ನೆನಪಿನ ಶಕ್ತಿ ಕುಂದುವುದಕ್ಕೆ ಕಾರಣವೇನು, ಮರೆಗುಳಿತನಕ್ಕೆ ಇಲ್ಲಿದೆ ಪರಿಹಾರ – ಮನದ ಮಾತು
ಭವ್ಯಾ ವಿಶ್ವನಾಥ್ ಬರಹ: ಕೆಲವೊಮ್ಮೆ ನಮ್ಮ ಮಿದುಳಿನಲ್ಲಿ ಏರುಪೇರುಗಳಾಗಿ ಮೆದುಳಿನ ಕಾರ್ಯಗಳಲ್ಲಿ ಕೆಲವು ವೈಫಲ್ಯಗಳನ್ನು ಕಾಣಬಹುದು. ಪರಿಣಾಮವಾಗಿ ನೆನಪಿನ ಶಕ್ತಿಯು ಕುಂದಬಹುದು. ಕೆಲವೊಮ್ಮೆ ಮಾಹಿತಿಯನ್ನು ಸರಿಯಾಗಿ ಗ್ರಹಿಸಿರುವುದಿಲ್ಲ, ಇದರಿಂದಲೂ ಸಹ ಇದರಿಂದ ಮರೆಯುವ ಸಾಧ್ಯತೆಗಳು ಕಂಡು ಬರುತ್ತದೆ.

ನಮ್ಮ ಸುತ್ತಮುತ್ತಲಿರುವ ಕೆಲವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ. ಯಾಕೋ ಏನೋ ನನಗೆ ಏನು ನೆನಪಿರುವುದಿಲ್ಲ, ಎಲ್ಲಾ ಮರೆತು ಹೋಗುತ್ತೇನೆ, ಎಷ್ಟೇ ಪ್ರಯತ್ನಪಟ್ಟರೂ ನೆನಪೇ ಆಗುವುದಿಲ್ಲ ಎಂದು ಬೇಸರ ತೋಡಿಕೊಳ್ಳುತ್ತಾರೆ. ಹಾಗಾದರೆ, ನಮ್ಮ ನೆನಪಿನ ಶಕ್ತಿ ಕುಂದುವುದಕ್ಕೆ ಕಾರಣವೇನು ಮತ್ತು ಪರಿಹಾರವೇನು ?
ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳು ಓದಿದ್ದೆಲ್ಲಾ ಮರೆತರೆ, ವಯಸ್ಕರು ಮತ್ತು ಉದ್ಯೋಗಸ್ಥರು ಕೆಲಸ ಕಾರ್ಯಗಳನ್ನು ಮರೆಯುತ್ತಾರೆ, ವಯಸ್ಸಾದವರು ಹೆಸರು, ವಿಳಾಸಗಳನ್ನು ಮರೆಯುತ್ತಾರೆ. ಇನ್ನು ಕೆಲವರು ನಡೆದಿರುವ ಘಟನೆಗಳು, ಸಂಭಾಷಣೆಗಳನ್ನು ಮರೆಯುತ್ತಾರೆ. ಹೀಗೆ ಎಲ್ಲಾ ವಯಸ್ಸಿನ ಪ್ರತಿಯೊಬ್ಬರು ಏನನ್ನಾದರೂ ಮರೆಯುತ್ತಿರುತ್ತಾರೆ. ಹೀಗೆ ಮರೆಯುವುದಕ್ಕೆ ಕಾರಣವೇನು ಮತ್ತು ಮರೆಯುವಿಕೆಗೆ ಪರಿಹಾರವೇನು?
ನೆನಪು ಎಂದರೇನು?
ಗತಕಾಲದ ನಮ್ಮ ಅನುಭವಗಳ ಮತ್ತು ಘಟನೆಗಳ ಸಂಗ್ರಹವೇ ನೆನಪುಗಳು. ಇವು ಮನಸ್ಸಿಗೆ ಮುದ ನೀಡುವ ಹಿತಕರವಾದ ವಿಷಯಗಳ ನೆನಪಾಗಿರಬಹುದು ಅಥವಾ ಬೇಸರ ಉಂಟು ಮಾಡುವ ಅಹಿತಕರವಾದ ವಿಷಯಗಳ ನೆನಪಾಗಿರಬಹುದು. ನಮ್ಮ ಮಿದುಳು ಮಾಹಿತಿಯನ್ನು ಗ್ರಹಿಸಿದ ನಂತರ ಕ್ರಮಬದ್ಧವಾಗಿ ಸಂಗ್ರಹಿಸಿ ಅವುಗಳನ್ನು ಉಳಿಸಿಕೊಳ್ಳುತ್ತದೆ. ನಂತರ ಸಂಗ್ರಹಿಸಿದ ಮಾಹಿತಿಗಳನ್ನು ಮರಳಿ ಜ್ಞಾಪಕ ಮಾಡಿಕೊಳ್ಳುವ ಶಕ್ತಿಯನ್ನೂ ಕೂಡ ಹೊಂದಿರುತ್ತದೆ.
ಮಾನವನ ಅಸ್ತಿತ್ವವೂ ಕೂಡ ನೆನಪಿನ ಕೊಡುಗೆಯಾಗಿದೆ. ನಾನು ಯಾರು? ನನ್ನ ತಾಯಿ ತಂದೆ ಯಾರು? ನನ್ನ ಹೆಸರೇನು? ನನ್ನ ಊರು ಯಾವುದು? ನನ್ನವರು ಯಾರು... ಹೀಗೆ ಈ ಪ್ರತಿಯೊಂದನ್ನು ಅರಿಯಲು ನೆನಪಿನ ಶಕ್ತಿ ಅಗತ್ಯ. ಮಾನವ ಸಂಬಂಧಗಳ ತಳಹದಿಯೂ ಕೂಡ ಜ್ಞಾಪಕ ಶಕ್ತಿ ಎಂದು ಹೇಳಬಹುದು. ಜ್ಞಾಪಕವೇ ಇಲ್ಲವಾದರೇ ಅಸ್ತಿತ್ವವಿದ್ದರೂ ಅಥವಾ ಸಂಬಂಧಗಳಿದ್ದರೂ ಪ್ರಯೋಜನವಿಲ್ಲ. ಹಾಗಾಗಿ, ನೆನಪೇ ಮಾನವ ಮತ್ತು ಪ್ರಾಣಿ ಸಂಕಲನದಲ್ಲಿರುವ ಸಂಬಂಧಗಳ ಮೂಲವೆನ್ನಬಹುದು.
ನಮ್ಮ ಮಿದುಳಿನ ‘ಹಿಪ್ಪೋ ಕಾಂಪಸ್ (hippocampus)‘ ನಮ್ಮ ನೆನಪಿನ ಶಕ್ತಿಯ ಕೇಂದ್ರವಾಗಿದೆ. ಇದರ ಜೊತೆಗೆ ಮಿದುಳಿನ ‘ಅಮಿಕ್ ಡಿಲ್ಲಾ‘, ಸೆರಿಬೆಲಮ್, ಪ್ರಿ ಫ್ರಾಂಟಲ್ ಕಾಟೆ೯ಕ್ಸ್ (amygdala, cerebellum and prefrontal cortex) ಭಾಗಗಳು ಕೂಡ ನೆನಪಿನ ಕ್ರಿಯೆಯಲ್ಲಿ ಪಾತ್ರವಹಿಸುತ್ತವೆ. ಹೆಚ್ಚಿನ ಸ್ಮರಣೆ ರಚನೆಯು ನಮ್ಮ ಹಿಪೊಕ್ಯಾಂಪಸ್‌ನಲ್ಲಿ ಉಂಟಾಗುತ್ತದೆ.
ಮೆದುಳಿನ ವ್ಯವಸ್ಥೆ ಪ್ರಮುಖ 3 ಭಾಗಗಳು
1. ಅಲ್ಪಾವಧಿಯ ಸ್ಮರಣೆಯ (Short term memory) - ಇದು ತಾತ್ಕಾಲಿಕ ಮಾಹಿತಿ ಸಂಗ್ರಹಣಾ ಸ್ಥಳವಾಗಿದೆ. ಇದು ನಮ್ಮ ನೆನಪುಗಳನ್ನು ಕೆಲವು ಸೆಕೆಂಡುಗಳಿಂದ ನಿಮಿಷಗಳವರೆಗೆ ಮಾತ್ರ ಹಿಡಿದಿಟ್ಟುಕೊಳ್ಳುತ್ತದೆ. ಅಗತ್ಯವಿದ್ದಲ್ಲಿ ಈ ವಿಭಾಗದ ಸಂಗ್ರಹವನ್ನು ದೀರ್ಘಾವಧಿಯ ಸ್ಮರಣೆಯ ವಿಭಾಗಕ್ಕೆ (Long term memory (Ltm) ವರ್ಗಾಯಿಸಬಹುದು. ಉದಾ: ನಮ್ಮ ಬಳಿಯಿರುವ ಹಣವನ್ನು ಎಣಿಸಿ ಸ್ವಲ್ಪ ಕ್ಷಣದವರೆಗೆ ನೆನಪಲ್ಲಿಟ್ಟುಕೊಳ್ಳುವುದು, ಬಸ್ ಅಥವಾ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅಕ್ಕಪಕ್ಕದಲ್ಲಿರುವ ಪ್ಯಾಸೆಂಜರ್‌ಗಳ ಮುಖವನ್ನು ನೆನಪಲ್ಲಿಟ್ಟುಕೊಳ್ಳುವುದು.
2. ದೀರ್ಘಾವಧಿ ಸ್ಮರಣೆ (long term memory)- ಇದು ಹೆಚ್ಚಾಗಿ ಶಾಶ್ವತ ಸಂಗ್ರಹಣಾ ಸ್ಥಳವಾಗಿದೆ. ನೀವು ಇಲ್ಲಿ ವರ್ಷಗಳವರೆಗೆ ಮಾಹಿತಿಯನ್ನು ಹಿಡಿದಿಟ್ಟುಕೊಳ್ಳಬಹುದು. ನೀವು ಎಷ್ಟು ಮಾಹಿತಿಯನ್ನು ಪಡೆಯಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ
3. ಸಂವೇದನಾ ಸ್ಮರಣೆ - ಇದು ನಿಮ್ಮ ಇಂದ್ರಿಯಗಳಿಂದ (ಶ್ರವಣ, ಸ್ಪರ್ಶ, ವಾಸನೆ, ರುಚಿ ಮತ್ತು ದೃಷ್ಟಿ) ಸಂಗ್ರಹಿಸಲಾದ ಮಾಹಿತಿಯಾಗಿದೆ. ನೀವು ಅದನ್ನು ಒಂದೆರಡು ಸೆಕೆಂಡುಗಳ ಕಾಲ ಮಾತ್ರ ಸಂಗ್ರಹಿಸುತ್ತೀರಿ. ನೀವು ಈ ರೀತಿಯ ಸ್ಮರಣೆಯನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸುವುದಿಲ್ಲ ಆದರೆ ಇದು ಹೆಚ್ಚು ವಿವರವಾಗಿರುತ್ತದೆ.
ಕೆಲವೊಮ್ಮೆ ನಮ್ಮ ಮಿದುಳಿನಲ್ಲಿ ಏರುಪೇರುಗಳಾಗಿ ತನ್ನ ಕಾರ್ಯಗಳಲ್ಲಿ ಕೆಲವು ವೈಫಲ್ಯಗಳನ್ನು ಕಾಣಬಹುದು. ಪರಿಣಾಮವಾಗಿ ನೆನಪಿನ ಶಕ್ತಿಯು ಕುಂದಬಹುದು. ಕೆಲವೊಮ್ಮೆ ಮಾಹಿತಿಯನ್ನು ಸರಿಯಾಗಿ ಗ್ರಹಿಸಿರುವುದಿಲ್ಲ, ಇದರಿಂದಲೂ ಸಹ ಇದರಿಂದ ಮರೆಯುವ ಸಾಧ್ಯತೆಗಳು ಕಂಡು ಬರುತ್ತದೆ. ದಿನನಿತ್ಯ ಒತ್ತಡದ ಪರಿಸ್ಥಿತಿಯಲ್ಲಿ ಚಿಕ್ಕಪುಟ್ಟ ವಿಷಯವನ್ನು ಮರೆಯುವುದು ಸಹಜ.
- ಇನ್ನು ಬದುಕಿನ ಹಲವಾರು ಪರಿಸ್ಥಿತಿಗಳು ನಮ್ಮ ಸ್ಮರಣೆಯು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಹುದು.
ಮರೆಯುವಿಕೆಗೆ ಕಾರಣಗಳು ಹೀಗಿವೆ
ವಯಸ್ಸು: ವಯಸ್ಸಾದ ಮೇಲೆ ಬುದ್ಧಿ ಅರಳು ಮರಳು ಅನ್ನುವ ಹಾಗೇ, ಮಿದುಳಿನ ಬುದ್ಧಿ ಮತ್ತು ನೆನಪಿನ ಶಕ್ತಿಯೂ ಕೂಡ ಕುಗ್ಗುತ್ತದೆ. ನಮ್ಮ ದೇಹದ ಉಳಿದ ಅಂಗಾಗಳು ಹೇಗೆ ವಯಸ್ಸಾದಾಗ ಉಡುಗುತ್ತವೆಯೋ ಹಾಗೇ ನಮ್ಮ ಮಿದುಳು ಕೂಡ ಸ್ವಲ್ಪ ಮಟ್ಟಿಗೆ ಉಡುಗುತ್ತದೆ, ಅದರ ಕಾರ್ಯ ಚಟುವಟಿಕೆಗಳು ಗ್ರಹಿಸುವಿಕೆ, ನೆನಪು, ಕ್ರಿಯಾಶೀಲತೆಗಳು ಮಾಸುತ್ತವೆ.
ಸ್ಕ್ರೀನ್ ಟೈಮ್: ಹೆಚ್ಚು ಸಮಯವನ್ನು ಮೊಬೈಲ್, ಟಿವಿ ಮತ್ತು ಕಂಪ್ಯೂಟರ್‌ಗಳಲ್ಲಿ ಕಳೆದಷ್ಟು ಮಿದುಳಿನ ಜೀವಕೋಶಗಳು ಸಕ್ರಿಯವಾಗಿ ಕಾರ್ಯನಿರ್ವಹಿಸದಂತೆ ಮಾಡುತ್ತದೆ. ಇದರಿಂದ ಮೊದಲ ಪರಿಣಾಮವೇ ನೆನಪಿನ ಶಕ್ತಿ ಕಡಿಮೆಯಾಗುವುದು
ಅತಿಯಾದ ಯೋಚನೆ/ ಚಿಂತೆ: ಅತಿಯಾದ ಯೋಚನೆ, ಚಿಂತೆ ಮಾಡಿದಾಗ ನಿಮ್ಮ ಗಮನ ಅಂದರೆ ಲಕ್ಷ್ಯ ಒಂದೇ ವಿಷಯದ ಮೇಲೆ ಕೇಂದ್ರಿಕೃತವಾಗಿ ಉಳಿದ ವಿಷಯಗಳನ್ನು ಮರೆಯುವ ಸಾಧ್ಯತೆ ಹೆಚ್ಚು.
ವಿಪರೀತವಾದ ಭಯ ಮತ್ತು ಆತಂಕ: ಕೆಲವೊಮ್ಮೆ ನಮ್ಮ ಮನಸ್ಸು ಅತಿಯಾದ ಭಯ, ದುಗುಡ ಮತ್ತು ಆತಂಕದಿಂದ ಕೂಡಿದಾಗ, ಬುದ್ಧಿ ವಿಚಲಿತವಾಗಿ ತನ್ನ ಸ್ಥಿತಪ್ರಜ್ಞೆಯನ್ನು ಕಳೆದುಕೊಂಡು ಮರೆತು ಹೋಗುವ ಸಾಧ್ಯತೆಗಳಿರುತ್ತವೆ. ಪರೀಕ್ಷೆಯ ಭಯ ಮತ್ತು ಆತಂಕದಿಂದಾಗಿ ಮಕ್ಕಳು ತಾವು ಓದಿದ್ದನ್ನು ಮರೆಯುವುದುಂಟು.
ಮಾನಸಿಕ ಒತ್ತಡ: ಮಾನಸಿಕ ಒತ್ತಡದಿಂದಲೂ ಬುದ್ಧಿಯ ಮೇಲೆ ಪೆಟ್ಟಾಗುತ್ತದೆ. ಇದರಿಂದ ಮಿದುಳು ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು ತನ್ನ ನೆನಪಿನ ಶಕ್ತಿಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳಬಹುದು.
ಮಲ್ಟಿ ಟಾಸ್ಕಿಂಗ್: ಒಂದೇ ಸಮಯದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದಾಗ, ಮಿದುಳು ನಾವು ಮಾಡುತ್ತಿರುವ ಎಲ್ಲಾ ವಿಷಯಗಳಿಗೆ ಗಮನ ನೀಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಒತ್ತಡವು ಹೆಚ್ಚಾಗಿ ಮರೆಯುವ ಸಾಧ್ಯತೆಯಿರುತ್ತದೆ. ಮಲ್ಟಿ ಟಾಸ್ಕಿಂಗ್ ತಡೆಯಿರಿ - ಮಲ್ಟಿ ಟಾಸ್ಕಿಂಗ್ ಮಾಡುವುದರಿಂದ ಕೆಲಸಗಳನ್ನು ಒಂದೇ ವೇಳೆಯಲ್ಲಿ ಬೇಗನೇ ಪೂರೈಸಿಕೊಳ್ಳಬಹುದು. ಆದರೆ, ಮಿದುಳಿನ ಗಮನವು ಹಂಚಿಹೋಗುತ್ತದೆ. ಪರಿಣಾಮವಾಗಿ ನೆನಪಿನ ಶಕ್ತಿ ಕುಂದುತ್ತದೆ.
ನಿದ್ರಾಹೀನತೆ: ಸದಾ ಕಾಲ ಕಾರ್ಯನಿರತವಾಗಿರುವ ನಮ್ಮ ಮಿದುಳು ನಿದ್ರೆ ಸಮಯದಲ್ಲಿ ವಿಶ್ರಾಂತಿಸುತ್ತದೆ. ನಿದ್ರೆಯ ಕೊರತೆಯಾದರೆ ಮಿದುಳಿಗೆ ವಿಶ್ರಾಂತಿ ಸಿಗದೇ ನೆನಪಿನ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.
ಅಪಘಾತ ಮತ್ತು ಆಘಾತಗಳು: ದೀಢೀರ್ ದೈಹಿಕ ಅಪಘಾತಗಳು ಅಥವ ಮಾನಸಿಕ ಆಘಾತಗಳಾದಾಗೂ ಕೂಡ ಮರೆಯುವಿಕೆ ಸಾಮಾನ್ಯ.
ಮಾನಸಿಕ ಅನಾರೋಗ್ಯ: ವ್ಯಕ್ತಿಯು ಖಿನ್ನತೆ, ಡಿಮ್ನೀಶಿಯ, ಆಲ್ಸೈಮರ್ಸ್ ಡಿಸೀಜ್ , ಅಮ್ನೀಶಿಯ ಇತ್ಯಾಗಿ ಮಾನಸಿಕ ರೋಗಗಳಿಂದ ಬಳಲುತ್ತಿದ್ದರೆ ಮರೆಯುವಿಕೆ ಸಹಜವಾದುದು
ಮನಸ್ಸಿದ್ದಲ್ಲಿ ಮಾರ್ಗ: ನೀವು ಮನಸ್ಸು ಮಾಡಿದರೇ ಖಂಡಿತವಾಗಲೂ ಮರೆಯುವಿಕೆಯನ್ನು ಬಗೆಹರೆಸಿಕೊಳ್ಳಬಹುದು
ಡಿಜಿಟಲ್ ಬ್ರೇಕ್ ಮತ್ತು ಡಿಜಿಟಲ್ ಫಾಸ್ಟಿಂಗ್ (Digital break/ digital fasting) - ಎಲ್ಲಾ ತರಹದ ಸ್ಕ್ರೀನ್ ಬಳಕೆಯಿಂದ ವಿರಾಮ ತೆಗೆದುಕೊಳ್ಳುವುದು. ಸತತವಾಗಿ ಸ್ಕ್ರೀನ್ ನೋಡುವಾಗ ಪ್ರತಿ 1 ತಾಸಿಗೂ 5 ನಿಮಿಷದ ವಿರಾಮವನ್ನು ತೆಗೆದುಕೊಳ್ಳುವುದು ಮತ್ತು ವಾರಕೊಮ್ಮೆ, ಭಾನುವಾರದೊಂದು ಪೂರ್ಣವಾಗಿ ಫೋನ್ ಮತ್ತು ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಂಡರೆ, ಸತತವಾಗಿ ಕಾರ್ಯನಿರತಾವಾಗಿರುವ ಮಿದುಳು ವಿಶ್ರಾಂತಿ ತೆಗೆದುಕೊಳ್ಳಬಹುದು. ವಿಶ್ರಾಂತಿ ಪಡೆದ ಮಿದುಳು, ಸಕ್ರಿಯವಾಗಿ, ನೆನಪಿನ ಶಕ್ತಿ ಸುಧಾರಿಸುತ್ತದೆ.
ಪ್ರಾಣಾಯಾಮ / ಧ್ಯಾನ: ಉಸಿರಾಟದ ಮೇಲೆ ನಿಮ್ಮ ಗಮನ ಹರಿಸಿ ಪ್ರತಿನಿತ್ಯ ಪ್ರಾಣಾಯಾಮ ಅಭ್ಯಾಸ ಮಾಡಿದರೆ ಮನಸ್ಸು ಶಾಂತವಾಗುತ್ತದೆ. ಸದಾ ಬದುಕಿನ ಜಂಜಾಟದ ಕುರಿತು ಅತಿಯಾಗಿ ಯೋಚಿಸುವ ಮಿದುಳಿಗೆ ವಿರಾಮ ಸಿಗುತ್ತದೆ ಮತ್ತು ಪುನಚೇ೯ತನಗೊಂಡು, ತನ್ನ ನೆನಪು ಮತ್ತು ಗ್ರಹಿಸುವ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ
ಮೆಮೋರಿ ಆಕ್ಟಿವಿಟೀಸ್( ಚಟುವಟಿಕೆಗಳು): ಮೆದುಳಿನ ನೆನಪಿನ ಶಕ್ತಿಯನ್ನು ಸಬಲಗೊಳಿಸುವ ಸ್ಪರ್ಧೆ/ಆಟಗಳು . ಮಕ್ಕಳಿಗೆ 10 ವಸ್ತುಗಳನ್ನು ತೋರಿಸಿ . ನಂತರ ಆ 10 ವಸ್ತುಗಳನ್ನು ನೋಡದೆ ಜ್ಞಾಪಿಸಿಕೊಂಡು ಪಟ್ಟಿ ಮಾಡುವುದಕ್ಕೆ ಪ್ರೋತ್ಸಾಹಿಸಿ.
ಮಕ್ಕಳಿಗೆ ಆಸಕ್ತಿಯಿರುವಂತಹ 10 ವಸ್ತುಗಳನ್ನು ಹೇಳಿ. ಇವುಗಳನ್ನು ಕೇಳಿಸಿಕೊಂಡು ನಂತರ 1 ನಿಮಿಷದಲ್ಲಿ ಜ್ಞಾಪಿಸಿಕೊಂಡು ಪಟ್ಟಿ ಮಾಡುವುದಕ್ಕೆ ಪ್ರೋತ್ಸಾಹಿಸಿ. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
ಪುನರಾವರ್ತಿಸಿ (repetition): ಗ್ರಹಿಸಿದ ಮಾಹಿತಿಯನ್ನು ಮನಸ್ಸಿನಲ್ಲಿ ಪುನರಾವತಿ೯ಸಿ. ಹೀಗೆ ಪದೇ ಪದೇ ರಿಪೀಟ್ ಮಾಡಿದಂತಹ ಮಾಹಿತಿಗಳು ದೀಘ೯ಕಾಲ ಮಿದುಳಿನಲ್ಲಿ ಸಂಗ್ರಹವಾಗುತ್ತದೆ. ಪದ್ಯ, ಹಾಡು, ಮಗ್ಗಿ, ಕಾಗುಣಿತ, ಶ್ಲೋಕ ಇತ್ಯಾದಿಗಳನ್ನು ಪದೇ ಪದೇ ಅಭ್ಯಾಸ ಮಾಡಿದಾಗ ಶಾಶ್ವತವಾಗಿ ನೆನಪಿನಲ್ಲಿ ಉಳಿದುಕೊಳ್ಳುತ್ತದೆ.
ವಿಭಿನ್ನ ಬಣ್ಣಗಳು ಅಥವಾ ಚಿತ್ರಗಳೊಂದಿಗೆ ಜೊತೆಗೂಡಿಸಿ: ನೆನಪಿಟ್ಟುಕೊಳ್ಳಬೇಕಾದ ವಿಷಯಗಳಿಗೆ ನಿದಿ೯ಷ್ಟವಾದ ಬಣ್ಣವನ್ನು ಕೊಡಿ ಅಥವಾ ವಿಷಯಗಳಿಗೆ ಸಂಬಂಧವಿರುವ ಅಥವಾ ನೀವು ಸದಾ ನೋಡುವ ಚಿತ್ರ/ದೃಶ್ಯಗಳನ್ನು ಜೊತೆಗೂಡಿಸಿ. ವಿಷಯಗಳನ್ನು ನೆನಪು ಮಾಡಿಕೊಳ್ಳಬೇಕಾದಾಗ, ಜೋಡಿಸಿದ ಬಣ್ಣ ಅಥವಾ ದೃಶ್ಯಗಳನ್ನು ನೆನಪಿಸಿಕೊಳ್ಳಿ, ಜೋಡಣೆಯಾದ ವಿಷಯವೂ ನೆನಪಿಗೆ ಬರುತ್ತದೆ
ಚಂಕಿಂಗ್ (ಸಣ್ಣ ಭಾಗ): ಚಂಕಿಂಗ್ ಪರಿಕಲ್ಪನೆಯು ಜಪಾನಿನ ಪರಿಣಾಮಕಾರಿಯಾದ ಸ್ಮರಣ ತಂತ್ರವಾಗಿದ್ದು, ಇದರಲ್ಲಿ ನೀವು ದೊಡ್ಡ, ಅಗಾಧವಾದ ಮಾಹಿತಿಯನ್ನು ಸಣ್ಣ ತುಣುಕುಗಳನ್ನಾಗಿ ವಿಭಜಿಸಿ, ಸಂಗ್ರಹಿಸುವುದು. ಇದರಿಂದ ದೊಡ್ಡ ಪ್ರಮಾಣದ ಮಾಹಿತಿಯನ್ನು ಸಣ್ಣ ಗುಂಪುಗಳನ್ನಾಗಿ ಮಾಡಿ ಯಶಸ್ವಿಯಾಗಿ ನಿರ್ವಹಿಸಬಹುದು. ಉದಾಹರಣೆಗೆ, ಸಂಖ್ಯೆಗಳ ದೀರ್ಘ ಸರಮಾಲೆಯನ್ನು ಮೂರು ಅಥವಾ ನಾಲ್ಕು ಸೆಟ್‌ಗಳಾಗಿ ವರ್ಗೀಕರಿಸಬಹುದು, ಇದು ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ.
ಮೈಂಡ್ ಫುಲ್‌ನೆಸ್: ನಮ್ಮ ಮನಸ್ಸು ಮತ್ತು ಪಂಚೇದ್ರಿಯಗಳನ್ನು ಒಂದೇ ವಿಷಯದ ಮೇಲೆ ಕೇಂದ್ರಿಕರಿಸಿ, ಕೆಲಸ ಕಾಯ೯ಗಳನ್ನು ನೆರವೇರಿಸಬೇಕು. ಎಲ್ಲಾ ಇಂದ್ರಿಯಗಳು ಮತ್ತು ಮನಸ್ಸು ಒಂದುಗೂಡಿದಾಗ, ಗಮನವೆಲ್ಲಾ ಒಂದೇ ವಿಷಯದ ಕಡೆ ಹರಿದು, ವ್ಯಕ್ತಿಯು ತನ್ನನ್ನು ತಾನು ಆಳವಾಗಿ ತೊಡಗಿಸಿಕೊಳ್ಳಬಹುದು. ಇದರಿಂದ ಈ ವಿಷಯದ ನೆನಪು ಕೂಡ ದೀರ್ಘಕಾಲದವರೆಗೆ ಉಳಿಯುತ್ತದೆ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
ವಿಭಾಗ