಇದು ಖಂಡಿತ ಮನಶಾಸ್ತ್ರದಿಂದ ಮಾನ್ಯತೆ ಪಡೆದಿರುವ ಪದವಲ್ಲ. ಆದರೆ ಔಪಚಾರಿಕವಾಗಿ ಕೆಲವು ನಡವಳಿಕೆಗಳು ಹಾಗೂ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳ ಬಗ್ಗೆ ವಿವರಿಸಲು ಈ ಪದವನ್ನು ಬಳಸಲಾಗುತ್ತದೆ.
ಗುಡ್ ಗರ್ಲ್ ಸಿಂಡ್ರೋಮ್ ಇರುವವರು ಜನರನ್ನು ಮೆಚ್ಚಿಸುವ ಸಲುವಾಗಿ ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳಬಹುದು. ಗುಡ್ ಗರ್ಲ್ ಸಿಂಡ್ರೋಮ್ ಇರುವವರು ಜನರು ಮೆಚ್ಚಲಿ ಎನ್ನುವ ಕಾರಣಕ್ಕೆ ತಮ್ಮದಲ್ಲದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುತ್ತಾರೆ. ಜನರಿಗೆ ಇಷ್ಟವಾಗಲಿ ಎನ್ನುವ ಕಾರಣಕ್ಕೆ ಹೊರಗಿನಿಂದ ಬೇರೆಯದೇ ನಡವಳಿಕೆ ತೋರುತ್ತಾರೆ. ಈ ರೀತಿ ಸಿಂಡ್ರೋಮ್ ಇರುವವರು ಎಂದೆಂದಿಗೂ ಪರಿಪೂರ್ಣರಾಗಲು ಬಯಸುತ್ತಾರೆ. ಈ ಗುಡ್ ಗರ್ಲ್ ಸಿಂಡ್ರೋಮ್ ಹೆಣ್ಣುಮಕ್ಕಳಲ್ಲಿ ಇರುವ ಒಂದು ರೀತಿಯ ವರ್ತನೆ.
‘ಹೆಣ್ಣುಮಕ್ಕಳು ವಿಧೇಯರಾಗಿರಬೇಕು, ತ್ಯಾಗ ಮಾಡಬೇಕು ಮತ್ತು ಅವರು ಚೆನ್ನಾಗಿ ಸಿಂಗಾರ ಮಾಡಿಕೊಳ್ಳಬೇಕು ಎಂಬೆಲ್ಲಾ ಕಲ್ಪನೆಯನ್ನು ನಮ್ಮ ಸಂಸ್ಕೃತಿಯಲ್ಲಿ ವೈಭವೀಕರಿಸಲಾಗಿದೆ. ಹೆಣ್ಣುಮಕ್ಕಳು ಬೇಡ ಎನ್ನುವುದಿಲ್ಲ, ಧ್ವನಿ ಎತ್ತುವುದಿಲ್ಲ, ಬಲವಾದ ಅಭಿಪ್ರಾಯಗಳನ್ನು ಹೊಂದಿಲ್ಲ, ಅವರು ಎದುರು ವಾದಿಸುವಂತಿಲ್ಲ. ಯಾವಾಗಲೂ ಚೆನ್ನಾಗಿ ಮಾತನಾಡಬೇಕು‘ ಎಂಬೆಲ್ಲಾ ಕಟ್ಟಳೆಗಳನ್ನು ಸಮಾಜ ಹೊಂದಿದೆ. ನಮ್ಮಲ್ಲಿ ಕೆಲವೊಂದು ಧಾರಾವಾಹಿಗಳು ಕೂಡ ಇಂತಹ ಪಾತ್ರಗಳನ್ನು ವೈಭವೀಕರಿಸುತ್ತಿವೆ‘ ಎಂದು ಎನ್ಸೊ ವೆಲ್ನೆಸ್ ಸಂಸ್ಥಾಪಕ ಹಾಗೂ ವೆಲ್‌ನೆಸ್ ಕೋಚ್ ಆಗಿರುವ ಅರೂಬಾ ಕಬೀರ್ ಹಿಂದೂಸ್ತಾನ್ ಟೈಮ್ ಜೊತೆ ಮಾತನಾಡಿದ್ದಾರೆ.
‘ಜನರು, ತಮ್ಮ ಸುತ್ತಲಿರುವ ಮಹಿಳೆಯರ ಬಗ್ಗೆ ಹೊಂದಿರುವ ಆದರ್ಶವಾದಿ ಮಹಿಳೆ ಹೀಗೆ ಇರಬೇಕು ಎನ್ನುವ ಗ್ರಹಿಕೆಯು ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಾದ ಆತಂಕ, ಸ್ವಾಭಿಮಾನದ ಕೊರತೆ, ಜನರನ್ನು ಮೆಚ್ಚಿಸುವ ನಡವಳಿಕೆ ಮತ್ತು ಗಡಿರೇಖೆಯಂತಹ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ‘ ಅರೂಬಾ ಹೇಳುತ್ತಾರೆ.
ಗುಡ್ ಗರ್ಲ್ ಸಿಂಡ್ರೋಮ್ ಹೊಂದಿರುವವರಿಗೆ ಸ್ವಾಭಿಮಾನದ ಕೊರತೆ ಇರುತ್ತದೆ. ಅವರು ಯಾವುದೇ ಕಾರಣಕ್ಕೂ ಯಾರಿಗೂ, ಬೇಡ ಎಂದು ಹೇಳಲು ಮನಸ್ಸು ಮಾಡುವುದಿಲ್ಲ. ಇಲ್ಲ, ಆಗುವುದಿಲ್ಲ ಎಂದು ಹೇಳಲು ಪರದಾಡುತ್ತಾರೆ. ತಾವು ಹೊಂದಿರಬೇಕಾದ ಕೌಶಲ್ಯಗಳ ಹೊರತಾಗಿಯೂ ತಾವು ಯಾರೆಂದು ಒಪ್ಪಿಕೊಳ್ಳಲು ಅಥವಾ ವೈಯಕ್ತಿಕ ಗಡಿಗಳನ್ನು ಹೊಂದಿಸಲು ಹೆಣಗಾಡುತ್ತಾರೆ. ಇವರು ವೈಯಕ್ತಿಕ ಜೀವನವನ್ನು ಮಾತ್ರವಲ್ಲದೆ ಅವರ ಶೈಕ್ಷಣಿಕ ಕಾರ್ಯಕ್ಷಮತೆ, ಸಂಬಂಧಗಳು, ಆಯ್ಕೆಗಳು, ಆರ್ಥಿಕ ನಿರ್ಧಾರಗಳು, ಸಾಮಾಜಿಕ ಸಂವಹನಗಳು ಸೇರಿ ಇತರ ಎಲ್ಲಾ ಸಂದರ್ಭಗಳಲ್ಲೂ ಜನರು ತಮ್ಮನ್ನು ಹೊಗಳಬೇಕು ಎಂದು ಬಯಸುತ್ತಾರೆ. ಇಂತಹವರು ಅತ್ಯಂತ ಕಳಪೆ ಒತ್ತಡ ನಿರ್ವಹಣಾ ಕೌಶಲವನ್ನು ಹೊಂದಿರುತ್ತಾರೆ.
ಗುಡ್ ಗರ್ಲ್ ಸಿಂಡ್ರೋಮ್‌ನ ಲಕ್ಷಣಗಳಿವು
- ಬೇರೆಯವರನ್ನು ಸಂತೋಷಪಡಿಸುವುದು: ಇತರರ ಸಂತೋಷಕ್ಕಾಗಿಯೇ ಬದುಕುವುದು. ನನ್ನ ಸ್ವಂತ ಯೋಗಕ್ಷೇಮಕ್ಕಿಂತ ಬೇರೆಯವರ ಯೋಗಕ್ಷೇಮವೇ ಮುಖ್ಯ ಎಂದುಕೊಳ್ಳುವುದು. ಇಲ್ಲ ಎಂದು ಹೇಳುವುದೇ ಇಲ್ಲ. ಹಸಿವಿನಿಂದ ಬಳಲುವುದು, ನಿರ್ದಿಷ್ಟ ರೀತಿಯಲ್ಲಿ ನೋಡುವುದು, ದೀರ್ಘಾವಧಿಯಲ್ಲಿ ಹಾನಿಗೊಳಿಸುವಂತಹ ಉತ್ಪನ್ನಗಳನ್ನು ಬಳಸುವುದು, ಹಣವನ್ನು ಎರವಲು ಪಡೆಯುವುದು, ಸುಳ್ಳು ಹೇಳುವುದು, ನಿಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು ಇತ್ಯಾದಿಗಳಂತಹ ಅನೇಕ ಅನಾರೋಗ್ಯಕರ ಕೆಲಸಗಳನ್ನು ಮಾಡುವುದು ಫಲಿತಾಂಶವಾಗಿರಬಹುದು. ಒಟ್ಟಾರೆ ಈ ಎಲ್ಲದರ ಉದ್ದೇಶ ಬೇರೆಯವರನ್ನು ಸಂತೋಷಪಡಿಸುವುದೇ ಆಗಿರುತ್ತದೆ.
- ನಿರಾಕರಣೆಯ ಭಯ: ಇತರರಿಂದ ನಿರ್ಲಕ್ಷಕ್ಕೆ ಒಳಗಾಗುವ ನಿರಂತರ ಭಯವು ಘರ್ಷಣೆಗಳು ಮತ್ತು ನಿರ್ಧಾರ ಮಾಡುವುದನ್ನು ತಪ್ಪಿಸಲು ಕಾರಣವಾಗಬಹುದು. ಆಹಾರ ಆದ್ಯತೆಗಳು ಅಥವಾ ವೈಯಕ್ತಿಕ ಉಡುಗೆಗಳಂತಹ ಸಣ್ಣ ಆಯ್ಕೆಗಳಲ್ಲಿಯೂ ಸಹ ಇತರರ ಸಲುವಾಗಿ ಮಾಡುವಂತೆ ಇರಬಹುದು. ಈ ಭಯವು ವ್ಯಕ್ತಿಗಳು ತಮ್ಮನ್ನು ತಾವು ಪ್ರತಿಪಾದಿಸುವುದನ್ನು ಅಥವಾ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ತಡೆಯಬಹುದು. ತಾವು ಮಾಡುತ್ತಿರುವ ಕೆಲಸ ತಮಗೆ ಅತೃಪ್ತಿ ಹೊಂದಿದ್ದರೂ ಕೂಡ ಬೇರೆಯವರಿಗಾಗಿ ಅವರಿಷ್ಟದ ಕೆಲಸಗಳನ್ನು ಮಾಡುತ್ತಾರೆ.
- ಪರಿಪೂರ್ಣತೆ ಬಯಸುವುದು: ಜೀವನದ ಎಲ್ಲಾ ಅಂಶಗಳಲ್ಲಿ ದೋಷರಹಿತವಾಗಿರಲು ಬಯಸುವುದು ಮತ್ತು ಪ್ರಯತ್ನಿಸುವುದು, ಅವಾಸ್ತವಿಕವಾಗಿ ಉನ್ನತ ಗುಣಮಟ್ಟವನ್ನು ಹೊಂದಿಸುವುದು ಮತ್ತು ಅವುಗಳನ್ನು ಪೂರೈಸಲು ಸಾಧ್ಯವಾಗದಿದ್ದಾಗ ದುಃಖವನ್ನು ಅನುಭವಿಸುವುದು. ಇದರ ಪರಿಣಾಮವಾಗಿ ಅನೇಕ ಜನರು ಒಸಿಡಿಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬೆಳೆಸಿಕೊಳ್ಳುತ್ತಾರೆ.
- ಗಡಿಗಳನ್ನು ಹೊಂದಿಸುವಲ್ಲಿ ತೊಂದರೆ: ಸ್ಪಷ್ಟವಾದ ವೈಯಕ್ತಿಕ ಗಡಿಗಳನ್ನು ಹೊಂದಿಸಲು ಮತ್ತು ಒಬ್ಬರ ಮಿತಿಗಳನ್ನು ದೃಢವಾಗಿ ಸಂವಹನ ಮಾಡಲು ಸಾಧ್ಯವಾಗದಿರುವುದು ಹೆಚ್ಚಿನ ಸಮಯ ಸ್ವಯಂ-ಆರೈಕೆ ಚಟುವಟಿಕೆಗಳನ್ನು ನಿರ್ಲಕ್ಷಿಸಲು ಕಾರಣವಾಗುತ್ತದೆ.
- ಅಪರಾಧಿ ಮನೋಭಾವ: ಸ್ವಯಂ-ಆರೈಕೆಗೆ ಆದ್ಯತೆ ನೀಡುವಾಗ ಅಥವಾ ತಮ್ಮ ಸ್ವಂತ ಅಗತ್ಯಗಳನ್ನು ಆದ್ಯತೆಯಾಗಿ ಇರಿಸಿದಾಗ ಇವರಲ್ಲಿ ತಾವೇನೋ ತಪ್ಪು ಮಾಡುತ್ತಿದ್ದೇವೆ ಎನ್ನುವ ಅಪರಾಧಿ ಮನೋಭಾವ ಮೂಡಬಹುದು.
ಇದು ಮಾನಸಿಕ ಕಾಯಿಲೆ ಅಲ್ಲ; ಬದಲಿಗೆ, ಇದನ್ನು ಭಾವನಾತ್ಮಕ ಅಸ್ಥಿರತೆ ಅಥವಾ ತೊಂದರೆ ಎಂದು ಉಲ್ಲೇಖಿಸಬಹುದು. ಒಮ್ಮೆ ಗುರುತಿಸಿದರೆ, ಇದನ್ನು ಜಯಿಸಲು ಸಾಧ್ಯವಿದೆ. ಸಾಮಾನ್ಯವಾಗಿ 7 ರಿಂದ 10ನೇ ವಯಸ್ಸಿನಲ್ಲಿ ಹುಡುಗಿಯ ಮೇಲೆ ಕೌಟುಂಬಿಕ ಹಾಗೂ ಸಾಮಾಜಿಕ ಅಂಶಗಳು ಹೇಗೆ ಪರಿಣಾಮ ಬೀರಿತು ಎಂಬುದರ ಆಧಾರದ ಮೇಲೆ ಈ ಸಮಸ್ಯೆ ಶುರುವಾಗುತ್ತದೆ. ಈ ಗುಣಲಕ್ಷಣಗಳನ್ನು ಗುರುತಿಸಿ ಆಪ್ತ ಸಮಾಲೋಚಕರ ಬಳಿ ಮಾತನಾಡಬೇಕು ಅಥವಾ ನೀವೇ ಇದನ್ನು ಸರಿ ಪಡಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಆಗ ಪರಿಸ್ಥಿತಿ ಬದಲಾಗಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಲು ಸಾಧ್ಯವಿದೆ.
