ಕನ್ನಡ ಸುದ್ದಿ  /  ಜೀವನಶೈಲಿ  /  ಆತ್ಮಹತ್ಯೆ ತಡೆ ಅಭಿಯಾನ; ಸಾಯುವ ಆಲೋಚನೆ ಬಂದವರು ಸಂಪರ್ಕಿಸಿದಾಗ ಹೀಗೆ ಮಾಡಿ- ಸೈಕಾಲಜಿಸ್ಟ್ ರೂಪಾ ರಾವ್‌ ಸಲಹೆ

ಆತ್ಮಹತ್ಯೆ ತಡೆ ಅಭಿಯಾನ; ಸಾಯುವ ಆಲೋಚನೆ ಬಂದವರು ಸಂಪರ್ಕಿಸಿದಾಗ ಹೀಗೆ ಮಾಡಿ- ಸೈಕಾಲಜಿಸ್ಟ್ ರೂಪಾ ರಾವ್‌ ಸಲಹೆ

ಆತ್ಮಹತ್ಯೆ ತಡೆ ಅಭಿಯಾನ; ಸಂಕಷ್ಟಕ್ಕೆ ಒಳಗಾದವರು, ಗಂಭೀರ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಸಾಯುವ ಆಲೋಚನೆ ಬಂದಾಗ ಯಾರಿಗೆ ಬೇಕಾದರೂ ಕರೆ ಮಾಡಬಹುದು, ಮೆಸೇಜ್ ಕಳುಹಿಸಬಹುದು. ಹಾಗೆ, ಸಾಯುವ ಆಲೋಚನೆ ಬಂದವರು ಸಂಪರ್ಕಿಸಿದಾಗ ಹೀಗೆ ಮಾಡಿ ಎನ್ನುತ್ತ, ಸೈಕಾಲಜಿಸ್ಟ್ ರೂಪಾ ರಾವ್‌ ಕೆಲವು ಸಲಹೆ ಮುಂದಿಟ್ಟಿದ್ದಾರೆ ಗಮನಿಸಿ.

ಆತ್ಮಹತ್ಯೆ ತಡೆ ಅಭಿಯಾನ; ಸಾಯುವ ಆಲೋಚನೆ ಬಂದವರು ಸಂಪರ್ಕಿಸಿದಾಗ ಹೀಗೆ ಮಾಡಿ- ಸೈಕಾಲಜಿಸ್ಟ್ ರೂಪಾ ರಾವ್‌ ಸಲಹೆ (ಸಾಂಕೇತಿಕ ಚಿತ್ರ)
ಆತ್ಮಹತ್ಯೆ ತಡೆ ಅಭಿಯಾನ; ಸಾಯುವ ಆಲೋಚನೆ ಬಂದವರು ಸಂಪರ್ಕಿಸಿದಾಗ ಹೀಗೆ ಮಾಡಿ- ಸೈಕಾಲಜಿಸ್ಟ್ ರೂಪಾ ರಾವ್‌ ಸಲಹೆ (ಸಾಂಕೇತಿಕ ಚಿತ್ರ) (Canva)

ಬೆಂಗಳೂರು: ಎರಡು ದಿನಗಳ ಹಿಂದಿನ ಘಟನೆ. ಕ್ರಿಕೆಟಿಗ ಡೇವಿಡ್ ಜಾನ್ಸನ್ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಅವರದ್ದು ಸಹಜ ಸಾವಲ್ಲ. ಆತ್ಮಹತ್ಯೆ ಮಾಡಿಕೊಂಡಿರುವುದು. ಈ ಸುದ್ದಿ ಕೇಳಿದವರ ಮನಸ್ಸು ಸಹಜವಾಗಿಯೇ ಕಸಿವಿಸಿಗೊಳ್ಳುತ್ತದೆ. ಯಾಕಪ್ಪ ಅವರು ಈ ರೀತಿ ಮಾಡ್ಕೊಂಡ್ರು ಎಂದು ಮರುಗುವವರೇ ಹೆಚ್ಚು.

ಮನಸ್ಸನ್ನು ಗೊಂದಲದ ಗೂಡಾಗಿಸಬಾರದು. ಇನ್ನೇನು ತನ್ನ ಬದುಕಿನಲ್ಲಿ ಇನ್ನು ಮುಂದೆ ಹೋಗಲು ದಾರಿಯೆ ಇಲ್ಲ ಎಂಬ ಭಾವನೆ ಬೆಳೆಸಿಕೊಳ್ಳಬಾರದು. ಸಮಸ್ಯೆ, ಸಂಕಷ್ಟಗಳು ಎದುರಾದಾಗ ಅದಕ್ಕೆ ಪರಿಹಾರ ಹುಡುಕಬೇಕೇ ಹೊರತು, ಸಾವು ಅದಕ್ಕೆ ಪರಿಹಾರವಾಗಲ್ಲ ಎಂಬ ಸ್ಪಷ್ಟ ತಿಳಿವಳಿಕೆ ಎಲ್ಲರಿಗೂ ಇರಬೇಕು. ಇದೇ ವಿಚಾರವನ್ನು ಮಾನಸಿಕ ತಜ್ಞರಾದ ರೂಪಾ ರಾವ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಸ್ತುತಿ ಮಾಡಿರುವುದು ಹೀಗೆ..

ಸಾಯುವ ಆಲೋಚನೆ ಮತ್ತು ನಾವು

"ನನಗೆ ಬೇರೆ ದಾರಿಯೇ‌ ತೋಚುತ್ತಿಲ್ಲ, ಸಾವೊಂದೇ‌ ಕೊನೆಯ‌ ದಾರಿ , ನನ್ನನ್ನು ಬದುಕು ಎಂದು ಹೇಳಬೇಡಿ ಬದಲು ‌ಸುಲಭವಾಗಿ ಸಾಯುವ ದಾರಿ ಕೊಡಿ"

ಟ್ರೆಂಡಿಂಗ್​ ಸುದ್ದಿ

ಹೀಗೇ ಅಂದು ರಾತ್ರಿ ನನ್ನ ಗೂಗಲ್ ಪ್ಲೇಸ್ ಅಕೌಂಟಿಗೆ ಅಪರಿಚಿತರಿಂದ ಮೆಸೇಜ್ ಬಂತು.

ರಾತ್ರಿ ವೇಳೆ. ಸಾಮಾನ್ಯವಾಗಿ ಹನ್ನೊಂದು ಘಂಟೆಯ ಮೇಲೆ ನನ್ನ ಇಂಟರ್ ನೆಟ್ ಫೋನ್ ಆಫ್ ಇರುತ್ತೆ.‌ಆದರೇನೋ ಅಂದು ನಾನೂ ಹಾಗು ನನ್ನ ಡಾಟಾ ಎರಡೂ ಎಚ್ಚರವಿದ್ದೆವು.

ಅವರು ನನ್ನ ಕ್ಲೈಂಟ್ ಅಲ್ಲ. ನಾನು ಕೂಡಲೇ‌ ಮೆಸೇಜು ಮಾಡಿದೆ. "ಆಯಿತು ನನ್ನ ಈ ನಂಬರ್ ಗೆ‌ ಈಗಲೇ ಕಾಲ್ ಮಾಡಿ, ಸುಲಭದ ದಾರಿ ಹೇಳುವೆ" ಅಂತ.

ಕಾಲ್ ಬಂದಿತು. ಆ ಕಡೆಯ‌ವರು ಕರೆ ಮಾಡಿದರು..

ಅವರ ಮನಸು ಬಹಳ ಪ್ರಕ್ಷುಬ್ಧ ಗೊಂಡಿತ್ತು.

ಒಂದು ತಪ್ಪು ನಿರ್ಧಾರ ಮಾಡಿ ಸಂಗಾತಿ ಮತ್ತು ಮಕ್ಕಳ ಕೋಪಕ್ಕೆ, ಅವಹೇಳನಕ್ಕೆ ಗುರಿಯಾಗಿ ಜೀವ ಕಳೆದುಕೊಳ್ಳುವ ಹಂತದಲ್ಲಿದ್ದರು.

ಸಾಯುವುದರಿಂದಾಗುವ ಮತ್ತು ಬದುಕುವುದರಿಂದಾಗುವ ಪ್ರಯೋಜನದ ಪ್ರಯೋಜನಗಳ ಪಟ್ಟಿ ಮಾಡಲು ಹೇಳಿದೆ .ಸಾಯುವ ಹಾಗು ಬದುಕುವ ಅನಿವಾರ್ಯತೆಗಳ ಕುರಿತು ಮಾತಾಡಿದೆ.

ಅರ್ಧ ಘಂಟೆಯ ಮಾತುಕತೆಯ ನಂತರ

"ಆಯಿತು , ಸರಿ ಮೇಡಂ ಧನ್ಯವಾದಗಳು" ಎಂದು ಹೇಳಿ ಫೋನ್ ಇಟ್ಟರು

ನನಗೆ ಆತಂಕ ಹಾಗೇ ಇತ್ತು.

ಬೆಳಗ್ಗೆ ಅವರೇ ಕರೆ ಮಾಡಿದರು.

"ಸಾಯಲು ಸುಲಭ ದಾರಿ ಹೇಳುವೆ ಅಂತ ಹೇಳಿ ಸಾಯುವ ಆಲೋಚನೆಯನ್ನೇ ಕಷ್ಟ ಮಾಡಿ ಬಿಟ್ಟಿರಿ ಮೇಡಮ್. ಇದು ಮೋಸ" ಅಂತ‌ ಹೇಳಿ‌ ಕೊಂಚ ಕಾಲ ಮಾತಾಡಿ ಫೋನ್ ಇಟ್ಟರು.

ಈ‌ ರೀತೀ‌ ಮೆಸೇಜುಗಳು ನನಗೆ ನಿಯತವಾಗಿ ಬರುತ್ತಿರುತ್ತವೆ.

ಒಮ್ಮೆ ಯಾವುದೋ ಹದಿವಯಸಿನವರೊಬ್ಬರು ವಿಷದ ಬಾಟಲ್ ಚಿತ್ರ ಕಳಿಸಿ ಮೇಡಂ ಇದರಿಂದ ಜೀವ ಬೇಗಹೋಗುತ್ತಾ ಎಂದು ಕೇಳಿದ್ದರು.

ಇನ್ನೊಮ್ಮೆ ಒಬ್ಬರು ಜೀವ ಹೋಗಲು ಎಷ್ಟನೇ ಅಂತಸ್ತಿನಿಂದ ಬೀಳಬೇಕು ಎಂದು ಮೆಸೇಜ್ ಮಾಡಿದ್ದರು.

ಈ ರೀತಿ ಮೆಸೇಜ್ ಬಂದಾಗೆಲ್ಲಾ ನಾನು ಮಾತಾಡಿರುವೆ. ಫೇಸ್ಬುಕ್ಕಿನಲ್ಲಿಯೂ ಸಹಾ ಹೀಗೆ ಮೆಸೇಜ್ ಮಾಡಿದವರಿದ್ದಾರೆ.

ನಿಜ ಹೇಳಬೇಕೆಂದರೆ ನಾನೇನು ಇವರ್ಯಾರಿಗೂ ನಾನು ಕೌನ್ಸೆಲಿಂಗ್ ಮಾಡಿರಲಿಲ್ಲ. ಅವರೊಂದಿಗೆ ಮಾತಾಡಿದ್ದೆ ಅಷ್ಟೇ. ಅದು ಯಾರು ಬೇಕಾದರೂ ಮಾಡಬಹುದು.

ಸಾಮಾನ್ಯವಾಗಿ ರಾತ್ರಿ ವೇಳೆ‌ ಅಥವಾ ಒಂಟಿ ಆಗಿದ್ದ ಮನಸು ಬಹಳ‌ ದುರ್ಬಲವಾಗಿರುತ್ತದೆ. ಎಲ್ಲಾ‌ ಸಮಸ್ಯೆಗಳು ಭೂತಾಕಾರವಾಗಿ ನಿಂತಿರುತ್ತವೆ. ಈ ಸಮಸ್ಯೆಗಳಿಂದ ಹೊರಗೆ ಬರಲು‌ ಸಾಧ್ಯವೇ ಇಲ್ಲ ಎಂಬೆಲ್ಲಾ ಆಲೋಚನೆಗಳು ಬಂದಿರುತ್ತವೆ. ಆ‌ ಕ್ಷಣದಲ್ಲಿ ಕೂಡಲೇ ಯಾರಾದರೂ ನಿಮ್ಮ ಆತ್ಮೀಯರು ಅಂದುಕೊಂಡಿರುವವರ ಜೊತೆ‌ ಒಂದಷ್ಟು ಸಮಯ‌ ಮಾತಾಡಿ .‌ಆ ದುರ್ಬಲ ಘಳಿಗೆ ಮಾಯವಾಗಿ ಹೋಗುತ್ತದೆ. ಬದುಕನ್ನು ಇನ್ನೊಂದು ದೃಷ್ಟಿಯಲ್ಲಿ ನೋಡುವ ಅವಕಾಶ ಸಿಗುತ್ತದೆ.

ಮಾಜಿ ಕ್ರಿಕೆಟಿಗರೊಬ್ಬರು 4ನೇ‌ ಮಹಡಿ ಇಂದ ಬಿದ್ದು ಮರಣ ಹೊಂದಿದ ಸುದ್ದಿ ಓದಿದಾಗ ನೆನಪಾದದ್ದು‌ ಮೇಲಿನ ಘಟನೆಗಳು.

ಸಾಯುವ ಆಲೋಚನೆ ಬಂದರೆ….

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ