ಕೆಲಸದ ಒತ್ತಡ ಹೆಚ್ಚು, ಹೆಂಡತಿ ಅರ್ಥ ಮಾಡಿಕೊಳ್ತಿಲ್ಲ, ಜೀವನದ ಉತ್ಸಾಹವೇ ಹೋಗಿದೆ; ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಿದೆಯೇ? -ಮನದ ಮಾತು-mental health how to overcome work stress impacting on my family and personal life feeling of nobody understands bvy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೆಲಸದ ಒತ್ತಡ ಹೆಚ್ಚು, ಹೆಂಡತಿ ಅರ್ಥ ಮಾಡಿಕೊಳ್ತಿಲ್ಲ, ಜೀವನದ ಉತ್ಸಾಹವೇ ಹೋಗಿದೆ; ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಿದೆಯೇ? -ಮನದ ಮಾತು

ಕೆಲಸದ ಒತ್ತಡ ಹೆಚ್ಚು, ಹೆಂಡತಿ ಅರ್ಥ ಮಾಡಿಕೊಳ್ತಿಲ್ಲ, ಜೀವನದ ಉತ್ಸಾಹವೇ ಹೋಗಿದೆ; ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಿದೆಯೇ? -ಮನದ ಮಾತು

ಭವ್ಯಾ ವಿಶ್ವನಾಥ್: ಕೆಲವರು ಕೆಲಸವನ್ನು ಅದೆಷ್ಟು ಹಂಚಿಕೊಳ್ಳುತ್ತಾರೆ ಎಂದರೆ ಕುಟುಂಬ, ಸಮಾಜ ಎಲ್ಲವೂ ಗೌಣವಾಗುತ್ತದೆ. ಆದರೆ ಕಾಲಕ್ರಮೇಣ ಇಂಥವರನ್ನು ಅತೃಪ್ತಿ, ಒತ್ತಡ, ಒಂಟಿತನ ಕಾಡಲು ಆರಂಭಿಸುತ್ತದೆ. ತನ್ನವರು ಯಾರೂ ಇಲ್ಲ ಎನ್ನುವ ಭಾವನೆ ಪ್ರಬಲವಾಗಬಹುದು. ಇಂಥ ಸಂದಿಗ್ಧ ಪರಿಸ್ಥಿತಿಗೆ ತಲುಪಿದವರಿಗೆ ಏನು ಪರಿಹಾರ? ಈ ಬರಹದಲ್ಲಿದೆ ಉತ್ತರ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಪ್ರಶ್ನೆ: ನನಗೆ ಈಗ 42 ವರ್ಷ. ಒಳ್ಳೆಯ ಖಾಸಗಿ ಕೆಲಸ. ಸಂಬಳವೂ ತಕ್ಕಮಟ್ಟಿಗೆ ಚೆನ್ನಾಗಿದೆ. ಆದರೆ ಕೆಲಸದಲ್ಲಿ ಬಹಳ ಕಿರಿಕಿರಿ ಹಾಗೂ ಒತ್ತಡವಿದೆ. ಹೆಂಡತಿಯ ಜೊತೆ ಒಳ್ಳೆಯ ಒಡನಾಟವಿಲ್ಲ. ಪೋಷಕರು, ಬಂಧು ಬಳಗದವರು ಎಲ್ಲರೂ ದೂರವಿದ್ದಾರೆ. ಸ್ನೇಹಿತರಿದ್ದಾರೆ, ಆದರೆ ಆತ್ಮೀಯರಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆ. ಬಹಳ ಸಿಟ್ಟು ಬರುತ್ತದೆ. ದಿನಚರಿಯಲ್ಲಿ ನಿರಾಸಕ್ತಿ, ಕೂತಲ್ಲಿಯೇ ಕೂತಿರುತ್ತೇನೆ, ಕೆಲಸ ಕಾರ್ಯಗಳಲ್ಲಿ ಹುಮ್ಮಸ್ಸಿಲ್ಲ. ಅಳಬೇಕು ಎನಿಸುತ್ತದೆ. ಒಂಟಿತನ, ಬೇರೆಯವರನ್ನು ದೂಷಿಸುವುದು, ದುಃಖ ಮತ್ತು ನಿರಾಸೆ ಎಲ್ಲವನ್ನೂ ಅನುಭವಿಸುತ್ತೇನೆ. ನಿದ್ದೆ ಬರುವುದಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ದಿನ ಕಳೆಯುವುದೇ ಕಷ್ಟವಾಗಿದೆ. ನಿಮ್ಮ ಸಹಾಯ ಬೇಕು.

ಉತ್ತರ: ಮೊದಲಿಗೆ ನೀವು ನಿಮ್ಮ ಸಮಸ್ಯೆಯನ್ನು ನಮ್ಮ ಬಳಿ ಮುಕ್ತವಾಗಿ ಹಂಚಿಕೊಂಡದಕ್ಕೆ ಧನ್ಯವಾದಗಳು. ಯಾಕೆಂದರೆ, ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಯಾರ ಬಳಿಯೂ ಹೇಳದೆ, ಚಿಕಿತ್ಸೆಯನ್ನು ಪಡೆಯದೆ ಒಂಟಿಯಾಗಿ ಬಳಲುವವರು ಹಲವರು. ಸಮಾಜದಲ್ಲಿ ಮಾನಸಿಕ ಕಾಯಿಲೆ ಕುರಿತು ಮಾತನಾಡಿದರೆ ಕಳಂಕವೆಂದು ಭಾವಿಸುತ್ತಾರೆ. ಆದಕಾರಣ ನಿಮ್ಮ ಈ ಪ್ರಯತ್ನ ಪ್ರಶಂಸನೀಯ.

ನೀವು ಮಾನಸಿಕವಾಗಿ ಬಳಲುತಿದ್ದೀರಿ. ಉದ್ಯೋಗದಲ್ಲಿನ ಒತ್ತಡ ಮತ್ತು ಸಂಬಂಧಗಳಲ್ಲಿನ ಪ್ರೀತಿ ಮತ್ತು ವಾತ್ಸಲ್ಯದ ಕೊರತೆಯಿಂದಾಗಿ ಬಹಳ ನೋವು ಮತ್ತು ನಿರಾಸೆಯಿಂದ ಕೊರಗುತ್ತಿದ್ದೀರಿ ಎಂದು ಕಾಣುತ್ತದೆ. ಈ ವಿಚಾರಗಳು ನಿಮ್ಮನ್ನು ಬಹಳ ಕಾಡುತ್ತಿರಬಹುದು. ನಿಮಗೆ ನಿದ್ರೆ ಬರದಿರಲು ಇದೇ ಕಾರಣವಿರಬಹುದು. ದಾಂಪತ್ಯ ಬದುಕಿನಲ್ಲಿ ಭಾವನಾತ್ಮಕ ಅವಲಂಬನೆ ಅತ್ಯವಶ್ಯಕ. ವಿಶೇಷವಾಗಿ ಉದ್ಯೋಗದಲ್ಲಿ ಅತಿಯಾದ ಒತ್ತಡವಿದ್ದಾಗ, ಮನೆಯಲ್ಲಿ ಸಂಗಾತಿಯ ಬಳಿ ಹಂಚಿಕೊಳ್ಳಬೇಕು. ಅವರ ಸಾಂತ್ವನ ಮತ್ತು ಮಾನಸಿಕ ಬೆಂಬಲ ಪಡೆಯುವುದು ಅತ್ಯವಶ್ಯಕ. ಇಲ್ಲದಿದ್ದಲ್ಲಿ ಖಂಡಿತವಾಗಿಯೂ ಒತ್ತಡವೂ ಹೆಚ್ಚಾಗುತ್ತದೆ. ಸಮಸ್ಯೆಯ ನಕಾರಾತ್ಮಕ ಪರಿಣಾಮವು ಮನಸ್ಸಿನ ಮೇಲೆ ಹೆಚ್ಚು ಬೀಳುತ್ತದೆ. ಇನ್ನು ನಿಮ್ಮ ವಿಷಯದಲ್ಲಿ ಪತ್ನಿಯ ಜೊತೆ ಒಡನಾಡವಿಲ್ಲದ ಕಾರಣ ನಿಮಗೆ ಅಸಹಾಯಕತನ, ಹತಾಶೆ ಹಾಗು ಮಾನಸಿಕ ಒತ್ತಡ ಹೆಚ್ಚಾಗಿ, ಒಂಟಿತನದಿಂದಲೂ ಸಹ ನರಳುತ್ತಿರುವಂತೆ ಭಾಸವಾಗುತ್ತದೆ.

ಪೋಷಕರು, ಬಂಧು ಬಳಗದವರು, ಆತ್ಮೀಯ ಸ್ನೇಹವೆಂಬುದು ಪ್ರತಿಯೊಬ್ಬರ ಜೀವನದಲ್ಲಿ ಇರಬೇಕಾದ ಮಹತ್ವದ ಸಂಬಧಗಳು. ವಿವಾಹದ ನಂತರ ಪೋಷಕರ ಸ್ಥಾನಮಾನ ಬದಲಾಗಬಹುದೇ ಹೊರತು, ಅವರ ಜಾಗವನ್ನು ಯಾರೂ ಭರಿಸಲಾಗದು. ಪೋಷಕರೊಡನೆ ಒಡನಾಟ ಪ್ರೀತಿ ವಿಶ್ವಾಸವಿಲ್ಲದಿದ್ದರೆ, ಮಕ್ಕಳು ಅನಾಥ ಮನೋಭಾವನೆಯಿಂದ ನರಳುತ್ತಾರೆ.

ಹಾಗೆಯೇ ಕುಟುಂಬದವರು ಎಷ್ಟು ಮುಖ್ಯವೋ ಸ್ನೇಹಿತರೂ ಸಹ ಸಾಮಾಜಿಕ ಜೀವನದಲ್ಲಿ ಅಷ್ಟೇ ಮುಖ್ಯ. ಸ್ನೇಹಿತರ ಜೊತೆಗೆ ಖುಷಿಯ ಕ್ಷಣಗಳನ್ನು ಕಳೆಯಲು ಅವಕಾಶವಾಗುತ್ತದೆ. ಇಂಥ ಸಂದರ್ಭದಲ್ಲಿ ಕುಟುಂಬದ ಸಮಸ್ಯೆಗಳನ್ನು ಮರೆಯಲು ಅಥವಾ ವೈಯಕ್ತಿಕ ವಿಚಾರ ಮತ್ತು ಸಮಸ್ಯೆಗಳನ್ನು ಸ್ನೇಹಿತರ ಬಳಿ ತೋಡಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನಿಮಗೆ ಈ ರೀತಿಯ ಯಾವ ಆತ್ಮೀಯ ಸ್ನೇಹಿತರಿಲ್ಲವೆಂದು ಮತ್ತು ಪೋಷಕರು ದೂರವಿದ್ದಾರೆಂದು ತೋಡಿಕೊಂಡಿದ್ದೀರಿ. ಹಾಗಾಗಿ ನಿಮಗೆ ಇನ್ನಷ್ಟು ಒಂಟಿತನ ಹಾಗೂ ಹತಾಶೆಯಾಗಿರಬಹುದು.

ಇಲ್ಲಿಯವರೆಗೂ ಹೇಳಿದ ಎಲ್ಲಾ ಸಮಸ್ಯೆಗಳನ್ನು ಒಬ್ಬ ವ್ಯಕ್ತಿಯು ದೀಘ೯ ಕಾಲವಧಿಯಲ್ಲಿ ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಅನುಭವಿಸಿದಾಗ ವ್ಯಕ್ತಿಯು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಾನೆ. ಉದಾ: ಒಂಟಿತನ, ಅಸಹಾಯಕತನ, ದುಃಖ, ಒತ್ತಡ, ತೀವ್ರ ಚಿಂತೆಯಿಂದ ನರಳುವುದರಿಂದ ವ್ಯಕ್ತಿಯ ದಿನಚರಿ, ನಿದ್ರೆ, ಆಹಾರ ಸೇವನೆ ಕೆಡುತ್ತದೆ, ಕೆಲಸ ಕಾಯ೯ಗಳ ಮೇಲು ನಿಗ ಬರುವುದಿಲ್ಲ, ನೆನಪಿನ ಶಕ್ತಿ ಕುಂದುವುದು, ವ್ಯಸನಗಳಿಗೆ ಬಲಿಯಾಗುವುದು ಇತ್ಯಾದಿ. ಇದರ ಪರಿಣಾಮವಾಗಿ ಖಿನ್ನತೆ, ಆತಂಕ, ಉದ್ವೇಗ, ಮರೆಯವ ರೋಗ … ಹೀಗೆ ಅನೇಕ ಮಾನಸಿಕ ಕಾಯಿಲೆಗಳಿಗೆ ಇದು ಕಾರಣವಾಗಬಹುದು.

ಮಾನಸಿಕ ಕಾಯಿಲೆಯ ರೋಗಲಕ್ಷಣಗಳು (Symptoms of mental illness)

ಈ ಕೆಳಕಂಡ ಲಕ್ಷಣಗಳು ಕಾಣಿಸಿಕೊಂಡಿದ್ದರೆ, ಪದೇಪದೆ ಕಾಡಿದರೆ ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಹತ್ತಿರದ ಆಪ್ತಸಮಾಲೋಚಕರು ಅಥವಾ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.

ನಿದ್ರೆಯ ಕೊರತೆ, ಹಸಿವಿನ ಕೊರತೆ. ಚಿಕ್ಕಪುಟ್ಟ ವಿಷಯಕ್ಕೆ ಕಿರಿಕಿರಿ. ವಿಪರೀತ ಸಿಟ್ಟು. ದೈನಂದಿಕ ಕೆಲಸ ಕಾರ್ಯಗಳಲ್ಲಿ, ದಿನಚರಿಯಲ್ಲಿ ನಿರಾಸಕ್ತಿ. ಕೆಲಸ ಕಾರ್ಯಗಳಲ್ಲಿ ಹುಮಸ್ಸಿಲ್ಲದಿರುವುದು. ಅಳು ಬಂದಂತೆ ಆಗುವುದು, ಅಳುವುದು. ಒಂಟಿತ ಕಾಡುತ್ತಿದೆ ಎನಿಸುವುದು. ಸ್ನೇಹಿತರ ಜೊತೆಗೆ ಬೆರೆಯಲು ಇಷ್ಟವಿಲ್ಲದೆ ಒಂಟಿತನ ಅನುಭವಿಸುವುದು. ಬೇರೆಯವರನ್ನು ದೂಷಿಸುವುದು. ದುಃಖದಿಂದ ಮೂಲೆಯಲ್ಲಿ ಕೂರುವುದು. ಜೀವನದಲ್ಲಿ ಜಿಗುಪ್ಸೆ. ನನಗೆ ಏನೂ ಬೇಡ, ಯಾರು ಬೇಡ ಎನ್ನುವ ಮನೋಭಾವ. ಅಪರಾಧಿ ಮನೋಭಾವ ಮತ್ತು ಸೋಮಾರಿತನ. ಒಂದು ಚೂರು ಅಲುಗಾಡದೆ ಕೂತಲ್ಲೇ ಕೂರುವುದು, ನೋವು ಅನುಭವಿಸುವುದು ಇತ್ಯಾದಿ.

ಪರಿಹಾರಕ್ಕಾಗಿ ಹೀಗೆ ಮಾಡಿ

ನೀವು ದೀರ್ಘ ಕಾಲದಿಂದ ಹಲವಾರು ಕಾರಣಗಳಿಂದ ಮಾನಸಿಕವಾಗಿ ಬಳಲುತ್ತಿದ್ದರೆ, ನಿಮ್ಮ ಉದ್ಯೋಗದ ಒತ್ತಡ ನಿಭಾಯಿಸುವ ಕಡೆಗೆ ಮೊದಲು ಗಮನಕೊಡಿ. ಪತ್ನಿಯ ಜೊತೆ ಒಡನಾಟ ಸುಧಾರಿಸಿಕೊಳ್ಳಿ. ಗೆಳೆಯರ ಬಳಗ ಹೆಚ್ಚಿಸಿಕೊಳ್ಳಿ. ವೈಯಕ್ತಿಕ ಸಂಬಂಧಗಳನ್ನು ಸರಿಮಾಡಿಕೊಳ್ಳಲು ಆಪ್ತಸಮಾಲೋಚನೆಯ ಅಗತ್ಯವಿದೆ. ನಿಮ್ಮ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಇದು ಹೀಗೆಯೇ ಮುಂದುವರಿದರೆ ಇನ್ನೂ ಹೆಚ್ಚಿನ ಸಮಸ್ಯೆ ಉದ್ಭವವಾಗಬಹುದು. ಇದರಿಂದ ನಿಮ್ಮ ದೈಹಿಕ ಆರೋಗ್ಯದ ಮೇಲು ಪರಿಣಾಮವಾಗಬಹುದು. ಕೂಡಲೇ ಆಪ್ತ ಸಮಾಲೋಚಕರನ್ನು / ಮನಃಶಾಸ್ರಜ್ಞರನ್ನು ಸಂಪರ್ಕಿಸಿ ಅವರ ನೆರವು ಪಡೆದು ಪರಿಹಾರ ಕಂಡುಕೊಳ್ಳಿ.

ಒಂದು ವಿಷಯ ನೆನಪಿಡಿ. ಯಾವುದೇ ಕಷ್ಟ ಶಾಶ್ವತವಲ್ಲ. ಜಗತ್ತಿನಲ್ಲಿ ಯಾರೊಬ್ಬರೂ ಒಂಟಿಯಲ್ಲ. ನೀವೂ ಅಷ್ಟೇ, ನೀವೊಬ್ಬರೇ ಒಂಟಿ ಎಂದು ಅಂದುಕೊಳ್ಳಬೇಡಿ. ನಿಮಗೆ ನೆರವು ಕೊಡಲು, ಮಾರ್ಗದರ್ಶನ ನೀಡಲು ಆಪ್ತಸಮಾಲೋಚಕರು ಇರುತ್ತಾರೆ. ಮುಜುಗರವಿಲ್ಲದೆ ಅವರ ನೆರವು ಪಡೆದುಕೊಳ್ಳಿ. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.