Happy Living: ತುಂಬಾ ಬೋರ್ ಅನ್ನಿಸ್ತಾ ಇದೆಯೇ? ಈ ಟಿಪ್ಸ್ ಟ್ರೈ ಮಾಡಿ, ಖುಷಿಯಿಂದ ದಿನ ಕಳೆಯಿರಿ
ಮನೆಯಲ್ಲೇ ಕುಳಿತುಕೊಂಡು ಸದಾ ಬೋರ್ ಅನ್ನಿಸ್ತಾ ಇದೆಯೇ? ಹಾಗಾದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ.. ಬೋರಿಂಗ್ ದಿನವನ್ನು ಹೇಗೆ ಆನಂದದಿಂದ ಕಳೆಯಬಹುದು ನೋಡಿ.. ನಿಮ್ಮ ಗೆಳೆಯರ ಜತೆಗೂ ಈ ಸಲಹೆಗಳನ್ನು ಹಂಚಿಕೊಳ್ಳಿ..

ಒಂದೇ ಕಡೆ ಕುಳಿತುಕೊಂಡು ಮನಸ್ಸಿಗೆ ತುಂಬಾ ಬೋರ್ ಅನ್ನಿಸುತ್ತಿದೆಯೇ? ಅಥವಾ ಆಲಸ್ಯದಿಂದ ಏನೂ ಕೆಲಸ ಮಾಡುವುದು ಬೇಡ ಅನ್ನಿಸುತ್ತಿದೆಯೇ? ಕೆಲವೊಮ್ಮೆ ಆಫೀಸ್‌ಗೆ ರಜೆ ಇದ್ದರೆ ಅಥವಾ ಹೊರಗಡೆ ಎಲ್ಲೂ ಹೋಗಲಿಕ್ಕಿಲ್ಲ ಎಂದಾದರೆ, ಮನೆಯಲ್ಲೇ ಇದ್ದರೆ ಟಿವಿ ನೋಡಿದರೂ, ಮೊಬೈಲ್ ನೋಡುತ್ತಾ ಕುಳಿತರೂ ಬೋರ್ ಅನ್ನಿಸತೊಡಗುತ್ತದೆ. ಅದಕ್ಕೆ ಕಾರಣವೂ ಇದೆ. ಒಂದೇ ಕಡೆ ಇದ್ದರೆ ಮತ್ತು ಯಾವುದೇ ಚಟುವಟಿಕೆ ನಡೆಸದೇ ಇದ್ದರೆ, ಆಗ ಕಿರಿಕಿರಿ ಅನ್ನಿಸುವುದು ಸಹಜ. ಅದಕ್ಕಾಗಿ ನೀವು ಕೆಲವೊಂದು ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಆಗ ನಿಮ್ಮ ದಿನವೂ ಉಲ್ಲಾಸದಾಯಕವಾಗಿರುತ್ತದೆ ಮತ್ತು ಮನಸ್ಸು ಕೂಡ ಆನಂದದಿಂದ ಕೂಡಿರುತ್ತದೆ.
ಬೋರಿಂಗ್ ದಿನವನ್ನು ಖುಷಿಯ ದಿನವನ್ನಾಗಿಸುವುದು ಹೇಗೆ?
ಹೊಸ ಹವ್ಯಾಸ ಅಭ್ಯಾಸ ಮಾಡಿ
ಬೋರಿಂಗ್ ಅನ್ನಿಸುವ ದಿನವನ್ನು ಸಂತಸದ ದಿನವನ್ನಾಗಿಸಲು ನೀವು ಕೆಲವೊಂದು ಹವ್ಯಾಸಗಳನ್ನು ಟ್ರೈ ಮಾಡಬಹುದು. ಫೋಟೊಗ್ರಫಿ ಕಲಿಯಬಹುದು, ಹೊಸ ಸಂಗೀತ ಉಪಕರಣ ನುಡಿಸಬಹುದು, ಪೇಂಟಿಂಗ್ ಮಾಡಬಹುದು. ಹೀಗೆ ಹಲವು ಆಯ್ಕೆಗಳಿವೆ, ಇವೆಲ್ಲವೂ ನಿಮ್ಮನ್ನು ಬ್ಯುಸಿಯಾಗಿಸುತ್ತವೆ ಮತ್ತು ಮನಸ್ಸು ಕೊಟ್ಟು ಅದಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಹೀಗೆ ಹವ್ಯಾಸ ಆರಂಭಿಸಿದಾಗ ಹೊಸ ಸಂಗತಿ ತಿಳಿದುಕೊಳ್ಳುತ್ತೀರಿ ಮತ್ತು ಹೊಸ ಗೆಳೆಯರನ್ನು ಕೂಡ ಭೇಟಿಯಾಗುತ್ತೀರಿ.
ಫನ್ ಆಗಿರುವ ವ್ಯಾಯಾಮ ಮಾಡಿ
ವರ್ಕೌಟ್ ಮತ್ತು ಎಕ್ಸರ್‌ಸೈಜ್ ಅನ್ನೇ ಸ್ವಲ್ಪ ಭಿನ್ನವಾಗಿ ಮಾಡಲು ಯತ್ನಿಸಿ. ಅಂದರೆ, ಸಾಂಪ್ರದಾಯಿಕ ವ್ಯಾಯಾಮದ ಬದಲು, ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ನೀಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಡ್ಯಾನ್ಸ್ ವರ್ಕೌಟ್, ಬಂಗಿ ಜಂಪ್, ಜಂಪ್ ರೋಪ್ ಚಾಲೆಂಜ್‌ನಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಇದರಿಂದ ದೇಹ ಫಿಟ್ ಆಗುವ ಜತೆಗೆ, ಖುಷಿಯ ಹಾರ್ಮೋನ್ ಕೂಡ ಬಿಡುಗಡೆಯಾಗುತ್ತದೆ.
ಹೊಸ ರುಚಿ ಟ್ರೈ ಮಾಡಿ
ಯೂಟ್ಯೂಬ್ ನೋಡಿ, ರೀಲ್ಸ್ ನೋಡಿ, ಹೊಸ ರುಚಿ ಟ್ರೈ ಮಾಡಿ. ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ತಿನಿಸು ಸಿದ್ಧಪಡಿಸಿಕೊಡಿ. ನೀವು ಈವರೆಗೆ ಪ್ರಯತ್ನಿಸದೇ ಇರುವ ವಿಶೇಷ ರುಚಿ ಏನಾದರೂ ಇದ್ದರೆ ಟ್ರೈ ಮಾಡಿ, ಇದರಿಂದ ನಿಮ್ಮ ಬೋರಿಂಗ್ ಖಂಡಿತಾ ದೂರವಾಗುತ್ತದೆ.
ಕವನ, ಕಥೆ ಬರೆಯಲು ಯತ್ನಿಸಿ
ನಿಮ್ಮ ಮನಸ್ಸಿನಲ್ಲಿ ಇರುವ ಕ್ರಿಯೇಟಿವಿಟಿಯನ್ನು ನೀವು ಕಥೆ, ಕವನ ಬರೆಯಲು ಕೂಡ ಬಳಸಿಕೊಳ್ಳಬಹುದು. ಸಣ್ಣದಾಗಿ ಕಥೆ, ಕವನ ಬರೆಯಿರಿ, ನಿಮ್ಮ ಗೆಳೆಯರ ಜತೆ ಹಂಚಿಕೊಳ್ಳಿ, ಅವರ ಅಭಿಪ್ರಾಯ ಕೇಳಿ, ಮತ್ತಷ್ಟು ಹೊಸತನದ ಕಿರು ಕಥೆ, ಕವನ ಬರೆಯಲು ಪ್ರಯತ್ನಿಸಿ.
ಹೊಸ ಕೌಶಲ ಕಲಿಯಿರಿ
ಆನ್‌ಲೈನ್‌ನಲ್ಲಿ ಇಂದು ವಿವಿಧ ರೀತಿಯ ವಿಚಾರಕ್ಕೆ ಸಂಬಂಧಿಸಿ, ಹಲವು ಕೋರ್ಸ್, ಸ್ಕಿಲ್ ಡೆವಲಪ್‌ಮೆಂಟ್ ತರಗತಿಗಳು ಉಚಿತವಾಗಿ ದೊರೆಯುತ್ತದೆ. ಕೋಡಿಂಗ್, ಗ್ರಾಫಿಕ್ಸ್, ಡಿಸೈನ್, ಹೊಸ ಭಾಷೆ ಹೀಗೆ ಸಾಕಷ್ಟು ವಿಚಾರಗಳನ್ನು ಕಲಿಯಬಹುದು.
ನಿಮ್ಮ ಕಬೋರ್ಡ್, ಟೇಬಲ್ ಸ್ವಚ್ಛಗೊಳಿಸಿ
ಮನೆಯಲ್ಲಿ ಕುಳಿತುಕೊಂಡು ತುಂಬಾ ಬೋರ್ ಆಗುತ್ತಿದ್ದರೆ, ನಿಮ್ಮ ಟೇಬಲ್, ರೂಮ್ ಮತ್ತು ಕಬೋರ್ಡ್ ಅನ್ನು ಸ್ವಚ್ಛಗೊಳಿಸಿ, ಒಪ್ಪವಾಗಿ ಜೋಡಿಸಿ. ಇದರಿಂದ ಬೋರಿಂಗ್ ಕೂಡ ದೂರವಾಗುತ್ತದೆ. ನಿಮ್ಮ ರೂಮ್ ಕೂಡ ಅಚ್ಚುಕಟ್ಟಾಗಿರುತ್ತದೆ.
ಹೊಸ ಪಾಡ್‌ಕಾಸ್ಟ್, ಮ್ಯೂಸಿಕ್ ಕೇಳಿ
ವಿವಿಧ ವಿಚಾರಕ್ಕೆ ಸಂಬಂಧಿಸಿ ಹಲವು ಪಾಡ್‌ಕಾಸ್ಟ್ ಆನ್‌ಲೈನ್‌ನಲ್ಲಿ ದೊರೆಯುತ್ತದೆ. ಅಲ್ಲದೆ, ಹೊಸ ಪ್ರಕಾರದ ಸಂಗೀತವನ್ನೂ ಕೇಳಬಹುದು.
ಪುಸ್ತಕ ಓದಿ
ಪುಸ್ತಕ ಓದುವುದರಿಂದ ಹಲವು ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು. ಕಥೆ, ಕಾದಂಬರಿ ಓದುವುದರಿಂದಲೂ ಬೋರಿಂಗ್ ದೂರವಾಗುತ್ತದೆ.
ಚಿತ್ರ ಬರೆಯಿರಿ
ಖಾಲಿ ಹಾಳೆಯೊಂದನ್ನು ತೆಗೆದುಕೊಳ್ಳಿ, ಅದರಲ್ಲಿ ಏನಾದರೂ ಗೀಚುತ್ತಾ ಹೋಗಿ.. ಹೀಗೆ ಗೀಚುತ್ತಾ ಅಭ್ಯಾಸ ಮಾಡಿಕೊಂಡರೆ, ನೀವೂ ಚಿತ್ರ ಬರೆಯಬಹುದು. ಯೂಟ್ಯೂಬ್ ನೋಡಿ, ಸರಳ ಡ್ರಾಯಿಂಗ್ ಕ್ಲಾಸ್ ನೋಡಿ ಪ್ರಯತ್ನಿಸಿ.
ಹೊರಗಡೆ ಹೋಗಿ ಸುತ್ತಾಡಿ ಬನ್ನಿ
ಕೆಲವೊಮ್ಮೆ ಹೊರಗಡೆ ಹೋಗಿ ಹೊಸ ತಾಣವನ್ನು ನೋಡುವುದು, ಪಾರ್ಕ್, ವಾಕಿಂಗ್‌ನಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನಿಮ್ಮ ಮನಸ್ಸಿಗೆ ಖುಷಿ ಕೊಡುತ್ತದೆ. ಆಲಸ್ಯ ದೂರವಾಗುತ್ತದೆ.
ಗಾರ್ಡನಿಂಗ್ ಮಾಡಿ..
ಮನೆಯ ಬಾಲ್ಕನಿಯಲ್ಲಿ, ಹೊರಗಡೆ ಜಗಲಿಯಲ್ಲಿ ಪುಟ್ಟ ಗಿಡವೊಂದನ್ನು ಕುಂಡದಲ್ಲಿ ನೆಟ್ಟು ಬೆಳೆಸಿ, ಅದರ ಆರೈಕೆ ಮಾಡಿ.. ನಿಜಕ್ಕೂ ಅದು ನಿಮಗೆ ಖುಷಿ ಕೊಡುತ್ತದೆ.
