ಈ 7 ಲಕ್ಷಣಗಳಿದ್ರೆ ನಿಮ್ಮದು ಕೋತಿ ಮನಸ್ಸು ಅಂತ ಅರ್ಥ, ನೆಮ್ಮದಿ ಹುಡುಕಾಟಕ್ಕೂ ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಈ 7 ಲಕ್ಷಣಗಳಿದ್ರೆ ನಿಮ್ಮದು ಕೋತಿ ಮನಸ್ಸು ಅಂತ ಅರ್ಥ, ನೆಮ್ಮದಿ ಹುಡುಕಾಟಕ್ಕೂ ಇಲ್ಲಿದೆ ಟಿಪ್ಸ್

ಈ 7 ಲಕ್ಷಣಗಳಿದ್ರೆ ನಿಮ್ಮದು ಕೋತಿ ಮನಸ್ಸು ಅಂತ ಅರ್ಥ, ನೆಮ್ಮದಿ ಹುಡುಕಾಟಕ್ಕೂ ಇಲ್ಲಿದೆ ಟಿಪ್ಸ್

ಮಂಗಗಳನ್ನ ನೋಡಿದೀರಲ್ಲ. ಒಂದೆಡೆ ಸುಮ್ಮನೆ ಕುಳಿತುಕೊಳ್ಳೋದೇ ಇಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೇ ಜಿಗಿಯುತ್ತಲೇ ಇರುತ್ತದೆ. ಕೆಲ ಮನುಷ್ಯರ ಆಲೋಚನೆಗಳು ಕೂಡ ಹೀಗೆ ಚಂಚಲವಾಗಿರುತ್ತದೆ. ಈ 7 ಲಕ್ಷಣಗಳಿದ್ರೆ ನಿಮ್ಮದು ಕೋತಿ ಮನಸ್ಸು ಅಂತ ಅರ್ಥ..

ಕೋತಿ ಮನಸ್ಸು  (ಪ್ರಾತಿನಿಧಿಕ ಚಿತ್ರ)
ಕೋತಿ ಮನಸ್ಸು (ಪ್ರಾತಿನಿಧಿಕ ಚಿತ್ರ)

ನಿಮ್ಮದು ಕೋತಿ ಮನಸ್ಸಾ? ಕೋತಿ ಮನಸ್ಸು ಅಂದ್ರೆ ಏನು ಅಂದುಕೊಂಡ್ರಿ? ಒಬ್ಬರಿಗೆ ಒಂದು ನಿರ್ದಿಷ್ಟ ವಿಷಯದ ಮೇಲೆ ದೀರ್ಘಕಾಲ ಗಮನ ಕೇಂದ್ರೀಕರಿಸಲು ಸಾಧ್ಯವಾಗದ ಸ್ಥಿತಿಯನ್ನ ಕೋತಿ ಮನಸ್ಸು ಎಂದು ಕರೆಯಲಾಗುತ್ತದೆ. ನಿಮ್ಮ ಮನಸ್ಸು ತುಂಬಾ ಚಂಚಲವಾಗಿದ್ರೆ ಅದೂ ಕೂಡ ಕೋತಿ ಮನಸೇ. ಮಂಗಗಳನ್ನ ನೋಡಿದೀರಲ್ಲ. ಒಂದೆಡೆ ಸುಮ್ಮನೆ ಕುಳಿತುಕೊಳ್ಳೋದೇ ಇಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೇ ಜಿಗಿಯುತ್ತಲೇ ಇರುತ್ತದೆ. ಮಂಗನ ಈ ಸ್ವಭಾವವನ್ನೇ ಮನುಷ್ಯನ ಮನಸ್ಸಿಗೂ ಹೋಲಿಕೆ ಮಾಡಿ ಕೋತಿ ಮನಸ್ಸು ಎಂದು ಕರೆಯಲಾಗುತ್ತದೆ. ಈ ಕೆಳಗಿನ 7 ಲಕ್ಷಣಗಳಿದ್ರೆ ನಿಮ್ಮದು ಕೂಡ ಕೋತಿ ಮನಸ್ಸು ಎಂದರ್ಥ. ಇದರಿಂದ ಹೊರಬಂದು ನೆಮ್ಮದಿಯಾಗಿರಲು ಪರಿಹಾರವೂ ಇಲ್ಲಿದೆ.

1) ಚದುರಿದ ಆಲೋಚನೆಗಳು: ನೀವು ಒಂದೇ ಬಾರಿಗೆ ಬೇರೆ ಬೇರೆ ವಿಷಯಗಳ ಕುರಿತು ಯೋಚನೆ ಮಾಡ್ತಾ ಇರ್ತೀರ. ನಿಮ್ಮ ಆಲೋಚನೆಗಳಿಗೆ ಬ್ರೇಕ್​ ಕೂಡ ಕೊಡಲ್ಲ. ಇದು ಯಾವುದೋ ವಿಷಯದ ಕುರಿತು ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಆ ನಿರ್ಧಾರಗಳು ಅಸಮರ್ಥವಾಗಿರುತ್ತದೆ ಕೂಡ. ಜೀವನದ ಪ್ರಮುಖ ಕ್ಷಣಗಳಲ್ಲಿ ಇದು ಸಂಭವಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು. ಇದಕ್ಕೆ ಪರಿಹಾರ ಏನಂದ್ರೆ ಪ್ರತಿದಿನ ಧ್ಯಾನದಂತಹ ಕ್ರಮಗಳನ್ನು ಕೈಗೊಂಡು ಮನಸ್ಸನ್ನು ಶಾಂತಗೊಳಿಸಿ ಏಕಾಗ್ರತೆಯನ್ನು ಸಾಧಿಸುವುದಾಗಿದೆ. ಮೊದಲು ಕೇವಲ ಒಂದು ವಿಷಯದ ಕುರಿತು ಆಲೋಚನೆ ಮಾಡಲು ಸಮಯ ಕೊಡಿ. ಆನಂತರ ಅದಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಿ.

2) ಆತಂಕ ಮತ್ತು ಅಸ್ಥಿರತೆ: ನಿಮ್ಮ ಜೀವನದ ಮಾರ್ಗದಲ್ಲಿ ಬರುವ ಸಣ್ಣ ಅಡಚಣೆಗಳಿಗೂ ನೀವೂ ಆತಂಕಕ್ಕೆ ಒಳಗಾಗುವಿರಿ. ಸಣ್ಣ ತಪ್ಪುಗಳಿಗೆ ಅಪರಾಧದ ಭಾವನೆ ನಿಮ್ಮನ್ನು ಕಾಡುತ್ತದೆ. ಇದರ ಕುರಿತೇ ದಿನವಿಡೀ ಯೋಚನೆ ಮಾಡ್ತಾ ಇರ್ತೀರ. ನಾವು ಸೇಫ್ ಅಲ್ಲ ಎಂಬ ಭಾವನೆ ಕಾಡುವುದು. ಈ ಸ್ಥಿತಿಯು ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಇದಕ್ಕೆ ಪರಿಹಾರವೆಂದರೆ ಆತಂಕವನ್ನು ಕಡಿಮೆ ಮಾಡಲು ಪ್ರತಿದಿನ ದೀರ್ಘ ಉಸಿರಾಟ ತೆಗೆದುಕೊಳ್ಳುವ ವ್ಯಾಯಾಮಗಳು ಮಾಡಿ, ನಿಮಗೆ ಇಷ್ಟವಾಗುವ ಕೆಲಸಗಳನ್ನು ಮಾಡಿ ಮನಸ್ಸಿಗೆ ವಿಶ್ರಾಂತಿ ನೀಡಿ.

3) ಹೆಚ್ಚಿನ ಗೊಂದಲ, ಕಡಿಮೆ ಏಕಾಗ್ರತೆ: ಈಗಿನ ಕಾಲದಲ್ಲಿ ಇದಕ್ಕೆ ಪ್ರಮುಖ ಕಾರಣವೆಂದರೆ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳು. ಸೋಷಿಯಲ್​ ಮೀಡಿಯಾದಲ್ಲಿ ಬರುವುದನ್ನೆಲ್ಲ ನಂಬಿ ನಿಮ್ಮ ನಿರ್ಧಾರಗಳನ್ನ ಬದಲಿಸುವುದು ಅಥವಾ ಗೊಂದಲಕ್ಕೊಳಗಾಗುವುದು ಮಾಡ್ತೀರ. ನಿಮ್ಮ ಫೋನ್ ಅನ್ನು ನಿರಂತರವಾಗಿ ಪರಿಶೀಲಿಸುವುದರಿಂದ ವಿದ್ಯಾಭ್ಯಾಸ ಸೇರಿದಂತೆ ಪ್ರಮುಖ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ಕೂಡ ಇದು ಬಿಡುವುದಿಲ್ಲ. ಇದಕ್ಕೆ ಪರಿಹಾರ ಏನಂದ್ರೆ ನಿಮ್ಮ ದಿನನಿತ್ಯದ ಪ್ರಮುಖ ಕೆಲಸಗಳಿಗೆ ಒಂದು ವೇಳಾಪಟ್ಟಿ ರೂಪಿಸುವುದು ಮತ್ತು ಅದರಂತೆ ನಡೆಯುವುದು. ಅತಿಮುಖ್ಯ ಕೆಲಸಗಳನ್ನು ದಿನದ ಆರಂಭದಲ್ಲೇ ಮುಗಿಸಲು ಪ್ರಯತ್ನಿಸಿ. ಕೊನೆಯಲ್ಲಿ ಎಲ್ಲೋ ಒಂದು ಚೂರು ಸಮಯ ಬೇಕಾದ್ರೆ ಮೊಬೈಲ್​​ಗಾಗಿ ಮೀಸಲಿಡಿ.

4) ಮಾನಸಿಕ ಆಯಾಸ: ನೀವು ದಿನಪೂರ್ತಿ ನಿರಂತರವಾಗಿ ಯಾವುದಾದರೂ ವಿಷಯದ ಬಗ್ಗೆ ಯೋಚಿಸುತ್ತಿದ್ದರೆ ಅದು ಮಾನಸಿಕ ಆಯಾಸಕ್ಕೆ ಕಾರಣವಾಗುತ್ತದೆ. ದೇಹಕ್ಕೆ ಮಾತ್ರ ವಿಶ್ರಾಂತಿ ಕೊಟ್ಟರೆ ಸಾಕಾಗುವುದಿಲ್ಲ ಮನಸ್ಸಿಗೂ, ಮೆದುಳಿಗೂ ರೆಸ್ಟ್ ಕೊಡಬೇಕು ಅಲ್ವಾ? ಇದಕ್ಕಾಗಿ ನೀವು ಸಾಕಷ್ಟು ನಿದ್ದೆ, ನಿಯಮಿತ ವ್ಯಾಯಾಮ ಹಾಗೂ ನಿಮ್ಮಿಷ್ಟದ ಚಟುವಟಿಕೆಗಳಿಗಾಗಿ ಸಮಯವನ್ನು ಮೀಸಲಿಡಬೇಕು. ಪೌಷ್ಟಿಕ ಆಹಾರ ಕೂಡ ಸೇವಿಸಬೇಕು.

5) ಅತಿಯಾದ ಆಲಸ್ಯ: ಜಡ ಜೀವನಶೈಲಿ, ಸೋಮಾರಿತನ ಮತ್ತು ಆಲಸ್ಯ ನಿಮ್ಮೆಲ್ಲಾ ಕೆಲಸಗಳನ್ನೂ ಅಪೂರ್ಣವಾಗಿಸುತ್ತದೆ. ಸಮಯವೂ ಕಳೆದು ಹೋಗುತ್ತದೆ. ಇದಕ್ಕಾಗಿ ನೀವು ನಿಮ್ಮ ಗುರಿ ಸಾಧಿಸಲು ದೃಢ ನಿರ್ಧಾರ ಮಾಡಬೇಕು. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಗುರಿಯತ್ತ ಸಾಗಿ ಸಾಧನೆ ಮಾಡಿದವರ ಜೀವನ ಚರಿತ್ರೆ, ಸಂದೇಶಗಳನ್ನು ಅರಿಯಬೇಕು.

6) ಪ್ರಸ್ತುತ ಕ್ಷಣದ ಮೇಲೆ ಗಮನ ಇರದೇ ಇರುವುದು: ಯಾವಾಗಲೂ ಹಿಂದೆ ಕಳೆದುಹೋದುದದರ ಅಂದರೆ ಭೂತಕಾಲದ ಬಗ್ಗೆ ಹಾಗೂ ಮುಂದೆ ಆಗುವುದರ ಅಂದರೆ ಭವಿಷ್ಯ ಕಾಲದ ಬಗ್ಗೆ ಯೋಚಿಸುತ್ತಿದ್ದೆ ಈ ಕ್ಷಣ ಅಂದರೆ ವರ್ತಮಾನದ ಬಗ್ಗೆ ನಿಮ್ಮ ಗಮನ ಕೇಂದ್ರೀಕರಿಸಲು ಆಗುವುದೇ ಇಲ್ಲ. ಈ ಕ್ಷಣದ ಖುಷಿಯನ್ನು ಅನುಭವಿಸಲು ಆಗುವುದೇ ಇಲ್ಲ. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ.. ಇಂದು ಹಾಗೂ ಈ ಕ್ಷಣದ ಬಗ್ಗೆ ಯೋಚಿಸಿ ಮತ್ತು ಆನಂದಿಸಬೇಕು. ಕಣ್ಣು ಮುಚ್ಚಿಕೊಂಡು ಪ್ರಸ್ತುತ ಏನು ನಿಮಗೆ ಶಬ್ದ ಕೇಳಿಸುತ್ತದೆ ಎಂದು ಕೇಳಿ. ಈ ರೀತಿಯ ಧ್ಯಾನದ ಮಾರ್ಗ ಅನುಸರಿಸಿ ಈ ಕ್ಷಣದ ಮೇಲೆ ಗಮನ ಕೇಂದ್ರೀಕರಿಸಿ.

7) ನಿದ್ರೆಯ ಕೊರತೆ: ಅತಿಹೆಚ್ಚು ಯೋಚನೆ ಮಾಡುವವರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದೇ ಇಲ್ಲ. ಇದು ಮರುದಿನ ನಿಮ್ಮ ಇಡೀ ದಿನವನ್ನ ಹಾಳು ಮಾಡುತ್ತದೆ. ಉತ್ತಮ ನಿದ್ರೆಗಾಗಿ ನೀವು ಫೋನ್ ಅನ್ನು ದೂರವಿಟ್ಟು ಮನಸಿಗೆ ಮುದ ನೀಡುವ ಸಂಗೀತವನ್ನು ಕಡಿಮೆ ವಾಲ್ಯೂಮ್​​ನಲ್ಲಿ ಇಟ್ಟು ಕೇಳುತ್ತಾ ಮಲಗಿ. ಮಲಗುವ ಮುನ್ನ ಕೆಫೀನ್‌ ಅಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ. ರಾತ್ರಿ ಬೇಗನೇ ಊಟ ಮಾಡಿ ಬೇಗನೇ ಮಲಗಿ.

Whats_app_banner