Retirement: ಅಯ್ಯೋ ರಿಟೈರ್‌ಮೆಂಟಾ? ಭಾರತೀಯರಲ್ಲಿ ಹೆಚ್ಚುತ್ತಿದೆ ನಿವೃತ್ತಿಯ ಖಿನ್ನತೆ; ಈ ಸಮಸ್ಯೆಗೆ ಕಾರಣ, ಪರಿಹಾರ ಇಲ್ಲಿದೆ
ಭಾರತದಲ್ಲಿ ನಿವೃತ್ತಿಯ ನಂತರ ಕಾಡುವ ಖಿನ್ನತೆಯ ಸಮಸ್ಯೆಯ ಪ್ರಮಾಣ ಹೆಚ್ಚಾಗುತ್ತಿದೆ. ಒಂಟಿತನ ಇದಕ್ಕೆ ಪ್ರಮುಖ ಕಾರಣವಾದರೂ ಇನ್ನಿತರ ಹಲವು ಅಂಶಗಳು ಈ ಸಮಸ್ಯೆಗೆ ಮೂಲವಾಗುತ್ತಿವೆ. ನಿವೃತ್ತಿಯ ನಂತರ ಖಿನ್ನತೆ ಕಾಡಲು ಏನೆಲ್ಲಾ ಅಂಶಗಳು ಕಾರಣವಾಗುತ್ತಿವೆ, ಇದರಿಂದ ಹೊರ ಬರುವುದು ಹೇಗೆ ಎಂಬ ವಿವರ ಇಲ್ಲಿದೆ (ಬರಹ: ಪ್ರೀತಿ ಮೊದಲಿಯಾರ್)

ಜೀವನದ ಅರ್ಧ ಆಯಸ್ಸನ್ನು ದುಡಿಮೆ, ಸಂಸಾರ, ಮನೆ-ಮಕ್ಕಳು ಎಂದೇ ಕಳೆದು, ತಮ್ಮ ಜೀವನಕ್ಕೆ ಆಧಾರವಾದ ವೃತ್ತಿಯನ್ನು ಬಿಟ್ಟು ಆಚೆ ಬರುವುದಿದೆಯಲ್ಲ ಅದು ಅರಗಲಾರದ ಆಘಾತವೇ ಸರಿ. ವೃತ್ತಿ, ಉದ್ಯಮ ಯಾವುದೇ ಇರಲಿ ನಿವೃತ್ತಿ ಸಮಯ ಹತ್ತಿರ ಬರುತ್ತಿದೆ ಎಂದಾಗ ಮನದಲ್ಲಿ ಹೇಳಲಾರದ ತಳಮಳ ಇರುವುದು ಸಹಜ. ಕೈ ತುಂಬಾ ಹಣ ಇದ್ದರೂ ನಿವೃತ್ತಿ ಬದುಕು ಎನ್ನುವುದು ಒಂದು ರೀತಿ ಆತಂಕ ಹುಟ್ಟಿಸುತ್ತದೆ.
ಹೌದು, ಪ್ರಾಚೀನ ಕಾಲಘಟ್ಟದಲ್ಲಿ ವೃದ್ಧಾಪ್ಯ ಅಥವಾ ನಿವೃತ್ತಿ ಜೀವನಕ್ಕಾಗಿ ಜನರು ಹಾತೊರೆಯುತ್ತಿದ್ದರು. ಜೀವಮಾನವೆಲ್ಲ ತಮ್ಮ ಕುಟುಂಬಕ್ಕಾಗಿ ಮೀಸಲಿಟ್ಟ ಬದುಕನ್ನು ವೃದ್ಧಾಪ್ಯದಲ್ಲಿ ಮಕ್ಕಳು, ಮೊಮ್ಮಕ್ಕಳು, ಸಮಾನವಯಸ್ಕರರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆದರೆ, ಇನ್ನೂ ಕೆಲವರು ಜಮೀನು ಕೆಲಸಗಳಲ್ಲಿ ತೊಡುಗವ ಮೂಲಕ ತಮ್ಮ ವೃದ್ಧಾಪ್ಯವನ್ನು ಕಳೆಯುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿದೆ. ಈಗ ಸಾಮಾಜಿಕವಾಗಿ, ಕೌಟುಂಬಿಕವಾಗಿ ಬೆರೆಯುವುದು ಕಡಿಮೆಯಾಗಿದೆ. ಬದಲಾಗುತ್ತಿರುವ ಸಮಾಜಿಕ ಸ್ಥಿತಿಗತಿಯು ನಿವೃತ್ತಿ ಹಂತಕ್ಕೆ ತಲುಪಿದವರಿಗೆ ಮುಂದಿನ ಜೀವನ ಹೇಗೆ ಎಂಬ ಹಲವಾರು ಯೋಚನೆಗಳು ಮೂಡುವಂತೆ ಮಾಡಿ, ಅವರನ್ನು ಖಿನ್ನತೆಗೆ ತಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಿಟೈರ್‌ಮೆಂಟ್ ಡಿಪ್ರೆಶನ್ ಅಥವಾ ನಿವೃತ್ತಿಯ ಖಿನ್ನತೆಯ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಏನಿದು ನಿವೃತ್ತಿಯ ಖಿನ್ನತೆ?
ಯಾವುದೇ ವೃತ್ತಿಯಾಗಲಿ ಒಂದು ನಿರ್ದಿಷ್ಟ ವಯಸ್ಸಿಗೆ ತಲುಪಿದ ನಂತರ ಆ ವ್ಯಕ್ತಿ ನಿವೃತ್ತಿಯಾಗುತ್ತಾನೆ. ಸಾಮಾನ್ಯವಾಗಿ ಭಾರತದಲ್ಲಿ 60 ವರ್ಷವನ್ನು ನಿವೃತ್ತಿಯ ವಯಸ್ಸು ಎಂದು ಅಂದಾಜಿಸಲಾಗಿದೆ. ಆ ವಯಸ್ಸು ದಾಟಿದ ಮೇಲೆ ವ್ಯಕ್ತಿ ಖಾಯಂ ಆಗಿ ವೃತ್ತಿಯಿಂದ ಬಿಡುಗಡೆ ಪಡೆಯುತ್ತಾನೆ. ಆದರೆ ಈ ರೀತಿ ನಿವೃತ್ತಿಯು ಆ ವ್ಯಕ್ತಿಯನ್ನು ತಾನು ಇನ್ನು ಮುಂದೆ ನಿಷ್ಪ್ರಯೋಜಕ ಎನ್ನುವ ಭಾವನೆ ಮೂಡಿಸುವಂತೆ ಮಾಡಬಹುದು. ನಿವೃತ್ತಿಯ ನಂತರ ಒಂದು ರೀತಿಯ ಹತಾಶೆ, ದುಃಖ, ಏಕಾಂಗಿತನ ಇವೆಲ್ಲವೂ ಒಟ್ಟಾಗಿ ಖಿನ್ನತೆಗೆ ದೂಡುತ್ತವೆ. ಇದನ್ನೆ ರಿಟೈರ್ಮೆಂಟ್ ಡಿಪ್ರೆಷನ್ ಅಥವಾ ನಿವೃತ್ತಿ ನಂತರದ ಖಿನ್ನತೆ ಎಂದು ಕರೆಯಲಾಗುತ್ತದೆ.
ನಿವೃತ್ತಿ ನಂತರದ ಖಿನ್ನತೆ ಹೆಚ್ಚಲು ಕಾರಣವೇನು?
ಈ ಸಮಸ್ಯೆಗೆ ಕಾರಣ ಬದಲಾಗುತ್ತಿರುವ ಕಾಲಘಟ್ಟ. ಹೌದು, ದಿನೇ ದಿನೇ ಸಾಮಾಜಿಕ ಬೆರೆಯುವಿಕೆ ಕಡಿಮೆಯಾಗುತ್ತಿದೆ. ನಿವೃತ್ತಿಯ ನಂತರ ಜನರು ಒಂಟಿಯಾಗುತ್ತಿದ್ದಾರೆ. ಕೆಲಸಕ್ಕೂ ಹೋಗಲಾಗದೇ ಮನೆಯಲ್ಲೂ ಜನರಿಲ್ಲದೇ ಒಂಟಿತನ ಕಾಡಬಹುದು. ಸ್ವತಂತ್ರರಾಗಿ ಬದುಕು ನಡೆಸುವ ಆಸೆಯಿಂದಲೂ, ವೃತ್ತಿ ಜೀವನದ ಕಾರಣದಿಂದಲೂ ಹೀಗೆ ನಾನಾ ಕಾರಣಗಳಿಂದ ಇತ್ತೀಚೆಗೆ ಮದುವೆಯಾದ ಬಳಿಕ ಮಕ್ಕಳು ತಮ್ಮ ಪೋಷಕರೊಂದಿಗೆ ಬದುಕು ಸಾಗಿಸಲು ಇಷ್ಟಪಡುವುದಿಲ್ಲ, ಸ್ವಾತಂತ್ರ್ಯರಾಗಿ ಬೇರೆ ಮನೆ ಮಾಡಿಕೊಂಡು ಬದುಕು ಸಾಗಿಸುವ ಯೋಚನೆ ಮಾಡುತ್ತಾರೆ. ಆದರೆ ತಮ್ಮ ಕುಟುಂಬವನ್ನೇ ಗುರಿಯಾಗಿಸಿಕೊಂಡು ತಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ವಯಸ್ಸಿನ ಅರ್ಧ ಭಾಗವನ್ನು ವೃತ್ತಿ ಜೀವನದಲ್ಲೇ ಕಳೆವ ಜನರು ನಂತರದ ದಿನಗಳಲ್ಲಿ ಒಂಟಿಯಾಗಿ ಬಿಡುತ್ತಾರೆ. ತಾವು ಸಂಪಾದಿಸಿದ ಜನ ಸಂಪರ್ಕ ಎಲ್ಲವೂ ನಿವೃತ್ತಿಗೆ ಅಂಚಿಗೆ ಬಂದಾಗ ಏಕಾಏಕಿ ಮರೆಯಾಗುವಾಗ ಒಮ್ಮೆಲೇ ಖಿನ್ನತೆಗೆ ಒಳಗಾಗುವುದು ಸಹಜ.
ನಿವೃತ್ತಿ ನಂತರದ ಖಿನ್ನತೆಯಿಂದ ಎದುರಾಗುವ ಸಮಸ್ಯೆಗಳು
1. ದೈಹಿಕ ಆರೋಗ್ಯ ಸಮಸ್ಯೆಗಳು
2. ಅತಿಯಾದ ಒತ್ತಡದಿಂದ ಬರುವ ಮಧುಮೇಹ
3. ನೆನಪಿನ ಶಕ್ತಿ ಕೊರತೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿಹೀನತೆ
4. ಒಂಟಿತನ
5. ತಮಗೆ ತಾವೇ ಹಾನಿ ಮಾಡಿಕೊಳ್ಳುವುದು
6. ಸಂಬಂಧಿಕರ ನಿರ್ಲಕ್ಷ್ಯತನ
7. ಬೇಸರ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ
ನಿವೃತ್ತಿ ನಂತರದ ಖಿನ್ನತೆಯನ್ನು ತಡೆಗಟ್ಟುವುದು ಹೇಗೆ?
1. ನಿವೃತ್ತಿಯ ನಂತರದ ಜೀವನದ ಕುರಿತು ಮೊದಲೇ ಯೋಜನೆಗಳನ್ನು ರೂಪಿಸಿಕೊಳ್ಳಬೇಕು
2. ನಮ್ಮ ಹಣಕಾಸಿನ ವ್ಯವಸ್ಥೆ, ಭಾವನಾತ್ಮಕ ಮತ್ತು ಮಾನಸಿಕ ಸಂಬಂಧಗಳು ಹೇಗಿರಬೇಕು ಎಂದು ನಿರ್ಧರಿಸಬೇಕು
3. ಪಾರ್ಟ್ ಟೈಮ್ ಕೆಲಸಗಳನ್ನು ಹುಡುಕಿಕೊಳ್ಳುವುದು ಹಾಗೂ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
4. ಸಾಮಾಜಿಕವಾಗಿ ಬೆರೆಯುವುದನ್ನು ಮುಂದುವರಿಸಬೇಕು
5. ವ್ಯಾಯಾಮ, ಯೋಗ, ಮುದ್ರೆ ಹೀಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ತೊಡಗಿಕೊಳ್ಳುವುದು
6. ಸ್ವಯಂ ಸೇವಾ ಕಾರ್ಯಗಳು, ಅರೆಕಾಲಿಕ ಕೆಲಸಗಳು ಅಥವಾ ಮನೆಯಲ್ಲೇ ಟ್ಯೂಷನ್ ಮಾಡುವುದು ಹೀಗೆ ಇತ್ಯಾದಿ ಕೆಲಸಗಳಲ್ಲಿ ನಿರತರಾಗಿರಬೇಕು
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನಿವೃತ್ತಿಯ ನಂತರದ ಖಿನ್ನತೆ ಹೆಚ್ಚಾಗುತ್ತಿರುವುದು ಮುನ್ನೆಲೆಗೆ ಬಂದಿದ್ದು, ನಮ್ಮ ಮನೆಯಲ್ಲೇ ನಿವೃತ್ತಿ ಹೊಂದಿರುವವರು ಅಥವಾ ವಯಸ್ಸಾದವರಿದ್ದರೆ ಈ ಸಲಹೆಗಳು ಉಪಯೋಗಕ್ಕೆ ಬರಬಹುದು. ನಿವೃತ್ತಿಯ ನಂತರದ ಖಿನ್ನತೆ ಸಹಜವಾದರೂ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಇದರಿಂದ ಹೊರ ಬರಲು ಸಾಧ್ಯವಿದೆ.

ವಿಭಾಗ