Crying Dreams: ಕನಸಲ್ಲಿ ಅತ್ತು ಎಚ್ಚರವಾದಾಗ ಕಣ್ತುಂಬ ಕಣ್ಣೀರು; ಈ ಕನಸಿನ ಹಿಂದೆ ಇದೆ 10 ಕಾರಣಗಳು-mental health tips 10 reasons behind cry in sleep why it may happen trauma to depression arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Crying Dreams: ಕನಸಲ್ಲಿ ಅತ್ತು ಎಚ್ಚರವಾದಾಗ ಕಣ್ತುಂಬ ಕಣ್ಣೀರು; ಈ ಕನಸಿನ ಹಿಂದೆ ಇದೆ 10 ಕಾರಣಗಳು

Crying Dreams: ಕನಸಲ್ಲಿ ಅತ್ತು ಎಚ್ಚರವಾದಾಗ ಕಣ್ತುಂಬ ಕಣ್ಣೀರು; ಈ ಕನಸಿನ ಹಿಂದೆ ಇದೆ 10 ಕಾರಣಗಳು

ನಿದ್ದೆಯಲ್ಲಿ ಅಳುವುದು ಮಾನಸಿಕ ಆಘಾತ, ಆತಂಕ, ಅಥವಾ ಖಿನ್ನತೆಯನ್ನು ಸೂಚಿಸುತ್ತದೆ ಎಂದು ತಜ್ಣರು ಅಭಿಪ್ರಾಯ ಪಡುತ್ತಾರೆ. ಅಷ್ಟೇ ಅಲ್ಲದೆ ಇದು ನೀವು ಬಹಳ ಕಾಲದಿಂದ ನಿಮ್ಮೊಳಗೆ ಅಡಗಿಸಿಟ್ಟುಕೊಂಡಿರುವ ನೋವನ್ನು ಕಣ್ಣೀರಿನ ಮೂಲಕ ಹೊರಹಾಕಬಹುದು. (ಬರಹ: ಅರ್ಚನಾ ವಿ.ಭಟ್)

Crying Dreams: ಕನಸಲ್ಲಿ ಅತ್ತು ಎಚ್ಚರವಾದಾಗ ಕಣ್ತುಂಬ ಕಣ್ಣೀರು; ಈ ಕನಸಿನ ಹಿಂದೆ ಇದೆ 10 ಕಾರಣಗಳು
Crying Dreams: ಕನಸಲ್ಲಿ ಅತ್ತು ಎಚ್ಚರವಾದಾಗ ಕಣ್ತುಂಬ ಕಣ್ಣೀರು; ಈ ಕನಸಿನ ಹಿಂದೆ ಇದೆ 10 ಕಾರಣಗಳು (Pixabay)

ನೀವು ಕೇಳಿರಬಹುದು ’ಇಂದು ನಾನು ನಿದ್ದೆಯಲ್ಲಿ ಅಳುತ್ತಿದ್ದೆ, ಎಚ್ಚರವಾದಾಗ ಕಣ್ತುಂಬಾ ನೀರು, ಇದರಿಂದ ನಮ್ಮ ಮನೆಯವರೆಲ್ಲಾ ಚಿಂತಿಸುವಂತಾಯಿತು. ಯಾವುದಕ್ಕೆ ನಾನು ಅಳುತ್ತಿದ್ದೆ ಎಂಬುದೇ ನನಗೆ ಗೊತ್ತಾಗಲಿಲ್ಲ’ ಹೀಗೆ ಹೇಳುವುದನ್ನು ನೀವು ಕೇಳಿರಬಹುದು. ಬಹಳಷ್ಟು ಜನರಿಗೆ ಇದರ ಅಸಲಿ ಕಾರಣ ತಿಳಿದಿರುವುದೇ ಇಲ್ಲ. ಹಾಗೆ ಬಹಳಷ್ಟು ಸಂದರ್ಭದಲ್ಲಿ ಕಾರಣವನ್ನು ಹುಡುಕಲು ಸಾಧ್ಯವಿಲ್ಲ. ನಿಮಗೆ ದುಃಸ್ವಪ್ನಗಳು ಅಥವಾ ಕೆಟ್ಟ ಕನಸುಗಳು ಆಗಾಗ ಬೀಳಬಹುದು. ಆದರೆ ಪದೇ ಪದೇ ನಿದ್ದೆಯಲ್ಲಿ ಅಳುವುದು ಮಾನಸಿಕ ಆರೋಗ್ಯಕ್ಕೆ ಉತ್ತಮವಲ್ಲ ಎಂದು ತಜ್ಣರು ಸಲಹೆ ನೀಡುತ್ತಾರೆ. ಅಳುತ್ತಾ ನಿದ್ದೆಯಿಂದ ಎಚ್ಚರವಾಗುವುದು ವ್ಯಕ್ತಿಯನ್ನು ನಿಶ್ಯಕ್ತರನ್ನಾಗಿಸುತ್ತದೆ, ಮತ್ತು ಒತ್ತಡ, ಆತಂಕಗಳಿಗೆ ಕಾರಣವಾಗುತ್ತವೆ. ನಿದ್ದೆಯಲ್ಲಿ ಅಳುವುದು ಆಘಾತ, ಮಾನಸಿಕ ಒತ್ತಡ, ಖಿನ್ನತೆಯನ್ನು ಸೂಚಿಸುತ್ತದೆ ಎಂಬುದು ಗೇಟ್ ವೇ ಆಫ್ ಹೀಲಿಂಗ್ ನ ಸೈಕಾಲಜಿಸ್ಟ್ ಆದ ಡಾ. ಚಂದಾನಿ ಅಭಿಪ್ರಾಯ ಪಡುತ್ತಾರೆ.

ಕನಸಿನಲ್ಲಿ ಅತ್ತು ಎಚ್ಚರವಾಗಲು ಕಾರಣಗಳು

1) ದುಃಸ್ವಪ್ನಗಳು: ಕನಸಿನಲ್ಲಿ ಅತ್ತು ಎಚ್ಚರವಾಗಲು ಅನೇಕ ಕಾರಣಗಳಿವೆ. ಆದರೆ ಪ್ರಮುಖವಾಗಿ ದುಃಸ್ವಪ್ನಗಳೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಕನಸಿನಲ್ಲಿ ಆಘಾತ ನೀಡುವ, ಆತಂಕ ಸೃಷ್ಟಿಸುವ ಮತ್ತು ಭಯ ಹುಟ್ಟಿಸುವ ಸಂಗತಿಗಳಿದ್ದರೆ ಅದು ಒತ್ತಡವನ್ನು ಹೆಚ್ಚಿಸಿ ಕಣ್ಣೀರನ್ನು ತರಿಸುತ್ತದೆ. ಇದು ಮಾನಸಿಕ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗುವ ಸೂಚನೆಯೂ ಆಗಿರಬಹುದು.

2) ಜೀವನದಲ್ಲಿ ನಡೆದ ಆಘಾತಗಳು: ಕನಸಿನಲ್ಲಿ ಅಳಲು ಇತ್ತೀಚೆಗೆ ಅಥವಾ ಭೂತಕಾಲದಲ್ಲಿ ನಡೆದ ಕೆಲವು ಅಹಿತ ಘಟನೆ ಅಥವಾ ಆಘಾತಗಳು ಕಾರಣವಾಗಿರಬಹುದು. ಅದು ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದರೆ ಆಗಲೂ ಕನಸಿನಲ್ಲಿ ಅಳು ಬರಬಹುದು. ಆ ಕಣ್ಣೀರು ಸಮಸ್ಯೆ ಬಗೆಹರಿಸಿಕೊಳ್ಳಲು ತಜ್ಞರ ಸಹಾಯ ಪಡೆಯಬೇಕು ಎಂಬುದನ್ನು ಅದು ಸೂಚಿಸಬಹುದು.

3) ಪ್ರೀತಿ ಪಾತ್ರರನ್ನು ಕಳೆದುಕೊಂಡ ನೆನಪು: ನೀವು ಅತಿಯಾಗಿ ಪ್ರೀತಿಸುತ್ತಿದ್ದವರನ್ನು ಕಳೆದುಕೊಂಡಾಗಲೂ ಕನಸಿನಲ್ಲಿ ಅಳು ಬಂದು ಎಚ್ಚರವಾಗಬಹುದು. ದುಃಖವನ್ನು ತಡೆಯಲು ಆಗದಿದ್ದಾಗ ಈ ರೀತಿ ಯಾಗುತ್ತದೆ. ಅದು ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

4) ಆತಂಕ ಮತ್ತು ಖಿನ್ನತೆ: ದೀರ್ಘಕಾಲದಿಂದ ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರೆ ಈ ರೀತಿಯ ಕನಸು ಕಾಣುವ ಸಾಧ್ಯತೆಯಿದೆ. ಇದು ನಿಮ್ಮ ನಿದ್ದೆಗೆ ಅಡ್ಡಿಪಡಿಸಬಹುದು. ಪದೇ ಪದೇ ಅಳುತ್ತಾ ಎಚ್ಚರಗೊಳ್ಳುವುದು ಮಾನಸಿಕ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.

5) ಭಾವನೆಗಳ ನಿಗ್ರಹ: ಕೆಲವರು ದಿನವಿಡೀ ತಮ್ಮ ಭಾವನೆಗಳನ್ನು ನಿಗ್ರಹ ಮಾಡುತ್ತಾರೆ. ಆ ಸಂವೇದನೆಗಳನ್ನು ನಮ್ಮ ಮಿದುಳು ರಾತ್ರಿಯಲ್ಲಿ ಹೊರಹಾಕುತ್ತದೆ. ನಿದ್ದೆಯಿಂದ ಏಳುವಾಗ ಕಣ್ತುಂಬಿರುವುದು ನೀವು ನಿಮ್ಮ ಭಾವನೆಗಳನ್ನು ತಡೆಹಿಡಿಯುತ್ತಿರುವಿರಿ ಎಂಬುದನ್ನು ಸೂಚಿಸುತ್ತದೆ.

6) ಒತ್ತಡ: ಅತಿಯಾದ ಒತ್ತಡ ಮತ್ತು ನಿರಂತರ ಕೆಲಸಗಳು ನಿಮ್ಮ ನಿದ್ರೆಯ ಮಾದರಿಗಳಿಗೆ ಅಡ್ಡಿಪಡಿಸಬಹುದು. ಆ ಒತ್ತಡವು ಭಾವನಾತ್ಮಕವಾಗಿ ನಿಮ್ಮನ್ನು ಕಾಡಬಹುದು. ಅದು ನೀವು ನಿದ್ದೆ ಮಾಡುವಾಗ ಅಳುವಿನ ರೂಪದಲ್ಲಿ ಹೊರಬರಬಹುದು.

7) ಔಷಧಗಳು: ಕೆಲವು ಔಷಧಗಳು ನಿದ್ದೆಗೆ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ಯಾವುದೇ ಔಷಧಿಗಳ ಪರಿಣಾಮದ ಬಗ್ಗೆ ಜ್ಞಾನವನ್ನು ಹೊಂದಿರುವುದು ಅತಿ ಮುಖ್ಯವಾಗಿದೆ.

8) ಮೂಡ್‌ ಏರಿಳಿತಗಳು: ವಿಪರೀತ ಮೂಡ್‌ ಸ್ವಿಂಗ್‌ಗಳು ಮಾನಸಿಕ ಆನಾರೋಗ್ಯದ ಲಕ್ಷಣವಾಗಿದೆ. ಅದು ನಿಮ್ಮ ಕನಸು ಮತ್ತು ಎಚ್ಚರಗೊಳ್ಳುವುದರ ಮೇಲೆ ಭಾವನಾತ್ಮಕ ಪರಿಣಾಮ ಬೀರಬಹುದು.

9) ನಿದ್ರೆಯ ಸಮಸ್ಯೆ: ಕೆಲವರು ನಿದ್ರೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಉಸಿರುಕಟ್ಟುವಿಕೆ, ನಿದ್ರಾಹೀನತೆ ಮತ್ತು ರೆಸ್ಟ್‌ಲೆಸ್‌ ಲೆಗ್ಸ್‌ ಸಿಂಡ್ರೋಮ್‌ ನಂತಹ ಕೆಲವು ಪರಿಸ್ಥಿತಿಗಳು ಕನಸಿನಲ್ಲಿ ಅಳಲು ಕಾರಣವಾಗಿರಬಹುದು. ಅವು ಸ್ಲೀಪ್‌ ಸೈಕಲ್‌ಗಳಿಗೆ ಅಡ್ಡಿಪಡಿಸುತ್ತವೆ. ಅದರಿಂದಾಗಿ ನೀವು ಎಚ್ಚರವಾದಾಗ ದುಃಖವನ್ನು ಉಂಟುಮಾಡಬಹುದು.

10) ಮಾನಸಿಕ ಹೊಂದಾಣಿಕೆ: ಕೆಲವೊಮ್ಮೆ ನೀವು ಎಚ್ಚರವಾದಾಗ ಅಳುವುದು ನಿಮ್ಮ ಮನಸ್ಸನ್ನು ಸಮಸ್ಥಿತಿಗೆ ತರುವ ಮಾರ್ಗವಾಗಿರಬಹುದು. ಅದು ನಿಮ್ಮ ಮನಸ್ಸಿನಲ್ಲಿನ ಭಾವನೆಗಳನ್ನು ಹೊರಹಾಕುವ ದಾರಿಯಾಗಿರಬಹುದು.

ಆಗಾಗ ನಿದ್ದೆಯಿಂದ ಅಳುತ್ತಾ ಎಚ್ಚರಗೊಳ್ಳುವುದು ಮಾನಸಿಕ ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ. ಚಿಂತೆ, ಒತ್ತಡ, ಖಿನ್ನತೆ ಮುಂತಾದವುಗಳಿಂದ ನಿಮ್ಮ ಮನಸ್ಸು ಘಾಸಿಗೊಂಡಿರುವುದನ್ನು ಸೂಚಿಸುತ್ತದೆ. ಅದಕ್ಕೆ ತಜ್ಞ ವೈದ್ಯರ ಮತ್ತು ಆಪ್ತಸಮಾಲೋಚಕರ ಅಗತ್ಯವಿರುತ್ತದೆ. ಸೂಕ್ತ ಔಷಧೋಪಚಾರಗಳಿಂದ ಭಾವನಾತ್ಮಕ ಸಮತೋಲನವನ್ನು ಸಾಧಿಸಲು ಸಾಧ್ಯವಾಗುತ್ತದೆ.