ಖುಷಿಯಾಗಿರೋಕೆ ಸಾಹಸ ಮಾಡ್ಬೇಕಿಲ್ಲ; ನಿತ್ಯ ಜೀವನದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಸಂತೋಷದ ಹಾರ್ಮೋನ್ ಹೆಚ್ಚಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಖುಷಿಯಾಗಿರೋಕೆ ಸಾಹಸ ಮಾಡ್ಬೇಕಿಲ್ಲ; ನಿತ್ಯ ಜೀವನದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಸಂತೋಷದ ಹಾರ್ಮೋನ್ ಹೆಚ್ಚಿಸಿ

ಖುಷಿಯಾಗಿರೋಕೆ ಸಾಹಸ ಮಾಡ್ಬೇಕಿಲ್ಲ; ನಿತ್ಯ ಜೀವನದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಸಂತೋಷದ ಹಾರ್ಮೋನ್ ಹೆಚ್ಚಿಸಿ

ಖುಷಿಯ ಜೀವನಕ್ಕಾಗಿ ಎಲ್ಲರೂ ಹಗಲಿರುಳು ಶ್ರಮಿಸುತ್ತಾರೆ. ಆದರೆ, ಕೆಲಸವೇ ಜೀವನ ಎಂಬ ರೀತಿಯಲ್ಲಿ ಕೆಲಸದಲ್ಲೇ ನಿರತರಾಗಿರುತ್ತಾರೆ. ಈ ನಡುವೆ ವೈಯಕ್ತಿಕ ಬದುಕಿನಲ್ಲಿ ಸಂತೋಷವನ್ನೇ ಮರೆಯುತ್ತಾರೆ. ನಿಮ್ಮ ಬದುಕಲ್ಲೂ ಹೀಗೆ ಆಗಿದ್ದರೆ, ಈ ಸುದ್ದಿ ನಿಮಗಾಗಿ.

ನಿತ್ಯ ಜೀವನದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಸಂತೋಷದ ಹಾರ್ಮೋನ್ ಹೆಚ್ಚಿಸಿ
ನಿತ್ಯ ಜೀವನದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಸಂತೋಷದ ಹಾರ್ಮೋನ್ ಹೆಚ್ಚಿಸಿ (pexel)

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಮಾತಿದೆ. ಮಾನವರಾಗಿ ನಾವಿಂದು ದುಡಿಯುವುದು, ಹಣ ಸಂಪಾದಿಸುವುದು ಎಲ್ಲವೂ ಹೊಟ್ಟೆಪಾಡಿಗಾಗಿ. ಅದಕ್ಕೂ ಮೇಲೆ ಏನಾದರೂ ಇದ್ದರೆ ಅದು ಸಮಾಜದಲ್ಲಿ ಗೌರವ ಹಾಗೂ ನೆಮ್ಮದಿಯ ಬದುಕಿಗಾಗಿ. ಬದುಕಿನಲ್ಲಿ ಖುಷಿ-ನೆಮ್ಮದಿ ಸಿಗಬೇಕೆಂದಿದ್ದರೆ ನಗುತ್ತಾ ಬದುಕಬೇಕು. ಆ ನಗುವಿನ ಬಾಳು ನಮ್ಮದಾಗಬೇಕೆಂದಿದ್ದರೆ, ದೇಹ ಹಾಗೂ ಜೀವನದಲ್ಲಿ ಅದಕ್ಕೆ ಬೇಕಾದ ಸನ್ನಿವೇಶಗಳು ನಿರ್ಮಾಣವಾಗಬೇಕು. ಮನುಷ್ಯ ಜೀವಿ ಪ್ರತಿದಿನ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಈ ಸಂತೋಷದ ಭಾವನೆಯು ನಿಮ್ಮನ್ನು ನಗುವಂತೆ ಅಥವಾ ಕೆಲವೊಮ್ಮೆ ಅಳುವಂತೆ ಮಾಡುತ್ತದೆ. ಆ ಮೂಲಕ ನಮ್ಮ ಸುತ್ತಮುತ್ತಲಿನ ಜನರಲ್ಲೂ ನಗುವನ್ನು ಹರಡುತ್ತದೆ. ನಮ್ಮ ದೇಹದಲ್ಲಾಗುವ ಅತ್ಯಂತ ಸಂಕೀರ್ಣವಾದ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಸಂತೋಷ ಅಥವಾ ಉಲ್ಲಾಸದ ಭಾವನೆ ನಿರ್ಮಾಣವಾಗುತ್ತದೆ. ಇದಕ್ಕೆಲ್ಲಾ ಕಾರಣವಾಗುವುದು ಸಂತೋಷದ ಹಾರ್ಮೋನುಗಳು. ಇಂಗ್ಲೀಷ್‌ನಲ್ಲಿ ಇದನ್ನು happy hormones ಎಂದು ಹೇಳುತ್ತೇವೆ.

ಹಾಗಿದ್ದರೆ ಈ ಸಂತೋಷದ ಹಾರ್ಮೋನುಗಳು ಎಂದರೆ ಏನು? ಖುಷಿಯಿಂದಿರಲು ಈ ಸಂತೋಷದ ಹಾರ್ಮೋನುಗಳ ಉತ್ಪಾದನೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನ ನೋಡೋಣ. ಸಾಮಾನ್ಯವಾಗಿ 'ಸಂತೋಷದ ಹಾರ್ಮೋನುಗಳು' ಎಂದು ಕರೆಯಲ್ಪಡುವ ಹಾರ್ಮೋನುಗಳು ಯಾವುವು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳೋಣ.

  • ಸಿರೊಟೋನಿನ್ ಎಂಬ ಹಾರ್ಮೋನ್ ಜೀರ್ಣಕ್ರಿಯೆ, ಹಸಿವು, ನಿದ್ರೆ, ಕಲಿಕೆ ಮತ್ತು ಸ್ಮರಣಶಕ್ತಿಯ ನಿಯಂತ್ರಣಕ್ಕೆ ನೆರವಾಗುತ್ತದೆ.
  • 'ಫೀಲ್-ಗುಡ್ ಹಾರ್ಮೋನ್' ಎಂದು ಕರೆಯಲ್ಪಡುವ ಡೋಪಮೈನ್ ಹಾರ್ಮೋನ್, ಮೆದುಳಿನಲ್ಲಿರುವ ಪ್ರತಿಫಲ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
  • ಎಂಡಾರ್ಫಿನ್‌ಗಳು ಒತ್ತಡ ಅಥವಾ ಅಸ್ವಸ್ಥತೆಗೆ ಪ್ರತಿಕ್ರಿಯೆಯಾಗಿ ನೋವನ್ನು ಕಡಿಮೆ ಮಾಡಲು ದೇಹವು ಸ್ವಾಭಾವಿಕವಾಗಿ ಸೃಷ್ಟಿಸುವ ಹಾರ್ಮೋನ್‌ಗಳಾಗಿವೆ.
  • ಆಕ್ಸಿಟೋಸಿನ್ ಅನ್ನು 'ಪ್ರೀತಿಯ ಹಾರ್ಮೋನ್' ಎಂದೂ ಕರೆಯುತ್ತಾರೆ. ಇದು ಜನನ, ಪೋಷಕರು ಹಾಗೂ ಮಕ್ಕಳ ಸಂಬಂಧಕ್ಕೆ ನಿರ್ಣಾಯಕವಾಗಿದೆ. ಅಂದರೆ ಶಾರೀರಿಕ ವಾತ್ಸಲ್ಯಕ್ಕೆ ಸಂಬಂಧಿಸಿದೆ.

ಇದನ್ನೂ ಓದಿ | Vastu Tips: ಮನೆಯ ವಾತಾವರಣ ಹಿತವೆನಿಸುತ್ತಿಲ್ಲವೆ, ಗೋಡೆ ಮೇಲೆ ಈ 7 ವಿಧದ ಫೋಟೋ, ಪೇಂಟಿಂಗ್ಸ್‌ ಇವೆಯಾ ಚೆಕ್ ಮಾಡಿ.

ನಮ್ಮ ನಿತ್ಯ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ನಮ್ಮ ದೇಹದಲ್ಲಿ ಉತ್ಪಾದನೆಯಾಗುವ ಕೆಲವು ಸಂತೋಷದ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಬಹುದು.

ನಗುತ್ತಾ ಇರಿ

ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಲು ನೀವು ನೆಚ್ಚು ನಗುತ್ತಾ ಇರಬೇಕು. ಇದಕ್ಕಾಗಿ ಕಾಮಿಡಿ ಶೋಗಳನ್ನು, ಹಾಸ್ಯಮಯ ಸಿನಿಮಾಗಳನ್ನು ವೀಕ್ಷಿಸಿ. ನಗು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ

ದೇಹಕ್ಕೆ ವ್ಯಾಯಾಮ ಸಿಕ್ಕಷ್ಟು ಒಳ್ಳೆಯದು. ದೇಹ ಸಡಿಲವಾದಾಗ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹೃದಯ ಬಡಿತವನ್ನು ಹೆಚ್ಚಿಸುವ ಯಾವುದೇ ರೀತಿಯ ವ್ಯಾಯಾಮಗಳು ನಮಗೆ ಉತ್ತಮ ಭಾವನೆ ನೀಡುತ್ತದೆ. ಶ್ರಮದಾಯಕ ವ್ಯಾಯಾಮಗಳಿಂದ ನಿಮ್ಮ ಉತ್ಸಾಹ ಹೆಚ್ಚುತ್ತದೆ. ನಿಮ್ಮ ಮೆದುಳಿನ ನೋವು ಗ್ರಾಹಕಗಳು ಎಂಡಾರ್ಫಿನ್‌ಗಳೊಂದಿಗೆ ಸಂವಹನ ನಡೆಸುತ್ತವೆ. ಅದು ನೋವಿನ ಭಾವನೆಯನ್ನು ಕಡಿಮೆ ಮಾಡುತ್ತದೆ.

ಖುಷಿಯ ಹಾರ್ಮೋನ್‌ ಉತ್ತೇಜಿಸುವ ಆಹಾರಗಳನ್ನು ಸೇವಿಸಿ

ನಿಮ್ಮ ಹಾರ್ಮೋನುಗಳ ಕಾರ್ಯನಿರ್ವಹಣೆಗೆ ನೀವು ಸೇವಿಸುವ ಆಹಾರ ಗಮನಾರ್ಹ ಪರಿಣಾಮ ಬೀರುತ್ತದೆ. ಹೆಚ್ಚಿನ ಫಿನೈಲೆಥೈಲಮೈನ್ ಅಂಶ ಇರುವ ಡಾರ್ಕ್ ಚಾಕೊಲೇಟ್ ನಿಮ್ಮ ಮನಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಪ್ರಮಾಣದಲ್ಲಿ ಸುಧಾರಿಸಬಲ್ಲದು. ಕ್ಯಾಪ್ಸೈಸಿನ್ ಇರುವ ಮೆಣಸಿನಕಾಯಿ, ಒಮೆಗಾ 3 ಕೊಬ್ಬಿನಾಮ್ಲಗಳಿರುವ ಮೀನು, ಕಾಫಿ, ಟ್ರಿಪ್ಟೊಫಾನ್ ಹೊಂದಿರುವ ಆಹಾರಗಳು, ಕೋಳಿ ಮಾಂಸ, ಮೊಟ್ಟೆ, ಹಾಲು, ಬೀಜಗಳನ್ನು ಸೇವಿಸಬಹುದು.

ಮಸಾಜ್ ಪಡೆಯಿರಿ

ಮಸಾಜ್‌ನಿಂದಾಗಿ ಎಂಡಾರ್ಫಿನ್‌ಗಳು ಬಿಡುಗಡೆಯಾಗಬಹುದು. ಇದೇ ವೇಳೆ ಆಕ್ಸಿಟೋಸಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು. ಇದು ಮಸಾಜ್‌ ಮಾಡುವವರು ಮತ್ತು ಮಾಡಿಸುವ ಇಬ್ಬರಿಗೂ ಅನುಕೂಲಕರ.

ಮುಂಜಾನೆಯ ಬಿಸಿಲು

ವಿವಿಧ ಆಹಾರಗಳ ಜೊತೆಜೊತೆಗೆ ಮುಂಜಾನೆ ಅಥವಾ ಮಧ್ಯಾಹ್ನದ ಸಮಯದಲ್ಲಿ ಚರ್ಮವನ್ನು ಸ್ವಲ್ಪ ಬಿಸಿಲಿಗೆ ಒಡ್ಡುವ ಮೂಲಕ ವಿಟಮಿನ್ ಡಿ ಅನ್ನು ಪಡೆಯಬಹುದು. ಇದು ಮೂಳೆಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ, ಈ ವಿಟಮಿನ್ ಸಿರೊಟೋನಿನ್ ಸೃಷ್ಟಿಗೆ ಉತ್ತೇಜಿಸುತ್ತದೆ. ಅದು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಮಧುರ ಸಂಗೀತವನ್ನು ಆಲಿಸಿ

ಹಾಡುಗಳನ್ನು ಕೇಳುವ ಮೂಲಕ ಒಂದಕ್ಕಿಂತ ಹೆಚ್ಚು ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸಬಹುದು. ಇದು ನಿಮ್ಮ ಮೆದುಳು ಹೆಚ್ಚು ಡೋಪಮೈನ್ ಉತ್ಪಾದಿಸುವಂತೆ ಮಾಡುತ್ತದೆ.

ತಣ್ಣೀರಿನ ಸ್ನಾನ

ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹದ ಎಂಡಾರ್ಫಿನ್‌ಗಳು ಜಾಗೃತಗೊಳ್ಳುತ್ತದೆ. ಇದು ನಿಮಗೆ ಉತ್ಸಾಹಭರಿತ ಭಾವನೆ ನೀಡುತ್ತದೆ. ತಣ್ಣನೆಯ ಸ್ನಾನದಿಂದಾಗಿ ನಮ್ಮ ದೇಹದ ನೈಸರ್ಗಿಕ ನೋವು ನಿವಾರಕಗಳಾದ ಎಂಡಾರ್ಫಿನ್‌ಗಳ ಉತ್ಪಾದನೆಯು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

Whats_app_banner