ಆರೋಗ್ಯ ಸುಧಾರಣೆಯಿಂದ ಪರಮಾತ್ಮನೆಡೆಗಿನ ಸೆಳೆತದವರೆಗೆ: ಧ್ಯಾನಕ್ಕಿರುವ ಅದ್ಭುತ ಶಕ್ತಿಯ ಕುರಿತು ತಿಳಿಯಬೇಕಾದ ಮಾಹಿತಿಯಿದು-mental health meditation importance of mediation is powerful health benefits behind meditation what is meditation ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯ ಸುಧಾರಣೆಯಿಂದ ಪರಮಾತ್ಮನೆಡೆಗಿನ ಸೆಳೆತದವರೆಗೆ: ಧ್ಯಾನಕ್ಕಿರುವ ಅದ್ಭುತ ಶಕ್ತಿಯ ಕುರಿತು ತಿಳಿಯಬೇಕಾದ ಮಾಹಿತಿಯಿದು

ಆರೋಗ್ಯ ಸುಧಾರಣೆಯಿಂದ ಪರಮಾತ್ಮನೆಡೆಗಿನ ಸೆಳೆತದವರೆಗೆ: ಧ್ಯಾನಕ್ಕಿರುವ ಅದ್ಭುತ ಶಕ್ತಿಯ ಕುರಿತು ತಿಳಿಯಬೇಕಾದ ಮಾಹಿತಿಯಿದು

ಧ್ಯಾನ ಎನ್ನುವುದು ಮನುಷ್ಯನ ದೇಹಕ್ಕೆ ಎಷ್ಟು ಮುಖ್ಯ ಎನ್ನುವುದು ಅದನ್ನು ಅರಿತವರಿಗೆ ಮಾತ್ರ ಗೊತ್ತಿರುತ್ತದೆ. ದಿನನಿತ್ಯ ಧ್ಯಾನಭ್ಯಾಸ ಮಾಡುವುದರಿಂದ ಮನುಷ್ಯ ಎಷ್ಟೆಲ್ಲಾ ಲಾಭ ಗಳಿಸುತ್ತಾನೆ?ಆತನ ಶರೀರದಲ್ಲಿ ಯಾವ ರೀತಿಯ ಬದಲಾವಣೆಗಳು ಉಂಟಾಗುತ್ತವೆ ಎಂಬ ಬಗ್ಗೆಇಲ್ಲಿದೆ ಮಾಹಿತಿ.

ದಿನನಿತ್ಯ ಧ್ಯಾನಭ್ಯಾಸ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.
ದಿನನಿತ್ಯ ಧ್ಯಾನಭ್ಯಾಸ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಅನ್ನೋ ಬಗ್ಗೆ ಇಲ್ಲಿದೆ ಮಾಹಿತಿ.

ಧ್ಯಾನ ಎನ್ನುವುದು ನಮ್ಮ ಮನಸ್ಸಿನ ಚಂಚಲತೆಗಳನ್ನು ನಿಯಂತ್ರಣ ಮಾಡಿ ನಮ್ಮನ್ನು ಆಧ್ಯಾತ್ಮದ ಎಡೆಗೆ ಸೆಳೆಯುವಂತಹ ಒಂದು ಪ್ರಬಲ ತಂತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಈ ಧ್ಯಾನ ಅಭ್ಯಾಸ ಎನ್ನುವುದು ಜಾರಿಯಲ್ಲಿದೆ. ಇದು ನಿಮ್ಮ ಉಸಿರಾಟವನ್ನು ಕೇಂದ್ರೀಕರಿಸಿ ಮಾಡುವಂತಹ ಒಂದು ಅಭ್ಯಾಸವಾಗಿದ್ದು ಇದನ್ನು ದಿನನಿತ್ಯ ರೂಢಿ ಮಾಡಿಕೊಂಡಲ್ಲಿ ನಿಮ್ಮ ಸರ್ವತೋಮುಖ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ದೇಹದ ಮೇಲೆ ಧ್ಯಾನ ಹೇಗೆ ಪರಿಣಾಮ ಬೀರುತ್ತದೆ?

ಧ್ಯಾನ ಎನ್ನುವುದು ನಿನ್ನೆ ಮೊನ್ನೆ ಹುಟ್ಟಿಕೊಂಡದ್ದಲ್ಲ. ಹಲವಾರು - ಸಾವಿರಾರು ವರ್ಷಗಳ ಇತಿಹಾಸವನ್ನು ಕೆದಕಿ ನೋಡಿದಾಗಲು ಧ್ಯಾನ ಅನ್ನೋ ಪರಿಕಲ್ಪನೆ ಇತ್ತು. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಜೊತೆಯಲ್ಲಿ ನಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ರೀತಿ, ಸಂಯಮ ಹಾಗೂ ನಮ್ಮ ಮನಸ್ಥಿತಿಯನ್ನು ಸುಧಾರಿಸುವ ಕಾರ್ಯ ಮಾಡುತ್ತದೆ. ಆಧುನಿಕ ಯುಗದಲ್ಲಿಯೂ ಅನೇಕರು ಧ್ಯಾನಾಭ್ಯಾಸದ ಮೂಲಕ ಏಕಾಗ್ರತೆಯನ್ನು ಸಾಧಿಸಿಕೊಳ್ಳುವ ಅಭ್ಯಾಸ ಮಾಡುತ್ತಾರೆ.

ಧ್ಯಾನದಿಂದೇನು ಲಾಭ?

ನೀವು ಪ್ರತಿದಿನ ಧ್ಯಾನಭ್ಯಾಸ ಮಾಡಲು ಆರಂಭಿಸಿದರೆ ಇದು ಕೇವಲ ನಿಮ್ಮ ಮನಸ್ಥಿತಿಯನ್ನು ಸುಧಾರಿಸುವುದು ಮಾತ್ರವಲ್ಲದೆ ನಿಮ್ಮ ಸಾಕಷ್ಟು ದೈಹಿಕ ಆರೋಗ್ಯ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಧ್ಯಾನ ಎನ್ನುವುದು ನಿಮ್ಮ ಮಿದುಳಿಗೆ ನಕಾರಾತ್ಮಕ ಶಕ್ತಿಯು ಸುಳಿಯದಂತೆ ಕಾಳಜಿ ವಹಿಸುತ್ತದೆ. ಮನಸ್ಸಿನಲ್ಲಿ ಎಂದಿಗೂ ಧನಾತ್ಮಕ ಯೋಚನೆಗಳು ತುಂಬಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಒತ್ತಡದಾಯಕ ಜೀವನವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಕೂಡ ನಾವು ಧ್ಯಾನದ ಮೂಲಕ ಕಲಿಯುತ್ತಾ ಹೋಗುತ್ತೇವೆ.

ಧ್ಯಾನದಿಂದಾಗಿ ನಿಮ್ಮ ನೆನಪಿನ ಶಕ್ತಿ ಸುಧಾರಿಸುತ್ತಾ ಹೋಗುತ್ತದೆ. ಮಿದುಳು ಹೆಚ್ಚಿನ ಏಕಾಗ್ರತೆಯನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ನೀವು ಒಂದು ವಿಷಯದ ಮೇಲೆ ಹೆಚ್ಚಿನ ಏಕಾಗ್ರತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಹಾಗೂ ಯಾವುದೇ ವಿಷಯವು ಅಷ್ಟು ಸುಲಭವಾಗಿ ನಿಮ್ಮ ಜ್ಞಾಪನಾ ವಲಯದಿಂದ ದೂರ ಸರಿಯುವುದಿಲ್ಲ.

ಯಾವಾಗ ನಿಮ್ಮ ಮಾನಸಿಕ ಆರೋಗ್ಯ ಸುಧಾರಿಸಲು ಆರಂಭಿಸುತ್ತದೆಯೋ ಅಲ್ಲಿಂದ ನಿಮ್ಮ ದೈಹಿಕ ಆರೋಗ್ಯ ಕೂಡ ಸುಧಾರಿಸುತ್ತಾ ಬರುತ್ತದೆ. ನೀವು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಆರಂಭಿಸುತ್ತೀರಿ. ಒಳ್ಳೆಯ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ಳಲು ಶುರು ಮಾಡುತ್ತೀರಿ. ಈ ಎಲ್ಲಾ ಧನಾತ್ಮಕ ಬದಲಾವಣೆಗಳು ನಿಮ್ಮ ಸರ್ವತೋಮುಖ ಆರೋಗ್ಯವನ್ನು ಸುಧಾರಿಸುವ ಕಾರ್ಯವನ್ನು ಮಾಡುತ್ತದೆ.

ಧ್ಯಾನಾಭ್ಯಾಸದ ಕಡೆಗಿನ ಹೆಚ್ಚಿನ ಒಲವು ನಿಮಗೆ ಅರಿಯದಂತೆ ನಿಮ್ಮ ದೇಹದಲ್ಲಿ ಪ್ರಾಣ ಶಕ್ತಿಯನ್ನು ಕೊಡುತ್ತಾ ಹೋಗುತ್ತದೆ. ನೀವು ಹೆಚ್ಚೆಚ್ಚು ಧ್ಯಾನ ಮಾಡುತ್ತಿದ್ದಂತೆಯೇ ನಿಮ್ಮ ಆತ್ಮಕ್ಕೆ ನೀವು ಇನ್ನಷ್ಟು ಸಾಮಿಪ್ಯ ಪಡೆದುಕೊಳ್ಳಲು ಆರಂಭಿಸುತ್ತೀರಿ. ಕಾಲಾಂತರದಲ್ಲಿ ನಿಮ್ಮ ಗ್ರಹಿಕಾ ಶಕ್ತಿ, ಮಾನಸಿಕ ಸ್ಥಿಮಿತ ಇವೆಲ್ಲವೂ ಅತ್ಯಂತ ಸದೃಢ ರೀತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ.

ಧ್ಯಾನವು ನಿಮ್ಮಲ್ಲಿನ ಕ್ರೋಧದ ಭಾವನೆಯನ್ನು ಕಡಿಮೆ ಮಾಡುತ್ತದೆ. ನೀವು ಹೆಚ್ಚೆಚ್ಚು ಶಾಂತಿಪ್ರಿಯರಾಗಿ ಬದಲಾಗುತ್ತಾ ಹೋಗುತ್ತೀರಿ. ಒಂದು ವಿಷಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಬಳಿಕ ಉತ್ತಮ ಗುಣ ನಿಮ್ಮಲ್ಲಿ ಬೆಳೆಯುತ್ತಾ ಹೋಗುತ್ತದೆ. ನೀವು ಬ್ರಹ್ಮಾಂಡದ ಸರ್ವವ್ಯಾಪಿ ಸತ್ಯಗಳನ್ನು ಅರಿತುಕೊಳ್ಳುತ್ತಾ ಹೋಗುತ್ತೀರಿ. ನಿಮ್ಮಲ್ಲಿನ ಆಧ್ಯಾತ್ಮಿಕ ಒಲವು ಇನ್ನಷ್ಟು ಬಲವಾಗುತ್ತಾ ಹೋಗುತ್ತದೆ. ಇವೆಲ್ಲವೂ ನಿಮ್ಮನ್ನು ಒಬ್ಬ ಪರಿಪೂರ್ಣ ಮನುಷ್ಯನನ್ನಾಗಿ ಬದಲಾಯಿಸುತ್ತಾ ಹೋಗುತ್ತದೆ.