ಮದುವೆಗೆ ಮೊದಲು ಹೆಣ್ಮಕ್ಕಳ ಮನಸ್ಸಲ್ಲಿ ಮೂಡುವ ಪ್ರಶ್ನೆಗಳು ಹಲವು, ಸಂಗಾತಿಯ ಯೋಚನೆಯಲ್ಲಿ ಗೊಂದಲದ ಗೂಡಾದ ಮನಸಿಗೆ ಬೇಕಿದೆ ಸಾಂತ್ವನ: ಮನದ ಮಾತು
Adolescents counselling: ಮದುವೆ ನಿಶ್ಚಯವಾಗಿ ಮಾಂಗಲ್ಯ ಧಾರಣೆ ಆಗುವ ನಡುವಣ ಅವಧಿಯಲ್ಲಿ ಹರೆಯದ ಹೃದಯಗಳ ತಲ್ಲಣ ಒಂದೆರೆಡಲ್ಲ. ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದ, ಹರೆಯದ ಹೆಣ್ಣುಮಕ್ಕಳ ಆತಂಕಕ್ಕೆ ತಮ್ಮ ಉತ್ತರದಲ್ಲಿ ಸಾಂತ್ವನ ಹೇಳಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಭವ್ಯಾ ವಿಶ್ವನಾಥ್.
ಪ್ರಶ್ನೆ: 1) ನನಗೆ ಈಗ ಇಪ್ಪತ್ಮೂರು ವರ್ಷ. ಮುಂದಿನ ತಿಂಗಳು ನನ್ನ ಮದುವೆ ಇದೆ. ಎಂಗೇಜ್‌ಮೆಂಟ್ ಅಂತೇನೂ ಮಾಡುತ್ತಿಲ್ಲ. ವಾರದ ಹಿಂದೆ ಹುಡುಗನ ಕಡೆಯವರು ನೋಡಿ ಹೋದರು. ಅವರು ಒಪ್ಪಿಕೊಂಡರು, ನನಗೂ ಮನೆಯವರಿಗೂ ಸಮ್ಮತಿ ಅಂತ ಆಯಿತು. ಆದರೆ ಇಷ್ಟು ಬೇಗ ಮದುವೆ ನಿಶ್ಚಯ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ. ಈಗ ಮನಸ್ಸಿನಲ್ಲಿ ಆತಂಕ ಕಾಡುತ್ತಿದೆ. ನಾನು ಒಬ್ಬಳೇ ಮಗಳು. ಓದಿದ್ದೆಲ್ಲ ಹೆಣ್ಣುಮಕ್ಕಳ ಶಾಲೆ, ಕಾಲೇಜು. ಅಪ್ಪನ ಜತೆ ಸಹ ಧೈರ್ಯವಾಗಿ ಮಾತನಾಡುವುದಕ್ಕೆ ಹಿಂಜರಿಕೆ. ಈಗ ಮದುವೆ ನಂತರ ಅವರು ಹೇಗಿರುತ್ತಾರೋ ಏನೋ? ಅವರ ನಿರೀಕ್ಷೆ ಏನೋ ಹೀಗೆ ಒಂದು ರೀತಿ ಭಯ ಆಗ್ತಿದೆ. ಇದಕ್ಕೆ ಪರಿಹಾರ ತಿಳಿಸುತ್ತೀರಾ? -ಗೌರಿ, ಮತ್ತೀಕೆರೆ, ಬೆಂಗಳೂರು
ಉತ್ತರ: ಮೊದಲನೆಯದಾಗಿ ನಿಮಗೆ ಅಭಿನಂದನೆಗಳು. ನಿಮ್ಮ ಭವಿಷ್ಯ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ. ನಿಮ್ಮ ಆತಂಕ ಅರ್ಥವಾಗುತ್ತದೆ. ಹುಟ್ಟಿ ಬೆಳೆದ ಮನೆಯಿಂದ ದಿಢೀರನೆ ಬಾಳ ಸಂಗಾತಿಯ ಮನೆಗೆ ಹೋಗಬೇಕೆಂದಾಗ ಸಹಜವಾದ ಭಯ ಆತಂಕ ಕಾಡುತ್ತದೆ. ಎಷ್ಟೇ ಮಾನಸಿಕವಾಗಿ ಸಜ್ಜಾಗಿದ್ದರೂ, ಸಂಗಾತಿಯ ಜೊತೆಗೆ ಬಾಳುವ ಕನಸುಗಳಿದ್ದರೂ ಕೂಡ ತವರು ಮನೆಯಿಂದ ಬೇಪ೯ಡುವ ಸಮಯ ಬಂದಾಗ ಉಳಿಯುವುದು ದುಃಖ, ತವಕ, ಆತಂಕ ಮಾತ್ರ. ಇನ್ನು ವಿವಾಹವು 'ಅರೇಂಜ್ಡ್' ಆದ ಪಕ್ಷದಲ್ಲಿ ಭಯ ಆತಂಕ ಹೆಚ್ಚಾಗುವುದು ಸಹಜವೇ. ಪರಿಚಯವೇ ಇಲ್ಲದ ಸಂಗಾತಿ ಹೇಗೋ ಏನೋ? ಹೊಸ ಮನೆಯ ವಾತಾವರಣ ನನ್ನ ಸ್ವಭಾವಕ್ಕೆ ಹೊಂದುತ್ತದೋ ಇಲ್ಲವೋ.. ಹೀಗೆ ನಾನಾ ತರಹದ ಚಿಂತೆಗಳ ಜೊತೆಗೆ ಭವಿಷ್ಯದ ಬಗ್ಗೆ ಅಭದ್ರತೆ , ಅನಿಶ್ಚತೆ ಕಾಡುತ್ತಿರುತ್ತದೆ.
ವಿವಾಹವೆನ್ನುವುದು ಬದುಕಿನ ಒಂದು ದೊಡ್ಡ ತಿರುವು ಹಾಗೂ ಬದಲಾವಣೆ. ಭವಿಷ್ಯದ ಬದುಕನ್ನು ಹೊಸ ಸಂಬಂಧಗಳು ಮತ್ತು ಮನೆ, ಜಾಗ, ಜವಾಬ್ಧಾರಿ... ಎಲ್ಲವನ್ನೂ ಅರಿತು, ಒಪ್ಪಿಕೊಂಡು ತನ್ನನ್ನು ತಾನು ಹೊಸತನದಲ್ಲಿ ಬೆಸೆದುಕೊಳ್ಳಬೇಕು. ಇಂತಹ ಒಂದು ದೊಡ್ಡ ತಿರುವನ್ನು ಪ್ರೀತಿಸಿ ಮನಸಾರೆ ಒಪ್ಪಿಕೊಳ್ಳಬೇಕಾದರೆ ಮನಸ್ಸಿಗೆ ಸ್ವಲ್ಪ ಸಮಯ ನೀಡಬೇಕು. ಹಾಗೆಯೇ, ಸಂಗಾತಿ, ಅತ್ತೆ ಮಾವ, ಪೋಷಕರು ಸೇರಿದಂತೆ ಕುಟುಂಬದ ಭಾಗವಾಗಿರುವ ಎಲ್ಲರ ಬೆಂಬಲ ಮತ್ತು ಸಹಕಾರ ಇಂತಹ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ.
ನಿಮ್ಮ ನಿರೀಕ್ಷೆ ಏನಿದೆ ಎನ್ನುವುದಕ್ಕಿಂತಲೂ ಅವರಿಗೆ ನಿಮ್ಮ ಬಗ್ಗೆ ಇರುವ ನಿರೀಕ್ಷೆಗಳ ಬಗ್ಗೆ ಹೆಚ್ಚಿನ ಆತಂಕ ಇರುತ್ತದೆ. ನನ್ನ ಅನುಭವದಂತೆ ಪ್ರತಿಯೊಂದು ಹೆಣ್ಣಿಗೂ ವಿವಾಹದ ಮುಂಚೆ ಈ ಆತಂಕವಿರುತ್ತದೆ. ಈ ಒಂದು ಕ್ರಿಯೆಯಲ್ಲಿ ಭವಿಷ್ಯದ ಕುರಿತು ಮಾನಸಿಕ ಸಿದ್ಧತೆ ನಡೆಯುತ್ತಿರುತ್ತದೆ. ಕೆಲವೊಮ್ಮೆ ಅತಿಯಾದ ಸಂತೋಷ, ಸಂಭ್ರಮ, ಉಲ್ಲಾಸವಾದರೆ ಮತ್ತೊಮ್ಮೆ ದುಃಖ, ದುಗುಡ, ಭಯ, ಆತಂಕವಾಗುತ್ತಿರುತ್ತದೆ. ಇದನ್ನು ಒಂದು ರೀತಿಯ ಮನಃಸ್ಥಿತಿಯ ಏರು ಪೇರು (ಮೂಡ್ ಸ್ವಿಂಗ್ಸ್) ಎನ್ನಬಹುದು.
ವಿವಾಹದ ನಂತರ ಭಯ ಮತ್ತು ಆತಂಕ ಕ್ರಮೇಣ ಕಡಿಮೆಯಾಗಿ ಮಾಸಿಹೋಗುತ್ತದೆ. ನೀವು ಹೆದರುವ ಅಗತ್ಯವಿಲ್ಲ. ಅಕಸ್ಮಾತ್ ನಿಮಗೆ ಅತಿಯಾದ ಆತಂಕವಾಗಿ ನಿಭಾಯಿಸುವುದಕ್ಕೆ ಕಷ್ಟವಾದರೆ ಹೀಗೆ ಮಾಡಿ.
1) ನಿಮ್ಮ ಮತ್ತು ಅವರ ನಿರೀಕ್ಷೆಗಳ ಬಗ್ಗೆ ಕುರಿತು ಮುಕ್ತವಾಗಿ ಭಾವಿ ಸಂಗಾತಿಯ ಬಳಿ ಮಾತನಾಡಿ. ಪೋಷಕರೊಂದಿಗೂ ನಿಮ್ಮ ದುಗುಡದ ಕುರಿತು ಮಾತನಾಡಿ.
2) ಭವಿಷ್ಯದಲ್ಲಿ ಏನಾಗಬಹುದೆಂದು ಯೋಚಿಸುವುದರ ಬದಲು ನೀವಿಬ್ಬರೂ ಜೊತೆಗೂಡಿ ಒಮ್ಮತದಿಂದ ಏನು ಮಾಡಬಹುದೆಂದು ಯೋಚಿಸಲು ಪ್ರಯತ್ನಿಸಿ.
3) ನಿಮ್ಮ ನಿರೀಕ್ಷೆಗಳೇನು? ನಿಮ್ಮ ವೈವಾಹಿಕ ಜೀವನ ಹೇಗಿರಬೇಕು? ಸಂಗಾತಿ ಹೇಗಿರಬೇಕು? ಮದುವೆಯ ನಂತರ ವೈಯಕ್ತಿಕವಾಗಿ ನೀವು ಹೇಗೆ ಬದುಕಬೇಕೆಂದುಕೊಂಡಿದ್ದೀರಿ? ಎಂದು ಒಬ್ಬರೇ ಯೋಚಿಸುತ್ತಿದ್ದರೆ ಮಾನಸಿಕ ಒತ್ತಡವು ಹೆಚ್ಚಾಗುತ್ತದೆ. ಇದರ ಬದಲಿಗೆ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡಷ್ಟೂ ಒಳ್ಳೆಯದು.
4) ಕೆಲವೊಮ್ಮೆ ಬದುಕು ಅನಿಶ್ಚಿತ ಮತ್ತು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ. . ಒಂದು ಪಕ್ಷದಲ್ಲಿ ಮುಂದೆ ಚಿಕ್ಕಪುಟ್ಚ ಬದಲಾವಣೆಗಳಾದರೆ, ನಿಮ್ಮ ನಿರೀಕ್ಷೆಗೆ ಮೀರಿದ ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸುವುದಕ್ಕೆ ಮಾನಸಿಕ ಸಿದ್ಧತೆಯಿರಲಿ.
5) ನಿಮ್ಮ ಸಾಮರ್ಥ್ಯದ ಬಗ್ಗೆ ಗೌರವ ಹಾಗೂ ನಂಬಿಕೆ ಇರಲಿ. ಇಂತಹ ಸಂದರ್ಭಗಳಲ್ಲಿ ಆತ್ಮಗೌರವ ಮತ್ತು ಆತ್ಮವಿಶ್ವಾಸ ಮಹತ್ವದ ಪಾತ್ರ ನಿರ್ವಹಿಸುತ್ತದೆ.
6) ನಿಮ್ಮನ್ನು ನೀವು ಆರೋಗ್ಯಕರವಾದ ಮನಸ್ಲಿಗೆ ಉಲ್ಲಾಸ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಉದಾಹರಣೆಗೆ ಸಂಗೀತ, ಯೋಗ, ಜಿಮ್, ವಾಕಿಂಗ್, ಪುಸ್ತಕ ಓದುವುದು ಇತ್ಯಾದಿ
7) ಮಿತ , ಆರೋಗ್ಯಕರ ಆಹಾರ, ಸಾಕಷ್ಟು ನಿದ್ರೆ, ವಿಶ್ರಾಂತಿಯೂ ಸಹ ಭಯ ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
(ಪ್ರಶ್ನೆ ಕೇಳಿದವರ ಹೆಸರು ಮತ್ತು ಊರು ಬದಲಿಸಲಾಗಿದೆ)
---
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.