Smartphone Addiction: ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ? ಸತತ ಮೂರು ದಿನ ಫೋನ್ ಬಳಸಿಲ್ಲ ಅಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Smartphone Addiction: ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ? ಸತತ ಮೂರು ದಿನ ಫೋನ್ ಬಳಸಿಲ್ಲ ಅಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Smartphone Addiction: ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ? ಸತತ ಮೂರು ದಿನ ಫೋನ್ ಬಳಸಿಲ್ಲ ಅಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Mental Health: ನೀವು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್ ಆಗಿದ್ದೀರಾ? ಕೇವಲ ಮೂರೇ ಮೂರು ದಿನ ಫೋನ್ ಬಳಕೆ ಮಾಡೋದು ಬಿಟ್ಟರೆ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ನೋಡಿ.

 ಸತತ ಮೂರು ದಿನ ಫೋನ್ ಬಳಸಿಲ್ಲ ಅಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಸತತ ಮೂರು ದಿನ ಫೋನ್ ಬಳಸಿಲ್ಲ ಅಂದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ

Smartphone Addiction: ಸ್ಮಾರ್ಟ್‌ಫೋನ್‌, ಇಂದು ಜಗತ್ತಿನ ಬಹುತೇಕರ ಸಂಗಾತಿಯಂತಾಗಿದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುವವರೇ. ಮಾತ್ರವಲ್ಲ ಶೇ 80 ರಷ್ಟು ಮಂದಿ ಇದಕ್ಕೆ ಅಡಿಕ್ಟ್ ಆಗಿದ್ದಾರೆ. ಈ ಸ್ಮಾರ್ಟ್‌ಫೋನ್ ನಮ್ಮ ಒತ್ತಡದ ಜೀವನಶೈಲಿಯ ಭಾಗವೂ ಆಗಿದೆ. ಒಂದು ಕ್ಷಣ ಕೂಡ ಫೋನ್ ಇಲ್ಲದೇ ಇರಲು ನಮ್ಮಿಂದ ಸಾಧ್ಯವಿಲ್ಲ, ಅಷ್ಟರ ಮಟ್ಟಿಗೆ ನಾವು ಅದರ ಜೊತೆ ಅಟ್ಯಾಚ್‌ಮೆಂಟ್ ಬೆಳೆಸಿಕೊಂಡಿದ್ದೇವೆ. ಆದರೆ ಸತತ 3 ದಿನಗಳ ಕಾಲ ಸ್ಮಾರ್ಟ್‌ಫೋನ್ ಬಳಸದೇ ಇದ್ದರೆ ಏನಾಗಬಹುದು?

ಅದೆಲ್ಲಾ ಅಸಾಧ್ಯ, ಫೋನ್ ಬಳಸದೇ ಇರಲು ಹೇಗೆ ಸಾಧ್ಯ, ಅದು ನಿರಂತರವಾಗಿ 3 ದಿನಗಳ ಕಾಲ ಫೋನ್‌ ಇಲ್ಲದೇ ಇರಲು ಸಾಧ್ಯವಾಗುವುದೇ ಅಂತೆಲ್ಲಾ ನೀವು ಯೋಚಿಸಬಹುದು. ಆದರೆ ನಿರಂತರವಾಗಿ ಮೂರು ದಿನಗಳ ಕಾಲ ಸ್ಮಾರ್ಟ್‌ಫೋನ್ ಬಳಸಿಲ್ಲ ಎಂದರೆ ನಮ್ಮ ಮನಸ್ಥಿತಿಯೇ ಬದಲಾಗಬಹುದಂತೆ, ಹಾಗಂತ ಇದನ್ನು ನಾವು ಹೇಳುತ್ತಿರುವುದಲ್ಲ, ಇತ್ತೀಚಿನ ಅಧ್ಯಯನವೊಂದು ಈ ವಿಚಾರವನ್ನು ಬಹಿರಂಗ ಮಾಡಿದೆ.

3 ದಿನಗಳ ಕಾಲ ಫೋನ್ ಬಳಸಿಲ್ಲ ಅಂದ್ರೆ ಏನಾಗುತ್ತೆ?

ಇತ್ತೀಚೆಗೆ ಕಂಪ್ಯೂಟರ್ಸ್ ಇನ್ ಹ್ಯೂಮನ್ ಬಿಹೇವಿಯರ್‌ನಲ್ಲಿ ಪ್ರಕಟವಾದ ಮತ್ತು ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದ ಈ ಅಧ್ಯಯನ ವರದಿಯು ಅಲ್ಪಾವಧಿಗೆ ಸ್ಮಾರ್ಟ್‌ಫೋನ್‌ ಬಳಕೆಯನ್ನು ತಪ್ಪಿಸುವುದರಿಂದ ಮೆದುಳಿನ ರಸಾಯನಶಾಸ್ತ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ತಿಳಿಸಿದೆ.

ಈ ಸಂಶೋಧನಗಾಗಿ ಒಂದಿಷ್ಟು ಯುವಕರ ಮೇಲೆ ಪ್ರಯೋಗ ಮಾಡಲಾಗಿತ್ತು. ಅವರಿಗೆ 72 ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸದೇ ಇರಲು ಸೂಚಿಸಲಾಗಿತ್ತು. ಈ ಸಂಶೋಧನೆಯಲ್ಲಿ ಭಾಗವಹಿಸಿದವರು ಸ್ಮಾರ್ಟ್‌ಫೋನ್‌ ಅನ್ನು ಅನಿವಾರ್ಯ ಕೆಲಸ, ದೈನಂದಿನ ಚಟುವಟಿಕೆ ಮತ್ತು ಕುಟುಂಬ ಅಥವಾ ತೀರಾ ಆತ್ಮೀಯರ ಜೊತೆ ಸಂಪರ್ಕದಲ್ಲಿರಲು ಮಾತ್ರ ಬಳಸುವಂತೆ ಕೇಳಲಾಗಿತ್ತು.

ಈ ಮೂರು ದಿನಗಳ ಅವಧಿಯಲ್ಲಿ, ಸಂಶೋಧಕರು ಮಾನಸಿಕ ಪರೀಕ್ಷೆಗಳನ್ನು ನಡೆಸಿದರು ಮತ್ತು ಸ್ಮಾರ್ಟ್‌ಫೋನ್ ಬಳಕೆ ಕಡಿಮೆಯಾಗುವುದರ ಪರಿಣಾಮಗಳನ್ನು ವಿಶ್ಲೇಷಿಸಲು ಕ್ರಿಯಾತ್ಮಕ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಫ್‌ಎಂಆರ್‌ಐ) ಅನ್ನು ಬಳಸಿದರು.

ಈ ಸಂಶೋಧನೆಯಿಂದ ಪ್ರತಿಫಲ ಮತ್ತು ಹಂಬಲಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿನ ಗಮನಾರ್ಹ ಚಟುವಟಿಕೆಯ ಬದಲಾವಣೆಗಳ ಸಂಶೋಧಕರು ಗುರುತಿಸಿದ್ದರು. ಇದು ಮಾದಕ ದ್ರವ್ಯ ಅಥವಾ ಮದ್ಯದ ವ್ಯಸನದಲ್ಲಿ ಕಂಡುಬರುವ ಮಾದರಿಗಳನ್ನು ಹೋಲುತ್ತದೆ. ಅಂದರೆ ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯು ಮಾದಕ ವ್ಯಸನದಂತೆ ಅಂಟಿಕೊಳ್ಳಬಹುದು ಇದು ಸೂಚಿಸುತ್ತದೆ.

ಈ ವಿಚಾರವಾಗಿ ಮಾತನಾಡುವ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಸಲಹೆಗಾರ, ಮನೋವೈದ್ಯ ಡಾ. ಶೌನಕ್ ಅಜಿಂಕ್ಯ, ‘3 ದಿನಗಳ ಕಾಲ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಲ್ಲಿಸುವುದು ಮೆದುಳನ್ನು ಮರುಹೊಂದಿಸಲು, ಗಮನವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಪ್ರಬಲ ಮಾರ್ಗವಾಗಿದೆ‘ ಎಂದು ಹೇಳುತ್ತಾರೆ.

ಡಿಜಿಟಲ್ ಸಾಧನಗಳಿಂದ ನಿಯಮಿತ ವಿರಾಮ ಪಡೆಯುವುದರಿಂದ ನೈಜ-ಪ್ರಪಂಚದ ಸಂಬಂಧಗಳು ವೃದ್ಧಿಯಾಗಬಹುದು ಮತ್ತು ಇದು ಭಾವನಾತ್ಮಕ ಬುದ್ಧಿವಂತಿಕೆ ಹೆಚ್ಚಲು ಕಾರಣವಾಗಬಹುದು. ಇದರಿಂದ ಜನರು ಇದರಿಂದ ಒಬ್ಬರಿಗೊಬ್ಬರು ಮಾತನಾಡುತ್ತಾರೆ, ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಸ್ಮಾರ್ಟ್‌ಫೋನ್‌ ದೂರ ಇರುವುದರಿಂದ ಜನರು ಮುಖಾಮುಖಿಯಾಗಿ ಮಾತನಾಡುತ್ತಾರೆ. ಭಾವನಾತ್ಮಕವಾಗಿ ಹೆಚ್ಚು ಜಾಗೃತರಾಗುತ್ತಾರೆ. ಕುಟುಂಬ, ಸ್ನೇಹಿತರು ಮತ್ತು ಪರಿಚಿತರೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿರುತ್ತಾರೆ. ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯ ಪರಿಣಾಮಗಳು ಮೆದುಳಿನ ಮೇಲೆ ರಚನಾತ್ಮಕ ಮತ್ತು ಕ್ರಿಯಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತವೆ, ವಿಶೇಷವಾಗಿ ಇದು ಗಮನ ಮತ್ತು ಪ್ರಚೋದನೆ ನಿಯಂತ್ರಣಕ್ಕೆ ಕಾರಣವಾದ ಪ್ರದೇಶಗಳಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ನೀಡಿದ ಸಂದರ್ಶನದಲ್ಲಿ ಡಾ. ಶೌನಕ್ ಅಜಿಂಕ್ಯ ಹೇಳಿದ್ದಾರೆ.

ಡಾ. ಶೌನಕ್ ಅವರ ಪ್ರಕಾರ ಸ್ಮಾರ್ಟ್‌ಫೋನ್‌ನಿಂದ ದೂರ ಇರುವುದು ಗುಣಮಟ್ಟದ ನಿದ್ದೆಗೂ ಕಾರಣವಾಗುತ್ತದೆ. ‘ಡಿಜಿಟಲ್ ಡಿಟಾಕ್ಸ್ ರಿಸರ್ಚ್ ಎಂಬ ಶೀರ್ಷಿಕೆಯ 2023ರ ಅಧ್ಯಯನವು ರಾತ್ರಿ ಹೊತ್ತು ಸ್ಮಾರ್ಟ್‌ಫೋನ್‌ನಂತಹ ಸಾಧನಗಳನ್ನು ಅತಿಯಾಗಿ ಬಳಸುವ ಜನರು ಸರಿಯಾಗಿ ನಿದ್ದೆ ಬಾರದೇ ಹೆಣಗಾಡುತ್ತಾರೆ ಎಂಬುದನ್ನು ತೋರಿಸಿದೆ. ಇದಕ್ಕೆ ಸ್ಮಾರ್ಟ್‌ಫೋನ್‌ನಿಂದ ಹೊರ ಹೊಮ್ಮುವ ಬ್ಲೂ ರೇಸ್ ಅಥವಾ ನೀಲಿ ಕಿರಣಗಳು ಕಾರಣ. ಇದು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ ಮತ್ತು ದೇಹದ ನೈಸರ್ಗಿಕ ನಿದ್ರೆಯ ಚಕ್ರದ ಮೇಲೆ ಹಸ್ತಕ್ಷೇಪ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಸ್ಮಾರ್ಟ್‌ಫೋನ್ ಬಳಕೆ ನಿಧಾನಕ್ಕೆ ಕಡಿಮೆ ಮಾಡಲು ಟಿಪ್ಸ್‌

ಮೂರು ದಿನಗಳ ಕಾಲ ಸಂಪೂರ್ಣವಾಗಿ ಸ್ಮಾರ್ಟ್‌ಫೋನ್‌ನಿಂದ ದೂರ ಇರುವುದು ಯಾವಾಗಲೂ ಸಾಧ್ಯವಿಲ್ಲದ ಕಾರಣ ಕ್ರಮೇಣ ಫೋನ್ ಬಳಕೆ ಕಡಿಮೆ ಮಾಡುವತ್ತ ಯೋಚಿಸುವುದು ಮುಖ್ಯ ಎಂದು ಅವರು ಹೇಳುತ್ತಾರೆ. ಫೋನ್ ಬಳಕೆಯನ್ನು ಕಡಿಮೆ ಮಾಡುವುದರಿಂದ ಗಮನಾರ್ಹ ಪ್ರಯೋಜನಗಳನ್ನು ಪಡೆಯಬಹುದು ಎಂದು ಡಾ. ಅಜಿಂಕ್ಯ ಹೇಳುತ್ತಾರೆ. ಸ್ಮಾರ್ಟ್ ಫೋನ್ ಬಳಕೆ ಕಡಿಮೆ ಮಾಡಲು ಅವರು ನೀಡಿರುವ ಸಲಹೆಗಳು ಹೀಗಿವೆ.

ಫೋನ್ ಮುಕ್ತ ಸಮಯ ಹೊಂದಿಸುವುದು: ನಮ್ಮ ದಿನಚರಿಯಲ್ಲಿ ಕೆಲವೊಂದಿಷ್ಟು ಗಂಟೆಗಳ ಕಾಲ ಫೋನ್ ಮುಕ್ತವಾಗಿರುವ ಸಮಯವನ್ನು ಹೊಂದಿಸಿ. ಊಟದ ಸಮಯ, ಮಲಗುವ ಮುಂಚಿನ ಸಮಯ ಹೀಗೆ ಒಂದಿಷ್ಟು ಸಮಯ ಸ್ಮಾರ್ಟ್‌ಫೋನ್‌ನಿಂದ ದೂರವಿರಿ. ಇದನ್ನು ನಿರಂತರವಾಗಿ ಪಾಲಿಸಿ. ಇದರಿಂದ ನಿಧಾನಕ್ಕೆ ನೀವು ಸ್ಮಾರ್ಟ್‌ಫೋನ್ ಬಳಕೆ ಕಡಿಮೆ ಮಾಡುತ್ತೀರಿ.

ಡು ನಾಟ್ ಡಿಸ್ಟರ್ಬ್ ಮೋಡ್‌: ಪದೇ ಪದೇ ಫೋನ್‌ ನೋಡುವ, ನೋಟಿಫಿಕೇಷನ್ ಬಂದಾಗಲೆಲ್ಲಾ ಫೋನ್‌ನಲ್ಲಿ ಇಣುಕುವ ಅಭ್ಯಾಸ ಇದ್ದರೆ ಡು ನಾಟ್ ಡಿಸ್ಟರ್ಬ್ ಮೋಡ್‌ ಆನ್ ಮಾಡಿ ಇಡಿ. ಅವಶ್ಯವಿದ್ದಾಗ ಮಾತ್ರ ಅದನ್ನು ಆಫ್ ಮಾಡಿ.

ಆಫ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಓದುವುದು, ವ್ಯಾಯಾಮ ಮಾಡುವುದು ಅಥವಾ ಹೊರಾಂಗಣದಲ್ಲಿ ಸಮಯ ಕಳೆಯುವಂತಹ ಚಟುವಟಿಕೆಗಳೊಂದಿಗೆ ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಇದರಿಂದಲೂ ಸ್ಮಾರ್ಟ್‌ಫೋನ್‌ನಿಂದ ದೂರವಿರಲು ಸಾಧ್ಯವಾಗುತ್ತದೆ.

ಸಾಮಾಜಿಕ ಮಾಧ್ಯಮ ವಿರಾಮ: ಇತ್ತೀಚಿನ ದಿನಗಳಲ್ಲಿ ಜನರು ಸ್ಮಾರ್ಟ್‌ಫೋನ್‌ಗೆ ಅಂಟಿಕೊಳ್ಳಲು ಒಂದು ಪ್ರಮುಖ ಕಾರಣ ಸ್ಮಾರ್ಟ್‌ಫೋನ್‌. ಸ್ಕ್ರೀನ್ ಟೈಮ್‌ ಮಿತಿಗೊಳಿಸುವ ಮೂಲಕ ಅಥವಾ ತಾತ್ಕಾಲಿಕವಾಗಿ ಅಪ್ಲಿಕೇಶನ್‌ಗಳನ್ನು ಅಳಿಸುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಇದರಿಂದ ನೀವು ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಕಡಿಮೆ ಬಳಸ್ತೀರಿ.

ನಿದ್ರೆಗೆ ಅನುಕೂಲಕರ ದಿನಚರಿ ರೂಪಿಸಿ: ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಮಲಗುವ ಕನಿಷ್ಠ ಒಂದು ಗಂಟೆಯ ಮೊದಲು ಫೋನ್‌ ನೋಡುವುದನ್ನು ತಪ್ಪಿಸಿ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner