Online Shopping: ಆನ್‌ಲೈನ್‌ ಶಾಪಿಂಗ್ ಚಟವು ಮಾನಸಿಕ ವ್ಯಾಧಿಯಾಗಬಹುದು; ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Online Shopping: ಆನ್‌ಲೈನ್‌ ಶಾಪಿಂಗ್ ಚಟವು ಮಾನಸಿಕ ವ್ಯಾಧಿಯಾಗಬಹುದು; ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ

Online Shopping: ಆನ್‌ಲೈನ್‌ ಶಾಪಿಂಗ್ ಚಟವು ಮಾನಸಿಕ ವ್ಯಾಧಿಯಾಗಬಹುದು; ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಮನೆಗೆ ಸಂಬಂಧಿಕರು ಬರುವುದಕ್ಕಿಂತ ಡೆಲಿವರಿ ಸಿಬ್ಬಂದಿ ಭೇಟಿ ನೀಡುವುದೇ ಹೆಚ್ಚು. ಇದಕ್ಕೆಲ್ಲ ಕಾರಣ ನಮ್ಮ ಆನ್‌ಲೈನ್‌ ಶಾಪಿಂಗ್ ವ್ಯಾಮೋಹ. ದಿನ ಕಳೆದಂತೆ ನಮಗೆ ಗೊತ್ತಿಲ್ಲದಂತೆ ನಾವು ಆನ್‌ಲೈನ್‌ ಶಾಪಿಂಗ್ ದಾಸರಾಗುತ್ತಿದ್ದೇವೆ. ಆದರೆ ಅತಿಯಾದ ಆನ್‌ಲೈನ್‌ ಶಾಪಿಂಗ್‌ ಮಾನಸಿಕ ವ್ಯಾಧಿಯೂ ಆಗಬಹುದು ಎಚ್ಚರ.

ಆನ್‌ಲೈನ್‌ ಶಾಪಿಂಗ್ ಚಟವು ಮಾನಸಿಕ ವ್ಯಾಧಿಯಾಗಬಹುದು; ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ
ಆನ್‌ಲೈನ್‌ ಶಾಪಿಂಗ್ ಚಟವು ಮಾನಸಿಕ ವ್ಯಾಧಿಯಾಗಬಹುದು; ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ (Unsplash/Pexel)

ಈಗೊಂದು 10 ವರ್ಷಗಳ ಹಿಂದಿನ ಕಾಲವನ್ನು ತಿರುಗಿ ನೋಡಿದರೆ ಆಗೆಲ್ಲ ಶಾಪಿಂಗ್ ಯಾವ ರೀತಿ ಮಾಡುತ್ತಿದ್ದರು ಎಂಬುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಒಂದು ಸಣ್ಣ ವಸ್ತು ಬೇಕಿದ್ದರೂ ನೀವೇ ಅಂಗಡಿಗೆ ಹೋಗಿ ಖರೀದಿ ಮಾಡಬೇಕಿತ್ತು. ಆನ್‌ಲೈನ್‌ ವ್ಯಾಪಾರ ಆಗ ಅಂಬೆಗಾಲಿಡುತ್ತಿತ್ತು. ಆದರೆ ಈಗ ಹಾಗಲ್ಲ ನೀವು ಏನೇ ಬೇಕೆಂದರೂ ಮೊಬೈಲ್‌ನಲ್ಲಿ ಬುಕ್ ಮಾಡಿದರೆ ಮುಗೀತು. ನಿಮ್ಮ ಮನೆ ಬಾಗಿಲಿಗೆ ಬಂದು ಅದನ್ನು ಕೊಟ್ಟು ಹೋಗುತ್ತಾರೆ. ನಿಮಗೆ ಆ ವಸ್ತು ಬೇಡವೆಂದರೆ ಅವರೇ ಬಂದು ಮರಳಿ ಪಡೆಯುತ್ತಾರೆ. ಇಷ್ಟೆಲ್ಲ ಅನುಕೂಲ ಹೊಂದಿರುವ ಈ ಆನ್‌ಲೈನ್‌ ಶಾಪಿಂಗ್ ಒಂದು ರೀತಿಯ ಚಟ ಎಂದು ಹೇಳಿದರೆ ನೀವು ನಂಬುತ್ತೀರೇ..? ಇಲ್ಲ ಎಂಬುದು ನಿಮ್ಮ ಉತ್ತರವಾಗಿದ್ದರೆ ಈ ಒಂದು ತಿಂಗಳಲ್ಲಿ ಆನ್‌ಲೈನ್‌ ಮೂಲಕ ನೀವು ವಸ್ತುಗಳನ್ನ ಸ್ವೀಕರಿಸಿದ್ದೀರಿ ಎಂದು ನಿಮಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ. ಆಗ ಆನ್‌ಲೈನ್‌ ಶಾಪಿಂಗ್ ವ್ಯಸನವೋ ಅಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ.

ಆನ್‌ಲೈನ್‌ ಶಾಪಿಂಗ್‌ಗೆ ಮನುಷ್ಯ ವ್ಯಸನಿಯಾಗುವ ಸಾಧ್ಯತೆ ಇರುತ್ತದೆ ಎಂದು ಸ್ವತಃ ಮಾನಸಿಕ ತಜ್ಞರೇ ಒಪ್ಪಿಕೊಂಡಿದ್ದಾರೆ. ಆನ್‌ಲೈನ್‌ ಶಾಪಿಂಗ್ ಚಟವನ್ನು ನಾವು ಬೈಯಿಂಗ್ ಡಿಸಾರ್ಡರ್ ಅಥವಾ ಓನಿಯೋಮೇನಿಯಾ ಎಂದು ಕರೆಯಬಹುದಾಗಿದೆ. ಇದು ನಿಮ್ಮ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ತಂದೊಡ್ಡುವಂತಹ ಒಂದು ಸಮಸ್ಯೆಯಾಗಿದೆ ಎಂದು ಸ್ವತಃ ಮನಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

ಈ ಚಟದಿಂದಾಗಿ ನೀವು ಹೆಚ್ಚೆಚ್ಚು ಆನ್‌ಲೈನ್‌ ಶಾಪಿಂಗ್ ಮಾಡುತ್ತಲೇ ಹೋಗುತ್ತೀರಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಭಾರೀ ಪ್ರಮಾಣದಲ್ಲಿ ಹಣಕಾಸಿನ ಸಮಸ್ಯೆಗಳು ಉಂಟಾಗುತ್ತದೆ. ಸಂಬಂಧಗಳಲ್ಲಿ ಬಿರುಕು ಹಾಗೂ ಜೀವನದ ಗುಣಮಟ್ಟದಲ್ಲಿ ಕೊರತೆ ಕಂಡುಬರುವ ಎಲ್ಲಾ ಸಾಧ್ಯತೆಗಳು ಇರುತ್ತದೆ.

ಸಂತೋಷ ಹೆಚ್ಚಿಸುವ ಆನ್‌ಲೈನ್‌ 

ಆನ್‌ಲೈನ್‌ ಶಾಪಿಂಗ್ ಎನ್ನುವುದು ನಿಮಗೆ ದಿಢೀರ್ ಸಂತೋಷ ಹಾಗೂ ಉತ್ಸಾಹವನ್ನು ನೀಡುತ್ತದೆ. ಇದೇ ಕಾರಣಕ್ಕೆ ನಮ್ಮ ಮನಸ್ಸು ಪದೇ ಪದೇ ಆನ್‌ಲೈನ್‌ ಶಾಪಿಂಗ್ ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ ಎಂದು ಮುಂಬೈ ಮೂಲದ ಮನಃಶಾಸ್ತ್ರಜ್ಞೆ ಆಲಿಶಾ ಲಾಲ್ಚಿ ವಿವರಿಸಿದ್ದಾರೆ.

ಆನ್‌ಲೈನ್‌ ಶಾಪಿಂಗ್ ಎನ್ನುವುದು ನಾವು ಅಂಗಡಿಗೆ ಹೋಗಿ ಖರೀದಿ ಮಾಡುವುದಕ್ಕಿಂತಲೂ ಹೆಚ್ಚು ಆರಾಮದಾಯಕವಾಗಿರುತ್ತದೆ. ಇಲ್ಲಿ ನಿಮಗೆ ಹೆಚ್ಚಿನ ಆಯ್ಕೆಗಳು ಸಿಗುತ್ತವೆ. ಮನೆ ಬಾಗಿಲಿಗೆ ಬಂದ ಪ್ಯಾಕೇಟ್‌ಗಳನ್ನ ತೆರೆಯುವಾಗ ನಿಮ್ಮ ಮನಸ್ಸಿಗೆ ಆಗುವ ಸಂತೋಷವು ನಿಮ್ಮಲ್ಲಿ ಹೆಚ್ಚೆಚ್ಚು ಶಾಪಿಂಗ್ ಮಾಡುವ ಆಸೆಯನ್ನು ಬಲಪಡಿಸುತ್ತಲೇ ಹೋಗುತ್ತದೆ.

ಆನ್‌ಲೈನ್‌ ಶಾಪಿಂಗ್ ಚಟವಾಗಿ ಬದಲಾಗಲು ಕಾರಣಗಳಿವು

ಮಾನಸಿಕ ಅಂಶಗಳು: ಒತ್ತಡ, ಆತಂಕ, ಖಿನ್ನತೆ ಅಥವಾ ಒಂಟಿತನದಂತಹ ಭಾವನೆಗಳನ್ನು ನಿಭಾಯಿಸಲು ಸಾಮಾನ್ಯವಾಗಿ ಅನೇಕರು ಆನ್‌ಲೈನ್‌ ಶಾಪಿಂಗ್‌ ಒಂದು ಮಾರ್ಗ ಎಂದು ಪರಿಗಣಿಸುತ್ತಾರೆ. ಈ ಆನ್‌ಲೈನ್‌ ಶಾಪಿಂಗ್‌ನಿಂದ ನಿಮಗೆ ಸಿಗುವ ತಾತ್ಕಾಲಿಕ ಸಂತೋಷವು ನಿಮ್ಮನ್ನು ಇನ್ನಷ್ಟು ಶಾಪಿಂಗ್ ಮಾಡುವಂತೆ ಪ್ರೇರಣೆ ನೀಡುತ್ತಾ ಹೋಗುತ್ತದೆ.

ನ್ಯೂರೋಬಯಲಾಜಿಕಲ್ ಅಂಶಗಳು: ಈ ರೀತಿ ಶಾಪಿಂಗ್ ಮಾಡುವಾಗ ಡೋಪಮೈನ್ ಬಿಡುಗಡೆಗೆ ಹೆಚ್ಚು ಪ್ರಚೋದನೆ ಸಿಗಬಹುದು. ಇದು ಒಂದು ರೀತಿಯಲ್ಲಿ ನಿಮಗೆ ಪ್ರತಿಫಲ, ಸಂತೋಷ ಎಲ್ಲವನ್ನೂ ಕೊಡುತ್ತದೆ. ಇದೇ ನಿಮ್ಮನ್ನು ಆನ್‌ಲೈನ್‌ ಶಾಪಿಂಗ್ ದಾಸರಾಗುವಂತೆ ಮಾಡುತ್ತದೆ.

ಸಾಮಾಜಿಕ ಪ್ರಭಾವ: ಆನ್‌ಲೈನ್‌ ಶಾಪಿಂಗ್‌ಗಳಲ್ಲಿ ನೀವು ಸುಲಭವಾಗಿ ಪ್ರವೇಶ ಪಡೆಯಬಹುದಾಗಿರುವ ಹಿನ್ನೆಲೆಯಲ್ಲಿ ನಿಮ್ಮನ್ನು ಹೆಚ್ಚು ಖರ್ಚು ಮಾಡುವಂತೆ ಅದು ಪ್ರೋತ್ಸಾಹ ನೀಡುತ್ತದೆ. ಆನ್‌ಲೈನ್‌ ಶಾಪಿಂಗ್‌ಗಳು ಬಿಡುವ ರಿಯಾಯಿತಿ ಆಫರ್‌ಗಳು, ಜಾಹೀರಾತುಗಳು ಸೇರಿದಂತೆ ವಿವಿಧ ಮಾರ್ಕೆಟಿಂಗ್ ತಂತ್ರಗಳು ನಿಮ್ಮನ್ನು ಆಗಾಗ ಶಾಪಿಂಗ್ ಮಾಡುತ್ತಲೇ ಇರುವಂತೆ ಪ್ರೇರೇಪಿಸುತ್ತದೆ.

ಮಿತಿಮೀರಿದ ಆನ್‌ಲೈನ್‌ ಶಾಪಿಂಗ್ ನಿಮಗೆ ಹಣಕಾಸಿನ ಒತ್ತಡವನ್ನು ಉಂಟುಮಾಡುತ್ತದೆ. ನೀವು ಅವಮಾನ, ಆತಂಕ, ಖಿನ್ನತೆ ಹಾಗೂ ಸ್ವಾಭಿಮಾನದ ಕೊರತೆಯನ್ನು ಎದುರಿಸಬೇಕಾಗಿ ಬರುತ್ತದೆ. ಆ ತಾತ್ಕಾಲಿಕ ತೃಪ್ತಿಗಾಗಿ ನೀವು ಹಾತೊರೆಯಲು ಆರಂಭಿಸಬಹುದು. ಒಂದು ರೀತಿಯಲ್ಲಿ ಶೂನ್ಯ ಭಾವನೆ ನಿಮ್ಮನ್ನು ಕಾಡಲು ಆರಂಭಿಸಬಹುದು. ಇವೆಲ್ಲವೂ ಭಾವನಾತ್ಮಕವಾಗಿ ನಿಮಗೆ ಸಾಕಷ್ಟು ಪೆಟ್ಟು ನೀಡುತ್ತದೆ.

ಈ ಅಭ್ಯಾಸವನ್ನು ಮರೆಯಲು ಯತ್ನಿಸಬೇಕು 

ಹೌದು..! ಆನ್‌ಲೈನ್‌ ಶಾಪಿಂಗ್ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಮುನ್ನವೇ ನೀವು ಇದನ್ನು ಬಿಟ್ಟು ಬಿಡುವುದು ಒಳ್ಳೆಯದು. ಆದಷ್ಟು ಯೋಗ, ಧ್ಯಾನಗಳನ್ನು ಮಾಡುವ ಮೂಲಕ ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಯತ್ನಿಸಿ. ಆರ್ಥಿಕ ಸ್ವಾತಂತ್ರ್ಯಕ್ಕಿಂತ ಹೆಚ್ಚಿನ ಸಂತೋಷ ಇನ್ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ ಎಂಬುದನ್ನು ನಿಮಗೆ ನೀವೇ ಮನವರಿಕೆ ಮಾಡಿಸಬೇಕು. ಪ್ರತಿ ತಿಂಗಳು ನಿಮ್ಮ ಆದಾಯಕ್ಕೆ ತಕ್ಕುದಾದ ಬಜೆಟ್ ರಚಿಸಿ ಅದರಲ್ಲೇ ಜೀವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಖರ್ಚುಗಳಿಗೆ ಹೇಗೆ ಮಿತಿ ಹಾಕಬೇಕು ಎಂಬುದರ ಬಗ್ಗೆ ಯೋಚನೆ ಮಾಡಿ.

Whats_app_banner