mental health: ಮಾನಸಿಕ ಒತ್ತಡವೇ? ಈ ಹವ್ಯಾಸಗಳಿಂದ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ತಲುಪಿಸಬಹುದು ನೋಡಿ -mental health the hobbies which equal to meditation that helps to control the stress ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mental Health: ಮಾನಸಿಕ ಒತ್ತಡವೇ? ಈ ಹವ್ಯಾಸಗಳಿಂದ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ತಲುಪಿಸಬಹುದು ನೋಡಿ

mental health: ಮಾನಸಿಕ ಒತ್ತಡವೇ? ಈ ಹವ್ಯಾಸಗಳಿಂದ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ತಲುಪಿಸಬಹುದು ನೋಡಿ

mental health: ಧ್ಯಾನದ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಒತ್ತಡ ನಿವಾರಣೆಗೆ ಧ್ಯಾನವೇ ಮದ್ದು. ಧ್ಯಾನ ಎಂದರೆ ದೀರ್ಘಕಾಲ ಒಂದು ಕಡೆ ಕುಳಿತು ಮನಸ್ಸನ್ನು ಹಿಡಿಟ್ಟುಕೊಳ್ಳುವುದು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ನಮ್ಮ ಕೆಲವೊಂದು ಹವ್ಯಾಸಗಳು ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕರೆದ್ಯೊಯುತ್ತವೆ, ಅವು ಕೂಡ ಧ್ಯಾನದ ಭಾಗವೇ ಆಗಿರುತ್ತವೆ

ಧ್ಯಾನ
ಧ್ಯಾನ (Pexels)

ಒತ್ತಡ ಇಂದಿನ ನಮ್ಮ ಜೀವನಶೈಲಿಯ ಭಾಗವಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಒತ್ತಡವಿಲ್ಲದೇ ಬದುಕುವವರಿಲ್ಲ. ಒತ್ತಡವನ್ನು ಜೀವನಸಂಗಾತಿಯನ್ನಾಗಿಸಿಕೊಂಡ ನಮಗೆ ಹಲವು ಕಾಯಿಲೆಗಳು ವರವಾಗಿ ಬಂದಿವೆ. ಇಂತಹ ಒತ್ತಡ ನಮ್ಮ ಬದುಕನ್ನು ದುರ್ಬಲಗೊಳಿಸುತ್ತಿರುವುದು ಸುಳ್ಳಲ್ಲ.

ಹಾಗಾದರೆ ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಧ್ಯಾನದ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಒತ್ತಡ ನಿವಾರಣೆಗೆ ಧ್ಯಾನವೇ ಮದ್ದು. ಧ್ಯಾನ ಎಂದರೆ ದೀರ್ಘಕಾಲ ಒಂದು ಕಡೆ ಕುಳಿತು ಮನಸ್ಸನ್ನು ಹಿಡಿಟ್ಟುಕೊಳ್ಳುವುದು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ನಮ್ಮ ಕೆಲವೊಂದು ಹವ್ಯಾಸಗಳು ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕರೆದ್ಯೊಯುತ್ತವೆ, ಅವು ಕೂಡ ಧ್ಯಾನದ ಭಾಗವೇ ಆಗಿರುತ್ತವೆ ಎನ್ನುತ್ತಾರೆ ತಜ್ಞರು. ಇಂತಹ ಕೆಲವು ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ಧ್ಯಾನಕ್ಕೆ ಪೂರಕ ಎನ್ನಿಸುವ ಕೆಲವು ಹವ್ಯಾಸಗಳು ಇವುಗಳು ನೋಡಿ.

ವಾಕಿಂಗ್‌

ವಾಕಿಂಗ್‌ ಮಾಡುವುದು ಕೂಡ ಒಂದು ಬಗೆಯ ಧ್ಯಾನ. ವಾಕಿಂಗ್‌ ಮಾಡುವಾಗ ನಾವು ನಡೆಯುವುದು ಬಿಟ್ಟು ಬೇರೆ ಕೆಲಸ ಮಾಡುವುದಿಲ್ಲ. ಕಾಲು ಮತ್ತು ನೆಲದ ನಡುವೆ ಸಂಯೋಜನೆ ಇರುತ್ತದೆ. ಕಾಲು ಹೆಜ್ಜೆ ಹಾಕುತ್ತಾ ಸಾಗುತ್ತದೆ. ಆಗ ಮನಸ್ಸು ಕಾಲಿನ ಹದದೊಂದಿಗೆ ಮುಂದೆ ಸಾಗುತ್ತಲೇ ಇರುತ್ತದೆ. ಇದರಿಂದ ಮನಸ್ಸು ಹಾಗೂ ಕಾಲಿನ ನಡುವೆ ಬೇರೆ ಯೋಚನೆ ಸುಳಿಯದೇ ಮನಸ್ಸನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕಳೆದು ಹೋಗುವಂತೆ ಮಾಡಬಹುದು.

ಪ್ರಕೃತಿಯ ವಿಸ್ಮಯಗಳೊಂದಿಗೆ ಕಳೆದು ಹೋಗುವುದು

ಪ್ರಕೃತಿಯ ನಡುವೆ ಸಮಯ ಕಳೆಯವುದರಿಂದ ಉತ್ತಮ ಧ್ಯಾನಸ್ಥ ಸ್ಥಿತಿಯನ್ನು ತಲುಪಬಹುದು. ಪ್ರಕೃತಿ ಎನ್ನುವುದು ವಿಸ್ಮಯಗಳ ಆಗರ. ಹಕ್ಕಿಯ ಚಿಲಿಪಿಲಿ, ಗಾಳಿಗೆ ಮರದ ಎಲೆ ಅದುರುವುದು, ಪ್ರಾಣಿಗಳ ಹೂಂಕಾರ, ಚಿಟ್ಟೆಗಳ ಹಾರಾಟ ಈ ಎಲ್ಲವನ್ನೂ ನೋಡುತ್ತಾ ನೋಡುತ್ತಾ ಮನಸ್ಸು ಧ್ಯಾನಸ್ಥ ಸ್ಥಿತಿ ತಲುಪದೇ ಇರದು. ಹಾಗಾಗಿ ನಮ್ಮ ಒತ್ತಡ, ಜಂಜಾಟದಿಂದ ದೂರ ಉಳಿಯಬೇಕು ಎಂದರೆ ಪ್ರಕೃತಿಯ ನಡುವೆ ಕಳೆದು ಹೋಗಬೇಕು.

ಮನೆಗೆಲಸ ಮಾಡುವುದು

ಒತ್ತಡ ನಿವಾರಣೆಗೆ ಮನೆಗೆಲಸ ಮಾಡುವುದು ಉತ್ತಮ ಸಮಾಧಾನ. ವಾರವೆಲ್ಲಾ ಕಚೇರಿ, ಕೆಲಸ, ಟ್ರಾಫಿಕ್‌, ವಾಹನಗಳ ಸದ್ದು-ಗದ್ದಲಗಳ ನಡುವೆ ಮನಸ್ಸು ಹೈರಾಣಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನಾವು ವಾರದಲ್ಲಿ ಒಮ್ಮೆ ಮನೆಗೆಲಸ ಮಾಡಬೇಕು. ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುವುದು, ಬಟ್ಟೆ ತೊಳೆಯುವುದು, ಬಟ್ಟೆಗಳನ್ನು ಜೋಡಿಸಿ ಇಡುವುದು ಈ ಕೆಲಸಗಳಿಂದಲೂ ಮನಸ್ಸನ್ನು ಒತ್ತಡದಿಂದ ಹೊರಬರುವಂತೆ ಮಾಡಬಹುದು.

ಹೊಸತನ್ನು ಕಲಿಯುವುದು

ಕೆಲಸ, ಹವ್ಯಾಸ ಯಾವುದೇ ಇರಲಿ ಹೊಸತನ್ನು ಕಲಿಯುವಾಗ ಮನಸ್ಸಿನ ಸಂಪೂರ್ಣ ಗಮನ ಆ ಕೆಲಸದ ಮೇಲಿರುತ್ತದೆ. ಒಂದು ವಿಷಯದ ಮೇಲೆ ದೀರ್ಘಕಾಲ ಮನಸ್ಸನ್ನು ಹಿಡಿದಿಡುವುದು ಕೂಡ ಧ್ಯಾನದ ಸ್ಥಿತಿ. ಹಾಗಾಗಿ ಪೇಂಟಿಂಗ್‌, ಡ್ರಾಯಿಂಗ್‌, ಪುಸ್ತಕ ಓದುವುದು, ಹೊಸ ಹೊಸ ಅಡುಗೆ ವಿಧಾನಗಳನ್ನು ಅಭ್ಯಾಸ ಮಾಡುವುದು ಈ ಮೂಲಕ ಮನಸ್ಸನ್ನು ಧ್ಯಾನ ಸ್ಥಿತಿಗೆ ತಲುಪಿಸಬಹುದು. ಇದರಿಂದ ಮನಸ್ಸು ನಿರಾಳವಾಗಿಯೂ ಇರುತ್ತದೆ.

ಕಿಟಕಿಯಿಂದ ಹೊರಗೆ ದೀರ್ಘದೃಷ್ಟಿ ಹರಿಸುವುದು

ಮನಸ್ಸಿಗೆ ತೀರ ಒತ್ತಡ ಎನ್ನಿಸಿದಾಗ ನಾವು ಕುಳಿತ ಸ್ಥಳದಿಂದಲೇ ಕಿಟಕಿಯ ಹೊರಗೆ ದೀರ್ಘ ನೋಟ ಹರಿಸಬೇಕು. ಹೊರಗಿನ ಗಿಡ, ಮರ, ಹೂ-ಬಳ್ಳಿಗಳನ್ನು ನೋಡುತ್ತಾ ಮೈ ಮರೆಯಬೇಕು. ಪ್ರಕೃತಿಯ ಹಸಿರಿಗೆ ಎಂತಹ ನೋವು, ದುಃಖವನ್ನಾದರೂ ಮರೆಸುವ ಶಕ್ತಿ ಇದೆ. ಕಿಟಕಿಯ ಮೂಲಕ ಹೊರಗೆ ಕಣ್ಣು ಹಾಯಿಸಿದಾಗ ಬೀದಿಯಲ್ಲಿ ಹೋಗುವವರು, ಹೂ ಮಾರುವವರು, ತರಕಾರಿ ವ್ಯಾಪಾರಿ, ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು ಹೀಗೆ ಏನು ಕಾಣಿಸುತ್ತದೆಯೋ ಅದರ ಮೇಲೆ ಗಮನ ಹರಿಸುವ ಮೂಲಕ ಮನಸ್ಸನ್ನು ತಿಳಿಗೊಳಿಸಬಹುದು.

ಬರವಣಿಗೆ

ಬರವಣಿಗೆಗೆ ಮನಸ್ಸನ್ನು ಧ್ಯಾನಕ್ಕೆ ಕರೆದ್ಯೊಯುವ ಶಕ್ತಿ ಇದೆ. ಒಂದು ಪುಸಕ್ತ, ಪೆನ್ನು ಹಿಡಿದು ಮನಸ್ಸಿಗೆ ತೋಚಿದ್ದನ್ನು ಮರೆಯುತ್ತಾ ಹೋಗಬೇಕು. ಮನದ ಅನಿಸಿಕೆಗಳನ್ನು ಪುಸ್ತಕದಲ್ಲಿ ಗೀಚುತ್ತಾ ಹೋಗಬೇಕು. ನಮ್ಮ ಮನದ ವಿಷಯಗಳನ್ನು ಬರೆಯುತ್ತಾ ಬರೆಯುತ್ತಾ ನಮ್ಮ ಬಗ್ಗೆ ನಮಗೆ ಅರಿವಿಲ್ಲದೇ ತಿಳಿದುಕೊಳ್ಳುತ್ತಾ ಹೋಗುತ್ತೇವೆ. ಯಾವುದೇ ಗೊಂದಲವಿಲ್ಲದೆ, ಒತ್ತಡವಿಲ್ಲದೆ, ಒತ್ತಾಯವಿಲ್ಲದೆ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುತ್ತಾ ಹೋಗುವುದು ಕೂಡ ಒತ್ತಡ ನಿವಾರಿಸುವ ಧ್ಯಾನ ಮಾರ್ಗವಾಗಿದೆ.

ರಂಗೋಲಿ ಹಾಕುವುದು, ಚಿತ್ರ ಬಿಡಿಸುವುದು

ಚಿತ್ರ ಬಿಡುಸುವುದು ಅಥವಾ ರಂಗೋಲಿ ಹಾಕುವುದು ತುಂಬಾ ಸುಲಭದ ಕೆಲಸ ಎನ್ನಿಸಬಹುದು. ಅಲ್ಲದೆ ಇದನ್ನು ಯಾರು ಬೇಕಾದರೂ ಮಾಡಬಹುದು ಎನ್ನಬಹುದು. ಆದರೆ ಇದು ನಮ್ಮನ್ನು ಧ್ಯಾನದ ಉತ್ತುಂಗ ಸ್ಥಿತಿಗೆ ಕರೆದ್ಯೊಯಲು ಸಾಧ್ಯ. ಚಿತ್ರ ಬಿಡಿಸುವಾಗ ಸಂಪೂರ್ಣ ನಮ್ಮ ಗಮನ ಚಿತ್ರದ ಮೇಲೆ ಕೇಂದ್ರಿಕರಿಸಿರುತ್ತದೆ. ಕೊಂಚ ಗಮನ ಆಚೆ ಈಚೆ ಹೋದರು ಎಲ್ಲಿ ಚಿತ್ರ ಅಂದ ಕೆಡುವುದೋ ಅಂದುಕೊಂಡು ಗಮನ ಹರಿಸಿ ಬಿಡಿಸುತ್ತೇವೆ. ಈ ಗಮನವೇ ಧ್ಯಾನಸ್ಥ ಸ್ಥಿತಿ. ಇದರಿಂದಲೂ ಒತ್ತಡ ನಿವಾರಿಸಿಕೊಳ್ಳಬಹುದು.

ಸಿನಿಮಾ ನೋಡುವುದು

ಸಿನಿಮಾ ನೋಡುವುದು ಬಹಳಷ್ಟು ಮಂದಿಗೆ ನೆಚ್ಚಿನ ಹವ್ಯಾಸ. ಆದರೆ ಈ ಹವ್ಯಾಸವು ಧ್ಯಾನದಂತೆ. ಸಿನಿಮಾ ನೋಡುತ್ತಾ ನೋಡುತ್ತಾ ನಾವು ನಮ್ಮ ಇಹವನ್ನು ಮರೆತು ಸಿನಿಮಾದೊಳಗೆ ತಲ್ಲೀನರಾಗುತ್ತದೆ. ಪ್ರತಿ ಪಾತ್ರವನ್ನು ನಮ್ಮೊಳಗೆ ಕಲ್ಪಿಸಿಕೊಂಡು ಹಾಗೇ ಆಳಕ್ಕೆ ಇಳಿಯುತ್ತೇವೆ. ಮನಸ್ಸಿನ ಗೊಂದಲ, ದುಃಖ, ದುಮ್ಮಾನಗಳನ್ನೆಲ್ಲಾ ಮರೆತು ಒಂದಿಷ್ಟು ಗಂಟೆಗಳ ಕಾಲ ಹೊಸ ಪ್ರಪಂಚದಲ್ಲಿ ಮೈ ಮರೆಯುತ್ತೇವೆ. ಇದು ಕೂಡ ಧ್ಯಾನದ ಪರಿ. ಹಾಗಾಗಿ ಸಿನಿಮಾ ನೋಡುವ ಹವ್ಯಾಸವನ್ನೂ ಧ್ಯಾನ ಎನ್ನಬಹುದು.

mysore-dasara_Entry_Point